ದುಬಾರಿ ವಾಚು ಕಟ್ಟಿದೋರ ಕತೆ ಗೊತ್ತಿದೆ, ಆದ್ರೆ ಈ ಬ್ರಾಂಡ್ ವಾಚುಗಳ ಕತೆ ಏನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ಟೈಮ್ ಎಷ್ಟಾಯ್ತು ಅಂತ ಕೇಳಿದ್ರೆ ಮೊಬೈಲ್ ಫೋನ್ ನೋಡಿ ಪ್ರತಿಕ್ರಿಯಿಸೋ ಈ ಕಾಲದಲ್ಲಿದುಬಾರಿ ವಾಚ್ ಗಳ ಬಗ್ಗೆ ಸಾಮಾನ್ಯರು ಆಸಕ್ತಿ ತಾಳುವಂತಾಗಿದ್ದಕ್ಕೆ ಸಿಎಂ ಸಿದ್ದರಾಮಯ್ಯನವರಿಗೆ ಥ್ಯಾಂಕ್ಸ್ ಹೇಳಬೇಕಾಗುತ್ತದೇನೋ.

ದುಬಾರಿ ವಾಚ್ ಸಹವಾಸದಿಂದ ಸಿಎಂ ಸಾವರಿಸಿಕೊಳ್ಳುವುದಕ್ಕೆ ಬಹಳವೇ ಪ್ರಯಾಸ ಪಡಬೇಕಾಯ್ತು. ಇರಲಿ, ಇಷ್ಟಕ್ಕೂ ಈ ಬ್ರಾಂಡೆಡ್ ವಾಚ್ ಗಳ ಲೋಕ ಹೇಗಿದೆ? ಅದರ ಸ್ಥಿತಿ- ಗತಿಗಳೇನು ಅಂಥ ಆಸಕ್ತಿಯ ನೋಟ ಹರಿಸೋದಕ್ಕಿದು ಸುಸಮಯ. ಏಕೆಂದರೆ ಇದೇ ಮಾ.17ರಿಂದ 24ರವರೆಗೆ ‘ಬಾಸೆಲ್ ವರ್ಲ್ಡ್ ಫೇರ್’ ನಡೆಯಲಿದೆ. ಏನಿದು ಬಾಸೆಲ್ ವರ್ಲ್ಡ್? ಸ್ವಿಜರ್ಲೆಂಡ್ ನ ಬಾಸೆಲ್ ನಗರದ ವಾಚ್ ಮತ್ತು ಜ್ಯುವೆಲರಿ ವ್ಯಾಪಾರ ವೇದಿಕೆ. ವೈಭೋಗದ ವಾಚುಗಳ ಉತ್ಪಾದನೆಯಲ್ಲಿ ಸ್ವಿಜರ್ಲೆಂಡ್ ದೇಶದ್ದೇ ಮುಂಚೂಣಿ ಹೆಸರು. ಅಂದಹಾಗೆ, ದುಬಾರಿ ವಾಚ್ ಅನ್ನೋದು ಟೈಮ್ ನೋಡುವ ಸಾಧನ ಅಂತಲ್ಲ… ಅದನ್ನು ಕಟ್ಟೋರು ತಮ್ಮ ಟೈಮ್ ಎಷ್ಟು ಚೆನ್ನಾಗಿದೆ ನೋಡಿ ಅಂತ ಜಗತ್ತಿಗೆ ಸಾರುವುದಕ್ಕೆ ಕಟ್ತಾರಷ್ಟೆ. ಅರ್ಥಾತ್ ಅದೊಂದು ಆಭರಣ. ಇಂತಿಪ್ಪ ದುಬಾರಿ ವಾಚ್ ಮೇಳದಲ್ಲಿ ಈ ಬಾರಿ 45 ದೇಶಗಳಿಂದ ಸುಮಾರು 2,100 ಪ್ರದರ್ಶಕರು ತಮ್ಮ ದುಬಾರಿ ವಾಚ್ ಗಳನ್ನು ಅನಾವರಣಗೊಳಿಸುತ್ತಾರೆ. ಅಲ್ಲದೆ ಈ ಜಾತ್ರೆ ಸುಮಾರು 94 ಸಾವಿರ ಗ್ರಾಹಕರನ್ನು ಸೆಳೆಯಲಿದೆ. ಹಲವು ಹೊಸ ಮಾದರಿಯ ವಾಚ್ ಗಳು ಮಾರುಕಟ್ಟೆಗೆ ಪರಿಚಯವಾಗಲಿವೆ.

ಈ ವೈಭೋಗದ ಲೋಕದ ಟೈಮು ಸಕತ್ತಾಗಿಯೇ ಓಡ್ತಿದೆಯಾ ಅಂತ ಕೇಳಿದರೆ, ಈ ಬಾರಿ ಯಾಕೋ ಡಲ್ಲು ಎಂಬ ಮಾತು ಉದ್ಯಮವಲಯದಿಂದ ಕೇಳಿಬರುತ್ತಿದೆ. ಕಳೆದ ಒಂದು ವರ್ಷದಲ್ಲಿ ಈ ಉದ್ಯಮ ಗಣನೀಯ ಕುಸಿತಕ್ಕೆ ಸಿಲುಕಿದೆ.

ಈ ಅವಧಿಯಲ್ಲಿ ಹಲವು ರಾಷ್ಟ್ರಗಳ ವಾಚ್ ತಯಾರಿಯಲ್ಲಿ ಗಣನೀಯ ಕುಸಿತ ಕಂಡಿರುವುದು ಈ ಬಾರಿಯ ಬಾಸೆಲ್ ವರ್ಲ್ಡ್ ನಲ್ಲಿ ಚರ್ಚೆಯಾಗಲಿರುವ ಪ್ರಮುಖ ವಿಷಯ. ಈ ದುಬಾರಿ ವಾಚ್ ಮಾರುಕಟ್ಟೆ ಯಾವ ಪ್ರಮಾಣದಲ್ಲಿ ಕುಸಿದಿದೆ ಅಂದರೆ, ಕಳೆದ ವರ್ಷ ಫೆಬ್ರವರಿಯಿಂದ ಈ ವರ್ಷ ಜನವರಿವರೆಗೂ 1.5 ಬಿಲಿಯನ್ ಫ್ರ್ಯಾಂಕ್ಸ್ ಅಂದರೆ, ಶೇ.7.9ರಷ್ಟು ಹಿನ್ನಡೆ ಉಂಟಾಗಿದೆ. ಕಳೆದ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಯ್ಯೂರೊ ಮುಂದೆ ತನ್ನ ಕರೆನ್ಸಿಯ ಮೌಲ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಿಜರ್ಲೆಂಡ್ ನ ಸೆಂಟ್ರಲ್ ಬ್ಯಾಂಕ್ ತನ್ನ ನೀತಿಗಳಲ್ಲಿ ಬದಲಾವಣೆ ಮಾಡಿಕೊಂಡಿತು. ಆ ಮೂಲಕ ವಿಶ್ವದ ಇತರೆ ದೇಶಗಳಿಗೆ ಸ್ವಿಸ್ ವಾಚ್ ದುಬಾರಿಯಾಗಿ ಪರಿಣಮಿಸಿತು. ಅಲ್ಲದೆ ಸ್ವಿಸ್ ತಯಾರಿಕ ಘಟಕದಲ್ಲೂ ಬದಲಾವಣೆಯಾಯಿತು. ಇದು ಜಾಗತಿಕ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮೂಲಕ ಕುಸಿತಕ್ಕೆ ದಾರಿ ಮಾಡಿಕೊಟ್ಟಿತು. ಅಲ್ಲದೆ ಸ್ಮಾರ್ಟ್ ವಾಚ್ ಗಳ ಟ್ರೆಂಡ್ ಸಹ ಈ ದುಬಾರಿ ವಾಚ್ ಗಳಿಗೆ ಹೊಸ ಸ್ಪರ್ಧಿಯಾಗಿ ಮಾರುಕಟ್ಟೆಯನ್ನುತಿಂದುಹಾಕುತ್ತಿದೆ.

ಈ ಎಲ್ಲ ಸಮಸ್ಯೆಗಳ ಬಗ್ಗೆ ಬಾಸೆಲ್ ವರ್ಲ್ಡ್ ನಲ್ಲಿ ಸಾಕಷ್ಟು ಚರ್ಚೆಯಾಗುವ ನಿರೀಕ್ಷೆ ಇದೆ.

ಈ ದುಬಾರಿ ವಾಚ್ ಇಂಡಸ್ಟ್ರಿಯನ್ನು ಮೇಲ್ನೋಟದಲ್ಲಿ ಅವಲೋಕಿಸಿದರೆ, ಇದು ದೊಡ್ಡ ಪ್ರಮಾಣದ ಉದ್ಯಮ. 2004ರಿಂದ ವರ್ಲ್ಡ್ ವಾಚ್ ರಿಪೋರ್ಟ್, ಈ ಉದ್ಯಮದ ಬೆಳವಣಿಗೆಯನ್ನು ಅಧ್ಯಯನ ನಡೆಸುತ್ತಾ ಬಂದಿದೆ. ಅದರ ಮಾಹಿತಿ ಪ್ರಕಾರ ಸದ್ಯದ ಉದ್ಯಮದ ಪ್ರಮುಖ ಅಂಶಗಳೆಂದರೆ,

– 62 ಲಕ್ಷ್ಯುರಿ ಬ್ರಾಂಡ್

– 11 ಸಾವಿರ ದುಬಾರಿ ವಾಚ್ ಮಾದರಿಗಳು

– 250 ದುಬಾರಿ ವಾಚ್ ರಾಯಭಾರಿಗಳು

– 20 ಅಂತಾರಾಷ್ಟ್ರೀಯ ಮಾರುಕಟ್ಟೆಗಳು

ಇವಿಷ್ಟು ಈ ಉದ್ಯಮದ ಹೈಲೈಟ್ಸ್ ಎನ್ನಬಹುದು.

ಮತ್ತೆ ತಮ್ಮ ಮಾರುಕಟ್ಟೆಯನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಬ್ರಾಂಡ್ ಕಂಪನಿಗಳು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇವೆ. ಹೊಸ ಬಣ್ಣ, ಸ್ಕೆಲಿಟನೈಸ್ ವಾಚ್ ಗಳ ಬಗ್ಗೆ ಗಮನ ಹರಿಸುತ್ತಿವೆ. ಈ ಮಾರುಕಟ್ಟೆಯ ಮುಂದಿನ ದಾರಿಯ ಬಗ್ಗೆ ಬಾಸೆಲ್ ವರ್ಲ್ಡ್ ನಲ್ಲಿ ಚರ್ಚೆಯಾಗಲಿದ್ದು, ಪರಿಹಾರ ಮಾರ್ಗವಾಗಿ ವಾಚ್ ಗಳ ಬೆಲೆಯಲ್ಲಿ ಬದಲಾವಣೆ ಮಾಡಬಹುದೇ? ಎಂಬ ಪ್ರಶ್ನೆ ಮೂಡಿದೆ. ಅದು ಬಾಸೆಲ್ ವರ್ಲ್ಡ್ ನಲ್ಲೇ ನಿರ್ಧಾರವಾಗಲಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಚಿನ್ನ ಹಾಗೂ ಇತರೆ ದುಬಾರಿ ಲೋಹ ಹೊಂದಿರುವ ವಾಚ್ ಪ್ರಮಾಣ ಕೇವಲ ಜನವರಿಯಲ್ಲೇ ಶೇ.14ರಷ್ಟು ಕುಸಿತ ಕಂಡಿದೆ. ಇನ್ನು ಕಡಿಮೆ ಮೌಲ್ಯದ ಲೋಹ ವಾಚ್ ಗಳ ವಹಿವಾಟು ಶೇ.9 ರಿಂದ 6 ರಷ್ಟು ಕಡಿಮೆಯಾಗಿದೆ.

ಈ ಬೆಳವಣಿಗೆ ವಾಚ್ ಮೌಲ್ಯವನ್ನು ಕಡಿಮೆ ಮಾಡುವ ಪರಿಸ್ಥಿತಿ ನಿರ್ಮಿಸಬಹುದು. ಚೀನಾದ ಮಧ್ಯಮ ವರ್ಗ ಮತ್ತು ಅಮೆರಿಕದ ಉನ್ನತ ಮಧ್ಯಮ ವರ್ಗದವರನ್ನು ಮತ್ತೆ ತನ್ನತ್ತ ಸೆಳೆಯುವಂತೆ ಮಾಡಬಹುದು. ಪ್ರಾರಂಭಿಕ ದರದ 203 ರಿಂದ 408 ಅಮೆರಿಕನ್ ಡಾಲರ್ ಮೊತ್ತದ ವಾಚ್ ದರದಲ್ಲಿ ಶೇ. 12 ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.

Leave a Reply