ಖಂಡನೀಯ ಹತ್ಯೆ, ಸೆರೆಯಾಗಬೇಕು ಹಂತಕರು, ಆದರೆ ದೊಂಬಿಯೆಬ್ಬಿಸಿದರೆ ಜೀವನಷ್ಟ ತುಂಬೀತೇ?

ಡಿಜಿಟಲ್ ಕನ್ನಡ ಟೀಮ್

ಎಲ್ಲ ಜೀವಕ್ಕೂ ಬೆಲೆ ಇದೆ. ಯಾರ ಜೀವ ತೆಗೆಯಲು ಯಾರಿಗೂ ಹಕ್ಕಿಲ್ಲ. ಆದರೆ ಒಂದು ಜೀವ ಹೋಯ್ತು ಅಂತ ಉಳಿದ ಜೀವಗಳಿಗೆ ಉಪಟಳ ಕೊಡೋದು ಸಮರ್ಥನೀಯ ಅಲ್ಲ.

ನಿಜ, ಮೈಸೂರಲ್ಲಿ ಸಂಘ ಪರಿವಾರದ ಕಾರ್ಯಕರ್ತ ರಾಜು ಎಂಬುವರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು. ಅವರ ವಿರುದ್ಧ ತ್ವರಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನೇ ನೆಪ ಮಾಡಿಕೊಂಡು ಇಡೀ ಮೈಸೂರಿನ ನೆಮ್ಮದಿಗೆ ಬೆಂಕಿ ಹಚ್ಚಿ, ಅದರ ಜ್ವಾಲೆಯಲ್ಲಿ ರಾಜಕೀಯ ಬೆಳೆ ತೆಗೆಯುವ ಹುನ್ನಾರ ಮಾತ್ರ ಅಕ್ಷಮ್ಯ.

ರಾಜು ಕೊಲೆ ಹಿಂದೆ ಹಲವು ಧರ್ಮಸೂಕ್ಷ್ಮ ವಿಚಾರಗಳಿವೆ. ಕೊಲೆಯಾದ ರಾಜು ಬಿಜೆಪಿ ಕಾರ್ಯಕರ್ತ. ಹಿಂದೂಪರ ಹೋರಾಟಗಾರ. ಕೊಲೆ ಆರೋಪಿಗಳು ಪಾಪೂಲರ್ ಫ್ರಂಟ್ ಆಫ್ ಇಂಡಿಯ (ಪಿಎಫ್ ಐ) ಸೇರಿದವರು ಎಂಬ ಗುಮಾನಿ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರಕರಣದ ಹಿನ್ನೆಲೆ ಧಾರ್ಮಿಕ ಕೇಂದ್ರ ಸ್ಥಾಪನೆ ಹಿಂದೆ ಗಿರಕಿ ಹೊಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ   ಬಂದ್ ಗೆ ಕರೆಕೊಟ್ಟರೆ ಕೋಮು ಭಾವನೆಗಳನ್ನು ಕೆರಳಿಸುತ್ತದೆ, ಹಿಂಸಾಚಾರಕ್ಕೆ ಆಸ್ಪದ ಆಗುತ್ತದೆ, ಮೈಸೂರು ಹೊತ್ತಿ ಉರಿಯುತ್ತದೆ, ಪರಿಸ್ಥಿತಿ ವಿಪರೀತಕ್ಕೆ ಹೋದರೆ ಗಲಭೆ ಹರಡುತ್ತದೆ ಎಂಬುದು ಎಂಥ ಪಾಮರನಿಗೂ ಅರ್ಥವಾಗುವ ವಿಚಾರ. ಅದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳಿವೆ.

ಪರಿಸ್ಥಿತಿ ಹೀಗಿರುವಾಗ, ಅದೂ ಶಾಲಾ-ಕಾಲೇಜುಗಳ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮೈಸೂರು ನಗರ ಜಿಲ್ಲಾಧ್ಯಕ್ಷ ಮಾರುತಿರಾವ್ ಪವಾರ್ ಬಂದ್ ಗೆ ಕರೆಕೊಟ್ಟದ್ದು, ಅಂಗಡಿ ಮುಂಗಟ್ಟುಗಳ ಮೇಲೆ ದಾಂಧಲೆ ನಡೆಸಿದ್ದು, ಬಲವಂತವಾಗಿ ಬಾಗಿಲು ಎಳೆಸಿದ್ದು ಬುದ್ಧಿಗೇಡಿತನದ ಪರಮಾವಧಿಯೇ ಸರಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟಿಸಲು, ಅಸಮಾಧಾನ ದಾಖಲಿಸಲು, ನ್ಯಾಯ ಕೇಳಲು ಎಲ್ಲರಿಗೂ ಹಕ್ಕು ಇದೆ. ಅದೇ ರೀತಿ ಅದಕ್ಕೆ ರೀತಿ-ನೀತಿಗಳೂ ಇವೆ. ಬಸ್ಸಿಗೆ ಕಲ್ಲು ಹೊಡೆದು, ವಾಹನಗಳಿಗೆ ಬೆಂಕಿ ಹಚ್ಚಿ, ಅಂಗಡಿ-ಮುಂಗಟ್ಟುಗಳನ್ನು ಧ್ವಂಸ ಮಾಡುವುದರಲ್ಲಿ, ಅದಕ್ಕೆ ಪ್ರೇರೇಪಿಸುವುದರಲ್ಲಿ ಈ ಹಕ್ಕಿನ ಪ್ರತಿಪಾದನೆ ಆಗುವುದಿಲ್ಲ. ನ್ಯಾಯವೂ ಸಿಗುವುದಿಲ್ಲ.

ಹಾಗೇ ನೋಡಿದರೆ ರಾಜು ಕೊಲೆಗೆ ಕಾರಣ ಉದಯಗಿರಿ ಕ್ಯಾತಮಾರನಹಳ್ಳಿ ಸಮೀಪ ಗಣೇಶ ದೇಗುಲ ನಿರ್ಮಾಣ ವಿವಾದ. ಈ ವಿವಾದಕ್ಕೆ ಇಪ್ಪತ್ತು ವರ್ಷಗಳಾಗಿವೆ. ಮಸೀದಿಗೆ ಸಮೀಪವಿರುವ ಈ ಜಾಗದಲ್ಲಿ ದೇಗುಲ ಕಟ್ಟಬಾರದು ಎಂದು ಮುಸ್ಲಿಮರು, ನಮ್ಮ ಜಾಗದಲ್ಲಿ ನಾವು ದೇಗುಲ ಕಟ್ಟಿಕೊಳ್ಳಲು ಕೇಳುವುದಕ್ಕೆ ಇವರ್ಯಾರು ಎಂದು ರಾಜು ನೇತೃತ್ವದಲ್ಲಿ ಹಿಂದುಗಳು ಜಟಾಪಟಿಗೆ ಬಿದ್ದಿದ್ದರಿಂದ ವಿವಾದ ಆಗಾಗ್ಗೆ ಕೆರಳುತ್ತಿತ್ತು. 2006 ರಲ್ಲಿ ಮಸೀದಿಗೆ ಹಂದಿ ಮಾಂಸ ಎಸೆದ ಪ್ರಕರಣದಲ್ಲಿ ಈಗ ಕೊಲೆಯಾದ ರಾಜು ಆರೋಪಿಯಾಗಿದ್ದರು. ನಂತರ ಖುಲಾಸೆಯೂ ಆಗಿದ್ದರು. ಇತ್ತೀಚೆಗೆ ರಾಜು ನೇತೃತ್ವದಲ್ಲಿ ಗಣೇಶ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜು ಕೊಲೆ ನಡೆದಿದೆ ಎಂಬ ಅನುಮಾನಗಳಿದ್ದು, ತನಿಖೆಯಿಂದ ಹೊರಬರಬೇಕಿದೆ.

Leave a Reply