ಅಮಾಯಕರ ಬುರುಡೆ ಬಿಚ್ಚಿ, ಅದರಲ್ಲಿ ಮತಗಳೆಷ್ಟಿವೆ ಎಂದು ಎಣಿಸುವವರಿಂದ ಮಾನವೀಯತೆ ಬಯಸೋದಾದರೂ ಹೇಗೆ..?

author-thyagarajಮತ್ತದೇ ಧರ್ಮಾಂಧರು ಮತ್ತು ರಾಜಕೀಯ ಬೇಸಾಯಗಾರರ ಆಟಾಟೋಪಕ್ಕೆ ಮೈಸೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಇದರಲ್ಲಿ ರಾಜ್ಯ ಸರಕಾರದ ವೈಫಲ್ಯ, ಮುಸ್ಲಿಂ ಮತ್ತು ಹಿಂದು ಮೂಲಭೂತವಾದಿಗಳ ಅಂಧಶ್ರದ್ಧೆ ವಿಜೃಂಭಿಸಿದ್ದು, ಮಾನವೀಯತೆ ಮುಖ ಮುಚ್ಚಿ ಮಲಗಿದೆ.

ಸಂಘ ಪರಿವಾರದ ಕಾರ್ಯಕರ್ತ ರಾಜು ಅವರ ಹತ್ಯೆ ಹಿನ್ನೆಲೆ ಮತ್ತು ಮುನ್ನಲೆಯಲ್ಲಿ ರಿಂಗಣಿಸುತ್ತಿರುವುದು ಅದೇ ರಾಜಕೀಯ. ಧರ್ಮಶ್ರದ್ಧೆ ವ್ಯಕ್ತಿಗತ ದ್ವೇಷ ಮತ್ತು ಪ್ರತಿಷ್ಠೆಗೆ ಪರಿವರ್ತನೆ ಆದಾಗ ರಾಕ್ಷಸೀ ಪ್ರವೃತ್ತಿ ಹೇಗೆ ಠಳಾಯಿಸುತ್ತದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ಅದೇ ಕಾಲಕ್ಕೆ ಇಂಥ ಧರ್ಮಸೂಕ್ಷ್ಮ ಸಂದರ್ಭದಲ್ಲೂ ಸರಕಾರ ಅಸಡ್ಡೆ ಮೆರೆದು ಅಡ್ಡಡ್ಡ ಮಲಗಿದ್ದು ಘೋರ ವಿಪರ್ಯಾಸ.

ಎರಡು ದಶಕದಿಂದ ನಾನಾ ಸ್ವರೂಪಗಳಲ್ಲಿ ಹೊರಳಿದ ಕ್ಯಾತಮಾರನಹಳ್ಳಿ ಗಣೇಶ ದೇಗುಲ ಮತ್ತು ಮದರಸಾ ನೆಪದಲ್ಲಿ ಮಸೀದಿ ನಿರ್ಮಾಣ ವಿವಾದ ತನ್ನೊಳಗೆ ಎಂಥ ಸೂಕ್ಷ್ಮಗಳನ್ನು ಅಡಗಿಸಿಕೊಂಡಿದೆ ಎಂಬುದು ಸರಕಾರದ ಪ್ರಜ್ಞೆಗೆ ನಿಲುಕದ ವಿಚಾರವೇನೂ ಆಗಿರಲಿಲ್ಲ. ಹತ್ತು ದಿನಗಳ ಹಿಂದೆ ಗಣೇಶ ವಿಗ್ರಹ ಪ್ರತಿಷ್ಠಾಪನೆ ಆದ ನಂತರ ಒಂದು ಕೋಮಿನಲ್ಲಿ ಮಡುಗಟ್ಟುತ್ತಿದ್ದ ದ್ವೇಷವನ್ನು ಅದು ಗ್ರಹಿಸಿ, ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಕಾನೂನು ಎಲ್ಲ ಕಡೆ ಒಂದೇ ಅದರೂ ಮುಖ್ಯಮಂತ್ರಿ ತವರು ಎಂಬ ಕಾರಣಕ್ಕಾದರೂ ಮತ್ತಷ್ಟು ಹೆಚ್ಚಿನ ನಿಗಾ ಇಡಬೇಕಿತ್ತು. ಆದ್ಯಾವುದೂ ಆಗದ ಕಾರಣ ರಾಜು ಮಣ್ಣು ಸೇರಿದ್ದಾರೆ. ಹಾಗಾದರೆ ಈ ಜೀವಹಾನಿಗೆ ಯಾರು ಹೊಣೆ? ಮುಸ್ಲಿಂ ಮತಾಂಧತೆಯೋ,  ಪೊಲೀಸ್ ವೈಫಲ್ಯವೋ ಅಥವಾ ಹಿಂದೂವಾದ ಗೀಚಿದ ರಾಜು ಹಣೆಬರಹವೋ..?

ಇನ್ನು ವೈಫಲ್ಯಗಳ ಎರಡನೇ ಹಂತ. ರಾಜು ಹತ್ಯೆ ನಂತರ ಪರಿಸ್ಥಿತಿಯ ಸದ್ಬಳಕೆ ಹಾಗೂ ದುರ್ಬಳಕೆಗೆ ನಡೆದ ಪ್ರಯತ್ನಗಳು, ಅವನ್ನು ಜಿಲ್ಲಾಡಳಿತ ನಿಭಾಯಿಸಿದ ರೀತಿ. ಹೋದ ರಾಜು ತಿರುಗಿ ಬರಲಾರ. ಆದರೆ ಆತನ ಸಾವನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದರಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತರೂಢ ಕಾಂಗ್ರೆಸ್ ನಿರತವಾದವು. ಕೋಮು ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಈ ಕೊಲೆ ಯಾವ ಸಂದರ್ಭದಲ್ಲಿ ಬೇಕಾದರೂ ವಿಕೋಪಕ್ಕೆ ಹೋಗಬಹುದು ಎನ್ನುವುದು ಗೊತ್ತಿದ್ದರೂ ಬಿಜೆಪಿ ಬಂದ್ ಗೆ ಕರೆಕೊಟ್ಟಿತು. ಬಂದ್ ಕರೆ ನಂತರ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮತೆ ಪಡೆದಿದೆ ಎಂದು ಗೊತ್ತಿದ್ದರೂ ಸರಕಾರ ಅಪೇಕ್ಷಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಕೈಕಟ್ಟಿ ಕೂತಿತು. ಗಲಭೆ, ದಾಂಧಲೆ ನಡೆಯುತ್ತದೆ ಎಂದು ಗೊತ್ತಿದ್ದರೂ. ತಪ್ಪು ಮಾಡಲು ಬಿಟ್ಟು ಅದನ್ನು ಬಿಜೆಪಿ ತಲೆಗೆ ಕಟ್ಟುವುದು ಆಡಳಿತ ಪಕ್ಷದ ತಂತ್ರ. ಈ ಸಾವನ್ನು ಸರಕಾರದ ಹೆಗಲಿಗೆ ಹೊರೆಸಿ, ತನ್ನ ಬುಟ್ಟಿಗೆ ಮತಗಳನ್ನು ಇಳಿಸಿಕೊಳ್ಳುವುದು ಬಿಜೆಪಿ ಪ್ರತಿತಂತ್ರ. ಹೀಗಾಗಿ ರಾಜು ಶವ ಇರಿಸಿದ್ದ ಆಸ್ಪತ್ರೆ ಬಳಿ ಆತನ ತಾಯಿ ತನ್ನ ಎದೆ ಬಡಿದು, ನೆತ್ತರು ಉಸುರುತ್ತಾ ಗೋಳಾಡುತ್ತಿದ್ದುದು ಅವರ್ಯಾರಿಗೂ ಮುಖ್ಯವಾಗಲೇ ಇಲ್ಲ. ‘ಅಯ್ಯೋ ಮಗನೇ.., ಎಲ್ಲಿಗೋದ್ಯೋ..? ಇನ್ಯಾರೋ ನಮಗೆ ದಿಕ್ಕು? ನೀನು ಬದುಕು ಕಾಣೋ ಮೊದ್ಲು, ನಮಗೆ ಬದುಕು ತೋರ್ಸೋ ಬದಲು, ಕಾಣದ ಲೋಕಕ್ಕೆ ಹೊಂಟೋದ್ಯಲ್ಲೋ, ಯಾಕೋ ಬೇಕಿತ್ತೂ ನಿಂಗಿದೆಲ್ಲಾ..? ಅಂತ ರೋಧಿಸುತ್ತಿದ್ದುದು ಅವರ ಮನಸ್ಸಿಗೆ ಇಳಿಯಲಿಲ್ಲ. ಏಕೆಂದರೆ ಸತ್ತಿದ್ದುದು ಅವರ ಮನೆ ಮಗನಲ್ಲವಲ್ಲ.. ಹೀಗಾಗಿ ಅವರ ಆದ್ಯತೆಗಳೇ ಬೇರೆ ಆಗಿದ್ದವು.

ಮುಖಸಿಗಿದು ಪ್ರಾಣ ಹರಣವಾದ ಮಗನ ದೇಹದ ಬಳಿ ಕರುಳು ಕಿತ್ತು ಬರುವಂತೆ ರೋಧಿಸುತ್ತಿದ್ದ ಆ ತಾಯಿ ಸಾಂತ್ವನಕ್ಕೆ ಒಂದಷ್ಟು ಕರುಳು ಬಳ್ಳಿಗಳೇ ನಿಂತಿದ್ದವು. ಮುಖಂಡರ ಭೇಟಿ ರಾಜಕೀಯ ನಮನಕ್ಕೆ ಸೀಮಿತವಾಗಿದ್ದರೆ, ರಾಜು ಸರೀಕರು ದೊಣ್ಣೆ, ರಾಡು, ಮಚ್ಚು-ಲಾಂಗು ಇಡ್ಕೊಂಡು ಅಮಾಯಕರ ಪ್ರಾಣದಲ್ಲಿ ರಾಜಕೀಯ ಭವಿಷ್ಯ ಆರಸುತ್ತಿದ್ದರು. ರಾಜು ತಾಯಿ ಪಕ್ಕದಲ್ಲಿ ನಿಂತು ಸಾಂತ್ವನ ಹೇಳೋ ಬದಲು, ಆಕೆಯ ಕಣ್ಣೀರಿಗೆ ಕರವಸ್ತ್ರ ಆಗುವ ಬದಲು, ಅವಳ ಒಡಲುರಿಗೆ ಹಿಮವರ್ಷ ಆಗೋ ಬದಲು ಕೈಗೆ ಸಿಕ್ಕ ಆಮಾಯಕರ ಬುರುಡೆ ಬಿಚ್ಚಿ ಅದರಲ್ಲೆಷ್ಟು ಮತಗಳಿವೆ ಎಂದು ಲೆಕ್ಕ ಹಾಕುತ್ತಿದ್ದರು. ನಿತ್ಯದ ಜೀವನೋಪಾಯ ನಿರತ ಆ ಅಮಾಯಕರು ಮಾಡಿದ ತಪ್ಪಾದರೂ ಏನು? ಇವರ ಲಗೋರಿ ಕಟ್ಟುವ ಆಟಕ್ಕೆ ಅವರನ್ನೇಕೆ ಗುರಿ ಮಾಡಬೇಕಿತ್ತು? ಇವರಿಗೇನಾದರೂ ಅಂತಃಕರಣ ಇದೆಯೇ? ಮಾನವೀಯತೆ ಇದೆಯೇ?, ಮಾನ ಮರ್ಯಾದೆ ಇದೆಯೇ.? ಇವರ ರಾಜಕೀಯ ಹಪಾಹಪಿಗೆ ಇನ್ನೆಷ್ಟು ಜೀವಗಳು ನರಳಬೇಕು? ಇನ್ನೆಷ್ಟು ಕುಟುಂಬಗಳು ಬೀದಿಗೆ ಬೀಳಬೇಕು?

ಇನ್ನು ಇಷ್ಟೆಲ್ಲ ದಾಂಧಲೆ ನಡೆಯುವಾಗ ಗರ ಬಡಿದಂತೆ ನಿಂತಿದ್ದ ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲಕರು. ನೀರು ಕೇಳಿಕೊಂಡು ಬೆಂಗಳೂರಿಗೆ ಬಂದ ರೈತರನ್ನು ಅಟ್ಟಾಡಿಸಿ ಬಡಿದ ಪೊಲೀಸರು ಇಲ್ಲಿ ಮಾತ್ರ ಲಾಠಿಗೆ ತಾಳ್ಮೆ ಪಾಠ ಹೇಳಿಕೊಡುತ್ತಿದ್ದರು. ಬಹುಶಃ ಆಗಲೇ ಹೇಳಿದಂತೆ, ತಪ್ಪು ಮಾಡಲು ಬಿಟ್ಟು, ನಂತರ ಅದನ್ನು ಮಾಡಿದವರ ಹಣೆಗೆ ಕಟ್ಟುವ ಮೇಲಿನವರ ಹುಕುಂ ಮೀರಲು ಅವರಿಗೆ ಸಾಧ್ಯವಾಗಿರಲಿಕ್ಕಿಲ್ಲ ಅನ್ನಿಸುತ್ತಿದೆ.

ನಿಜ, ಹೊಡೆದವರು, ಹೊಡೆಸಿಕೊಂಡವರು ಇಬ್ಬರೂ ರಾಜು ಕುಟುಂಬದ ಸದಸ್ಯರಲ್ಲ. ಹಲ್ಲೆ ಮಾಡಿದವರಿಗೆ ರಾಜು ಹತ್ಯೆ ಒಂದು ನೆಪ. ಆದರೆ ಹೊಡೆಸಿಕೊಂಡವರಿಗೆ?!

ರಾಜು ಕೊಲೆಯ ಹಿಂದೆ ಇದ್ದದ್ದೂ ರಾಜಕೀಯವೇ. ಈ ಹಗೆ ಹುಟ್ಟಿ, ಪೋಷಣೆ ಪಡೆದದ್ದೂ, ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡದ್ದೂ ರಾಜಕೀಯ ಕಾರಣದಿಂದಾಗಿಯೇ. ಅದೇ ರೀತಿ ಈ ಕೊಲೆ ಪ್ರಕರಣ ಬಳಕೆ ಆಗುತ್ತಿರುವುದೂ ಮತ್ತದೇ ರಾಜಕೀಯ ಕಾರಣಕ್ಕಾಗಿಯೇ.. ಎಂಥ ವಿಪರ್ಯಾಸ? ರಾಜು ಕೊಲೆ ವಿರುದ್ಧ ಪ್ರತಿಭಟನೆಗೆ ಇಳಿದಿರುವವರು, ಆ ಕೊಲೆಯ ಆರೋಪ ಸ್ಥಾನದಲ್ಲಿ ನಿಂತಿರುವವರು, ಅವರಿಗೆ ಆಶ್ರಯ ಕಲ್ಪಿಸಿರುವವರು, ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕಿರುವ ಆಡಳಿತ ವ್ಯವಸ್ಥೆಯ ರೂವಾರಿಗಳು – ಹೀಗೆ ಎಲ್ಲರೂ ಈ ಪ್ರಕರಣದ ಕೆಚ್ಚಲಲ್ಲಿ ರಾಜಕೀಯ ಹಾಲು ಕರೆಯಬಯಸಿರುವವರೇ.. ಕರೆಯುತ್ತಿರುವವರೇ.. ಮುಂದೆಯೂ ಕರೆಯುವವರೇ.. ಒಂದು ಸಾವಿಗೆ ಬೆಲೆ ಇಲ್ಲದಂತೆ ರಾಜಕೀಯ ಮಾಡುವುದೆಂದರೆ, ಸಾವನ್ನೇ ರಾಜಕೀಯ ಬೆಲೆಯಾಗಿ ಪರಿವರ್ತಿಸುವುದು ನಿಜಕ್ಕೂ ಅಸಹ್ಯಕರ.

ಈ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಹೇಳಿಕೆಗಳನ್ನು ನೋಡಿದರೆ ಅವರ ಗುರಿ, ಕಾಳಜಿ, ಆದ್ಯತೆಗಳೇನು ಎಂಬುದು ಗೊತ್ತಾಗುತ್ತದೆ. ‘ಬೇಕಂತಲೇ ಬಿಜೆಪಿ ಕಾರ್ಯಕರ್ತರನ್ನು ಹುಡುಕಿ ಹತ್ಯೆ ಮಾಡಲಾಗುತ್ತಿದೆ. ಮೈಸೂರಲ್ಲಿ ಇತ್ತೀಚಿಗೆ ಈ ರೀತಿ ನಾಲ್ಕು ಕೊಲೆಗಳಾಗಿವೆ. ಸರಕಾರ ಇತ್ತೀಚೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ (ಪಿಎಫ್ ಐ) ಕಾರ್ಯಕರ್ತರ ವಿರುದ್ಧ ಇದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂತೆಗೆದುಕೊಂಡಿದ್ದೇ ಇಂಥದಕ್ಕೆಲ್ಲ ಪ್ರೇರಣೆ ನೀಡುತ್ತಿದೆ. ಇದೊಂದು ಹಿಂದು ವಿರೋಧಿ ಸರಕಾರ. ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿಯವರು ಕೂಗಾಡಿದರೆ, ‘ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಭಜರಂಗದಳ, ಶ್ರೀರಾಮ ಸೇನೆ, ಹಿಂದು ಜಾಗರಣ ಸಮಿತಿ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ಕೈಬಿಡಲಿಲ್ಲವೇ? ಆಗ ಎಲ್ಲಿ ಹೋಗಿತ್ತು ಈ ಪ್ರಜ್ಞೆ? ಬಿಜೆಪಿ ರಾಜ್ಯದಲ್ಲಿ ಬೇಕಂತಲೇ ಕೋಮುಭಾವನೆಗಳನ್ನು ಕೆರಳಿಸಿ ಗಲಭೆ ಸೃಷ್ಟಿಸುತ್ತಿದೆ. ಸಮಾಜದ ನೆಮ್ಮದಿ ಕದಡಿ, ಅದರಿಂದ ರಾಜಕೀಯ ಕೊಯ್ಲು ಹುನ್ನಾರ ಅಡಗಿದೆ. ಆದರೆ ಪ್ರಜ್ಞಾವಂತ ಮತದಾರರು ಇವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ’ ಎಂಬುದು ಕಾಂಗ್ರೆಸ್  ವರಾತ. ಪ್ರಾಣ ತೆತ್ತವರು ಇವರಿಬ್ಬರ ಈ ರಾಜಕೀಯ ಆರ್ಭಟದಲ್ಲಿ ಕಳೆದು ಹೋಗಿರುತ್ತಾರೆ.

ಇನ್ನು ಸತ್ತವರ ಜಾತಿ ಇಟ್ಟುಕೊಂಡು ರಾಜಕೀಯ ಮಾಡುವುದು. ಇದಕ್ಕಿಂತ ಹೇಸಿಗೆ ಸಂಗತಿ ಮತ್ತೊಂದಿಲ್ಲ. ಸಾವಿಗೆ ಜಾತಿ ಇಲ್ಲ. ಅದು ಎಲ್ಲರಿಗೂ ಒಂದೇ. ಆದರೆ ಈ ರಾಜಕಾರಣಿಗಳಿಗೇ ಮಾತ್ರ ಮತಕುಲುಮೆ. ‘ವೀರಶೈವ ಸಮಾಜಕ್ಕೆ ಸೇರಿದ ರಾಜು ಅವರ ಅಂತ್ಯಕ್ರಿಯೆಯನ್ನು ವೀರಶೈವ ಸಂಪ್ರದಾಯದ ಪ್ರಕಾರ ಮಾಡಲಾಯಿತು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಬಿಜೆಪಿ ಮುಖಂಡರ ಮನಸ್ಥಿತಿ ಬಗ್ಗೆ ಏನೆಂದು ಹೇಳುವುದು? ರಾಜು ಹತ್ಯೆಯಾದರು ಎಂಬುದಕ್ಕಿಂತ ಅವರು ಪ್ರತಿನಿಧಿಸುವ ಜಾತಿ ಮುಂದಿಟ್ಟು, ಆ ಜಾತಿಯ ಮನಸ್ಸುಗಳನ್ನು ಕೆರಳಿಸಿ, ಹಾಗೆ ಕೆರಳಿದ ಮತಗಳನ್ನು ತನ್ನ ಪರ ಒಗ್ಗೂಡಿಸುವ ಕುತಂತ್ರ ಇಲ್ಲಿದೆ. ಇದು ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಪಕ್ಷಗಳದೂ ಇದೇ ಹಣೆಬರಹ. ಬೇರೆ, ಬೇರೆ ಪಕ್ಷಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಜಾತಿ ರಾಜಕೀಯ ಮಾಡುತ್ತವೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರ ಹತ್ಯೆಯಾದಾಗ ಕಾಂಗ್ರೆಸ್ ಬಾಯಿ ಬಾನಗಲ ಬಿರಿದಿರುತ್ತದೆ, ಇದೇ ರೀತಿ…

ನಿಜ, ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಜೆಡಿಎಸ್ ಇರಲಿ ಎಲ್ಲ ಪಕ್ಷಗಳ ಆದ್ಯತೆಗಳು ಬದಲಾಗಿ ಹೋಗಿವೆ. ಅರವತ್ತು ವರ್ಷದ ಕಾಂಗ್ರೆಸ್ ಆಳ್ವಿಕೆಯಲ್ಲಿ ಆಯಾ ಸರಕಾರದೊಳಗಿನ ನಾಯಕತ್ವ ಬದಲಾವಣೆಗೆ ಕೋಮು/ಗುಂಪು ಗಲಭೆಗಳನ್ನು ಹುಟ್ಟಿ ಹಾಕಲಾಗುತ್ತಿತ್ತು, ಇಲ್ಲವೇ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ವೀರೇಂದ್ರ ಪಾಟೀಲರಿಗೆ ಚನ್ನಪಟ್ಟಣ-ರಾಮನಗರ ಕೋಮು ಗಲಭೆ, ಬಂಗಾರಪ್ಪನವರಿಗೆ ಕಾವೇರಿ ಗಲಭೆ, ವೀರಪ್ಪ ಮೊಯ್ಲಿ ಅವರಿಗೆ ಉರ್ದು ಗಲಭೆ ಮುಳುವಾಗಿದ್ದು ಹೀಗೇಯೇ. ಕಾಲಾಂತರದಲ್ಲಿ ಕಾಂಗ್ರೆಸ್ಸೇತರ ಸರಕಾರಗಳು ಅಸ್ತಿತ್ವಕ್ಕೆ ಬಂದಾಗ ಅದು ಎರಡು ಪಕ್ಷಗಳ ನಡುವಣ ಸಂಘರ್ಷಕ್ಕೆ ಅಸ್ತ್ರವಾಯಿತು, ಎರಡು ಸರಕಾರಗಳ ನಡುವಣ ತಿಕ್ಕಾಟಕ್ಕೆ ಎಣೆಯಾಯಿತು.  ಈಗ ಇದರ ವ್ಯಾಪ್ತಿ ಎಷ್ಟಿದೆಯೆಂದರೆ, ಇಡೀ ದೇಶದ ಮನಸ್ಥಿತಿ ಕೋಮು/ಜಾತಿ ಆಧಾರದ ಮೇಲೆ ಇಬ್ಭಾಗವಾಗಿ ಹೋಗಿದೆ. ರಾಜಕೀಯ ವಿಕ್ಷಿಪ್ತತೆ, ಸಮಾಜದ ಪ್ರಕ್ಷುಬ್ಧತೆಗೂ ಕಾರಣವಾಗಿದೆ. ಇಂಥ ವರ್ಗ ಮತ್ತು ಧರ್ಮ ಸಂಘರ್ಷದಲ್ಲಿ ರಾಜು ಅಂಥವರ ಪ್ರಾಣ ತರಗೆಲೆಯಂತೆ ಹಾರಿಹೋಗುತ್ತಿರುವುದು ನಿಜಕ್ಕೂ ಮಾನವೀಯತೆ ದುರಂತ.

Leave a Reply