ಡಿಜಿಟಲ್ ಕನ್ನಡ ಟೀಮ್
ಉದ್ಯಮಿಗಳು ಸಾಲ ತೀರಿಸದೇ ಆರಾಮಾಗಿರುವ, ನಿಯಮಗಳನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಈ ವಾರ ವರದಿಯಾದ ಒಂದು ಪಾಸಿಟಿವ್ ಸ್ಟೋರಿ ಗಮನ ಸೆಳೆಯುತ್ತದೆ. ಜನರು ಒಂದಾಗಿ ಹೋರಾಡಿದರೆ ದೈತ್ಯ ಕಂಪನಿಗಳನ್ನೂ ಬಾಗಿಸಬಹುದು ಎಂಬ ಸಂದೇಶ ಸಿಗುತ್ತಿದೆ.
ಹೀಗೆ ಬಾಗಿರುವುದು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಹಿಂದುಸ್ಥಾನ್ ಯುನಿಲಿವರ್ ಲಿಮಿಟೆಡ್. ಪಟ್ಟುಬಿಡದೇ ಪ್ರತಿಭಟನೆ ನಡೆಸಿಕೊಂಡುಬಂದ ಕೊಡೈಕೆನಾಲ್ ಜನರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ.
ಇಲ್ಲಿ ಸ್ಥಾಪಿಸಿದ್ದ ಥರ್ಮಾಮೀಟರ್ ಕಾರ್ಖಾನೆಯಿಂದ ಸೋರಿಕೆಯಾದ ಪಾದರಸ ಸ್ಥಳೀಯ ಜಲಮೂಲಗಳಿಗೆ ಸೇರಿ ಜನರಲ್ಲಿ, ವಿಶೇಷವಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಅನಾರೋಗ್ಯ ತೀವ್ರವಾಗಿತ್ತು. 2001ರಲ್ಲಿ ಕಾರ್ಖಾನೆ ಮುಚ್ಚಿದ ಹಿಂದುಸ್ತಾನ್ ಲಿವರ್ ಕಂಪನಿ, ಇಲ್ಲಿನ ಅನಾರೋಗ್ಯಕ್ಕೆ ಸ್ಪಂದಿಸುವುದಕ್ಕೆ ಕಾನೂನು ಪ್ರಕಾರ ತಾನೇನೂ ಬಾಧ್ಯಸ್ಥನಲ್ಲ ಎಂಬಂತೆ ವರ್ತಿಸಿತು.
ಆದರೆ ಲಾಗಾಯ್ತಿನಿಂದಲೂ ಪ್ರತಿಭಟನೆಗಳು ನಡೆಯುತ್ತಲೇ ಬಂದವು. ಅದ್ಯಾವಾಗ ಸೋಫಿಯಾ ಅಶ್ರಫ್ ಎಂಬ ಹಾಡುಗಾರ್ತಿ rap ಶೈಲಿಯಲ್ಲಿ ಒಂದು ಹಾಡು ಚಿತ್ರೀಕರಿಸಿ ಹಿಂದುಸ್ತಾನ್ ಯುನಿಲಿವರ್ ಗೆ ಕಟು ಕಟು ಪ್ರಶ್ನೆಗಳನ್ನೆಸೆದಳೋ ಆಗ ಇವತ್ತಿನ ದೊಡ್ಡದೊಂದು ಡಿಜಿಟಲ್ ಜನಸಂಖ್ಯೆಗೆ ಈ ಅವಘಡದ ಬಗ್ಗೆ ಪರಿಚಯವಾಯಿತು. ಸಾಮಾಜಿಕ ಸ್ಥಾನಗಳಲ್ಲಿ ವೈರಲ್ ಆದ ಈ ವಿಡಿಯೋ 36 ಲಕ್ಷಕ್ಕೂ ಮೀರಿ ವೀಕ್ಷಣೆ ಪಡೆದುಕೊಂಡಿದೆ.
ಅರೆರೆ ಇದು ಅನ್ಯಾಯ… ಕಾನೂನಿನ ವಿಷ್ಯ ಪಕ್ಕಕ್ಕಿರಲಿ, ಕೊನೆಪಕ್ಷ ನೈತಿಕ ಹೊಣೆಹೊತ್ತಾದರೂ ಕಂಪನಿ ಈ ಅನಾರೋಗ್ಯಪೀಡಿತರಿಗೆ ಸ್ಪಂದಿಸೋದು ಬೇಡ್ವಾ ಅಂತ ಧ್ವನಿ ಎತ್ತತೊಡಗಿದರು. 15 ವರ್ಷಗಳಿಂದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದವರಿಗೂ ಮತ್ತಷ್ಟು ತೀವ್ರತೆ ಕೊಟ್ಟಿತಿದು.
ಇವೆಲ್ಲವನ್ನೂ ಅಳೆದು ತೂಗಿದ ಕಂಪನಿ ಕೆಲದಿನಗಳ ಹಿಂದೆ ಹೊರಡಿಸಿರುವ ಹೇಳಿಕೆಯಂತೆ ಕಾರ್ಖಾನೆಯಲ್ಲಿದ್ದ 591 ನೌಕರರ ಸುರಕ್ಷತೆಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲಿದೆ. ಇವರಿಗೆ ಕೊಡಲಿರುವ ಹಣಸಹಾಯ ಎಷ್ಟೆಂಬುದರ ಬಗ್ಗೆ ನಿಖರವಾಗಿ ಹೇಳಿಲ್ಲವಾದರೂ, ಹಿಂದುಸ್ತಾನ್ ಯುನಿಲಿವರ್ ತಮ್ಮೊಂದಿಗೆ ಮಾತುಕತೆ ನಡೆಸಿ ಸಹಾಯಕ್ಕೆ ಒಪ್ಪಿರುವ ಅಂಶಗಳು ಸಮ್ಮತವಾಗಿವೆ ಅಂತ ಕಾರ್ಯಕರ್ತರು ಮತ್ತು ಕಾನೂನು ಹೋರಾಟದಲ್ಲಿ ತೊಡಗಿಕೊಂಡವರು ಹೇಳಿದ್ದಾರೆ.
ಜನಶಕ್ತಿ ಒಗ್ಗೂಡಿ ಕೆಲಸ ಮಾಡಿದರೆ ನ್ಯಾಯ ಪಡೆಯಲು ಸಾಧ್ಯವಿದೆ ಎಂಬ ಆಶಾವಾದವೊಂದನ್ನು ಈ ವಿದ್ಯಮಾನ ಬಿತ್ತುತ್ತಿದೆ.