ಸುದ್ದಿಸಂತೆ: ವಿಟಿಯು ಕುಲಪತಿ ಅಮಾನತು, ಟಿ20 ವನಿತಾ ವಿಜಯ, ಮಲ್ಯ, ಮ್ಯಾನ್ಮಾರ್… ನೀವು ತಿಳಿಬೇಕಿರೋ ಸುದ್ದಿಗಳು

ವಿಟಿಯು ಕುಲಪತಿ ಮಹೇಶಪ್ಪ ಅಮಾನತು

ರಾಜ್ಯ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಎಚ್. ಮಹೇಶಪ್ಪ ಅವರನ್ನು ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿಸೇವೆಯಿಂದ ಅಮಾನತುಗೊಳಿಸಿ ರಾಜ್ಯಪಾಲರು ವಜುಭಾಯಿ ರೂಡಭಾಯಿ ವಾಲ ಅದೇಶ ಹೊರಡಿಸಿದ್ದಾರೆ.

ವಿಟಿಯುದಲ್ಲಿ ನಡೆದಿದ್ದ ಹಲವು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ನ್ಯಾಯಮೂರ್ತಿ ಕೇಶವ ನಾರಾಯಣ ಸಮಿತಿ ಕೊಟ್ಟ ವರದಿ ಆಧರಿಸಿ ಮಹೇಶಪ್ಪ ಅವರನ್ನು ಮನೆಗೆ ಕಳುಹಿಸಲಾಗಿದೆ. ರಿಜಿಸ್ಟ್ರಾರ್ ಡಾ.ಎಚ್.ಸಿ. ಶೇಖರಪ್ಪ ಅವರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜಭವನದಿಂದ ಹೇಳಿಕೆ ಹೊರಬಿದ್ದಿದೆ.

ರಾಜ್ಯ ಹೈಕೋರ್ಟ್ ಸೋಮವಾರವಷ್ಟೇ ವಿಟಿಯು ಅಕ್ರಮಗಳ ಬಗ್ಗೆ ಕಿಡಿ ಕಾರಿದ್ದು, ಕುಲಪತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ವಿಟಿಯು ಮುಚ್ಚಿಬಿಡಿ ಎಂದು ಕಟುವಾಗಿ ಹೇಳಿತ್ತು. ಕುಲಪತಿ ನಿರ್ದೇಶನದ ಮೇರೆಗೆ ಕಾನೂನು ಮತ್ತು ನಿಯಮಬಾಹಿರ ಆದೇಶಗಳನ್ನು ಹೊರಡಿಸಲಾಗಿವೆ. ಕೋರ್ಸ್ ಅವಧಿ ಮುಗಿದ ನಂತರವೂ ದಂಡ ಕಟ್ಟಿಸಿಕೊಂಡು ಅವಧಿ ವಿಸ್ತರಿಸಲಾಗಿದೆ. ಮನಬಂದಂತೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಂಥ ನಿಯಮಬಾಹಿರ ಚಟುವಟಿಕೆಯಲ್ಲಿ ನಿರತವಾಗಿರುವ ವಿವಿಯನ್ನು ಮುಚ್ಚುವುದೇ ಲೇಸು ಎಂದು ಹೈಕೋರ್ಟ್ ಖಾರವಾಗಿ ಹೇಳಿತ್ತು.

ನಿವೃತ್ತ ನೌಕರರ ಮರುನೇಮಕ ರದ್ದು

ಇನ್ನು ಮುಂದೆ ನಿವೃತ್ತ ನೌಕರರ ಮರುನೇಮಕ ನಿರ್ಬಂಧಿಸಿ ಕರ್ನಾಟಕ ಆಡಳಿತ ಮತ್ತು ಸಿಬ್ಬಂದಿಸುಧಾರಣೆ ಇಲಾಖೆ (ಡಿಪಿಎಆರ್) ಆದೇಶ ಹೊರಡಿಸಿದೆ.ಈಗ ಪರೀಕ್ಷೆ ಸಮಯ ಆಗಿರುವುದರಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಆದರೆ ಪರೀಕ್ಷೆಗಳು ಮುಗಿದ ನಂತರ ಅಂದರೆ ಜೂನ್ ತಿಂಗಳಲ್ಲಿ ಅವರ ಸೇವಾವಧಿಯೂ ಬರ್ಖಾಸ್ತಾಗಲಿದೆ. ಹೆಚ್ಚುವರಿ ಕಾಲಿ ಹುದ್ದೆಗಳನ್ನು ತೀರಾ ಅಗತ್ಯವೆನಿಸಿದರೆ ಮಾತ್ರ ಭರ್ತಿ ಮಾಡಲು ಸೂಚಿಸಲಾಗಿದೆ.ರಾಜ್ಯದ ನಾನಾ ಇಲಾಖೆಗಳಲ್ಲಿ ಸುಮಾರು 20 ಸಾವಿರ ಮಂದಿ ನಿವೃತ್ತಿ ನಂತರ ಸೇವೆ ಸಲ್ಲಿಸುತ್ತಿದ್ದು,ಅವರೆಲ್ಲರೂ ಇದೀಗ ಮನೆಗೆ ಹೋಗುವುದು ಅನಿವಾರ್ಯವಾಗಿದೆ.

ಮಲ್ಯ ಕೆಟ್ಟಕಾಲದ ರಾಜ್ಯಭಾರ ಮುಂದುವರಿದಿದೆ…

ಕಿಂಗ್ ಆಫ್ ಗುಡ್ ಟೈಮ್ಸ್ ಖ್ಯಾತಿಯ ವಿಜಯ್ ಮಲ್ಯಗೆ ಈಗ ಬ್ಯಾಡ್ ಟೈಮ್ ಇರೋದು ಎಲ್ಲರಿಗೂ ಗೊತ್ತಿರೋದೆ. ಆದರೆ, ಈಗ ಮಲ್ಯ ಸಮಯ ಮತ್ತಷ್ಟು ಹದಗೆಟ್ಟಿದೆ. ಕಾರಣ, ಚೆಕ್ ಬೌನ್ಸ್ ಪ್ರಕರಣದಲ್ಲಿ ಮಲ್ಯ ವಿರುದ್ಧ ನ್ಯಾಯಾಲಯ 4 ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮಲ್ಯ ಜತೆಗೆ ಕಿಂಗ್ ಫಿಸರ್ ಏರ್ ಲೈನ್ಸ್ ನ ಸಿಎಫ್ಓ ಗೂ ವಾರೆಂಟ್ ಜಾರಿಗೊಳಿಸಿದ್ದು, ಮಾ.29ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಈಗಾಗಲೇ ₹50 ಲಕ್ಷ ಚೆಕ್ ಬೌನ್ಸ್ ಪ್ರಕರಣದಲ್ಲಿ ಹೈದರಾಬಾದ್ ನ್ಯಾಯಾಲಯ ಮಲ್ಯ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು. ಈ ಬೆಳವಣಿಗೆಗಳು ಸದ್ಯಕ್ಕೆ ಭಾರತಕ್ಕೆ ಮರಳಲು ಸಕಾಲವಲ್ಲ ಎಂದಿದ್ದ ಮಲ್ಯ ಬರಲೇಬೇಕಾದ ಒತ್ತಡ ಸೃಷ್ಟಿಸಿದೆ. ಇದರೊಂದಿಗೆ ಮಲ್ಯ ಕುರಿತ ಇನ್ನಷ್ಟು ಪ್ರಮುಖ ಮಾಹಿತಿಗಳು ಹೀಗಿವೆ.

– ಸಂಡೆ ಟೆಲಿಗ್ರಾಫ್ ಗೆ ನಾನು ಸಂದರ್ಶನ ನೀಡಿಯೇ ಇಲ್ಲ ಎಂದು ತಿಳಿಸಿದ್ದ ವಿಜಯ್ ಮಲ್ಯಗೆ ಆ ಪತ್ರಿಕೆ ಮಲ್ಯ ಜತೆಗಿನ ಇ ಮೇಲ್ ವಿವರಗಳನ್ನು ಬಹಿರಂಗಗೊಳಿಸಿ ಬಿಸಿ ಮುಟ್ಟಿಸಿದೆ.

– ಸರ್ಕಾರಕ್ಕೆ ಕಟ್ಟಬೇಕಿದ್ದ ₹812 ಕೋಟಿ ತೆರಿಗೆ ನೀಡದ ಹಿನ್ನೆಲೆಯಲ್ಲಿ ಮಲ್ಯ ಅವರ ಆಸ್ತಿ ಹಾಗೂ ಖಾಸಗಿ ವಿಮಾನವನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನಡೆಸಿದೆ.

-ಈ ಪಟ್ಟಿಯಲ್ಲಿ ಮಲ್ಯ ಖಾಸಗಿ ಏರ್ ಬಸ್ ಎಸಿಜೆ 319, 5 ಸಣ್ಣ ಎಟಿಆರ್ ವಿಮಾನ, ಮೂರು ಹೆಲಿಕಾಪ್ಟರ್ ಗಳು ಸೇರಿವೆ.

-ಈ ಹರಾಜು ಪ್ರಕ್ರಿಯೆಗೆ ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಅಂಡ್ ಕಸ್ಟಮ್ಸ್ (ಸಿಬಿಇಸಿ) ಸಿದ್ಧತೆ ನಡೆಸುತ್ತಿದ್ದು, ಮೇ 15-16 ರಂದು ಹರಾಜು ನಡೆಸಲಿದೆ.

ಅರ್ಧ ಶತಮಾನದ ನಂತರ ಮ್ಯಾನ್ಮಾರ್ ನಲ್ಲಿ ಪ್ರಜಾಪ್ರಭುತ್ವ

ಕಳೆದ 50 ವರ್ಷಗಳಿಂದ ಮಿಲಿಟರಿ ಆಡಳಿತದಲ್ಲಿದ್ದ ಮ್ಯಾನ್ಮಾರ್ ದೇಶಕ್ಕೆ ಈಗ ಕೊನೆಗೂ ಪ್ರಜಾಪ್ರಭುತ್ವ ಸಿಕ್ಕಿದೆ. ಮಂಗಳವಾರ ಟಿನ್ ಕ್ಯಾವ್ ರನ್ನು ದೇಶದ ಮೊದಲ ಅಧ್ಯಕ್ಷರನ್ನಾಗಿ ಅಲ್ಲಿನ ಸಂಸತ್ತಿನಲ್ಲಿ ಆಯ್ಕೆ ಮಾಡಲಾಯಿತು. ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಐತಿಹಾಸಿಕ ಜಯ ಸಾಧಿಸಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹೋರಾಟ ನಡೆಸಿದ ಔಂಗ್ ಸನ್ ಸೂ ಕೀ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡಲು ಸಂವಿಧಾನದಲ್ಲಿ ಅವಕಾಶವಿರದ ಕಾರಣ ಆಕೆಯ ಆಪ್ತ ಕ್ಯಾವ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ನನ್ನ ಜಯ ಸೂ ಕೀ ಅವರ ಜಯ ಎಂದು ಕ್ಯಾವ್ ಸಂತಸ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್: ಶುಭಾರಂಭ ಮಾಡಿದ ಮಿಥಾಲಿ ಪಡೆ

ಆಕರ್ಷಕ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ನೆರವಿನಿಂದ ಆತಿಥೇಯ ಭಾರತ ವನಿತೆಯರ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಸುಲಭ ಜಯ ಸಾಧಿಸಿತು. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 72 ರನ್ ಜಯ ತನ್ನದಾಗಿಸಿಕೊಂಡಿತು. ನಗರದ ಕೆಲವೆಡೆ ಮಳೆ ಸುರಿದರೂ ಚಿನ್ನಸ್ವಾಮಿ ಅಂಗಳದಲ್ಲಿ ಮಾತ್ರ ವರುಣ ಕೃಪೆ ತೋರಿದ ಪರಿಣಾಮ ಪಂದ್ಯಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, 20 ಓವರ್ ಗಳಲ್ಲಿ 5 ವಿಕೆಟ್ ಗೆ 163 ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ 20 ಓವರ್ ಗಳಲ್ಲಿ 5 ವಿಕೆಟ್ ಗೆ 95 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ತಂಡದ ಪರ ಮಿಥಾಲಿ ರಾಜ್ 42 (35), ವನಿತಾ 38 (24), ಹರ್ಮನ್ ಪ್ರೀತ್ 40 (29), ವೇದಾ ಅಜೇಯ 36 (24) ಉತ್ತಮ ಬ್ಯಾಟಿಂಗ್ ಮಾಡಿದರು. ಬೌಲಿಂಗ್ ನಲ್ಲಿ ಅನುಜಾ ಪಾಟೀಲ್ ಮತ್ತು ಪೂನಮ್ ಯಾದವ್ ತಲಾ 2 ವಿಕೆಟ್ ಪಡೆದರು. ಬಾಂಗ್ಲಾದೇಶದ ಪರ ನಿಗಾರ್ ಸುಲ್ತಾನ ಅಜೇಯ 27 (25), ಶರ್ಮಿನ್ ಅಕ್ತರ್ 21 (27) ರನ್ ದಾಖಲಿಸಿದ್ದು ಗರಿಷ್ಠವಾಯಿತು. ಬೌಲಿಂಗ್ ನಲ್ಲಿ ರುಮಾನಾ ಮತ್ತು ಫಾಹಿಮಾ ತಲಾ 2, ನಾಹಿದಾ ಅಕ್ತರ್ 1 ವಿಕೆಟ್ ಪಡೆದರು.

ಕೃಷಿ ಹೆಸರಲ್ಲಿ ತೆರಿಗೆ ವಂಚಿಸಿದವರಿಗೆ ಶಿಕ್ಷೆ ಖಚಿತ: ಜೇಟ್ಲಿ

ತೆರಿಗೆಗೆ ಒಳಪಡುವ ಆದಾಯವನ್ನು ಕೃಷಿ ಗಳಿಕೆ ಎಂದು ಬಚ್ಚಿಡುತ್ತಿರುವ ಪ್ರಮುಖ ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಇವರ ಹೆಸರುಗಳು ಬಹಿರಂಗಗೊಂಡಾಗ ಪ್ರತಿಪಕ್ಷದವರು ಇದೊಂದು ರಾಜಕೀಯ ಪಿತೂರಿ ಎನ್ನಬಾರದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚರಿಸಿದ್ದಾರೆ. ಸಂಸತ್ ನಲ್ಲಿ ಪ್ರತಿಪಕ್ಷಗಳಾದ ಜೆ ಡಿ ಯು, ಎಸ್ ಪಿ, ಬಿ ಎಸ್ ಪಿ ಮುಖಂಡರು- ‘ಆದಾಯ ತೆರಿಗೆ ತಪ್ಪಿಸಲು ಕೃಷಿ ಆದಾಯದ ಹೆಸರಿನಲ್ಲಿ ಕಪ್ಪು ಹಣ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಕ್ರಮವೇನು?’ ಎಂದು ಪ್ರಶ್ನಿಸಿದಾಗ ಜೇಟ್ಲಿಯವರಿಂದ ಬಂದ ಉತ್ತರ ಇದಾಗಿತ್ತು.

ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿ ‘ತೆರಿಗೆ ವಂಚಿಸಿದವರ ಹೆಸರುಗಳನ್ನು ಬಹಿರಂಗ ಪಡಿಸಿ ಅದು ಬಿಟ್ಟು ಬೆದರಿಕೆ ಹಾಕಬೇಡಿ ಮತ್ತು ಸಂಸತ್ ನ ದಾರಿ ತಪ್ಪಿಸಬೇಡಿ’ ಎಂದು ತಿರುಗೇಟು ನೀಡಿದರು. ಇದಕ್ಕೂ ಮೊದಲು ವಿಷಯ ಪ್ರಸಾಪಿಸಿದ ಜೆ ಡಿ ಯುನ ಶರದ್ ಯಾದವ್, ಕೃಷಿ ಆದಾಯದ ಹೆಸರಿನಲ್ಲಿ ಸರ್ಕಾರಕ್ಕೆ ವಂಚಿಸಿರುವ 2 ಸಾವಿರ ಲಕ್ಷ ಕೋಟಿ ಬಗ್ಗೆ ವಿವರಿಸುವಂತೆ ಕೇಳಿದರು.

ವಿಧಾನಸೌಧದ ಬಳಿ ಮೆಟ್ರೋ ಕಾಮಗಾರಿ ಇಷ್ಟರಮಟ್ಟಿಗೆ ಆಗಿದೆ ನೋಡಿ. ಮಂಗಳವಾರ ಸಚಿವ ಕೆ ಜೆ ಎಸ್ ಜಾರ್ಜ್ ನೆಲದಡಿ ನಿಲ್ದಾಣವನ್ನು ವೀಕ್ಷಿಸಿದರು.
ವಿಧಾನಸೌಧದ ಬಳಿ ಮೆಟ್ರೋ ಕಾಮಗಾರಿ ಇಷ್ಟರಮಟ್ಟಿಗೆ ಆಗಿದೆ ನೋಡಿ. ಮಂಗಳವಾರ ಸಚಿವ ಕೆ ಜೆ ಎಸ್ ಜಾರ್ಜ್ ನೆಲದಡಿ ನಿಲ್ದಾಣವನ್ನು ವೀಕ್ಷಿಸಿದರು.
ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಿಜೆಪಿಗರು ಪ್ರತಿಬಠಿಸುತ್ತಿದ್ದ ವೇಳೆ, ಸಹಜವಾಗಿಯೇ ಪೋಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರು. ಬಿಜೆಪಿ ಶಾಸಕ ಗಣೇಶ್ ಜೋಶಿ, ಕುದುರೆ ಏರಿ ಬಂದಿದ್ದ ಪೋಲೀಸರ ಮೇಲಿನ ಆಕ್ರೋಶವನ್ನು ಕುದುರೆಗೇ ತೋರಿಸಿದ ಪರಿಣಾಮ ಅದರ ಕಾಲು ಮುರಿಯಿತು. ಸೋಮವಾರದ ಈ ಘಟನೆಗೆ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿ, ಕುದುರೆ ರಾಷ್ಟ್ರ ವಿರೋಧಿಯೇ ಅಂತ ಟ್ವಿಟರ್ ಟ್ರೆಂಡ್ ಸೃಷ್ಟಿಸಿ ತರಾಟೆಗೆ ತೆಗೆದುಕೊಂಡ್ರು.
ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಿಜೆಪಿಗರು ಪ್ರತಿಭಟಿಸುತ್ತಿದ್ದ ವೇಳೆ, ಸಹಜವಾಗಿಯೇ ಪೋಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರು. ಬಿಜೆಪಿ ಶಾಸಕ ಗಣೇಶ್ ಜೋಶಿ, ಕುದುರೆ ಏರಿ ಬಂದಿದ್ದ ಪೋಲೀಸರ ಮೇಲಿನ ಆಕ್ರೋಶವನ್ನು ಕುದುರೆಗೇ ತೋರಿಸಿದ ಪರಿಣಾಮ ಅದರ ಕಾಲು ಮುರಿಯಿತು. ಸೋಮವಾರದ ಈ ಘಟನೆಗೆ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿ, ಕುದುರೆ ರಾಷ್ಟ್ರ ವಿರೋಧಿಯೇ ಅಂತ ಟ್ವಿಟರ್ ಟ್ರೆಂಡ್ ಸೃಷ್ಟಿಸಿ ತರಾಟೆಗೆ ತೆಗೆದುಕೊಂಡ್ರು.

Leave a Reply