ಚೀನಾ ಸಹಕಾರದಲ್ಲಿ ತಲೆ ಎತ್ತಲಿರುವ ಕೊಲಂಬೊ ಬಂದರು ನಗರಿ, ಸಡಿಲವಾಯ್ತೇ ಭಾರತದೊಂದಿಗಿನ ಲಂಕಾ ಮೈತ್ರಿ?

ಡಿಜಿಟಲ್ ಕನ್ನಡ ಟೀಮ್

ಕಳೆದ ವರ್ಷ ಚೀನಾ ಸಹಕಾರದೊಂದಿಗೆ ಕೊಲಂಬೊದಲ್ಲಿ ಬಂದರು ನಗರಿ ನಿರ್ಮಾಣದ ಯೋಜನೆಯನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಕೈಬಿಟ್ಟಿದ್ದರು. ಆ ಮೂಲಕ ಶ್ರೀಲಂಕಾ, ಭಾರತದತ್ತ ವಾಲುತ್ತಾ ಸ್ನೇಹವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿರೀಕ್ಷೆಗಳು ಮೂಡಿತ್ತು. ಈಗ ಒಂದು ವರ್ಷದ ನಂತರ ಕಾಲ ಬದಲಾದಂತೆ ಶ್ರೀಲಂಕಾದ ನಿರ್ಧಾರವೂ ಬದಲಾಗಿದ್ದು, ಮತ್ತೆ ಈ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ.

2014ರ ಸೆಪ್ಟೆಂಬರ್ ನಲ್ಲಿ ಕೋಲಂಬೊ ಪೊರ್ಟ್ ಸಿಟಿ (ಬಂದರು ನಗರ) ನಿರ್ಮಾಣ ಯೋಜನೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಉದ್ಘಾಟನೆ ಮಾಡಿದ್ದರು. ಆದರೆ, ಶ್ರೀಲಂಕಾದಲ್ಲಿ ಚೀನಾ ಪ್ರಭಾವದ ಬಗ್ಗೆ ಪ್ರಶ್ನೆ ಮೂಡಿ ಕೆಲವು ಅಭಿಯಾನಗಳು ನಡೆದ ಹಿನ್ನೆಲೆಯಲ್ಲಿ 2015ರಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೈತ್ರಿಪಾಲ ಈ ಯೋಜನೆ ಕೈಬಿಟ್ಟಿದ್ದರು.

ಈ ಯೋಜನೆಯಲ್ಲಿ 233 ಹೆಕ್ಟೇರ್ (576 ಎಕರೆ) ಪ್ರದೇಶದಲ್ಲಿ ಬಂದರಿನ ಜತೆಗೆ ಆಡಳಿತ ಕಚೇರಿ, ಹೊಟೇಲ್, ಶಾಪಿಂಗ್ ಕೇಂದ್ರಗಳು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಹೊಂದಿದೆ. ಇಲ್ಲಿ ಶ್ರೀಲಂಕಾ 125 ಹೆಕ್ಟೇರ್ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಿದರೆ, 20 ಹೆಕ್ಟೇರ್ ಪ್ರದೇಶ ಚೀನಾ ಕಮ್ಯುನಿಕೇಷನ್ಸ್ ಹಕ್ಕುದಾರಿಕೆಗೆ ಒಳಪಡುತ್ತದೆ. ಉಳಿದ ಪ್ರದೇಶವನ್ನು ಸಿಎಚ್ಇಸಿ ಕೊಲಂಬೊ ಪೋರ್ಟ್ ಸಿಟಿ ಲಿ. ಗೆ 99 ವರ್ಷಗಳ ಕಾಲಾವಧಿಗೆ ಭೋಗ್ಯಕ್ಕೆ ನೀಡಲಾಗಿರುತ್ತದೆ.

ಈಗ ಸಿಎಚ್ಇಸಿ ಪೋರ್ಟ್ ಸಿಟಿ ಕೊಲಂಬೊ ಪ್ರೈ.ಲಿ. ಮಂಗಳವಾರ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಪರಸ್ಪರ ಲಾಭದಾಯಕ ಸೂತ್ರದ ಆಧಾರದ ಮೇಲೆ ಮತ್ತೆ ಯೋಜನೆ ಜಾರಿಗೆ ಮುಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 1.4 ಬಿಲಿಯನ್ ಅಮೆರಿಕನ್ ಡಾಲರ್ (₹9.4 ಸಾವಿರ ಕೋಟಿ) ಮೊತ್ತವಾಗಿದೆ. ‘ಈ ಮಹತ್ವಪೂರ್ಣ ಯೋಜನೆಯನ್ನು ತಡೆ ಹಿಡಿದಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತೇವೆ. ಮತ್ತೆ ಈ ಕಾಮಗಾರಿಗೆ ಜೀವ ತುಂಬಲು ಸುದೀರ್ಘ ಪ್ರಕ್ರಿಯೆ ನಡೆಸಬೇಕಾಯ್ತು. ಆದಷ್ಟು ಬೇಗ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ’ ಎಂದು ಸ್ವತಃ ಸಿಎಚ್ಇಸಿ ಪೋರ್ಟ್ ಸಿಟಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಲಂಕಾ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ ಏಪ್ರಿಲ್ ನಲ್ಲಿ ಬೀಜಿಂಗ್ ಪ್ರವಾಸ ಕೈಗೊಳ್ಳಲಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗುವುದು. ಆರಂಭದಲ್ಲಿ ಭಾರತದೊಂದಿಗಿನ ಸ್ನೇಹಕ್ಕೆ ಹೆಚ್ಚು ಮಹತ್ವ ನೀಡಿದ್ದ ಲಂಕಾ ಅಧ್ಯಕ್ಷ ಸಿರಿಸೇನಾ ಈಗ ಚೀನಾ ಜತೆಗಿನ ಸಂಬಂಧವನ್ನು ಪುನರ್ ಸ್ಥಾಪಿಸಲು ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ.

Leave a Reply