ಮಂಗಳ ಗ್ರಹದ ಡಿನ್ನರ್ ರೆಡಿ, ಫಂಡ್ ಕೊಟ್ಟಿದ್ದವರಿಗಷ್ಟೇ ಆಮಂತ್ರಣ

ANANTHA PHOTOಟಿ.ಆರ್. ಅನಂತರಾಮು

ಎಲ್ಲವೂ ಪ್ಲಾನ್ ಮಾಡಿದಂತೆಯೇ ನಡೆದರೆ ಮುಂದಿನ ತಿಂಗಳ 6ಕ್ಕೆ ಸಿದ್ಧ ‘ಮಂಗಳ ಗ್ರಹದ ಡಿನ್ನರ್’. ಇದೇನೂ ಮೋಜು, ಮಸ್ತಿಗೆ ಹಾಕಿಕೊಂಡ ಪ್ರೋಗ್ರಾಮ್ ಅಲ್ಲ. ಪ್ರತಿ ಗ್ರಾಂ ಆಹಾರ ತಯಾರಿಸಲು ಮೂರು ವರ್ಷದಿಂದ ನಿದ್ದೆ ಕೆಡಿಸಿಕೊಂಡಿದ್ದಾರೆ ನೀದರ್ಲ್ಯಾಂಡ್ಸ್ ನ ವ್ಯಾಗೆನಿಂಗೆನ್ ಯೂನಿವರ್ಸಿಟಿ ಸಂಶೋಧಕರು. ಇದು ಸದ್ಯ ಜಾಗತಿಕ ಸುದ್ದಿಮಾಡಿದೆ. ನೀರೇ ಇಲ್ಲದ ಮಂಗಳನಲ್ಲಿ ಇವರು ಟೊಮ್ಯಾಟೋ, ಹುರುಳಿ, ಆಲೂಗೆಡ್ಡೆ, ಬಟಾಣಿ ಹೀಗೆ ಹತ್ತು ತರಕಾರಿಗಳನ್ನು ಬೆಳೆದಿದ್ದಾರೆ. ಭರ್ಜರಿ ಫಸಲು ಬಂದಮೇಲೆ ಜಗತ್ತೇ ಕೇಳುತ್ತಿದೆ, ಅಸಲಿ ಅವರು ಆ ಗ್ರಹಕ್ಕೆ ಹೋದದ್ದು ಯಾವಾಗ?

ಇನ್ನು ಅಮೆರಿಕದ ಅಂತರಿಕ್ಷ ಸಂಸ್ಥೆ ನಾಸಾ ಮಾನವ ಸಹಿತ ಗಗನನೌಕೆಯನ್ನು ಮಂಗಳನ ಅಂಗಳಕ್ಕೆ ಕಳಿಸಲು 2030 ಎಂದು ಟಾರ್ಗೆಟ್ ಹಾಕಿಕೊಂಡಿದೆ. ಒಬ್ಬ ಗಗನಯಾತ್ರಿಯನ್ನು ಮಂಗಳಕ್ಕೆ ಕಳಿಸಲು ಬರೋಬ್ಬರಿ 500 ಬಿಲಿಯನ್ ಡಾಲರ್ ಖರ್ಚಾಗುತ್ತದಂತೆ. ಯೂರೋಪಿಯನ್ ಸ್ಪೇಸ್ ಏಜೆನ್ಸಿ ಕೂಡ ಇಂಥ ಭಾರಿ ಯೋಜನೆಯ ಬ್ಲೂಪ್ರಿಂಟ್ ಹಾಕಿಕೊಂಡಿಲ್ಲ. ಚಂದ್ರಯಾನ, ಮಂಗಳಯಾನದ ಯಶಸ್ಸಿನಿಂದ ಖುಷಿಯಾಗಿರುವ ಭಾರತ ‘ನಮ್ಮ ಮುಂದಿನ ನಿಲ್ದಾಣ ಮಂಗಳ ಗ್ರಹ’ ಎನ್ನುತಿದೆ. ಈ ಯೋಜನೆಗೂ 5,000 ಕೋಟಿ ಎತ್ತಿಡಬೇಕು ಎಂದಿದೆ.

ಮತ್ತೆ, ಸದ್ದಿಲ್ಲದೆ ಸುದ್ದಿಮಾಡದೆ ಮಂಗಳ ಗ್ರಹಕ್ಕೆ ಹೋಗುವುದು ಇಂದು ಬಿಲ್‍ಕುಲ್ ಸಾಧ್ಯವಿಲ್ಲ. ಆ ಗ್ರಹ ತಲಪಬೇಕೆಂದರೆ ತೀರ ಶಾರ್ಟ್ ಕಟ್ 55 ದಶಲಕ್ಷ ಕಿಲೋ ಮೀಟರ್ ಆಗುತ್ತದೆ. ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ, ಸುತ್ತುಬಳಸಿ ಹೋದರೆ 400 ದಶಲಕ್ಷ ಕಿಲೋಮೀಟರ್ ದೂರ. ‘ಯಾರ್ರಿ ಮಾರ್ಸ್, ಯಾರ್ರಿ ಮಾರ್ಸ್’ ಎಂದು ಗಂಟಲು ಕಿತ್ತುಹೋಗುವಂತೆ ಕೂಗಿಕೊಂಡು ‘ರೈಟ್, ರೈಟ್’ ಎನ್ನುವ ಪರಿಸ್ಥಿತಿ ಇನ್ನೂ ಈಗಿಲ್ಲ. ಎರಡು ಮೂರು ಅಂಶಗಳು ಸಖತ್ತಾಗಿ ಕೈಕೊಡುತ್ತವೆ. ಮೊದಲು ಅದರ ದೂರದ ಮಾತು. ಇನ್ನು ಉಸಿರಾಡಲು ಅಲ್ಲಿ ಆಕ್ಸಿಜನ್ ಇಲ್ಲ. ವಾಯುಗೋಳದಲ್ಲಿ ಹೆಚ್ಚು ತುಂಬಿಕೊಂಡಿರುವುದೇ ದರಿದ್ರ ಕಾರ್ಬನ್ ಡೈ ಆಕ್ಸೈಡ್.

ಯಾವ ಪುರುಷಾರ್ಥಕ್ಕೆ ಹೋಗಬೇಕು ಅನ್ನುವುದು ಬೇರೆಯ ಮಾತು. ತಂತ್ರಜ್ಞಾನ ಅದನ್ನು ಒಪ್ಪುವುದಿಲ್ಲ, ಸೊಪ್ಪು ಹಾಕುವುದೂ ಇಲ್ಲ. ಸಂಶೋಧನೆ, ಪರಿಶೋಧನೆ ವಿಜ್ಞಾನಿಗಳ ಮೊದಲ ಆದ್ಯತೆ. ವಿಶ್ವದ ವಿದ್ಯಮಾನಗಳನ್ನು, ಗುಟ್ಟನ್ನು ಒಡೆಯುವುದೇ ವಿಜ್ಞಾನದ ಗುರಿ ಎಂದು ಭಾವಿಸಿದ್ದರಿಂದಲೇ ಆಕಾಶಜ್ಞಾನ ಹಿಗ್ಗುವ ಅವಕಾಶ ನಾವು ಕಂಡುಕೊಂಡದ್ದು.

ಈಗ ಮೂಲಪ್ರಶ್ನೆ? ಯಾವುದೋ ಕ್ಷುದ್ರ ಗ್ರಹ ದಿಢೀರೆಂದು ಭೂಮಿಯ ಮೇಲೆ ಆತಂಕಕಾರಿಯಾಗಿ ಎರಗಿ, ಇಲ್ಲಿನ ಸರ್ವಜೀವ ನಾಶಮಾಡುವ ಬ್ಲಾಕ್‍ಮೇಲ್ ಮಾಡಿದರೆ? ‘ಆಗ, ಜಾಗ ಖಾಲಿಮಾಡಿ, ಬೇರೆ ಗ್ರಹಕ್ಕೆ ಹೋಗಿ ಬಚಾವಾಗಿ ಅಂದಿದ್ದರಲ್ಲ’ ಗಾಲಿಯ ಖುರ್ಚಿಯ ಮೇಲೆ ಸದಾ ಕುಸಿದ ಭಂಗಿಯಲ್ಲಿ ಕುಳಿತು ಕಂಠದ ಧ್ವನಿ ಹೊರಡಿಸಲು ಎಲೆಕ್ಟ್ರಾನಿಕ್ ಗ್ಯಾಜೆಟ್ ಬಳಸುವ ವಿಶ್ವವಿಖ್ಯಾತ ಖಭೌತ ವಿಜ್ಞಾನ ಸ್ಟೀಫನ್ ಹಾಕಿಂಗ್ ಸಖತ್ ಐಡಿಯಾ ಕೊಟ್ಟಿದ್ದರಲ್ಲ. ದಡಬಡ ಹೋಗೋದಕ್ಕೆ ಆಕಾಶ ನೌಕೆಗಳು ಲಭ್ಯ ಎಂದೇ ಭಾವಿಸಿ (ಕೊನೆಯ ಪಕ್ಷ ಉಳ್ಳವರಿಗೆ), ಹೋಗಿ ಅಲ್ಲಿ ಬದುಕೋದು ಹೇಗೆ? ಶುದ್ಧ ಗಾಳಿ, ನೀರು, ಆಹಾರ ಎಲ್ಲವನ್ನೂ ಎಕ್ಸ್ ಪೋರ್ಟ್ ಮಾಡಿಕೊಂಡೇ ಹೋಗಬೇಕು ತಾನೆ? ಆ ಬರಡು ಭೂಮಿಯಲ್ಲಿ ಏನೂ ಇಲ್ಲ. ತತ್ರಾಪಿ ಒಂದು ಬ್ಯಾಕ್ಟೀರಿಯ ಕೂಡ.

ನೀದರ್ಲ್ಯಾಂಡ್ಸ್ ನ ವ್ಯಾಗೆನಿಂಗೆನ್ ಯೂನಿವರ್ಸಿಟಿಯ ಜೈವಿಕ ವಿಭಾಗದ ಆವರಣದಲ್ಲಿ ಭರ್ಜರಿ ಗಾಜಿನ ಮನೆ ಇದೆ. ಅದರೊಳಗೆ ಸಣ್ಣ ಸಣ್ಣ ಪಾಟ್‍ಗಳಲ್ಲಿ, ಪುಟ್ಟ ಪುಟ್ಟ ಟ್ರೇಗಳಲ್ಲಿ ಅರಳಿ ನಿಂತಿವೆ ಟೊಮ್ಯಾಟೊ, ಕೆಂಪುಮೂಲಂಗಿ, ಹುರುಳಿ, ಬಟಾಣಿ ಹೀಗೆ ಹತ್ತು ವಿಧದ ಕಾಯಿಪಲ್ಲೆ. ಈ ಯೋಜನೆಯ ಹುಳುವನ್ನು ತಲೆಗೆ ಬಿಟ್ಟುಕೊಂಡವನು ವಿಯೆನರ್ ವಾಮೆಲಿಂಕ್. ಮಂಗಳ ಗ್ರಹದ ಮಣ್ಣಿನಲ್ಲಿ ಏನಿದೆ ಎಂಬ ಅಂಶ ಕೇಳಿದರೆ ವಿಜ್ಞಾನಿಗಳು ಈಗ ಉದ್ದುದ್ದನೆಯ ಲಿಸ್ಟ್ ಕೊಡುತ್ತಾರೆ. ವೈಕಿಂಗ್-1 ಮಣ್ಣು ತಂದಿತ್ತಲ್ಲ ಅಂಥದೇ ಮಣ್ಣು ಭೂಮಿಯಲ್ಲೂ ಇರಬೇಕಲ್ಲ? ಅಂಡಲೆದಾಗ ಸಿಕ್ಕಿದ್ದು ಹವಾಯಿ ದ್ವೀಪದ ಜ್ವಾಲಾಮುಖಿಯೊಂದರ ಬಾಯಿಯಲ್ಲಿ ಕೆರೆದ ಮಣ್ಣು. ಥೇಟ್ ಮಂಗಳನ ಮಣ್ಣೇ. ಅವೇ ರಾಸಾಯನಿಕಗಳು, ಆದರೆ ಒಂದೇ ಒಂದು ವ್ಯತ್ಯಾಸವೆಂದರೆ ಮಂಗಳನ ಮಣ್ಣಿನಲ್ಲಿರುವುದಕ್ಕಿಂತ ಇದರಲ್ಲಿ ನೈಟ್ರೋಜನ್ ಜಾಸ್ತಿ. ಗಿಡಗಳಿಗೆ ನೈಟ್ರೋಜನ್ ಬೇಕೇ ಬೇಕಲ್ಲ. ಆ ಮಣ್ಣನ್ನು ಬಾಚಿಕೊಂಡು ಬಂದು ಹಸುರು ಮನೆಯಲ್ಲಿ (ಗ್ಲಾಸ್ ಹೌಸ್) ಇಟ್ಟು ಅದೇ ಉಷ್ಣತೆ, ಆರ್ದ್ರತೆ, ಅಷ್ಟೇ ಬೆಳಕು ಕೊಟ್ಟು ಹುಲ್ಲನ್ನು ಕೊಳೆಸಿ, ಗೊಬ್ಬರ ಮಾಡಿ ತರಕಾರಿ ಬೆಳೆದೇ ಬಿಟ್ಟರು ಸಂಶೋಧಕರು. ಭರ್ಜರಿ ಬೆಳೆ. ಆದರೆ ರುಚಿ ನೋಡಲು ಭಯ. ಏಕೆಂದರೆ ಆ ಮಣ್ಣಿನಲ್ಲಿ ಅಂದರೆ ಮಂಗಳನ ಮಣ್ಣಿನಲ್ಲಿ ಸೀಸ, ಆರ್ಸೆನಿಕ್, ಪಾದರಸದ ಅಂಶ ಹೆಚ್ಚಾಗಿಯೇ ಇರುತ್ತದೆ. ಅದು ಈ ಮಣ್ಣಿನಲ್ಲೂ ಇತ್ತು. ಹೀಗಾಗಿ ರುಚಿ ನೋಡುವ ಧಮ್ ಬರಲಿಲ್ಲ. ಈಗ ಕೆಲವು ಖಾಸಗಿ ಸಂಸ್ಥೆಗಳು ಭರ್ಜರಿ ಫಂಡ್ ಕೊಟ್ಟಿವೆ. ವಿಷಕಾರಿ ಅಂಶವನ್ನು ತೆಗೆದುಹಾಕಿ ಹೇಗೆ ತರಕಾರಿ ಬೆಳೆಯಬೇಕು ಎಂಬ ಗುಟ್ಟು ಸಿಕ್ಕಿದೆ. ಅಂದರೆ ಮಂಗಳನ ವಾತಾವರಣದ ಮರುಸೃಷ್ಟಿ ಇದು – ಸಿಮ್ಯಲೇಷನ್.

ನಾಸಾ ಸಂಸ್ಥೆ ಇನ್ನೊಂದು ಎಚ್ಚರಿಕೆ ಹೇಳಿದೆ. ಈ ಪ್ರಯೋಗವನ್ನು ನೆಲಮಾಳಿಗೆಯಲ್ಲಿ ಮಾಡಿದರೆ ವಾಸಿ. ಏಕೆಂದರೆ ಅಲ್ಲಿ ಕಾಸ್ಮಿಕ್ ಕಿರಣಗಳ ಕಾಟ ಇರುವುದಿಲ್ಲ ಎಂದು ಟಿಪ್ಸ್ ಕೊಟ್ಟಿದೆ. ತರಕಾರಿಗಳು ಕಾಯುತ್ತಿವೆ, ಯಾರ ಬಾಯಿಗೆ ಹೋಗಬೇಕು ಎಂದು. ಮುಂದಿನ ಏಪ್ರಿಲ್ 6ರ ನಂತರ ಒಂದು ದಿನ ಫಿಕ್ಸ್ ಮಾಡಿ ಭಾರಿ ಪಾರ್ಟಿ ಕೊಡಲು ಸಿದ್ಧರಾಗಿದ್ದಾರೆ ಈ ಯೂನಿವರ್ಸಿಟಿ ತಜ್ಞರು. ಫಂಡ್ ಕೊಟ್ಟವರಿಗೆ ಆಮಂತ್ರಣ ಹೋಗಲಿದೆ. ಸ್ವಲ್ಪ ಧೈರ್ಯಮಾಡಿ ತಿನ್ನಬೇಕು ಅಷ್ಟೇ. ಅದೂ ಕೂಡ ರೆಕಾರ್ಡ್ಸ್ ಸ್ಥಾಪಿಸುತ್ತದೆ ತಾನೆ? ಅನ್ಯ ಗ್ರಹಗಳಿಗೆ ವಲಸೆ ಹೋಗಿ ಅಲ್ಲಿ ನೆಲೆಸಲು ಇದು ಮೊದಲ ಮೆಟ್ಟಿಲಾಗಬಹುದು ಎನ್ನುತ್ತಿದ್ದಾರೆ ಅಂತರಿಕ್ಷ ವಿಜ್ಞಾನಿಗಳು.

(ಲೇಖಕರು ಭೂವಿಜ್ಞಾನಿ, ಕನ್ನಡದ ಜನಪ್ರಿಯ ವಿಜ್ಞಾನ ಬರಹಗಾರರು. ಐವತ್ತಕ್ಕೂ ಹೆಚ್ಚು ಪುಸ್ತಕಗಳ ಕೃತಿಕಾರರು)

Leave a Reply