ತತ್ವದ ಕನ್ನಡಿಯಲ್ಲಿತರ್ಕದ ಪ್ರತಿಬಿಂಬ – ಹೀಗೊಂದು ನಿರೀಕ್ಷೆ

phanikumarಫಣಿಕುಮಾರ್.ಟಿ.ಎಸ್

ಈ ಶತಮಾನದ ಅತಿದೊಡ್ಡ ಆವಿಷ್ಕಾರ ಎನ್ನುವ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಎಲ್ಲಾ ಅರ್ಹತೆಯನ್ನು ಹೊಂದಿರುವ ಗುರುತ್ವಾಕರ್ಷಣೆಯ ಅಲೆಗಳ ಗ್ರಹಿಕೆ ಎರಡು ಮಹತ್ತರವಾದ ಒಳನೋಟಗಳನ್ನು ಒದಗಿಸುತ್ತದೆ. ಮೊದಲನೆಯದು, ಈ ವಿಜ್ಞಾನ ಎನ್ನುವ ಕೌತುಕತೆಯ ಗರ್ಭದಲ್ಲಿ ಇನ್ನಷ್ಟು ಹೆಚ್ಚಾದ ಅನುಮಾನದ; ತಳಮಳದ ದೃಷ್ಟಿಕೋನ. ಎರಡನೆಯದು ಅದೇ ವಿಜ್ಞಾನದ ಮಿತಿಯನ್ನು; ಬ್ರಹ್ಮಾಂಡದ ಅಸೀಮ ನಿಗೂಢತೆಯನ್ನು ಮತ್ತೊಮ್ಮೆ ಅರ್ಥೈಸುವ ತಾತ್ವಿಕ ದೃಷ್ಟಿಕೋನ. ಈ ಎರಡೂ ವೈರುಧ್ಯಗಳನ್ನು ಹರವಿಟ್ಟುಕೊಂಡು ಈ ಹೊಸ ಮೈಲುಗಲ್ಲನ್ನು ವಿಶ್ಲೇಷಿಸಲು ಹೊರಟಾಗ ವಿಜ್ಞಾನವನ್ನು ಸಮರ್ಥಿಸುವ ಬಲವಾದ ವಾದದ ಎದುರು ಅದರ ಮಿತಿಯ ಅಜ್ಞಾನವನ್ನೂ ವಿಶ್ಲೇಷಿಸುವ ಇನ್ನೊಂದು ಸೌಮ್ಯ ಸಿದ್ಧಾಂತವೂ ತನ್ನ ಸಮರ್ಥನೆಯನ್ನು ಮುಂದಿಡುತ್ತದೆ.

ಐನ್‍ಸ್ಟೈನ್ ಅಂದು ಎದುರುಗೊಂಡಿದ್ದು ಈ ವಿಶಿಷ್ಟ ದ್ವಂದ್ವವನ್ನೇ. ಜಗತ್ತಿನ ಮೊದಲ ಮಹಾಯುದ್ಧದಲ್ಲಿ ಒಂದು ಸಮೂಹದ ಮುಂದಾಳತ್ವ ವಹಿಸಿದ್ದ ನಾಝೀವಾದದ ಜರ್ಮನಿಯಂತಹ ದೇಶದಲ್ಲಿ ಯಹೂದಿಯಾದ ಐನ್‍ಸ್ಟೈನ್ ನೆಲೆಸಿದ್ದ. ಒಂದೆಡೆ ದೇಶದ ಆಡಳಿತ ತನ್ನನ್ನು ದೇಶದ್ರೋಹಿಯೆಂದು ಜರಿಯುತ್ತಿದ್ದರೆ, ಇನ್ನೊಂದೆಡೆ ಆತ ತನ್ನ ಪತ್ನಿ-ಮಕ್ಕಳಿಂದ ತಿರಸ್ಕೃತನಾಗಿದ್ದ. ಆತನ ಖಾಸಗಿ ಮತ್ತು ಸಾರ್ವಜನಿಕ ಬದುಕಿನ ಇಂತಹ ಭಾವನಾತ್ಮಕ ಇಕ್ಕಟ್ಟುಗಳು, ಆತನಲ್ಲಿ ಒಡಮೂಡಿಸಿದ್ದ ತಾತ್ವಿಕ ಭಾವಕ್ಕೆ ಮಾತ್ರ ಇಂದಿನ ಅಭೂತ ಆವಿಷ್ಕಾರದ ಸತ್ಯವನ್ನು ಅಂದೇ ಕೇವಲ ತನ್ನ ಪೆನ್ನು-ಹಾಳೆಯ ಮೇಲೆ ಲೆಕ್ಕಾಚಾರ ಮಾಡುವ ತಾಕತ್ತು ನೀಡಿತ್ತು ಎಂದರೆ ಉತ್ಪ್ರೇಕ್ಷೆಯೆನಿಸುವುದಿಲ್ಲ.

E = mc 2 . ಆಧುನಿಕ ಭೌತಶಾಸ್ತ್ರದಲ್ಲಿ (modern physics) ಈ ಸಮೀಕರಣಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಐನ್‍ಸ್ಟೈನ್ ತನ್ನ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ (Special Theory of Relativity) ಪ್ರತಿಪಾದಿಸುವ ಈ ಸಮೀಕರಣ, ಜಗತ್ತಿನ ಯಾವುದೇ ವಸ್ತುವೂ ಜಡವಲ್ಲ. ಬದಲಿಗೆ ಇಡೀ ಬ್ರಹ್ಮಾಂಡದಲ್ಲಿ ಅಡಗಿರುವ ಪ್ರತಿ ಅಣುವೂ ಅಗಾಧವಾದ ಚೈತನ್ಯ ಶಕ್ತಿ ಎನ್ನುತ್ತದೆ. ಕಲ್ಲು, ಮಣ್ಣು, ಬೆಟ್ಟ, ಗುಡ್ಡ ಎಲ್ಲದರಲ್ಲೂ ಚೈತನ್ಯವೇ ತುಂಬಿದ್ದು, ‘ದ್ರವ್ಯರಾಶಿ’ (mass) ಎನ್ನುವ ಕಲ್ಪನೆಯೇ ಸಮರ್ಪಕವಾದುದಲ್ಲ ಎಂದು ಪ್ರತಿಪಾದಿಸುತ್ತದೆ. ಈ ಕಾರಣಕ್ಕಾಗಿಯೇ ಪ್ರತಿ ಅಣುವನ್ನೂ ಅಗಾಧ ಶಕ್ತಿಯನ್ನಾಗಿ ಮಾರ್ಪಡಿಸಬಹುದಾಗಿದೆಯೆಂದು ಐನ್‍ಸ್ಟೈನ್ ಈ ಸಮೀಕರಣದ ಮೂಲಕ ತನ್ನ ವಿಶಿಷ್ಟ ಸಿದ್ಧಾಂತವನ್ನು ಮಂಡಿಸಿದ್ದ. ಭೌತಿಕ ಸತ್ಯವೊಂದಕ್ಕೆ ತಾತ್ವಿಕ ತರ್ಕದ ಆತನ ಆ ವಿಶಿಷ್ಟ ಪ್ರತಿಪಾದನೆ ನೂರಾರು ವರ್ಷಗಳ ವೈಜ್ಞಾನಿಕ ಸತ್ಯಗಳನ್ನು ಅಂದಿಗೆ ಬುಡಮೇಲು ಮಾಡಿತ್ತು.

ಅಂತೆಯೇ, ಐನ್‍ಸ್ಟೈನ್, ನ್ಯೂಟನ್‍ನ ಗುರುತ್ವಾಕರ್ಷಣೆಯ ನಿಯಮಗಳನ್ನು ತನ್ನ ಸಾಪೇಕ್ಷ ಸಿದ್ಧಾಂತದ ಮೂಲಕ ಭಗ್ನ ಮಾಡಿದ್ದ. ನ್ಯೂಟನ್‍ಗೆ ಮುನ್ನ (1687) ಗುರುತ್ವದ ಪರಿಕಲ್ಪನೆ ಬಿಡಿ. ಬ್ರಹ್ಮಾಂಡದ ಆಗುಹೋಗುಗಳೆಡೆಗೆ ಕೂಡಾ ವಿಜ್ಞಾನದ ಸ್ಪಷ್ಟ ದೃಷ್ಟಿ ನೆಟ್ಟಿರಲಿಲ್ಲ. ನ್ಯೂಟನ್ ಗುರುತ್ವವನ್ನು ಬ್ರಹ್ಮಾಂಡದ ಪ್ರತಿ ವಸ್ತುವಿನ ನಡುವೆ ಅನುಕ್ಷಣವೂ ಆವರಿಸಿಕೊಂಡಿರುವ ಆಕರ್ಷಕ ಶಕ್ತಿ ಎಂದು ತನ್ನ ಸಿದ್ಧಾಂತದ ಮೂಲಕ ಪ್ರತಿಪಾದಿಸಿದ. ಅಷ್ಟೇ ಅಲ್ಲ,  ಆ ಶಕ್ತಿ ಒಂದು ವಸ್ತುವಿನ ದ್ರವ್ಯರಾಶಿಗೆ ನೇರವಾಗಿ ಸಂಬಂಧಿಸಿದ್ದು ಎಂಬ ವಾದವನ್ನು ಮಂಡಿಸಿದ. ನ್ಯೂಟನ್ ಬಿಡಿಸಿಟ್ಟ ಈ ಸಂಬಂಧದ ಸಮೀಕರಣ ಸಾಮಾನ್ಯ ಜನರಿಗೆ ಅಥವಾ ವಿಜ್ಞಾನದ ವಿದ್ಯಾರ್ಥಿಗೆ ಚಂದ್ರ ಭೂಮಿಯ ಸುತ್ತ ಹೇಗೆ ಚಲಿಸುತ್ತಾನೆ ಎಂಬುದರ ಕಲ್ಪನೆಯನ್ನು ಒದಗಿಸುವ ಜ್ಞಾನವನ್ನು ನೀಡಿತ್ತು. ಆದರೆ, ಆ ಚಲನೆಯ ತಾಂತ್ರಿಕತೆಯ ಬಗ್ಗೆ ನ್ಯೂಟನ್‍ವಾದ ಮೌನವಾಗುತ್ತಿತ್ತು. ನ್ಯೂಟನ್ ಇಡೀ ಪ್ರಕ್ರಿಯೆಯನ್ನು ವರ್ಣಿಸಬಲ್ಲನಾಗಿದ್ದರೂ, ಆತನಿಗೆ ಅದರ ಹಿನ್ನೆಲೆಯ ಬಗ್ಗೆ ಸ್ಪಷ್ಟೀಕರಣ ನೀಡಲು ಸಾಧ್ಯವಾಗುತ್ತಿರಲಿಲ್ಲ. ಯಾವುದೋ ಶಕ್ತಿ ಇದನ್ನು ಮುನ್ನಡೆಸುತ್ತದೆ ಎಂದು ಮೌನವಾಗುತ್ತಿದ್ದ.

300 ವರ್ಷಗಳು, ನ್ಯೂಟನ್‍ನ ಈ ಸಿದ್ಧಾಂತವನ್ನೇ ಜಗತ್ತು ನಂಬಿತ್ತು. ಆ ನಂಬಿಕೆ ಸತ್ಯವಾ? ವಿಜ್ಞಾನ ತನ್ನ ಎಂದಿನ ಅನುಮಾನದ ದೃಷ್ಟಿಯಿಂದಲೇ ಹೆಜ್ಜೆಯಿಡುತ್ತಿದ್ದಾಗ ಮೂಡಿದ್ದು ಐನ್‍ಸ್ಟೈನ್‍ನ ಸತ್ಯದ ಗುರುತು! “ನ್ಯೂಟನ್ ನನ್ನನ್ನು ಕ್ಷಮಿಸು. ನಿನ್ನ ಕಾಲಮಾನದಲ್ಲಿ, ಅತ್ಯಂತ ಉತ್ಕೃಷ್ಟ ಜ್ಞಾನವಿರುವ ಯಾವುದೇ ವ್ಯಕ್ತಿ ತನಗೆ ಸಿಕ್ಕ ಸೌಲಭ್ಯದ ನಡುವೆ  ಸೃಜನಶೀಲತೆಯ ಗರಿಷ್ಟ ಮಟ್ಟದಲ್ಲಿ ಏನನ್ನು ಯೋಚಿಸಬಹುದೋ ಅದನ್ನು ನೀನು ಗ್ರಹಿಸಿದ್ದೀ” – ಹೀಗೆ ನ್ಯೂಟನ್ ಬಗೆಗಿನ ವಿನಮ್ರ ಭಾವವನ್ನು ಐನ್‍ಸ್ಟೈನ್ ತನ್ನ ‘The World as I see it’ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಆ ವಿನಮ್ರತೆಯಲ್ಲಿಯೇ ಆತ ನ್ಯೂಟನ್‍ನ ಸಿದ್ಧಾಂತಕ್ಕೆ ಸಕಾರಾತ್ಮಕವಾದ ವೈಚಿತ್ರತೆಯನ್ನು ತುಂಬಿದ. ಅದು ಹೇಗೆ?

ಐನ್‍ಸ್ಟೈನ್ ತನ್ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಮೂಲಕ ಹುಟ್ಟುಹಾಕಿದ್ದು ದೇಶಕಾಲ (Time-space) ಎಂಬ ವಿಶಿಷ್ಟ ಸಿದ್ಧಾಂತವನ್ನು. ಅದರಂತೆ, ಇಡೀ ಬ್ರಹ್ಮಾಂಡವನ್ನು ಒಂದು ದೊಡ್ಡ ರಬ್ಬರಿನ ಪದರವೆಂದು ಕಲ್ಪಿಸಿಕೊಳ್ಳಬೇಕಾಗುತ್ತದೆ. ಯಾವುದೋ ನಕ್ಷತ್ರ, ಗ್ರಹ ಅಥವಾ ಇನ್ಯಾವುದೇ ಘನವಸ್ತು ಅದರ ಮೇಲೆ ಬಂದು ಕುಳಿತಾಗ ಅದರ ಸಾಂದ್ರತೆಯಾಧಾರದ ಮೇಲೆ ಆ ಪದರ ಕೆಳಕ್ಕೆ ಜಗ್ಗಿ ಶಂಕುವಿನ ಆಕಾರದಲ್ಲಿ ವಿರೂಪಗೊಳ್ಳುತ್ತದೆ.  ಆ ವಿರೂಪವು ಅದರ ತೆಕ್ಕೆಗೆ ಬರುವ ವಸ್ತುಗಳನ್ನು ತನ್ನ ಸುತ್ತಲೂ ನಿಗದಿತ ಪಥದಲ್ಲಿ ಸುತ್ತುವ ಹಾಗೆ ಮಾಡುತ್ತದೆ. ಈ ದೇಶಕಾಲದ ರಬ್ಬರ್ ಹಾಳೆಯ ಮೇಲೆ ಗ್ರಹವೊಂದು ಕುಳಿತಾಗ ಉಂಟಾಗುವ ಭಾರವು ಕಲ್ಪಿಸುವ ವಿರೂಪಕ್ಕೆ ಗುರುತ್ವಶಕ್ತಿ ನೇರವಾಗಿ ಸಂಬಂಧವನ್ನು ಹೊಂದಿರುತ್ತದೆ ಎಂಬ ಅದ್ಭುತ ಸತ್ಯವನ್ನು ಐನ್‍ಸ್ಟೈನ್ ಜಗತ್ತಿಗೆ ಪರಿಚಯಿಸಿದ. ಈ ಜಾಲವೂ ಶಬ್ದ ತರಂಗಳನ್ನು ಸೃಷ್ಟಿಸುತ್ತದೆ. ಇಂತಹ ತರಂಗಗಳು ಸದಾಕಾಲ ಬ್ರಹ್ಮಾಂಡದಲ್ಲಿ ಸದೃಶ್ಯವಾಗಿರುತ್ತವೆ ಹಾಗೂ ಅವುಗಳನ್ನು ಅಳತೆಗೆ ತಂದುಕೊಳ್ಳುವುದು ವಿಜ್ಞಾನಿಗಳಿಗೆ ಬಹಳ ಕಷ್ಟವಾದ ಸಂಗತಿ ಎಂಬ ಅಂಶವನ್ನು ಒಂದು ನೂರು ವರ್ಷಗಳ ಹಿಂದೆಯೇ ಐನ್‍ಸ್ಟೈನ್ ತನ್ನ ಕೋಣೆಯಲ್ಲಿ ಕುಳಿತು ತನ್ನ ಮೌನ ಲೆಕ್ಕಾಚಾರದ ಮೂಲಕ ಗ್ರಹಿಸಿದ್ದ.

ಮೊನ್ನೆ ವಿಜ್ಞಾನ ಗ್ರಹಿಸಿರುವುದು 130 ಬಿಲಿಯನ್ ವರ್ಷಗಳ ಹಿಂದೆ ಎರಡು ಕೃಷ್ಣರಂಧ್ರಗಳು ಪರಸ್ಪರ ಸಂಘರ್ಷಿಸಿದಾಗ ಉಂಟಾದ ಅಲೆ. ಅದು ನೂರು ವರ್ಷಗಳ ಹಿಂದೆ ಐನ್‍ಸ್ಟೈನ್ ಊಹಿಸಿದ್ದೂ ಹೌದು. ದೇಶಕಾಲದ ಪದರದ ಮೇಲೆ ಬೆಳಕಿನ ವೇಗದಲ್ಲಿ ಸಂಚರಿಸುತ್ತಾ (ಪ್ರತಿ ಸೆಕೆಂಡಿಗೆ 3 ಲಕ್ಷ ಕಿ.ಮೀ.ವೇಗದಲ್ಲಿ!) ಭೂಮಿಯನ್ನು ಆ ಅಲೆ ತಲುಪಿದ್ದು ಕಳೆದ ಸೆಪ್ಟೆಂಬರ್ ನಲ್ಲಿ! ಇದು ಜನಸಾಮಾನ್ಯನ ಗ್ರಹಿಕೆಗೆ ಈಗಲೂ ನಿಲುಕದ ಬೃಹತ್ ಸತ್ಯವೇ ಆದರೂ ವಿಜ್ಞಾನದ ಈ ಮಹತ್ವದ ದಾಪುಗಾಲು ಕಾಲದ ದೃಷ್ಟಿಯಿಂದ ಅಷ್ಟು ದೊಡ್ಡದೇ? ಈ ತರಂಗಗಳ ಆವಿಷ್ಕಾರ ನಾವು ಬ್ರಹ್ಮಾಂಡದ ಬಗ್ಗೆ ಹಿಂದೆಂದೂ ತಿಳಿದಿರದ ಹಲವು ಸತ್ಯಗಳನ್ನು ಅರಿಯಲು; ನಿಗೂಢಗಳನ್ನು ಬೆತ್ತಲೆಯಾಗಿಸಲು ಹೊಸ ಅವಕಾಶ ಸೃಷ್ಟಿಸಿರುವುದೇನೋ ಸರಿ. ಆದರೆ, ಇಂತಹ ಆವಿಷ್ಕಾರಗಳ ಹಿನ್ನೆಲೆಯಲ್ಲಿ ವಿಜ್ಞಾನ ಕ್ಷೇತ್ರವು ಜಗತ್ತಿನ ಎಲ್ಲಾ ನಿಗೂಢಗಳನ್ನೂ ಅರಿಯುವ ಶಕ್ತಿ ತನಗೆ ಇದೆ ಎಂದೇನಾದರೂ ಬೀಗುವುದಾದರೆ ಅದು ಸರಿಯೇ? ಇಂದಿನ ಆವಿಷ್ಕಾರ ನಿಜವಾಗಿಯೂ ವಿಜ್ಞಾನದ ಗೆಲುವೇ ಅಥವಾ ಬ್ರಹ್ಮಾಂಡದ ದೃಷ್ಟಿಯಲ್ಲಿನ ಹಿನ್ನಡೆಯೇ? ಈ ರೀತಿಯ ದೃಷ್ಟಿಕೋನಗಳು ಇಲ್ಲಿ ಮಹತ್ವವನ್ನು ಪಡೆಯಬೇಕಾಗುತ್ತದೆ. ಸಾಪೇಕ್ಷ ಸಿದ್ಧಾಂತವನ್ನು ಪ್ರತಿಪಾದಿಸಿದ ಆಲ್ಬರ್ಟ್ ಐನ್‍ಸ್ಟೈನ್,  ಅನಿಶ್ಚತೆಯ ಸಿದ್ಧಾಂತ ಪ್ರತಿಪಾದಿಸಿದ ವರ್ನರ್ ಹೈಸನ್‍ಬರ್ಗ್ ರಂತಹ ಅಸಾಮಾನ್ಯ ತತ್ವಜ್ಞಾನಿಗಳು ವಿಜ್ಞಾನಕ್ಕೆ ತಮ್ಮ ಸಿದ್ಧಾಂತಗಳಿಂದ ನೀಡಿದ ಕೊಡುಗೆಯಷ್ಟೇ ಅದರ ಮಿತಿಯನ್ನೂ ಜಗತ್ತಿಗೆ ಅರ್ಥ ಮಾಡಿಸುತ್ತಾ ಬಂದಿದ್ದಾರೆ.

ಹೈಸನ್‍ಬರ್ಗ್, ತನ್ನ uncertainty principle ಸಿದ್ಧಾಂತದ ಮೂಲಕ ಪರಮಾಣುವೊಂದರಲ್ಲಿ ಅಡಕವಾಗಿರುವ ಎಲೆಕ್ಟ್ರಾನಿನ ಹೆಜ್ಜೆ ಗುರುತನ್ನು ಕಂಡು ಹಿಡಿಯುವುದು ಅಸಾಧ್ಯವೆಂದೂ, ಒಂದು ವೇಳೆ ನಿಗದಿತ ಕ್ಷಣದಲ್ಲಿ ಅದರ ಸ್ಥಳವನ್ನು ಗುರುತಿಸಬಹುದಾದಲ್ಲಿ ಆ ಸಂದರ್ಭದಲ್ಲಿ ಅದರ ವೇಗವನ್ನು ಗ್ರಹಿಸಲು ಅಸಾಧ್ಯ ಮತ್ತು ವೇಗವನ್ನು ಗ್ರಹಿಸಿದ ಕ್ಷಣ ಅದರ ಸ್ಥಳವನ್ನು ಊಹಿಸುವುದು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದ. ಪರಮಾಣು ಶಾಸ್ತ್ರದ ದೃಷ್ಟಿಕೋನದಿಂದ ಇದೊಂದು ಬಹಳ ದೊಡ್ಡ ಅನ್ವೇಷಣೆಯಾಗಿತ್ತು. ತನ್ನ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಹೈಸನ್‍ಬರ್ಗ್, ತಾನೇ ಬರೆದ Physics and Philosophy ಪುಸ್ತಕದ ಆಶಯ ತನಗೆ ಎಲ್ಲದಕ್ಕಿಂತಾ ಮಿಗಿಲು ಎಂದು ಹೆಮ್ಮೆ ಪಟ್ಟಿದ್ದ. ಈ Physics and Philosophy  ಪುಸ್ತಕದಲ್ಲಿ ಆತ ದೇಶಗಳ, ಸೀಮೆಗಳ ನಡುವಿನ ರಾಜಕೀಯ ವೈಮನಸ್ಯಗಳಿಗೆ ಆಧುನಿಕ ಭೌತಶಾಸ್ತ್ರದ ಇಂತಹ ಅನ್ವೇಷಣೆಗಳು ನಿಜಕ್ಕೂ ನಿರುಪಯುಕ್ತವಾಗಬೇಕು ಮತ್ತು ಮನುಕುಲದ ಬದುಕನ್ನು ಸಕಾರಾತ್ಮಕತೆಯೆಡೆಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಬಲವಾಗಿ ಆಶಿಸಿದ್ದ. ಆಧುನಿಕ ಭೌತಶಾಸ್ತ್ರದ ಆವಿಷ್ಕಾರ ವಿಜ್ಞಾನವನ್ನು ಹೇಗೆ ಇನ್ನಷ್ಟು ವಿಶಾಲ ಭಾವಕ್ಕೆ ಒಡ್ಡಬೇಕು ಎಂಬುದನ್ನು ಹೈಸನ್‍ಬರ್ಗ್‍ನ ಈ ವಿಶಿಷ್ಟ ಪುಸ್ತಕ ನಿರೂಪಿಸುತ್ತದೆ.

ಇನ್ನು ಐನ್‍ಸ್ಟೈನ್‍ನ ಆ ನಿರೀಕ್ಷೆಯ ಕಣ್ಣುಗಳಲ್ಲಿ ಸದಾಕಾಲ ಜಿನುಗುತ್ತಲೇ ಇದ್ದದ್ದು ಜಗದೆಡೆಗಿನ ಬೆರಗಿನ ಬೆಳಕು. ಅದಕ್ಕೇ ಆತ, ಯಾವಾಗಲೂ ‘ಬುದ್ಧಿಶಕ್ತಿಯ ನಿಜವಾದ ಗುರುತು ಜ್ಞಾನ ಅಲ್ಲ, ಬದಲಿಗೆ ಕಲ್ಪನೆ’ ಎನ್ನುತ್ತಿದ್ದ. ಲೆಕ್ಕಾಚಾರಗಳ ಗಣಿತದ ಸಂಕೀರ್ಣತೆಯನ್ನು ಸುಲಭವಾಗಿ ಬಿಡಿಸಿಡಲು ತನ್ನದೇ ಅಂತರ್ದೃಷ್ಟಿಯ ಮೊರೆ ಹೋಗುತ್ತಿದ್ದ. ಶಾಲೆ ತನ್ನನ್ನು ಅನುತ್ತೀರ್ಣನನ್ನಾಗಿ ಮಾಡಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. “ನಾನು ಹೆಚ್ಚು ಹೆಚ್ಚು ಓದಿದಂತೆಲ್ಲಾ ಬ್ರಹ್ಮಾಂಡದ ನಿಯಮ ಬದ್ಧತೆ ಹಾಗೂ ಮನುಕುಲದ ಬುದ್ಧಿಶಕ್ತಿಯ ಅಸ್ತವ್ಯಸ್ತತೆಗಳೆರಡೂ ಹೆಚ್ಚುತ್ತಲೇ ಹೋದಂತೆ ಕಂಡಿತು. ಅದರ ನಿಯಮಗಳು ಸರಳವಿರಬಹುದು. ಆದರೆ, ಮನುಷ್ಯನ ಪ್ರಜ್ಞಾಶಕ್ತಿ ಸೀಮಿತತೆಯನ್ನು ಹೊಂದಿದೆಯಾದ ಕಾರಣ ನಾವು ಬ್ರಹ್ಮಾಂಡದ ನಿಯಮಗಳನ್ನು ಎಂದಿಗೂ ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ಪ್ರಪಂಚವನ್ನು ಸಮಗ್ರತೆಯೆಡೆಗೆ ಕೊಂಡೊಯ್ಯಬೇಕಾದರೆ ವೈಜ್ಞಾನಿಕ ದೃಷ್ಟಿಕೋನದ ಬದಲಿಗೆ ಆದರ್ಶದ ಅಗತ್ಯತೆ ಹೆಚ್ಚು ಪ್ರಮುಖವಾಗುತ್ತದೆ. ಹಾಗಾಗಿ ಮನುಕುಲಕ್ಕೆ ವಿಜ್ಞಾನ ನೀಡಿರುವ ಕೊಡುಗೆಗಿಂತಾ ಬುದ್ಧ, ಗಾಂಧೀ, ಜೀಸಸ್ ನೀಡಿದ ಕೊಡುಗೆ ಬಹಳ ದೊಡ್ಡದು” ಎಂದು ಐನ್‍ಸ್ಟೈನ್ ಹೇಳಿದ್ದ. ಅಸಾಮಾನ್ಯ ವಿಜ್ಞಾನಿಯೊಬ್ಬನ ವಿನೀತವಾದ ಬೆರಗಿನ ಮೂಸೆಯಲ್ಲಿ ಅರಳಿದ ತತ್ವಜ್ಞಾನ, ಜಗತ್ತು ಆತನನ್ನು ಪರಿಪೂರ್ಣ ವಿಜ್ಞಾನಿಯನ್ನಾಗಿ ಅವಲೋಕಿಸುವ ಹಾಗೆ ಮಾಡಿತು.

ಮುಂದಿನ ದಿನಗಳಲ್ಲಿ ಎಡ್ಡಿಂಗ್ಟನ್, ಹೈಸನ್‍ಬರ್ಗ್, ಐನ್‍ಸ್ಟೈನ್‍ರ ಭೌತಿಕ ಅನ್ವೇಷಣೆಗಳನ್ನೂದಾಟಿ ವಿಜ್ಞಾನ ಮುನ್ನಡೆಯುತ್ತದೆ. ಆ ಮುನ್ನಡೆಯುವಿಕೆಯ ಹೆಜ್ಜೆಸದ್ದಿಗೆ ಆಧ್ಯಾತ್ಮದ ತೇಜಸ್ಸೂ ಹದವಾಗಿ ಬೆರೆಯಬೇಕು. ಆಗಲೇ ವಿಜ್ಞಾನದ ಮಸ್ತಿಷ್ಕದಲ್ಲಿ ಹೊಸ ಆವಿಷ್ಕಾರಗಳು ಹುಟ್ಟಿಸುವ ಅಹಂಭಾವಕ್ಕೆ ಅದರದೇ ಅಂತಃಕರಣದಲ್ಲಿ ಜನಿಸುವ ನಮ್ರತೆಯೂ ಅಕ್ಕರೆಯ ಜೊತೆಯಾಗುತ್ತದೆ. ಆಗ ಮೂಡುವ ಸಮತೋಲನದ ಪರಿಣಾಮವಾಗಿ ಬದುಕಿನಲ್ಲಿ ತಾದಾತ್ಮ್ಯತೆಯ ಸೊಬಗು ಅರಳುತ್ತದೆ. ಮನುಕುಲ ವಿಜ್ಞಾನದಿಂದ ನಿಜವಾಗಿಯೂ ಬಯಸುವುದು ಅದನ್ನೇ!

(ಲೇಖಕರು ಸಾಹಿತ್ಯಾಸಕ್ತರು, ಹವ್ಯಾಸಿ ಬರಹಗಾರ)

Leave a Reply