ಶುರುವಾಯ್ತು ಟಿ20 ಜ್ವರ.. ಪುರುಷರ ಕದನ ಕುತೂಹಲಕ್ಕೆ ಈ ಬಾರಿ ಮಹಿಳಾ ಆಟದ್ದೂ ಸಾಥ್

ಸೋಮಶೇಖರ ಪಿ, ಭದ್ರಾವತಿ

ಅದು 2007ನೇ ಇಸವಿ. ಕ್ರಿಕೆಟ್ ಎಂದರೇ ಬೋರು ದಿನವಿಡೀ ನೋಡುತ್ತಾ ಕಾಲಹರಣ ಎಂದು ಮೂಗುಮುರಿದವರನ್ನು ಸಹ ಕ್ರೀಡೆಯತ್ತ ಆಕರ್ಷಿಸಿದ್ದು ಟಿ20 ವಿಶ್ವಕಪ್. ಈಗ ಅದೇ ಟಿ20 ವಿಶ್ವಕಪ್ ಮೊದಲ ಬಾರಿಗೆ ಭಾರತ ನೆಲದಲ್ಲಿ ನಡೆಯುತ್ತಿದೆ.

ಈ ಬಾರಿ ಕೇವಲ ಪುರುಷರಷ್ಟೇ ಅಲ್ಲ ಮಹಿಳೆಯರ ವಿಶ್ವಕಪ್ ಸಹ ಒಟ್ಟಿಗೆ ನಡೆಯುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕ. ಅಲ್ಲದೆ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಒಂದು ಉತ್ತಮ ವೇದಿಕೆಯಾಗಿ ಬಿಂಬಿತವಾಗಿದೆ.

ಕ್ರಿಕೆಟ್ ವಿಶ್ವಕಪ್ ಎಂದರೆ ಸಾಕು ಭಾರತೀಯ ಅಭಿಮಾನಿಗಳಲ್ಲಿ ನಿರೀಕ್ಷೆ ಗಗನ ಮುಟ್ಟಿರುತ್ತದೆ.  ಈಗಾಗಲೇ ಗಲ್ಲಿ ಗಲ್ಲಿಯಲ್ಲಿ, ಆಟೋ ಸ್ಟ್ಯಾಂಡ್ ನಿಂದ ಸ್ಕೂಲು-ಕಾಲೇಜುಗಳಲ್ಲಿ, ಪಡ್ಡೆ ಹುಡುಗರ ಅಡ್ಡಾದಿಂದ ಸಾಫ್ಟ್ ವೇರ್ ಕಂಪನಿಗಳ ಕಾರಿಡಾರ್ ನಲ್ಲೂ ಪ್ರತಿ ತಂಡದ ಬಲಾಬಲದ ಬಗ್ಗೆ ಸಖತ್ ಚರ್ಚೆ ಆರಂಭವಾಗಿವೆ. ಅದರಲ್ಲೂ ಈಗ ಭಾರತ ಅತ್ಯುತ್ತಮ ಫಾರ್ಮ್ ನೊಂದಿಗೆ ತವರಿನ ಅಂಗಣದಲ್ಲಿ ಕಣಕ್ಕಿಳಿಯುತ್ತಿದ್ದು, ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದು ಪ್ರತಿಯೊಬ್ಬರೂ ತಮ್ಮದೇ ಆದ ವ್ಯಾಖ್ಯಾನ, ಸಮರ್ಥನೆ ನೀಡುತ್ತಿದ್ದಾರೆ. ಭಾರತದಲ್ಲಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಇಲ್ಲಿ ಕ್ರಿಕೆಟ್ ಪಂಡಿತನಾಗಿ ತಮ್ಮ ವಾದ ಮಂಡಿಸುವುದು ಸಾಮಾನ್ಯ.

ಗೆಲ್ಲುವವರ್ಯಾರು ಎಂಬ ಚರ್ಚೆ ಪ್ರತಿಬಾರಿ ಇದ್ದದ್ದೇ. ಆದರೆ ಈ ಬಾರಿ ಚರ್ಚೆಯಾಗಬೇಕಿಸುವ ಆಸಕ್ತಿಕರ ಸಂಗತಿಗಳೆಂದರೆ- ಭಾರತದ ಜತೆ ಇತರೆ ತಂಡಗಳ ಬಲಾಬಲವೇನು? ವಿದೇಶಿ ಆಟಗಾರರಿಗೆ ಐಪಿಎಲ್ ಅನುಭವ ಎಷ್ಟರ ಮಟ್ಟಿಗೆ ನೆರವಾಗುವುದು? 2007ರ ಧೋನಿ ಪಡೆಗೂ ಈಗಿನ ಧೋನಿ ಪಡೆಗೂ ಇರೋ ವ್ಯತ್ಯಾಸ ಏನು? ಪುರುಷರ ಜತೆಗೆ ಮಹಿಳೆಯರ ವಿಶ್ವಕಪ್ ನಡೆಯುತ್ತಿದ್ದು ಭಾರತ ತಂಡ ಪರಿಸ್ಥಿತಿ ಏನು? ಭಾರತೀಯ ಮಹಿಳಾ ತಂಡದ ಪರಿಸ್ಥಿತಿ ಈ ಟೂರ್ನಿ ಹೇಗೆ ಬದಲಿಸಬಲ್ಲದು? .. ಇವೆಲ್ಲ ಅಂಶಗಳು.

ಭಾರತ ತಂಡದ ಬಗ್ಗೆ ನಾವು ಹೇಚ್ಚೇನು ಹೇಳೊ ಅಗತ್ಯನೇ ಇಲ್ಲ. ಪ್ರಸಕ್ತ ವರ್ಷ ಆಡಿರುವ 11 ಟಿ20 ಪಂದ್ಯಗಳ ಪೈಕಿ 10 ರಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ಸರಣಿ ಹಾಗೂ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಬಾಚಿಕೊಂಡಿದೆ. ಬ್ಯಾಟಿಂಗ್ ವಿಭಾಗ ವಿಶ್ವ ಚಾಂಪಿಯನ್ ಬ್ಯಾಟ್ಸ್ ಮನ್ ಗಳ ಬೆಟಾಲಿಯನ್ ನಂತಿದೆ. ಭಾರತೀಯ ಪಿಚ್ ನಲ್ಲಿ ಬೌಲಿಂಗ್ ವಿಭಾಗದಲ್ಲಿ ವೇಗಿಗಳು ಸ್ವಲ್ಪ ತ್ರಾಸು ಪಡಬಹುದು. ಸ್ಪಿನ್ನರ್ ಗಳು ಮಾತ್ರ ಧೋನಿಯ ಪ್ರಮುಖ ಟ್ರಂಪ್ ಕಾರ್ಡ್ ಆಗುವುದರಲ್ಲಿ ಅನುಮಾನವಿಲ್ಲ.

ಭಾರತ ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಹಾಗೂ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಹಾಗಾಗಿ ಭಾರತಕ್ಕೆ ಎಲ್ಲ ಪಂದ್ಯಗಳು ಕಠಿಣ ಸವಾಲು ಎದುರಾಗಬಹುದು. ಇತರೆ ತಂಡಗಳ ಬಲಾಬಲದ ಪಕ್ಷಿನೋಟ ನೋಡೋದಾದ್ರೆ,

  • ಪಾಕಿಸ್ತಾನಕ್ಕೆ ಬ್ಯಾಟಿಂಗ್ ವಿಭಾಗ ಸಮಸ್ಯೆಯಾದರೆ, ಬೌಲಿಂಗ್ ವಿಭಾಗ ದೊಡ್ಡ ಬಲ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತಕ್ಕೆ ಕಡಿಮೆ ಗುರಿ ನೀಡಿದರೂ ಚಾಂಪಿಯನ್ನರಿಗೆ ಆರಂಭದಲ್ಲಿ ನೀಡಿದ್ದ ಸವಾಲು ಶ್ಲಾಘನೀಯವಾಗಿತ್ತು. ಹಾಗಾಗಿ ಈ ತಂಡ ಸಂಘಟಿತ ಪ್ರದರ್ಶನ ನೀಡುವುದು ಮುಖ್ಯವಾಗಿದೆ.
  • ಆಸ್ಟ್ರೇಲಿಯಾ ತಂಡ ದಾಂಡಿಗ ಬ್ಯಾಟ್ಸ್ ಮನ್ ಹಾಗೂ ಮಾರಕ ಬೌಲರ್ ಗಳನ್ನು ಹೊಂದಿದೆ. ಆದರೆ, ತವರಿನಲ್ಲಿ ಭಾರತ ವಿರುದ್ಧವೇ ವೈಟ್ ವಾಷ್ ಸರಣಿ ಸೋಲು, ಆಸ್ಟ್ರೇಲಿಯನ್ನರಲ್ಲಿ ಟೀಂ ವರ್ಕ್ ಮೇಲೆ ಪ್ರಶ್ನೆ ಮೂಡಿದೆ. ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ ಸರಣಿ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.
  • ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಪಂದ್ಯ ಭಾರತಕ್ಕೆ ಒಂದು ರೀತಿ ಮಹತ್ವ. ಕಾರಣ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಭಾರತ ಈವರೆಗೂ ಸೋತಿಲ್ಲ. ಆದರೆ, ಟಿ20 ವಿಶ್ವಕಪ್ ನಲ್ಲಿ ಭಾರತ ಕಿವೀಸ್ ವಿರುದ್ಧ ಈವರೆಗೂ ಗೆದ್ದಿಲ್ಲ. ಹಾಗಾಗಿ ಮೊದಲ ಪಂದ್ಯದಲ್ಲಿ ಈ ಇತ್ತಂಡಗಳ ಕಾದಾಟ ಯಾವ ದಾಖಲೆಗೆ ಬ್ರೇಕ್ ಹಾಕಲಿದೆ ನೋಡಬೇಕು. ಇನ್ನು ಕಿವೀಸ್ ತಂಡದಲ್ಲಿ ಬ್ರೆಂಡನ್ ಮೆಕಲಂ ಅನುಪಸ್ಥಿತಿ ಕಾಡಲಿದೆಯಾದರೂ ಈ ತಂಡ ಪಕ್ಕಾ ಟಿ20 ತಂಡ. ಎಲ್ಲಾ ವಿಭಾಗದಲ್ಲೂ ಈ ಮಾದರಿಗೆ ಹೇಳಿ ಮಾಡಿಸಿದಂತಿದೆ.
  • ಇನ್ನು ಕ್ವಾಲಿಫೈರ್ ಆಗಿ ಬಾಂಗ್ಲಾ ಬಂದಿದೆ. ಈ ತಂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಹೋರಾಟ ನೀಡುತ್ತಿದೆ. ವೇಗಿ ತಸ್ಕಿನ್ ಅಹ್ಮದ್ ಮತ್ತು ಎಡಗೈ ಸ್ಪಿನ್ನರ್ ಅರಾಫತ್ ಸನ್ನಿ ಬೌಲಿಂಗ್ ಶೈಲಿ ಮೇಲಿನ ಅನುಮಾನ ತಂಡವನ್ನು ವಿಚಲಿತಗೊಳಿಸಿದೆ. ಆದರೂ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
  • ಇನ್ನು ಮೊದಲ ಗುಂಪಿನಲ್ಲಿರುವ ತಂಡಗಳ ಪೈಕಿ ಚೋಕರ್ಸ್ ಖ್ಯಾತಿಯ ದಕ್ಷಿಣ ಆಫ್ರಿಕಾ, ಈ ಬಾರಿಯಾದರೂ ಈ ಹಣೆಪಟ್ಟಿಯಿಂದ ಮುಕ್ತವಾಗುವುದೇ ಕಾದು ನೋಡಬೇಕು. ಸ್ಫೋಟಕ ಬ್ಯಾಟ್ಸ್ ಮನ್, ಮಾರಕ ಬೌಲಿಂಗ್ ದಾಳಿ ಇದ್ದರೂ ತಂಡ ಐಸಿಸಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲದಿರುವುದು ನಿರಾಸೆ ತಂದಿದೆ.
  • ಇಂಗ್ಲೆಂಡ್ ತಂಡಕ್ಕೆ ಸ್ವಲ್ಪ ಸಮಸ್ಯೆ ಇದೆ. ತಂಡದಲ್ಲಿ ಅನುಭವಿ ಆಟಗಾರರ ಕೊರತೆ. ಇತ್ತೀಚಿನ ದಿನಗಳಲ್ಲಿ ತಂಡದ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಇತ್ತ ಹಾಲಿ ಚಾಂಪಿಯನ್ ಶ್ರೀಲಂಕಾ, ಒಂದಿಬ್ಬರು ಆಟಗಾರರನ್ನು ಬಿಟ್ಟರೆ, ಮಿಕ್ಕವರು ಹೊಸಬರು. ತಂಡದಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮನ್ ಗಳಿದ್ದರೂ ಅಗತ್ಯ ಬಿದ್ದಾಗ ಕೈಕೊಡುವುದು ಈ ತಂಡದ ದೊಡ್ಡ ಸಮಸ್ಯೆ. ಭಾರತೀಯ ಪಿಚ್ ಇವರಿಗೆ ಹೊಸದಲ್ಲ. ತಂಡ ಸಂಘಟಿತವಾಗಿ ಆಡಿದರೆ, ಯಾವ ತಂಡವಾದರೂ ತಲೆ ಬಾಗಲೇಬೇಕಾಗುತ್ತದೆ. ಇನ್ನು ಅಫ್ಘಾನಿಸ್ತಾನ ಈಗ ಅಂಬೆಗಾಲಿಡುವ ತಂಡವಾಗಿ ಉಳಿದಿಲ್ಲ. ಈ ಗುಂಪಿನಲ್ಲಿ ಯಾವುದೇ ತಂಡ ಕೊಂಚ ಯಾಮಾರಿದರೂ ಆಫ್ಘನ್ನರು ಎಡೆಮುರಿ ಕಟ್ಟುವುದರಲ್ಲಿ ಅನುಮಾನವಿಲ್ಲ.

ಐಪಿಎಲ್ ನಿಂದ ಪ್ಲಸ್ ಮತ್ತು ಮೈನಸ್ ಎರಡೂ ಉಂಟು:

ಈ ಬಾರಿಯ ವಿಶ್ವಕಪ್ ನಲ್ಲಿ ಹೆಚ್ಚು ಕೇಳಿಬರುತ್ತಿರುವ ಮತ್ತೊಂದು ಅಂಶ ಐಪಿಎಲ್ ಅನುಭವ. ಹೌದು, ಕಳೆದ ಎಂಟು ವರ್ಷಗಳಿಂದ ವಿಶ್ವದ ಇತರೆ ಆಟಗಾರರು ಐಪಿಎಲ್ ನ ಭಾಗವಾಗಿದ್ದು, ಭಾರತದ ಪಿಚ್ ಅನುಭವ ಹೊಂದಿದ್ದಾರೆ. ಅಲ್ಲದೆ, ಭಾರತೀಯ ಆಟಗಾರರೊಂದಿಗೆ ಆಡಿದ್ದು, ಅವರ ಬಲಾಬಲವನ್ನು ಅರಿತಿದ್ದಾರೆ. ಇದು ಒಂದು ರೀತಿಯ ಸಕಾರಾತ್ಮಕ ಅಂಶ. ಅದೇ ರೀತಿ ಭಾರತೀಯ ಆಟಗಾರರಿಗೂ ಈ ಆಟಗಾರರ ಬಲಾಬಲ ಚೆನ್ನಾಗಿ ಗೊತ್ತಿದೆ. ಹಾಗೇ ನೋಡೊದಾದ್ರೆ ಐಪಿಎಲ್ ನಲ್ಲಿ ಆಡದಿರುವ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಆಟಗಾರರಿಗೆ ಪಿಚ್ ವರ್ತನೆ ಸವಾಲಾಗಿ ಕಾಡಿದರೆ ಅಚ್ಚರಿ ಪಡಬೇಕಿಲ್ಲ.

2007ರಲ್ಲಿ ಭಾರತ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ್ದನ್ನು ಈಗಲೂ ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ. 2007ರ ತಂಡ ಹಾಗೂ ಈಗಿನ ತಂಡ ನೋಡಿದರೆ ಈಗಿನ ತಂಡ ಮೇಲ್ನೋಟಕ್ಕೆ ಹೆಚ್ಚು ಸಮತೋಲನದಿಂದಿದೆ. ಹೌದು.., ಆ ತಂಡ ಪ್ರಶಸ್ತಿ ಗೆದ್ದಿತ್ತಾದರೂ ಬಹುತೇಕ ಆಟಗಾರರು ಹೊಸಬರೇ ಆಗಿದ್ದರು. ಆದರೆ ಈಗಿನ ತಂಡದಲ್ಲಿ ಅನುಭವಿ ಮತ್ತು ಹೊಸ ಆಟಗಾರರ ಮಿಶ್ರಣ ತಂಡಕ್ಕೆ ಉತ್ತಮ ಫ್ಲೇವರ್ ನೀಡಿದೆ. ಜೊತೆಗೆ ಐಪಿಎಲ್ ನಲ್ಲಿ ಒತ್ತಡದ ಪರಿಸ್ಥಿತಿ ಎದುರಿಸಿರುವ ಅನುಭವ ಪ್ರಮುಖವಾಗಿ ಗಣನೆಗೆ ಬರುತ್ತದೆ.

ಅಭಿಮಾನಿಗಳ ಮನಗೆಲ್ಲಲು ಮಹಿಳೆಯರಿಗೆ ಉತ್ತಮ ವೇದಿಕೆ:

ಇವಿಷ್ಟು ಪುರುಷರ ವಿಭಾಗದ ಮಾತಾಯ್ತು. ಇನ್ನು ನಮ್ಮ ವನಿತೆಯರ ಬಗ್ಗೆ ಮಾತನಾಡಲೇ ಬೇಕು. ಕಾರಣ, ಈ ಟೂರ್ನಿ ಮಹಿಳಾ ಕ್ರಿಕೆಟ್ ಗಟ್ಟಿಗೊಳ್ಳಲು ಒಂದು ವೇದಿಕೆ ಎಂದರೆ ತಪ್ಪಿಲ್ಲ. ಹೌದು, ನಮ್ಮಲ್ಲಿ ಪುರುಷರ ಕ್ರಿಕೆಟ್ ಗೆ ಹೋಲಿಕೆ ಮಾಡಿದರೆ, ಮಹಿಳೆಯರ ಕ್ರಿಕೆಟ್ ತೀರಾ ಹಿಂದುಳಿದಿದೆ. ಅದು ಅಭಿಮಾನಿಗಳ ಬೆಂಬಲದಿಂದ ಹಿಡಿದು, ಟೂರ್ನಿಗಳು, ಜಾಹೀರಾತಿನವರೆಗೂ ಅನ್ವಯಿಸುತ್ತದೆ. ಒಂದು ಲೆಕ್ಕದಲ್ಲಿ ನೋಡಿದರೆ, ನಮ್ಮಲ್ಲಿ ಮಹಿಳಾ ಟೆನಿಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಹಾಕಿ ಕ್ರೀಡೆಗಳಿಗಿಂತ ಮಹಿಳಾ ಕ್ರಿಕೆಟ್ ಕಳೆಗುಂದಿದೆ.

ಕ್ರಿಕೆಟ್ ಗಿಂತ ಇತರೆ ಕ್ರೀಡೆಗಳಲ್ಲಿ ಭಾರತೀಯ ವನಿತೆಯರು ಹೆಚ್ಚು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ ಸಾಧನೆ ಮಾಡಿ ಜನರನ್ನು ಆಕರ್ಷಿಸಿದೆ. ಇವರಿಗೆ ಸಿಕ್ಕ ಅವಕಾಶದ ಮುಂದೆ ಮಹಿಳಾ ಕ್ರಿಕೆಟ್ ತಂಡಕ್ಕೆ ಸಿಕ್ಕಿರುವ ಅವಕಾಶ ಕೊಂಚ ಕಡಿಮೆಯೇ ಇದೆ. ಅದರಲ್ಲೂ ಟಿವಿಗಳಲ್ಲಿ ನೇರ ಪ್ರಸಾರ, ಇತರೆ ಮಾಧ್ಯಮಗಳಲ್ಲಿ ಪ್ರಚಾರದ ಕೊರತೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಈ ಎಲ್ಲ ಕಾರಣಗಳಿಂದ ಈ ಟೂರ್ನಿ ಹೆಚ್ಚು ಜನರ ಗಮನ ಸೆಳೆಯಲಿದ್ದು, ಭಾರತೀಯ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಭಾರತ ಮಹಿಳಾ ಕ್ರಿಕೆಟ್ ಗೆ ಹೊಸ ತಿರುವು ಸಿಗುವ ಅವಕಾಶವಿದೆ.

ಭಾರತ ವನಿತೆಯರ ತಂಡ ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅದರ ನೆಲದಲ್ಲೇ ಮಣಿಸಿರುವುದು ಮಿಥಾಲಿ ರಾಜ್ ಪಡೆಯ ಆತ್ಮಸ್ಥೈರ್ಯ ಹೆಚ್ಚಿಸಿದೆ. ಉಳಿದಂತೆ ಈ ವಿಭಾಗದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ದೈತ್ಯ ತಂಡಗಳಾಗಿವೆ. ಹಾಗಾಗಿ ಭಾರತ ವನಿತೆಯರ ತಂಡ ಈ ಟೂರ್ನಿಯಲ್ಲಿ ಯಾವ ಮಟ್ಟದ ಪ್ರದರ್ಶನ ನೀಡಲಿದೆ ಎಂಬುದು ಸದ್ಯದ ಕುತೂಹಲ.

Leave a Reply