ಮಾರ್ಚ್ 24ರ ಹತ್ರ ಬ್ಯಾಂಕ್ ಕೆಲ್ಸ ಇಟ್ಕೋಬಾರ್ದು, ಅಗ್ನಿ ಪರೀಕ್ಷೆ ಸಕ್ಸಸ್… ನೀವು ತಿಳೀಬೇಕಾದ ಎಲ್ಲ ಸುದ್ದಿಗಳು

ಮಾರ್ಚ್ 24ರಿಂದ ಸತತ 4 ದಿನ ಬ್ಯಾಂಕ್ ರಜೆ

ಇದೇ ತಿಂಗಳಾಂತ್ಯದಲ್ಲಿ ಸತತ ನಾಲ್ಕು ದಿನಗಳು ಬ್ಯಾಂಕ್ ಗೆ ರಜೆ ದೊರೆಯಲಿದ್ದು, ಎಟಿಎಂಗಳಲ್ಲೂ ಹಣ ಸಿಗದಿರುವ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಾ.24 ಗುರುವಾರದಂದು ಹೋಳಿ ಹಬ್ಬ, ಮಾ.25 ಶುಕ್ರವಾರ ಗುಡ್ ಫ್ರೈಡೆ, ಮಾ.26 ತಿಂಗಳ ನಾಲ್ಕನೇ ಶನಿವಾರ ಹಾಗೂ ಮಾ.27 ಭಾನುವಾರ ಆಗಿರುವುದರಿಂದ ಸತತ ನಾಲ್ಕು ದಿನ ರಜೆ ಸಿಗಲಿದೆ. ಹಾಗಾಗಿ ಈ ದಿನಗಳಲ್ಲಿ ಎಟಿಎಂಗಳಲ್ಲೂ ಹಣ ಕೊರತೆ ಉಂಟಾಗಬಹುದು. ಹಾಗಾಗಿ ಗ್ರಾಹಕರು ಮುಂಚಿತವಾಗಿ ತಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳುವುದು ಹಾಗೂ ಮುಂಗಡವಾಗಿ ಹಣ ಡ್ರಾ ಮಾಡಿ ಇಟ್ಟುಕೊಳ್ಳುವುದು ಉತ್ತಮ.

344 ಡ್ರಗ್ಸ್ ನಿಷೇಧಿಸಿದ ಆರೋಗ್ಯ ಸಚಿವಾಲಯ

ಕೆಮ್ಮಿಗೆ ಬಳಸಾಗುವ ಸಿರಪ್ ಗಳಲ್ಲಿ ಬಳಸುವ ಡ್ರಗ್ಸ್ ಸೇರಿದಂತೆ ನಿಗದಿತ ಸಂಯೋಜನೆಯಲ್ಲಿ ಬಳಸಲಾಗುವ 344 ಡ್ರಗ್ಸ್ ಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ನಿಷೇಧಿಸಲು ನಿರ್ಧರಿಸಿದೆ. ಮಾನವನ ದೇಹದ ಮೇಲೆ ಪರಿಣಾಮ ಬೀರುವ ಈ ಡ್ರಗ್ಸ್ ಗಳಿಗೆ ಸುರಕ್ಷಿತ ಬದಲಿ ಡ್ರಗ್ಸ್ ದೊರೆತಿರುವ ಹಿನ್ನೆಲೆಯಲ್ಲಿ ಈ ಡ್ರಗ್ಸ್ ಗಳ ಮೇಲೆ ತಕ್ಷಣದಿಂದಲೇ ನಿಷೇಧ ಹೇರಲಾಗಿದೆ.

ನನ್ನ ಕುತ್ತಿಗೆಗೆ ಚಾಕು ಹಿಡಿದರೂ ಭಾರತ್ ಮಾತ ಕೀ ಜೈ ಎನ್ನಲ್ಲ: ಒವೈಸಿ

ಕೆಲ ದಿನಗಳ ಹಿಂದೆ, ಹೊಸ ತಲೆಮಾರಿನ ಯುವಕರಿಗೆ ದೇಶಭಕ್ತಿಯ ಮಂತ್ರ ಕಲಿಸಬೇಕು ಎಂಬ ಆರೆಸ್ಸೆಸ್ಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆಗೆ ಎಐಎಂಐಎಂ ನಾಯಕ ಒವೈಸಿ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮೋಹನ್ ಭಾಗವತ್ ಅವರೇ, ನಾನು ಈ ಮಂತ್ರವನ್ನು ಜಪಿಸುವುದಿಲ್ಲ. ನನಗೆ ಏನು ಮಾಡುತ್ತೀರಿ? ನನ್ನ ಕುತ್ತಿಗೆಗೆ ಚಾಕು ಹಿಡಿದರು ಭಾರತ್ ಮಾತಾ ಕೀ ಜೈ ಎನ್ನಲ್ಲ’ ಎಂದು ಮಹಾರಾಷ್ಟ್ರದ ಲಾತುರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಈ ರೀತಿಯಾದ ಮಂತ್ರಗಳನ್ನು ಹೇಳಲೇಬೇಕು ಎಂದು ಸಂವಿಧಾನದಲ್ಲಿ ತಿಳಿಸಿಲ್ಲ. ನಾನು ಇಶ್ರತ್ ಜಹಾನ್ ಕುಟುಂಬಕ್ಕೆ ಬೆಂಬಲ ಮುಂದುವರಿಸುತ್ತೇನೆ ಎಂದರು ಒವೈಸಿ.

ರಾಹುಲ್ ಗಾಂಧಿಗೆ ನೊಟೀಸ್

ಬ್ರಿಟನ್ ಪೌರತ್ವ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸಂಸತ್ತಿನ ನೀತಿ ಸಮಿತಿ ಶೋಕಾಸ್ ನೊಟೀಸ್ ನೀಡಿದೆ. ರಾಹುಲ್ ಗಾಂಧಿಯವರು ತಾನು ಬ್ರಿಟನ್ ನಾಗರೀಕ ಎಂದು ಘೋಷಿಸಿಕೊಂಡಿದ್ದಾರೆಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಆರೋಪಿಸಿದ್ದರು. ಈ ಕುರಿತು ಬಿಜೆಪಿ ಸಂಸದ ಮಹೇಶ್ ಗಿರಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರು ದಾಖಲಿಸಿದ್ದರು. ಕಳೆದ ಜನವರಿಯಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಈ ದೂರನ್ನು ನೀತಿ ಸಮಿತಿಗೆ ವರ್ಗಾವಣೆ ಮಾಡಿದ್ದರು. ಹಾಗಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ನೇತೃತ್ವದ ಈ ಸಮಿತಿಯು ರಾಹುಲ್ ಗಾಂಧಿಗೆ ನೊಟೀಸ್ ಜಾರಿ ಮಾಡಿದೆ.

ಅಗ್ನಿ-1 ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಸ್ವದೇಶಿ ನಿರ್ಮಿತ ಅಗ್ನಿ-1 ಕ್ಷಿಪ್ಪಣಿಯನ್ನು ಸೋಮವಾರ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ. 700 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಬೆಳಗ್ಗೆ 9.11ಕ್ಕೆ ಭುವನೇಶ್ವರದಿಂದ 150 ಕಿ.ಮೀ ದೂರದಲ್ಲಿರುವ ಅಬ್ದುಲ್ ಕಲಾಮ್ ಐಸ್ ಲ್ಯಾಂಡ್ ನ ಇಂಟೆಗ್ರೆಟ್ ಟೆಸ್ಟ್ ರೇಂಜ್ ನಲ್ಲಿ ಉಡಾವಣೆ ಮಾಡಲಾಯಿತು. ಇದೊಂದು ಪರಿಕ್ಷಾರ್ಥ ಉಡಾವಣೆಯಾಗಿದ್ದು, ಸ್ಟ್ರಾಟರ್ಜಿ ಫೋರ್ಸ್ ಕಮಾಂಡ್ ತರಬೇತಿಯ ಭಾಗವಾಗಿ ಉಡಾಯಿಸಲಾಯಿತು. ಇದು ಯಶಸ್ವಿಯೂ ಆಗಿದೆ ಎಂದು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಆರ್ಜನೈಸೇಷನ್ (ಡಿಆರ್ ಡಿಒ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತಕ್ಕೆ ಮರಳಬೇಕು, ಆದರೆ ಇದು ಸರಿಯಾದ ಸಮಯ ಅಲ್ಲ: ಮಲ್ಯ

‘ನಾನು ಅಂತಾರಾಷ್ಟ್ರೀಯ ಉದ್ಯಮಿ, ಪಲಾಯನಗಾರನಲ್ಲ’ ಎಂದು ಹೇಳಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಈಗ ಭಾರತಕ್ಕೆ ಮರಳಲು ಸಕಾಲವಲ್ಲ ಎಂದು ತಿಳಿಸಿದ್ದಾರೆ. ಹಲವು ಬ್ಯಾಂಕುಗಳಿಗೆ ₹9 ಸಾವಿರ ಕೋಟಿ ಸಾಲ ತೀರಿಸದೇ ಉದ್ದೇಶಿತ ಸುಸ್ಥಿದಾರನಾಗಿರುವ ಮಲ್ಯ, ‘ಭಾರತಕ್ಕೆ ಮರಳಲು ಆಸೆ ಇದೆ. ಆದರೆ, ಭಾರತಕ್ಕೆ ಹಿಂತಿರುಗಲು ಇದು ಉತ್ತಮ ಸಮಯವಲ್ಲ’ ಎಂದು ಸಂಡೆ ಗಾರ್ಡಿಯನ್ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆ ಮೂಲಕ ಸದ್ಯಕ್ಕೆ ನಾನು ಯಾರ ಕೈಗೂ ಸಿಗೋಲ್ಲ ಎಂದು ಮಲ್ಯ ಸೂಚನೆ ನೀಡಿದ್ದಾರೆ. ‘ನನ್ನನ್ನು ಖಳನಾಯಕನನ್ನಾಗಿ ಮಾಡಬೇಡಿ. ನನ್ನಲ್ಲಿ ಉತ್ತಮ ಉದ್ದೇಶವಿದೆ. ನಾನು ಮಾತನಾಡಿದರೆ ನನ್ನ ಮಾತು ತಿರುಚುವ ಸಾಧ್ಯತೆಗಳಿವೆ. ಹಾಗಾಗಿ ಮೌನಿಯಾಗಿದ್ದೇನೆ. ನನ್ನ ಜೀವನದಲ್ಲಿ ಯಾವ ಅಂಶವೂ ಮುಚ್ಚಿಡಲಾಗಿಲ್ಲ. ನಾನು ಭಾರತೀಯ, ಮತ್ತೆ ಸ್ವದೇಶಕ್ಕೆ ಮರಳುವ ಆಸೆ ಇದೆ’ ಎಂದಿದ್ದಾರೆ.

Leave a Reply