ಆರೆಸ್ಸೆಸ್ ಹಳಿಯುತ್ತ ಬಿಜೆಪಿ ಹಣಿಯಲು ಪ್ರಯತ್ನಿಸಿದ ಪ್ರತಿಪಕ್ಷಗಳು ಸಾಬೀತು ಮಾಡಿದ್ದೇನನ್ನು?

ಡಿಜಿಟಲ್ ಕನ್ನಡ ಟೀಮ್

ಸಂಸತ್ತಿನಲ್ಲಿ ಸೋಮವಾರ ಆರೆಸ್ಸೆಸ್ ವಿಚಾರ ಸಾಕಷ್ಟು ಚರ್ಚೆ ಎಬ್ಬಿಸಿತು. ತಾವು ಆರೆಸ್ಸೆಸ್ ಅನ್ನು ಐಎಸ್ ಐಎಸ್ ಉಗ್ರವಾದಿ ಸಂಘಟನೆಯೊಂದಿಗೆ ಹೋಲಿಸಿಯೇ ಇಲ್ಲ ಅಂತ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ ಸಮಜಾಯಿಷಿ ನೀಡಿದ್ದು ಬಿಜೆಪಿಗರಿಗೆ ತೃಪ್ತಿ ನೀಡಲಿಲ್ಲ.

ಆದರೆ ಮುಖ್ಯವಾಗಿ ಗಮನಿಸಬೇಕಾದದ್ದು ಮೀಸಲಾತಿ ವಿಚಾರದಲ್ಲಿ ಆರೆಸ್ಸೆಸ್ ಹೇಳಿಕೆ ಇಟ್ಟುಕೊಂಡು ಸಂಸತ್ತಿನಲ್ಲಿ ಬಿಸಿ ಎಬ್ಬಿಸಲು ನೋಡಿದ ವಿಪಕ್ಷ ಪಾಳೆಯದ ನಡೆ. ರಾಜ್ಯಸಭೆ ನಾಯಕ, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಒಂದೇ ಮಾತಿನಲ್ಲಿ ಪ್ರತಿಕ್ರಿಯಿಸಿದರು- ‘ಮೀಸಲಾತಿ ಸ್ಥಿತಿ ಈಗ ಹೇಗಿದೆಯೋ ಅದರಲ್ಲಿ ಯಾವ ಬದಲಾವಣೆಯನ್ನೂ ಸರ್ಕಾರ ಮಾಡುತ್ತಿಲ್ಲ’ ಅಂತ. ‘ಸರ್ಕಾರ ಸ್ಪಷ್ಟನೆ ನೀಡಿ ಆಯ್ತಲ್ಲ, ಇನ್ನೇನು ಚರ್ಚೆ’ ಅಂದರೂ ಎಸ್ಪಿ- ಬಿಎಸ್ಪಿ ಸಂಸದರು ಮಾತಾಡುತ್ತಲೇ ಇದ್ದರು. ಸಂವಿಧಾನದಲ್ಲಿ ಜಾತಿ ಆಧಾರದಲ್ಲಿ ನೀಡಬೇಕಾದ ಮೀಸಲಿನ ಬಗ್ಗೆ ಸ್ಪಷ್ಟತೆ ಇದೆ. ಆದರೆ ಆರೆಸ್ಸೆಸ್ ಈಗ ಅದನ್ನು ಆರ್ಥಿಕ ಆಧಾರದಲ್ಲಿ ಮರು ರಚಿಸಬೇಕು ಎಂಬಂಥ ಧೋರಣೆ ಪ್ರದರ್ಶಿಸುತ್ತಿದೆ ಅಂತ ಬಿಎಸ್ಪಿ ನೇತಾರರಾದ ಮಾಯಾವತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಹೀಗೆ ಆರೆಸ್ಸೆಸ್ ಮುಖಂಡರ ಹೇಳಿಕೆ ಇಟ್ಟುಕೊಂಡು ಹಗ್ಗಜಗ್ಗಾಡುವಾಗ ಮೂಲ ವಿಷಯವೇ ಮರೆಯಾಗಿಹೋಗಿದೆ. ಇಷ್ಟಕ್ಕೂ ಆರೆಸ್ಸೆಸ್ ಹೇಳಿದ್ದೇನು? ಆರೆಸ್ಸೆಸ್ ನ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿಯವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದು- ‘ಸಮಾಜದ ‘ಸ್ಥಿತಿವಂತ ವರ್ಗ’ ಮೀಸಲಾತಿಯನ್ನು ಬಯಸಬಾರದು. ಇದರಿಂದ ನಿಜಕ್ಕೂ ಮೀಸಲಿನ ಅಗತ್ಯವಿರುವವರಿಗೆ ವಂಚನೆಯಾಗುತ್ತದೆ. ಇವತ್ತು ಮೀಸಲಾತಿ ಬೇಕೆಂದು ಆಗ್ರಹಿಸುತ್ತಿರುವವರು, ಭೀಮ್ರಾವ್ ಅಂಬೇಡ್ಕರ್ ಅವರು ಯಾವ ಸಾಮಾಜಿಕ ನ್ಯಾಯದ ದೃಷ್ಟಿ ಇಟ್ಟುಕೊಂಡು ಮೀಸಲು ಜಾರಿಗೆ ತಂದಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’

ಹೀಗೆ ಹೇಳುವ ಮೂಲಕ ಪರೋಕ್ಷವಾಗಿ ಜಾಟರು ಹರ್ಯಾಣದಲ್ಲಿ ಮೀಸಲಾತಿಗೆ ಆಗ್ರಹಿಸುತ್ತಿರುವುದನ್ನು ಅವರು ವಿರೋಧಿಸುತ್ತಿದ್ದರು. ಇದನ್ನು ಎಸ್ಪಿ ಅಥವಾ ಬಿಎಸ್ಪಿ ಅದೇಕೇ ವಿರೋಧಿಸಬೇಕೋ ಅರ್ಥವಾಗದ ಸಂಗತಿ.

ಆರ್ಥಿಕ ಆಧಾರದಲ್ಲಿ ಮೀಸಲಾತಿಗೆ ಆರೆಸ್ಸೆಸ್ ಆಗ್ರಹಿಸುತ್ತಿದೆ ಎಂಬುದು ಉತ್ಪ್ರೇಕ್ಷಿತ ವ್ಯಾಖ್ಯಾನ. ನಿಜ, ಅದಾಗಲೇ ಮೀಸಲಾತಿ ಲಾಭ ಪಡೆದುಕೊಂಡು ಮೇಲೇರಿರುವವರು ಆ ಸೌಲಭ್ಯವನ್ನು ಬಿಟ್ಟರೆ ಅದೇ ಸಮುದಾಯದ ಇತರರಿಗೆ ಅನುಕೂಲವಾಗುತ್ತದೆ ಎಂಬ ವಾದ ಆರೆಸ್ಸೆಸ್ ಮಾತ್ರವಲ್ಲದೇ ಹಲವರಿಂದ ಆಗೀಗ ಕೇಳಿಬಂದಿದೆ. ಅದರರ್ಥ, ಇದುವರೆಗೆ ಮೀಸಲಾತಿ ಪಡೆದವರಿಂದ ಅದನ್ನು ತಪ್ಪಿಸಿ ಮೇಲ್ವರ್ಗದವರಿಗೆ ಕೊಡಬೇಕು ಅಂತಲ್ಲ. ರಾಜಕೀಯವಾಗಿಯೇ ಉದಾಹರಣೆ ನೋಡುವುದಾದರೆ- ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಮೂರ್ನಾಲ್ಕು ಬಾರಿ ಆಯ್ಕೆಯಾಗಿರುವವ ಸಾಮಾನ್ಯಕ್ಷೇತ್ರದಿಂದ ಸ್ಪರ್ಧಿಸಿದರೆ, ಆ ಸ್ಥಾನದಲ್ಲಿ ಅದೇ ಶೋಷಿತ ಜಾತಿಯ ಇನ್ನೊಬ್ಬ ಸ್ಪರ್ಧಿಸುವುದಕ್ಕೆ ಅವಕಾಶವಾಗುತ್ತದೆ. ಅದೇರೀತಿ, ಮೀಸಲು ಪಡೆದು ಉದ್ಯೋಗ ಹೊಂದಿದವನ ಮಕ್ಕಳೂ ಅದನ್ನೇ ಬಯಸದೇ ಸಾಮಾನ್ಯರಾಗಿ ಸ್ಪರ್ಧಿಸಿದರೆ, ಅದೇ ಜಾತಿಯ ಇನ್ನೊಬ್ಬ ಲಾಭ ಪಡೆದುಕೊಳ್ಳಬಹುದು.

ವಾಸ್ತವವಾಗಿ, ದಲಿತರ ಪರ ಎಂದು ಹೇಳುತ್ತಿರುವ ಹಲವು ನಾಯಕರಿಗೆ ಇದು ಬೇಕಿಲ್ಲ. ಏಕೆಂದರೆ ತಮ್ಮದೇ ಕುಡಿಗಳನ್ನು, ಸಂಬಂಧಿಕರನ್ನು ಪೋಷಿಸಿಕೊಂಡಿರುವುದರಲ್ಲೇ ರಾಜಕಾರಣ ನಿರತವಾಗಿದೆ.

ಹಾಗೆಂದೇ, ಈ ಹಿಂದೆ ಮೋಹನ್ ಭಾಗ್ವತ್ ಹಾಗೂ ಈಗ ಭಯ್ಯಾಜಿ ಜೋಶಿ ಹೇಳುತ್ತಿರುವುದು ಈ ಅರ್ಥದಲ್ಲಿ ಅಂತ ಗೊತ್ತಿದ್ದೂ ವಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ. ಏಕೆಂದರೆ, ‘ನೋಡಿ.. ಆರೆಸ್ಸೆಸ್- ಬಿಜೆಪಿ ನಿಮ್ಮ ಮೀಸಲಾತಿ ಕಸಿಯುತ್ತಿವೆ’ ಅಂತ ಪ್ರಚೋದಿಸುವುದು ವಿಪಕ್ಷಗಳಿಗೆ ರಾಜಕೀಯವಾಗಿ ಲಾಭ ತರುವ ಅಂಶವಷ್ಟೆ.

ಇನ್ನು ಗುಲಾಂ ನಬಿ ಆಜಾದ್ ಹೇಳಿಕೆ ಕಾಂಗ್ರೆಸಿಗರ ಎಂದಿನ ಮನಸ್ಥಿತಿ ಸೂಚಿಸುತ್ತದೆ. ಸೈದ್ಧಾಂತಿಕ- ರಾಜಕೀಯ ವಿರೋಧಗಳು ಎಷ್ಟೇ ತೀವ್ರವಾಗಿದ್ದರೂ ಐ ಎಸ್ ಐಎಸ್ ಖಂಡಿಸುವಾಗ ಆರೆಸ್ಸೆಸ್ ನೆನಪಿಸಿಕೊಂಡು ಪರೋಕ್ಷ ಸಮೀಕರಣ ನೀಡುವುದು ವಿಕೃತಿ. ಇದರಿಂದ ಆರೆಸ್ಸೆಸ್ ಮೇಲೆ ಆರೋಪ ಹೊರೆಸಿದಂತಾಯ್ತು ಎನ್ನುವುದಕ್ಕಿಂತ, ಐಎಸ್ ಐಎಸ್ ಮೇಲೆ ಗುಲಾಂ ನಬಿ ಆಜಾದ್ ಮೃದುಧೋರಣೆಯನ್ನಿದು ತೋರಿಸುತ್ತದಷ್ಟೆ. ಅರುಣ್ ಜೇಟ್ಲಿ ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದಂತೆ- ಅಪಾಯಕಾರಿ ಶಸ್ತ್ರಾಸ್ತ್ರಗಳೊಂದಿಗೆ ಹಿಂಸಾಗ್ರಸ್ತರಾಗಿರುವ, ತಮ್ಮನ್ನೊಪ್ಪದವರನ್ನು ಹೇಗೆ ಸಂಹರಿಸಬೇಕು, ಮಹಿಳೆಯರನ್ನು ಹೇಗೆ ಅತ್ಯಾಚಾರಕ್ಕೀಡುಮಾಡಬೇಕು ಎಂದೆಲ್ಲ ಕಾರ್ಯಸೂಚಿ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಐ ಎಸ್ ಐಎಸ್ ಅನ್ನು ನೀವು ಸೈದ್ಧಾಂತಿಕ ವಿರೋಧಿಗಳೊಂದಿಗೆ ತುಲನೆ ಮಾಡ್ತೀರಿ ಅಂತಾದ್ರೆ, ಅಷ್ಟರಮಟ್ಟಿಗೆ ಆ ಉಗ್ರ ಸಂಘಟನೆಯನ್ನು ಹಗುರವಾಗಿ ಕಂಡಂತೆ.

ಇಂಥ ಐ ಎಸ್ ಐ ಎಸ್ ಮೃದುಧೋರಣೆ ಮೂಲಕವೂ ಮತ ಪಡೆಯುವ ಸಾಧ್ಯತೆ ಭಾರತದಲ್ಲಿದೆ ಅಂತ ಸಾರ್ತಿದಾರಾ ಗುಲಾಂ ನಬಿ ಆಜಾದ್?

Leave a Reply