ತೃಣಮೂಲದ ಬುಡಕ್ಕೆ ಬಂದಿರೋ ಕುಟುಕು ಕಾರ್ಯಾಚರಣೆಯ ಟೈಮಿಂಗ್ ಖರಾಬು, ಆದ್ರೂ ಮಮತಾ ಒದಗಿಸಲೇಬೇಕಿದೆ ಜವಾಬು

ಡಿಜಿಟಲ್ ಕನ್ನಡ ಟೀಮ್

ಶಾರದ ಚಿಟ್ ಫಂಡ್ ಹಗರಣದಿಂದ ಬೆಚ್ಚಿಬಿದ್ದಿದ್ದ ಪಶ್ಚಿಮ ಬಂಗಾಳ, ಈಗ ಮತ್ತೊಂದು ದೊಡ್ಡ ಹಗರಣಕ್ಕೆ ಸಾಕ್ಷಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಅದು ವಿಧಾನ ಸಭೆ ಚುನಾವಣೆ ಸಮೀಪದಲ್ಲಿರುವಾಗ. ಹೌದು.. ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ನಾರದಾ ನ್ಯೂಸ್ ಎಂಬ ಪೋರ್ಟಲ್ ಮಾಡಿದ ಕುಟುಕು ಕಾರ್ಯಾಚರಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರು ಡೀಲ್ ಮೇಲೆ ಡೀಲ್ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಗಳಿಗೆ ಕಾನೂನು ಬಾಹೀರವಾಗಿ ತಮ್ಮ ಅಧಿಕಾರ ಬಳಸಿ ನೆರವು ನೀಡಲು ಕಂತೆ ಕಂತೆ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಈ ನಾರದ ನ್ಯೂಸ್, 2001ರಲ್ಲಿ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರನ್ನು ತೆಹಲ್ಕಾ ಕಾರ್ಯಾಚರಣೆಗೆ ಒಳಪಡಿಸಿದ್ದ ತಂಡದ ಸದಸ್ಯರಾದ ಮ್ಯಾಥ್ಯೂ ಸ್ಯಾಮುಯೆಲ್ ನೇತೃತ್ವ ಹೊಂದಿದೆ. ನಾರದಾ ನ್ಯೂಸ್ ತಂಡ ನಕಲಿ ಕಂಪನಿಯೊಂದನ್ನು ಸೃಷ್ಟಿಸಿ ತೃಣಮೂಲ ಕಾಂಗ್ರೆಸ್ ಪ್ರಮುಖ ನಾಯಕರಿಗೆ ತಮ್ಮ ಕಂಪನಿಗೆ ನೆರವು ನೀಡುವಂತೆ ಆಫರ್ ಕಳುಹಿಸಲಾಯಿತು. ಈ ವೇಳೆ ಮಾಜಿ ರೈಲ್ವೇ ಸಚಿವ ಮುಕುಲ್ ರಾಯ್, ಪೊಲೀಸ್ ಅಧಿಕಾರಿಯ ಮೂಲಕ ಈ ಡೀಲ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಐಪಿಎಸ್ ಅಧಿಕಾರಿ ಸಯ್ಯದ್ ಮಿರ್ಜಾ, ‘ತಾನು ಮುಕುಲ್ ಅವರ ಎಲ್ಲಾ ಡೀಲ್ ಗಳನ್ನು ನೋಡಿಕೊಳ್ಳುತ್ತೇನೆ. ಅವರು ಯಾವುದೇ ಡೀಲ್ ಹಾಗೂ ಹೆಚ್ಚಿನ ಹಣವನ್ನು ಸ್ವೀಕರಿಸುವುದಿಲ್ಲ ಹಾಗಾಗಿ ನನ್ನ ಮೂಲಕವೇ ಎಲ್ಲ ನಡೆಯುತ್ತದೆ. ಎಲ್ಲ ಹಣ ನನ್ನ ಬಳಿ ಇರುತ್ತದೆ’ ಎಂದು ಬಾಯ್ಬಿಟ್ಟಿದ್ದಾರೆ. ಗೊತ್ತಿರಲಿ, ಶಾರದಾ ಚಿಟ್ ಫಂಡ್ ಹಗರಣದಲ್ಲಿಇದೇ ಮಿರ್ಜಾರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮರ್ಥಿಸಿಕೊಂಡಿದ್ದರು.

ಮುಕುಲ್ ರಾಯ್ ಸಹ ಈ ಡೀಲ್ ಅನ್ನು ಮಿರ್ಜಾ ಅವರ ಮುಖೇನ ನಡೆಸುವುದಾಗಿ ತಿಳಿಸಿರುವುದು ಈ ಕಾರ್ಯಾಚರಣೆಯಲ್ಲಿ ಕಂಡು ಬಂದಿದೆ. ಕೇವಲ ಮುಕುಲ್ ರಾಯ್ ಮಾತ್ರವಲ್ಲ ಮಾಜಿ ಕೇಂದ್ರ ಸಚಿವರುಗಳೂ ಭ್ರಷ್ಟಾಚಾರದಲ್ಲಿ ತೊಡಗಿರುವುದು ಈ ಕಾರ್ಯಾಚರಣೆಯಲ್ಲಿ ದಾಖಲಾಗಿದೆ.

ಅಲ್ಲದೇ, ಮಮತಾ ಬ್ಯಾನರ್ಜಿ ಆಪ್ತ ವಲಯದಲ್ಲಿರುವ ಸುಬ್ರತಾ ಮುಖರ್ಜಿ, ಸೊವನ್ ಚಟರ್ಜಿ, ಸುಲ್ತಾನ್ ಅಹ್ಮದ್, ಸುಭೆಂದು ಅಧಿಕಾರಿ, ಕಕೊಲಿ ಘೋಶ್, ಪ್ರಸುನ್ ಬ್ಯಾನರ್ಜಿ, ಮದನ್ ಮಿತ್ರಾ ಮತ್ತು ಸೌಗತ ರಾಯ್ ಸಹ ಭಾಗಿಯಾಗಿದ್ದಾರೆ.

ಈ ಕುಟುಕು ಕಾರ್ಯಾಚರಣೆ ಬಗ್ಗೆ ಕೆಲ ಅಪಸ್ವರಗಳೂ ಕೇಳಿಬರುತ್ತಿವೆ. ಕಾರಣ, ಈ ಚುಟುಕು ಕಾರ್ಯಾಚರಣೆಯನ್ನು 2014ರ ಲೋಕ ಸಭೆ ಚುನಾವಣೆಗೂ ಮುನ್ನವೇ ನಡೆಸಲಾಗಿತ್ತು. ಅಂದರೆ, 2 ವರ್ಷಗಳ ಹಿಂದೆ. ಆದರೆ, ಈಗ ಇದನ್ನು ಬೆಳಕಿಗೆ ತರುತ್ತಿರುವ ಉದ್ದೇಶವಾದರೂ ಏನು? ಇಷ್ಟು ದಿನ ಮೌನ ವಹಿಸಿದ್ದೇಕೆ? ವಿಧಾನ ಸಭೆ ಚುನಾವಣೆ ಸಮೀಪವಿರುವಾಗ ಕಿಚ್ಚು ಹಚ್ಚಿಸಿರುವುದೇಕೆ ಎಂಬ ಪ್ರಶ್ನೆಗಳು ಮೂಡಿವೆ.

ಈ ಕುಟುಕು ಕಾರ್ಯಾಚರಣೆಯ ವಿಡಿಯೋ ಎಷ್ಟರ ಮಟ್ಟಿಗೆ ಅಧಿಕೃತವಾಗಿದೆ ಎಂಬುದು ತೃಣಮೂಲ ಕಾಂಗ್ರೆಸ್ ನಾಯಕರ ವಾದ. ಯಾರ ವಾದ ಏನೇ ಆಗಿರಲಿ, ಈ ಹಗರಣ ಈ ಬಾರಿಯ ಚುನಾವಣೆಗೆ ಪ್ರಚಾರ ಅಸ್ತ್ರವಾಗೋದರಲ್ಲಿ ಅನುಮಾನವಿಲ್ಲ. ಅದಾಗಲೇ ಮಂಗಳವಾರದ ಸಂಸತ್ ಕಲಾಪದಲ್ಲಿ ಈ ವರದಿ ತೀವ್ರ ಗದ್ದಲ ಎಬ್ಬಿಸಿತು. ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ‘ಸಂಸತ್ ಸದಸ್ಯರು ಭಾಗಿಯಾಗಿದ್ದಾರೆಂದು ತೋರಿಸಲಾಗಿರುವ ಈ ಕಾರ್ಯಾಚರಣೆಯಿಂದ ಪಾರ್ಲಿಮೆಂಟಿನ ಘನತೆಗೆ ಪ್ರಶ್ನೆ ಎದುರಾಗಿದೆ. ಹೀಗಾಗಿ ಇದನ್ನು ರಾಜಕೀಯ ಹುನ್ನಾರ ಎಂದು ಕಡೆಗಣಿಸದೇ ತನಿಖೆ ಮಾಡಲೇಬೇಕು ಮತ್ತು ಸತ್ಯ ತಿಳಿಯಬೇಕು. ಈಗ ಕುಟುಕು ಕಾರ್ಯಾಚರಣೆಯಲ್ಲಿ ಸಿಲುಕಿರುವವರದ್ದು ತಪ್ಪಿಲ್ಲ ಎಂದಾದರೆ ಇದನ್ನು ಪ್ರಸಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಆಯ್ಕೆ ಇದ್ದೇ ಇದೆ’ ಎಂದಿದ್ದಾರೆ. ಕಾಂಗ್ರೆಸ್ ಸಂಸದರು ಸಹ ಸಂಸತ್ತಿನಲ್ಲಿ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.

ಈ ಕುಟುಕು ಕಾರ್ಯಾಚರಣೆ ರಾಜಕೀಯ ಪ್ರೇರಿತವೋ ಅಲ್ಲವೋ ಬೇರೆ ಪ್ರಶ್ನೆ. ಆದರೆ ವಿಡಿಯೋದಲ್ಲಿ ಹಣ ಸ್ವೀಕರಿಸುತ್ತಿರುವವರ ಕುರಿತು ತೃಣಮೂಲ ಕಾಂಗ್ರೆಸ್ ಉತ್ತರವನ್ನಂತೂ ಹೇಳಬೇಕಿದೆ.

ನಾರದ ನ್ಯೂಸ್ ಯೂಟ್ಯೂಬಿನಲ್ಲಿ ಬಿಟ್ಟಿರುವ ಈ ಕುಟುಕು ಕಾರ್ಯಾಚರಣೆಯ ವಿಡಿಯೊ ಇಲ್ಲಿದೆ. ಇದರ ತಥ್ಯದ ಪರೀಕ್ಷೆಗಳೇನೂ ಆಗಿಲ್ಲ ಎಂಬುದು ನೋಡುಗರ ಗಮನಕ್ಕೆ ಹಾಗೂ ವಿವೇಚನೆಗೆ…

Leave a Reply