ವಾರಾಂತ್ಯದ ಆರ್ದ್ರ ನೋಟ, ಮೋದಿ- ನಿತೀಶ್ ಚೆಂದದ ವರ್ತನೆಯಲ್ಲಿದೆ ಕುದಿಮನಸ್ಸುಗಳಿಗೊಂದು ಪಾಠ

ಡಿಜಿಟಲ್ ಕನ್ನಡ ಟೀಮ್

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮೋದಿ-ನಿತೀಶ್ ಏನೆಲ್ಲ ವಾಗ್ಬಾಣಗಳನ್ನು ಪರಸ್ಪರ ತೂರಿಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಡಿ ಎನ್ ಎ ಕುಲಜಾತಕದವರೆಗೆ ಆರೋಪ- ಪ್ರತ್ಯಾರೋಪ ಬಿರುಸಾಗಿತ್ತು.

ಆದರೆ ರಾಜಕೀಯ ಎದುರಾಳಿಗಳೆಂದರೆ ಸದಾಕಾಲವೂ ವೈರಿಗಳಂತೆ ಇರಬೇಕಾಗಿಲ್ಲ ಎಂಬುದನ್ನು ಪ್ರಧಾನಿ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಶನಿವಾರ ಬಿಹಾರದಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ಮಾದರಿಯಾಗಿ ತೋರಿದರು. ಈ ಪ್ರಬುದ್ಧ ಸಾರ್ವಜನಿಕ ವರ್ತನೆಯೇ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸುವಂಥದ್ದು.

ಮೊದಲಿಗೆ ಮೋದಿ- ನಿತೀಶ್ ವೇದಿಕೆ ಹಂಚಿಕೊಂಡಿದ್ದು ಪಟ್ನಾ ಹೈಕೋರ್ಟ್ ನ ಶತಮಾನೋತ್ಸವ ಆಚರಣೆಯಲ್ಲಿ. ಪಟ್ನಾದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತುಗಳು ಅಚ್ಚರಿ ತರುವಂತಿದ್ದವು. ಅದೊಂಥರ ಮೋದಿಯವರನ್ನು ಪರೋಕ್ಷವಾಗಿ ಪ್ರಶಂಸಿಸಿದಂತೆಯೇ ಇತ್ತು. ‘ಇದೀಗ ಭಾರತ ಮತ್ತಷ್ಟು ಸಮರ್ಥವಾಗಿದೆ. ಅದರ ಆಂತರಿಕ ಶಕ್ತಿ ಇನ್ನಷ್ಟು ವೃದ್ಧಿಸಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿದೆ.’ ಹೀಗಂತ ನಿತೀಶ್ ಆಡಿದ ಮಾತುಗಳಿಗೆ ಭಾರೀ ಪ್ರಾಮುಖ್ಯವಿದೆ. ಏಕೆಂದರೆ, ಇಂದು ಬಿಜೆಪಿಯ ಎದುರಾಳಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಯಾವ ನೇತಾರ ಮಾತಿಗೆ ನಿಂತರೂ ಎಲ್ಲರೂ ಕಂಠಪಾಠ ಮಾಡಿದಂತೆ ಕೇಂದ್ರವನ್ನು, ಅದರಲ್ಲೂ ನರೇಂದ್ರ ಮೋದಿಯವರನ್ನು ದೂಷಿಸುವುದು ಮಾಮೂಲಾಗಿದೆ. ‘ಕಳೆದ ಕೆಲ ತಿಂಗಳುಗಳಿಂದ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ಭಾರತ ಫ್ಯಾಸಿಸ್ಟ್ ರಾಷ್ಟ್ರವಾಗುವತ್ತ ಸಾಗಿದೆ’ ಇಂಥದ್ದೇ ಮಾತುಗಳು ಓತಪ್ರೋತ ಸಾಗುತ್ತಿರುತ್ತವೆ. ಅಂಥದ್ದರಲ್ಲಿ ನಿತೀಶ್ ಕುಮಾರ್, ಮೋದಿ ಸಮಕ್ಷಮದಲ್ಲಿ ಆಡಿದ ಮಾತುಗಳಲ್ಲಿ ಆರ್ದ್ರತೆ, ಪ್ರೀತಿ, ಯಾವಾಗಲೂ ಹೊಡೆದಾಡಿಕೊಂಡಿದ್ದರೇನು ಬಂತು ಎಂಬ ಕಾಳಜಿ ಎಲ್ಲವೂ ಆ ಕ್ಷಣಕ್ಕೆ ವ್ಯಕ್ತವಾಗಿವೆ.

ನಿತೀಶ್- ಮೋದಿ ಇಬ್ಬರೂ ವೇದಿಕೆ ಹಂಚಿಕೊಂಡ ಮುಂದಿನ ಕಾರ್ಯಕ್ರಮ ಎಂದರೆ ಬಿಹಾರದ ಹಾಜಿಪುರದಲ್ಲಿ ನಡೆದ ರೈಲ್ವೇ ಯೋಜನೆಗಳ ಉದ್ಘಾಟನೆ. ಇಲ್ಲಿ ನಿತೀಶ್ ಕುಮಾರ್ ಅವರಿಗೆ ಫುಲ್ ಕ್ರೆಡಿಟ್ ಕೊಟ್ಟರು ಮೋದಿ. ‘ಈ ಯೋಜನೆಗಳು ವಾಜಪೇಯಿಯವರ ಎನ್ ಡಿ ಎ ಸಂಪುಟದಲ್ಲಿ ನಿತೀಶ್ ಕುಮಾರ್ ಅವರು ರೈಲ್ವೆ ಮಂತ್ರಿಯಾಗಿದ್ದಾಗ ಕಂಡ ಕನಸಾಗಿತ್ತು. ಹಿಂದಿನ 10 ವರ್ಷ ಆಡಳಿತದಲ್ಲಿದ್ದ ಕೇಂದ್ರ ಸರ್ಕಾರ ಇದನ್ನು ನಿರ್ಲಕ್ಷಿಸಿದ್ದರಿಂದ ಈಗ ಪೂರ್ಣವಾಗುತ್ತಿದೆ. ವಿಳಂಬವಾದ್ದರಿಂದ ವೆಚ್ಚವೂ ಅತಿಹೆಚ್ಚಾಗಿದೆ’ ಅಂತ ಪರೋಕ್ಷವಾಗಿ ನಿತೀಶರು ಎನ್ ಡಿ ಎ ಜತೆಗಿದ್ದ ದಿನಗಳನ್ನು ನೆನಪಿಸಿದರು. ಮುಂದುವರಿದು, ಕೇಂದ್ರದ ವಿದ್ಯುದೀಕರಣ ಯೋಜನೆ ಬಿಹಾರದಲ್ಲಿ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಾಳಜಿಯೇ ಕಾರಣ ಅಂತಂದ್ರು. ಅಲ್ಲೂ ಕಾಂಗ್ರೆಸ್ ಗೆ ಚುರುಕು ಮುಟ್ಟಿಸುವ ಅವಕಾಶ ಬಿಟ್ಟುಕೊಡದೇ, ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರವೂ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ತಲುಪಿಲ್ಲ ಅಂತಂದ್ರೆ ಏನರ್ಥ ಅಂತ ಜಾಡಿಸಿದರು. ಅಲ್ಲದೇ 70 ವರ್ಷದಲ್ಲಾಗದ ಕೆಲಸವನ್ನು ತಾವು ಸಾವಿರ ದಿನಗಳಲ್ಲಿ ಮಾಡಿ ಮುಗಿಸುವುದಾಗಿ ಅಧಿಕಾರಿಗಳಿಗೆ ಹೇಳಿದ್ದಾಗಿ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಮಾತಾಡುವಾಗ ಜನಸ್ತೋಮದಿಂದ ‘ಮೋದಿ- ಮೋದಿ’ ಎಂಬ ಘೋಷಣೆಗಳು ಕೇಳಿಬಂದು ಮುಖ್ಯಮಂತ್ರಿ ಮಾತಿಗೆ ತೊಂದರೆ ಉಂಟುಮಾಡಿದಾಗ ಮೋದಿ ಮಜಾ ತೆಗೆದುಕೊಂಡು ಸುಮ್ಮನೇ ಕೂರಲಿಲ್ಲ. ವೇದಿಕೆಯಲ್ಲಿ ಎದ್ದುನಿಂತು ಕೈಸಂಜ್ಞೆಯಿಂದ ಎಲ್ಲರನ್ನೂ ಸುಮ್ಮಗಾಗಿಸಿದರು. ಭಾಷಣದ ಮಧ್ಯೆ ಮೋದಿಘೋಷ ಮಾಡಿದ ಭಕ್ತರತ್ತ ಅವರು ಮುಖ ಸಿಂಡರಿಸಿದ್ದು ಸ್ಪಷ್ಟವಾಗಿತ್ತು.

ಎರಡೂ ಸಮಾರಂಭದಲ್ಲಿ ಉಭಯ ನಾಯಕರು ಪರಸ್ಪರರಿಗೆ ತೋರಿದ ಗೌರವ- ಸೌಹಾರ್ದಗಳು ಕಣ್ಣಿಗೆ ಕಟ್ಟಿದಂತಿದ್ದವು. ಖಾರವಾಗಿ ಪ್ರತಿಕ್ರಿಯಿಸಿದರು, ಟಾಂಗ್ ನೀಡಿದರು, ಪರೋಕ್ಷವಾಗಿ ಕೆಣಕಿದರು ಅಂತಲೇ ಸುದ್ದಿಬರೆಯುತ್ತಿದ್ದ ಮಾಧ್ಯಮಕ್ಕೂ ಶನಿವಾರ ಒಂದು ಹೊಸ ಅನುಭವ. ಅಲ್ಲದೇ ಇಬ್ಬರೂ ಅನುಕೂಲಕರವಾಗಿಯೇ ನಡೆದುಕೊಳ್ಳಬೇಕಾದ ರಾಜಕೀಯ ಸನ್ನಿವೇಶವೂ ಸಧ್ಯಕ್ಕೇನಿದ್ದಿರಲಿಲ್ಲ. ಪ್ರಜಾಪ್ರಭುತ್ವದ ಚೆಂದ ಹೆಚ್ಚಿಸುವ ಇಂಥ ಸೌಹಾರ್ದ ವರ್ತನೆಗಳು ವಿರಳವಾಗಿಯಾದರೂ ಇದೇ ಮಾದರಿಯಲ್ಲಿ ಪುವರಾವರ್ತನೆ ಆಗುತ್ತಿರಲಿ ಅಂತ ಅನ್ನಿಸಿದರೆ ತಪ್ಪಿಲ್ಲ.

Leave a Reply