ರಿಯಲ್ ಎಸ್ಟೇಟ್ ಬಲಾಢ್ಯರ ಅಂಕುಶಕ್ಕೆ ಬೇಕಿದ್ದವು ಈ ನಿಯಮಗಳು

ಡಿಜಿಟಲ್ ಕನ್ನಡ ಟೀಮ್

ಕಳೆದ ವಾರದ ಪ್ರಮುಖ ವಿದ್ಯಮಾನಗಳಲ್ಲಿರಾಜ್ಯಸಭೆಯಲ್ಲಿ ರಿಯಲ್ ಎಸ್ಟೇಟ್ ವಿಧೇಯಕ ಪಾಸಾಗಿದ್ದೂ ಒಂದು. ಮಧ್ಯಮ ವರ್ಗದ ಸ್ವಂತ ಮನೆ ಆಸೆಯನ್ನು ಬಂಡವಾಳವಾಗಿರಿಸಿಕೊಂಡು ಉತ್ಪ್ರೇಕ್ಷಿತ ಜಾಹೀರಾತು ನೀಡೋದು, ಹೇಳಿದ್ದೇ ಒಂದು ಯೋಜನೆ- ಮಾಡಿದ್ದೇ ಇನ್ನೊಂದು ಅಂತಾಗೋದು, ಮೊದಲಿಗೆ ಹಣ ತುಂಬಿಸಿಕೊಂಡು ಯೋಜನೆ ಪೂರ್ಣಗೊಳಿಸದೇ ಸತಾಯಿಸೋದು ಇಂಥ ಎಲ್ಲ ಬಲಾಢ್ಯರ ಆಟಗಳಿಗೆ ಅಂಕುಶ ಹಾಕುವ ಉದ್ದೇಶ ಇರಿಸಿಕೊಂಡಿರುವ ಮಸೂದೆ ಇದು. ರಾಜ್ಯಸಭೆಯ ಸೆಲೆಕ್ಟ್ ಕಮಿಟಿ ಸೂಚಿಸಿದ್ದ 20 ತಿದ್ದುಪಡಿಗಳನ್ನು ಒಪ್ಪಿಕೊಂಡು ಪಾಸ್ ಆಗಿ, ಲೋಕಸಭೆ ಅನುಮೋದನೆಗೆ ಹೋಗಿದೆ. ಆಸ್ತಿ ಖರೀದಿದಾರರ ಹಿತ ಕಾಯುವ ಅಂಶಗಳು ಇದರಲ್ಲೇನಿದೆ ನೋಡೋಣ.

  • ಈ ಮಸೂದೆ ವಾಣಿಜ್ಯ ಮತ್ತು ವಸತಿಯ ಎರಡು ಯೋಜನೆಗಳಿಗೂ ಅನ್ವಯಿಸಲಿದ್ದು, ಸ್ಥಿರಾಸ್ತಿ ವ್ಯವಹಾರಗಳ ಮೇಲ್ವಿಚಾರಣೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ಆರ್ ಇ ಆರ್ ಎ- ರೆರಾ) ರಚನೆಯಾಗಲಿದೆ.
  • ರಿಯಲ್ ಎಸ್ಟೇಟ್ ಯೋಜನೆಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟರುಗಳು ಕಡ್ಡಾಯವಾಗಿ ಪ್ರಾಧಿಕಾರದಲ್ಲಿ ನೊಂದಣೆಯಾಗಬೇಕು. ಜೊತೆಗೆ ಬಿಲ್ಡರ್ ಗಳು ನೊಂದಣಿಯಾಗಿರುವ ಪ್ರಮೋಟರ್, ಬಡಾವಣೆಯ ಯೋಜನೆ, ಭೂಮಿಯ ಸ್ಥಿತಿ, ಅನುಮೋದನೆಗಳು, ಏಜೆಂಟರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ದಾಖಲೆಗಳು ಮತ್ತು ವಿವರಗಳನ್ನು ಹೊಂದಿರಬೇಕು. ಯೋಜನೆಗೆ ಒಳಪಡುವ ಗುತ್ತಿಗೆದಾರ, ವಾಸ್ತುಶಿಲ್ಪಿ, ಇಂಜಿನಿಯರ್ ಇತರೆಯವರ ಪೂರ್ಣ ಮಾಹಿತಿಯನ್ನು ರೆರಾ ವೆಬ್ ಸೈಟ್ ನಲ್ಲಿ ಹಾಕಬೇಕು. ರಿಯಲ್ ಎಸ್ಟೇಟ್ ಏಜೆಂಟರು ಸಹ ರೆರಾನಲ್ಲಿ ನೊಂದಣಿಯಾಗಿರಬೇಕು.
  • ರಿಯಲ್ ಎಸ್ಟೇಟ್ ಕಂಪನಿಗಳು ಬಳಕೆಯಲ್ಲಿರುವ ಮತ್ತು ಕಾಮಗಾರಿ ನಡೆಯುತ್ತಿರುವ ಯೋಜನೆಗಳಿಗೆ ಮಾತ್ರ ಗ್ರಾಹಕರಿಂದ ಹಣ ಪಡೆದುಕೊಳ್ಳಬೇಕು. ಸಂಗ್ರಹವಾದ ಹಣದಲ್ಲಿ ಶೇ. 70 ರಷ್ಟು ಮೊತ್ತವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿಜಮಾ ಮಾಡಬೇಕು. ಇದನ್ನು ಯೋಜನೆಯ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು. ಮೀಸಲಿಡುವ ಮೊತ್ತದ ಪ್ರಮಾಣವನ್ನು ಶೇ.70 ಕಿಂತ ಕಡಿಮೆ ಮಾಡುವ ಅಧಿಕಾರ ರಾಜ್ಯಸರ್ಕಾರಕ್ಕೆ ಸಿಗಲಿದೆ.
  • ಮರುಪಾವತಿಗೆ ಸಂಬಂಧಿಸಿದ ವಿವಾದ ಪ್ರಕರಣಗಳು ನ್ಯಾಯಮಂಡಳಿ ಅಥವಾ ಅಧಿಕಾರಿಗಳ ಮೂಲಕ ತ್ವರಿತವಾಗಿ ಇತ್ಯರ್ಥವಾಗಲಿವೆ. ನಾಗರಿಕ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳ ವಿಚಾರಣೆ ಇರುವುದಿಲ್ಲ. ಆದರೆ ದೇಶಾದ್ಯಂತ ಇರುವ 644 ಗ್ರಾಹಕ ನ್ಯಾಯಾಲಯಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಮಸ್ಯೆ ಬಗೆಹರಿಯಲು ಹಲವು ಮಾರ್ಗಗಳಲ್ಲಿ ಅವಕಾಶ ಕಲ್ಪಿಸಿದ್ದು, ಇದರಿಂದ ಖರೀದಿದಾರರಿಗೆ ಕಾನೂನು ಪ್ರಕ್ರಿಯೆ ವೆಚ್ಚ ಕಡಿಮೆಯಾಗಲಿದೆ. ಬಿಲ್ಡರ್ ಗಳು ಗ್ರಾಹಕರ ಅನುಮತಿ ಇಲ್ಲದೆ ಯಾವುದೇ ಯೋಜನೆಯನ್ನು ಬದಲಿಸುವ ಕ್ರಮವನ್ನು ನಿಷೇಧಿಸಲಾಗಿದೆ.
  • ಬಿಲ್ಡರ್ ಗಳು ಗ್ರಾಹಕರಿಗೆ ಆಸ್ತಿ ನೊಂದಣೆ ಮಾಡಿಕೊಡದಿದ್ದಲ್ಲಿ ಆಸ್ತಿಯ ಒಟ್ಟು ಮೌಲ್ಯದ ಶೇ. 10 ರಷ್ಟನ್ನು ದಂಡವಾಗಿ ನೀಡಬೇಕಾಗುತ್ತದೆ. ರೆರಾ ಆದೇಶಗಳನ್ನು ಉಲ್ಲಂಘಿಸುವುದು ಅಥವಾ ಮುಂದೂಡುವುದು ಮಾಡಿದರೆ 3 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಅಥವಾ ಯೋಜನೆಗೆ ಅಂದಾಜಿಸಿರುವ ಮೊತ್ತದ ಶೇ.10 ರಷ್ಟನ್ನು ಹೆಚ್ಚುವರಿ ದಂಡವಾಗಿ ಪಾವತಿಸಬೇಕು. ಬಿಲ್ಡರ್ ಕಾಯಿದೆಯನ್ನು ಉಲ್ಲಂಘಿಸಿದ್ದರೆ ಅಂದಾಜಿಸಲಾದ ಒಟ್ಟು ಮೊತ್ತದ ಶೇ.5 ರಷ್ಟು ಶುಲ್ಕ ಪಾವತಿಸಬೇಕು. ರಿಯಲ್ ಎಸ್ಟೇಟ್ ಏಜೆಂಟರು ನಿಯಮಗಳನ್ನು ಉಲ್ಲಂಘಿಸಿದರೆ ಪ್ರತಿ ದಿನ ₹10 ಸಾವಿರ ದಂಡ ಕಟ್ಟಬೇಕು.
  • ಈ ಮಸೂದೆ ಗ್ರಾಹಕರ ವಲಯದಲ್ಲಿ ವಿಶ್ವಾಸ ಮೂಡಿಸಲು ಮತ್ತು ಉದ್ಯಮದಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ. ಸದ್ಯ ಮನೆ ಮಾರಾಟ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ನೈಟ್ ಪ್ರಾಂಕ್ ಸಂಸ್ಥೆ 2015 ರಲ್ಲಿ ಶೇ.4 ರಷ್ಟು ಮಾರಾಟದ ಪ್ರಮಾಣ ಇಳಿಕೆಯಾಗಿರುವ ವರದಿ ನೀಡಿದೆ.

Leave a Reply