ಮದುವೆಯಾಗಿದ್ದಕ್ಕೆ ದಲಿತನಿಗೆ ಹತ್ಯೆಯ ಉಡುಗೊರೆ, ಇದೆಂಥ ಕ್ರೂರ- ಸಂಕುಚಿತ ಸಮಾಜ!

ಪ್ರವೀಣ್ ಕುಮಾರ್

ಮೇಲ್ಜಾತಿ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಶಂಕರ್ (21) ಎಂಬ ದಲಿತ ಹುಡುಗನನ್ನು ಭಾನುವಾರ ಹಾಡಹಗಲೇ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ಡಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ. ಈ ದಾಳಿಯ ವೇಳೆ ಪತ್ನಿ ಕೌಸಲ್ಯ (19) ಮೇಲೂ ಹಲ್ಲೆ ಮಾಡಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸೋಮವಾರ ಹುಡುಗಿಯ ತಂದೆ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದು, ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ವೇಳೆ ಮೃತ ಹುಡುಗನ ಸಂಬಂಧಿಕರು ರಸ್ತೆ ತಡೆ ನಡೆಸಿ ₹ 10 ಲಕ್ಷ ಪರಿಹಾರ ಮತ್ತು ಕೌಸಲ್ಯಗೆ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸಿದ್ದಾರೆ.

ಸೋಮವಾರ ವರದಿಯಾದ ಭೀಕರ ಸುದ್ದಿ ಇದು. ಛೇ.. ಇದೆಂಥ ಸಂಕುಚಿತ- ಅಮಾನವೀಯ ಸಮಾಜದಲ್ಲಿ ಬದುಕುತ್ತಿದ್ದೇವೆ? ಮಗಳು ದಲಿತ ಹುಡುಗನನ್ನು ಮದುವೆಯಾಗಿಬಿಟ್ಟಳು ಎಂಬ ಸಿಟ್ಟಿಗೆ ಆತನನ್ನು ಕೊಲ್ಲಿಸಿ, ಸ್ವಂತ ಮಗಳನ್ನೂ ಪ್ರಾಣಾಪಾಯಕ್ಕೀಡು ಮಾಡಿರುವ ತಂದೆ ಸಾಧಿಸಿದ್ದಾದರೂ ಏನನ್ನು? ಜಾತಿ ಗೌರವ? ಮನುಷ್ಯನಾಗಿ ಮೊದಲು ಮಾನವೀಯತೆಗೆ ಗೌರವ ಕೊಡಲಾಗದಿದ್ದ ಮೇಲೆ ಇನ್ಯಾರಿಗೆ ಇವರು ಗೌರವ ತಂದಾರು?

ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಂಕರ್ -ಕೌಸಲ್ಯ ಪ್ರೇಮಿಸಿ ಮದುವೆಯಾದರು. ಎಂಟು ತಿಂಗಳ ಹಿಂದೆ ನಡೆದ ವಿವಾಹಕ್ಕೆ ಕೌಸಲ್ಯ ಮನೆಯವರ ಕಡೆಯಿಂದ ಸಮ್ಮತಿ ಇರಲಿಲ್ಲ. ಮದುವೆ ನಂತರವೂ ಬೆದರಿಕೆಗಳು ಬರುತ್ತಿದ್ದು, ಅದಾಗಲೇ ಮೂರು ಬಾರಿ ಶಂಕರರನ್ನು ಮುಗಿಸುವ ಯತ್ನಗಳಾಗಿದ್ದವು ಅಂತ ಅವರ ಸಹೋದರ ದೂರಿದ್ದಾರೆ.

ಮಾರುಕಟ್ಟೆಯಿಂದ ಮರಳುತ್ತಿರಬೇಕಾದರೆ ಶಂಕರ್ – ಕೌಸಲ್ಯರ ಮೇಲೆ ದಾಳಿ ನಡೆದಿದೆ. ಸಿಸಿಟಿವಿ ದೃಶ್ಯಗಳನ್ನು ನೋಡಿದರೆ ಇವರ ರಕ್ತದಾಹ ಎಷ್ಟು ಹಸಿಹಸಿ ಎಂಬುದು ಸ್ಪಷ್ಟವಾಗುತ್ತದೆ. ಕೌಸಲ್ಯಳನ್ನೂ ಸಾಯುವಂತೆಯೇ ಹೊಡೆದಿದ್ದಾರೆ.

ಈ ಕೃತ್ಯವನ್ನು ಖಂಡಿಸುವುದಕ್ಕೆ ಶಬ್ದಗಳು ಸೋಲುತ್ತಿವೆ. ಘಟನಾ ಸ್ಥಳದಿಂದ ಎಲ್ಲರೂ ನೋಡುತ್ತಿರುವಂತೆ ಬೈಕಿನಿಂದ ಪರಾರಿಯಾಗಿದ್ದ ಮುಖ್ಯ ಆರೋಪಿಗಳು ಸೆರೆಯಾಗಿದ್ದಾರೆ ಅಂತಿದ್ದಾರೆ ಸ್ಥಳೀಯ ಪೋಲೀಸರು. ಕೊನೆಪಕ್ಷ, ಈ ಪ್ರಕರಣದ ವಿಚಾರಣೆ ತ್ವರಿತವಾಗಿ ನಡೆದು, ಘಟನೆ ಎಲ್ಲರಿಗೆ ನೆನಪಿರುವಾಗಲೇ ತಪ್ಪಿತಸ್ಥರಿಗೆ ಅತಿ ಕಠಿಣ ಶಿಕ್ಷೆಯಾಗಬೇಕು.

ಸಮಾಜದ ಪ್ರತಿಷ್ಠಿತ ವಲಯಕ್ಕೆ ಸಂಬಂಧಿಸಿದ ಶೀನಾಬೋರಾ ಹತ್ಯಾ ಪ್ರಕರಣಗಳೆಲ್ಲರಾಷ್ಟ್ರೀಯ ಮಾಧ್ಯಮದಲ್ಲಿ ದಿನವಹೀ ಸುದ್ದಿಯಾಗುತ್ತವೆ. ತನಿಖೆಗೆ ಒತ್ತಡಗಳು ರೂಪುಗೊಳ್ಳುತ್ತವೆ. ಜಾತಿ ವೈಷಮ್ಯದ ಇಂಥ ಪ್ರಕರಣಗಳಲ್ಲೂ ಅದೇ ತೀವ್ರತೆಯಲ್ಲಿ ಚರ್ಚೆ- ತನಿಖೆಗಳ ದಿಕ್ಕು ತೆರೆದುಕೊಳ್ಳಬೇಕು. ಇಂಥವನ್ನೆಲ್ಲ ಮಾಡಿಯೂ ಹೇಗಾದರೂ ದಕ್ಕಿಸಿಕೊಳ್ಳಬಹುದು, ‘ಜಾತಿ ಮರ್ಯಾದೆ'(?) ಕಾಪಾಡಿದ ವೀರನಾಗಿ ಸಮಾಜದಲ್ಲಿ ಮೆರೆಯಬಹುದೆಂಬ ಗ್ರಹಿಕೆ ಮೊದಲು ಬುಡಮೇಲಾಗಬೇಕು.

‘ನ್ಯೂಸ್ ಮಿನಿಟ್’ ಪ್ರಸಾರಿಸಿರುವ ಈ ಸಿಸಿಟಿವಿ ದೃಶ್ಯಾವಳಿಗಳು ಅಮಾನವೀಯ ಪಾತಕ ಧೋರಣೆಗೆ ಹಿಡಿದ ಕನ್ನಡಿ. ಇಂಥವರಿಗೆ ಸಮಾಜದ ಆಕ್ರೋಶದ ಬಸುಗುಡುವಿಕೆ ಕೇಳದಿದ್ದರೆ ಬದಲಾವಣೆ ಆಗೋದಾದರೂ ಹೇಗೆ?

Leave a Reply