ಎಣ್ಣೆ ಮಗ ವಿಜಯ ಮಲ್ಯ ಅದ್ಯಾವ ಆ್ಯಂಗಲ್ ನಲ್ಲಿ ಗೌಡರಿಗೆ ಮಣ್ಣಿನ ಮಗನಾಗಿ ಕಂಡರೋ..?!

ಡಿಜಿಟಲ್ ಕನ್ನಡ ಟೀಮ್

ಕಂಡಾಪಟ್ಟೆ ಸಾಲ ಮಾಡ್ಕೊಂಡ್ ತೀರಿಸೋಕ್ಕಾಗದೆ ಭಾರತದ ಸಾಯಿಲ್ ತೊರೆದು ವಿದೇಶಕ್ಕೆ ಪರಾರಿ ಆಗಿರುವ ಆಯಿಲ್ ಸನ್ ವಿಜಯ ಮಲ್ಯ ಸಾಯಿಲ್ ಸನ್ ಅಂತೇ..!

ಹಂಗಂತ ಹೇಳಿರೋರು ಕರ್ನಾಟಕದ ಮತ್ತೊಬ್ಬ ಸಾಯಿಲ್ ಸನ್ ದೇವೇಗೌಡರು. ಅಷ್ಟೇ ಅಲ್ಲ, ಮಲ್ಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡೋದೇ ತಪ್ಪಂತೇ. ಹಂಗಾಗಿ ಅವರು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡೋಕೆ ಹೋಗಲ್ವಂತೆ. ಹೆಂಗೈತೆ ನೋಡಿ ಕತೆ?

ಮಲ್ಯ ನಾನಾ ಬ್ಯಾಂಕ್ ಗಳಿಂದ ಪಡೆದು ತೀರಿಸಲಾಗದ ಸುಮಾರು 7 ಸಾವಿರ ಕೋಟಿ ರುಪಾಯಿ ಸಾಲ ಪರೋಕ್ಷವಾಗಿ ಜನರ ತೆರಿಗೆ ಹಣಕ್ಕೆ ಕನೆಕ್ಟ್ ಆಗೋವಾಗ, ಇಡೀ ದೇಶದ ಜನ ಹಾದಿಬೀದೀಲಿ ಅವರನ್ನು ಬೈದುಕೊಂಡು ತಿರುಗುತ್ತಿರುವಾಗ ಗೌಡರಿಗೆ ಆ ವ್ಯಕ್ತಿಯನ್ನು ಸಮರ್ಥನೆ ಮಾಡಿಕೊಳ್ಳುವ ಹರ್ಕತ್ತೇನೂ ಇರಲಿಲ್ಲ. ಮಲ್ಯ ಮೊದಲ ಬಾರಿ ರಾಜ್ಯಸಭೆ ಪ್ರವೇಶಿಸಿದಾಗ ಜೆಡಿಎಸ್ ಕೂಡ ಸಪೋರ್ಟ್ ಮಾಡಿತ್ತು. ಅದಕ್ಕೆ ಮಲ್ಯ ಕೂಡ ‘ಕೃತಜ್ಞತೆ’ ಸಲ್ಲಿಸಿದ್ದರು. ಅಲ್ಲಿಗೆ ವ್ಯವಹಾರ ಫೈಸಲ್ ಆಗಿತ್ತು.

ಹೋಗಿ, ಹೋಗಿ ಎಂಥವನನ್ನು ರಾಜ್ಯಸಭೆಗೆ ಕಳುಹಿಸಿದ್ರಿ ಅಂತ ಈಗ ಯಾರೂ ಗೌಡರನ್ನು ಪ್ರಶ್ನೆ ಮಾಡೋಕೆ ಆಗಲ್ಲ ಎನ್ನೋದೇನೊ ಸರಿ. ಯಾಕಂದ್ರೆ ಮಲ್ಯ ಈ ರೀತಿ ಹಣಪಾತಕ, ಋಣಪಾತಕ ಆಗ್ತಾರೆ ಅಂಥ ಆಗ ಯಾರಿಗೂ ಗೊತ್ತಿರಲಿಲ್ಲ, ಊಹೆ ಮಾಡೋದಕ್ಕೆ ಸಾಧ್ಯವೂ ಇರಲಿಲ್ಲ. ಆದರೆ ಆ ವ್ಯಕ್ತಿ ಮಾಡಿರುವ ತಪ್ಪು ಕಣ್ಣು ಕತ್ತಲೆ ಬರುವಷ್ಟರ ಮಟ್ಟಿಗೆ ಢಾಳಾಗಿ ರಾಚುತ್ತಿರುವಾಗ, ಜನಾಭಿಪ್ರಾಯ ಆತನ ವಿರುದ್ಧ ಕ್ರೋಡೀಕರಣಗೊಂಡಿರುವಾಗ ಅಂಥ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವ ಅಗತ್ಯ ಅಷ್ಟೆಲ್ಲ ರಾಜಕೀಯ ಪಾಂಡಿತ್ಯ ಇರುವ ದೇವೇಗೌಡರಿಗೆ ಖಂಡಿತವಾಗಿಯೂ ಇರಲಿಲ್ಲ. ಈ ನಾಡಿನಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಮಣ್ಣಿನ ಮಕ್ಕಳು ಅನ್ನಿಸಿಕೊಳ್ಳಲ್ಲ. ಈ ನಾಡಿಗೆ ಕೀರ್ತಿ ತರೋ ಕೆಲಸ ಏನಾದ್ರೂ ಮಾಡಿದ್ರೆ ಮಾತ್ರ ಈ ಪದಪ್ರಯೋಗದಿಂದ ಗುರುತಿಸುತ್ತಾರೆ. ಆದರೆ ಮಲ್ಯ ಮಾಡಿರೋ ಕೆಲಸ ಎಲ್ಲರಿಗೂ ಗೊತ್ತೇ ಇದೆ. ಇಂಥವನನ್ನು ಸಪೋರ್ಟ್ ಮಾಡ್ತಿದ್ದಾರೆ ಅಂದ್ಮೇಲೆ ಏನೋ ಭಾರೀ ಸ್ಕೆಚ್ಚು ಇರಬೇಕು, ಗೌಡರು ಅಂಗೆಲ್ಲ ಸುಮ್ ಸುಮ್ಮನೆ ಇಂಥವರ ಪರ ಬ್ಯಾಟಿಂಗ್ ಆಡಲ್ಲ ಅಂತಾನೂ ಅನುಮಾನಾನೂ ಪಡ್ತಾರೆ. ಏನೋ ಬಾಯ್ತಪ್ಪಿ ಆಡಿದ್ದಾರೆ, ವಯಸ್ಸಿನ ಪರಿಣಾಮವಾಗಿ ಅಚಾನಕ್ಕಾಗಿ ಈ ಮಾತು ಬಂದ್ಬಿಟ್ಟಿದೆ ಅಂತ ಯಾರೂ ಅಂದ್ಕೊಳ್ಳಲ್ಲ.

ಇನ್ಮುಂದೆ ಎಲೆಕ್ಷನ್ ಗೆ ನಿಲ್ಲಲ್ಲ ಅಂತ ಅನೌನ್ಸ್ ಮಾಡಿರುವ ಗೌಡರಿಗೆ ಇಂಥ ರೇಜಿಗೆಗಳನ್ನು ಮೈಮೇಲೆ ಎಳೆದುಕೊಳ್ಳೋದು ಯಾಕಾದ್ರೂ ಬೇಕಿತ್ತೋ?

Leave a Reply