ಅಮೆರಿಕ ಶಿಕ್ಷಣ ವ್ಯವಸ್ಥೆಯ ಡಿಜಿಟಲ್ ಗಾಳಿ ಇಲ್ಲಿಗೂ ಬೀಸೀತೇ?

ಡಿಜಿಟಲ್ ಕನ್ನಡ ಟೀಮ್

ಇನ್ನೂ ಹಳ್ಳಿಗಳಿಗೆ ಕರೆಂಟ್ ಕೊಡುವ ಪ್ರಯಾಸದಲ್ಲಿರುವ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಅಮೆರಿಕದ ಜತೆ ಹೋಲಿಸಿಕೊಳ್ಳೋದು ಅವಸರದ ಮಾತೇ ಆಗಿರಬಹುದು. ಆದರೆ ತಂತ್ರಜ್ಞಾನ ಲಭ್ಯತೆ ಇದ್ದಿದ್ದೇ ಆದರೆ ಅದನ್ನು ಅತಿವೇಗದಲ್ಲಿ ಅಳವಡಿಸಿಕೊಳ್ಳುವ ಗುಣ ಭಾರತೀಯರಲ್ಲಿದೆ ಎಂಬುದರಲ್ಲಿ ಸಂಶಯವಿಲ್ಲ. ಎಲ್ಲರನ್ನೂ ಆಕ್ರಮಿಸುತ್ತಿರುವ ಸ್ಮಾರ್ಟ್ ಫೋನ್ ಗಳ ಉದಾಹರಣೆ ನಮ್ಮ ಮುಂದಿದೆ.

ಇಂಥ ತಂತ್ರಜ್ಞಾನದ ಆವರಿಸಿಕೊಳ್ಳುವಿಕೆ ಶಿಕ್ಷಣದಲ್ಲೂ ಆದೀತೇ? ಪಾಟಿಚೀಲಗಳು ಟ್ಯಾಬ್ಲೆಟ್ ಚೀಲಗಳಾಗುವ ದಿನ ಬರುತ್ತದೆಯೇ? ಈ ಕುರಿತ ಸೂಚನೆಗಳಿಗೆ ಅಮೆರಿಕದ ಟ್ರೆಂಡ್ ನೋಡಬಹುದಾಗಿದೆ. ಅಮೆರಿಕದಂಥ ಅಮೆರಿಕದಲ್ಲೂ ಪ್ರಾರಂಭದಲ್ಲಿ ಡಿಜಿಟಲೀಕರಣದ ಅಪ್ಪುಗೆಗೆ ಇರಿಸುಮುರಿಸು ಇದ್ದೇ ಇತ್ತು. ನಿಧಾನಕ್ಕೆ ಆ ಹಿಂಜರಿಕೆ ಕರಗುತ್ತ ಬಂದಿರುವುದು ಸಮೀಕ್ಷೆಗಳಿಂದ ತಿಳಿಯುತ್ತಿದೆ.

ಅಮೆರಿಕಾದ ಟಿಇಎಸ್ ಗ್ಲೋಬಲ್ ಡಿಜಿಟಲ್ ಶಿಕ್ಷಣ ಸಂಸ್ಥೆ  ನಡೆಸಿದ 2 ತಿಂಗಳ ಸಮೀಕ್ಷೆಯಲ್ಲಿ ಶೇಕಡಾ 80 ರಷ್ಟು ಶಿಕ್ಷಕರು ಕೆ-12 ಹಂತದ ಪಠ್ಯಕ್ರಮದ ಸಿದ್ಧತೆಗೆ ತಂತ್ರಜ್ಞಾನವನ್ನು ಬಳಸುತ್ತಿರುವುದು ಕಂಡು ಬಂದಿದೆ. ಆದರೆ ಕಳೆದ ವರ್ಷದ ಪ್ರಾರಂಭಿಕ ಸಮೀಕ್ಷೆಯಲ್ಲಿ ಶೇ.35 ರಷ್ಟು ಶಿಕ್ಷಕರು ತರಗತಿಯಲ್ಲಿ ಅಂತರ್ಜಾಲ ಬಳಸಿದರೆ ಯಶಸ್ವಿ ಉಪನ್ಯಾಸ ನೀಡಲು ತೊಡುಕುಂಟಾಗುತ್ತದೆ ಎಂದಿದ್ದರು. ಆದರೆ ಈ ವರ್ಷ ಈ ಪ್ರಮಾಣ ಶೇ.16ಕ್ಕೆ ಇಳಿದಿದೆ.

ಮತ್ತೊಂದು ಕುತೂಹಲ ಸಂಗತಿ ಎಂದರೆ ಇದೆ ಸಮಿಕ್ಷೆಯಲ್ಲಿ ಶಿಕ್ಷಕರಿಗೆ ತರಗತಿಯಲ್ಲಿ ಅಂತರ್ಜಾಲದಲ್ಲಿ ಯಾವ ಬಗೆಯ ತಂತ್ರಜ್ಞಾನವನ್ನು ಬಳಸುತ್ತೀರಾ? ಎಂಬ ಪ್ರಶ್ನೆಗೆ ಬಂದ ಉತ್ತರ ಹೀಗಿದೆ.

  • ಸಮೀಕ್ಷೆಗೆ ಒಳಪಡಿಸಿದ 1000 ಶಿಕ್ಷಕರಲ್ಲಿ ಶೇ.24.7 ರಷ್ಟು ಮಂದಿ ಕಲಿಕೆ ಸಹಕಾರಿಯಾಗುವ ಆಟಗಳನ್ನು ಅಳವಡಿಸಲು ಸಲಹೆ ನೀಡಿದ್ದಾರೆ.
  • ಶೇ.19 ಮತ್ತು 18.7 ರಷ್ಟು ಕ್ರಮವಾಗಿ ಲ್ಯಾಪ್ ಟಾಪ್ಸ್ ಮತ್ತು ಟ್ಯಾಬ್ಲೆಟ್ಸ್ ಬಳಕೆಗೆ ಒಲವು ತೋರಿದ್ದಾರೆ.
  • ಶೇ.10.7 ಮತ್ತು 10.2 ರಷ್ಟು ಕ್ರಮವಾಗಿ ತ್ರಿಡಿ ಪ್ರಿಂಟರ್ಸ್ ಮತ್ತು ವಾಸ್ತವತೆಯ ಶ್ರವ್ಯ ಸಾಧನಗಳ ಬಳಕೆ, ಶೇ.9.4 ಮತ್ತು 4.1 ರಷ್ಟು ಮೇಕರ್ಸ್ ಕಿಟ್ ಈ ಬಗ್ಗೆ ಮಾತನಾಡಿದ್ದಾರೆ. ಯುವ ಜನರ ಮೆಚ್ಚುಗೆಯಾಗಿರುವ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಪಟ್ಟ ಕಲಿಕೆಗೆ ಶೇ. 2.7 ರಷ್ಟು ಶಿಕ್ಷಕರು ಒಲವು ತೋರಿದ್ದಾರೆ.

ಇವೆಲ್ಲ ಒಂದೆಡೆಯಾದರೆ, ಕಣ್ಣೆದುರೇ ವಾಸ್ತವಾನುಭವ ಲೋಕವೊಂದನ್ನು ತೆರೆದಿಡುವ ಶ್ರವ್ಯ ಸಾಧನಗಳ (ವರ್ಚುಯಲ್ ರಿಯಾಲಿಟಿ ಹೆಡ್ ಸೆಟ್ಸ್) ತಯಾರಿಕೆಗೆ ತಂತ್ರಜ್ಞಾನ ಕಂಪನಿಗಳು ಹೆಚ್ಚು ಗಮನ ಹರಿಸುತ್ತಿವೆ. ಇವು ಶಿಕ್ಷಣದ ಭಾಗವಾದರೆ ಅರ್ಥಮಾಡಿಸುವ ಪ್ರಕ್ರಿಯೆ ಸುಲಭ ಎಂಬ ವಿಚಾರ ಇಲ್ಲಿದೆ.

ಇಷ್ಟೆಲ್ಲತಂತ್ರಜ್ಞಾನಗಳು ಮಕ್ಕಳಿಗೆ ಕಲಿಕೆ ಹಂತದಲ್ಲೇ ಸಿಕ್ಕರೆ ಅವು ಮನುಷ್ಯರನ್ನು, ಸುತ್ತಲಿನ ಪರಿಸರವನ್ನು ಮರೆತೇಬಿಟ್ಟಾರು ಎಂಬ ಆತಂಕದ ನಡುವೆಯೇ ಪಶ್ಚಿಮದ ಈ ಟ್ರೆಂಡನ್ನು ಗಮನಿಸಬೇಕಿದೆ.

Leave a Reply