ಮಹಾ ಅತಿರೇಕಿ ಅಂತ ಹಂಗಿಸಿಕೊಂಡ ಡೋನಾಲ್ಡ್ ಟ್ರಂಪ್ ಅಮೆರಿಕನ್ನಿರಿಗೇಕೆ ಆಪ್ತನಾಗಿದ್ದಾನೆ ಗೊತ್ತೇ?

ಪ್ರವೀಣ್ ಕುಮಾರ್

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತಂದ್ರೆ ಅದು ವರ್ಷಗಟ್ಟಲೆ ತೆಗೆದುಕೊಳ್ಳುವ ಪ್ರಕ್ರಿಯೆ. ಏಕೆಂದರೆ ಪ್ರಮುಖ ಪಕ್ಷಗಳಾದ ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷದ ಅಂತಿಮ ಉಮೇದುವಾರರು ಯಾರು ಎಂಬ ಬಗ್ಗೆ ಆಂತರಿಕ ಹಣಾಹಣಿ ನಡೆದು ಇಬ್ಬರೇ ಕಣದಲ್ಲುಳಿಯಬೇಕು. ಆವರೆಗೆ ಉಭಯ ಬಣಗಳಿಂದ ಹಲವರು ಅಧ್ಯಕ್ಷ ಪದಕ್ಕೆ ಉಮೇದುವಾರರಾಗಿರುತ್ತಾರೆ.

ಸದ್ಯದ ಪ್ರಕ್ರಿಯೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಡೋನಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದಿಂದ ಹಿಲರಿ ಕ್ಲಿಂಟನ್ ಅಂತಿಮ ಸ್ಪರ್ಧಿಗಳಾಗಿ ಹೊರಹೊಮ್ಮುವುದು ಹೆಚ್ಚು- ಕಡಿಮೆ ನಿಶ್ಚಯವಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಎಲ್ಲ ಪ್ರಕ್ರಿಯೆಗಳು ಪ್ರಾರಂಭವಾದಾಗ ರಿಪಬ್ಲಿಕನ್ ಉಮೇದುವಾರ ಡೋನಲ್ಡ್ ಟ್ರಂಪ್ ಅವರನ್ನು ಎಲ್ಲರೂ ಗೇಲಿ ಮಾಡಿದವರೇ. ಅವರೊಬ್ಬ ಪುಂಡ ಎಂಬಂತೆಯೇ ಮಾಧ್ಯಮಗಳಲ್ಲಿ ಬಿಂಬಿತವಾಯಿತು. ಇಂಥ ಅತಿರೇಕಿಗಳನ್ನೆಲ್ಲ ಅಮೆರಿಕದ ಪ್ರಜಾಪ್ರಭುತ್ವ ಒಪ್ಪಿಕೊಳ್ಳೋದೇ ಇಲ್ಲ ಅಂತಲೂ ಷರಾ ಬರೆದುಬಿಟ್ಟಿದ್ದವು ಅವೆಷ್ಟೋ ಪತ್ರಿಕೆಗಳು.

ಆದರೆ ಅವೆಲ್ಲ ಟೀಕೆಗಳನ್ನು ಮೂಲೆಗೊತ್ತಿ ಟ್ರಂಪ್ ಉಮೇದುವಾರಿಕೆಯ ಗೆಲುವನ್ನು ಪಡೆಯುವುದರತ್ತ ದಾಪುಗಾಲಿಕ್ಕಿದ್ದಾರೆ. ನಾಳೆ ಹಿಲರಿ ಕ್ಲಿಂಟನ್ ರನ್ನು ಸೋಲಿಸಿ ಅಮೆರಿಕ ಅಧ್ಯಕ್ಷರೂ ಆಗಿಬಿಡಬಹುದು ಅಂತ ಹಿಂದೊಮ್ಮೆ ಟೀಕಿಸಿದವರೇ ಈಗ ಗಂಭೀರ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ.

ಹಾಗಂತ ಮಾಧ್ಯಮಗಳು ವ್ಯಾಖ್ಯಾನಿಸಿದಂತೆ ಡೋನಾಲ್ಡ್ ಟ್ರಂಪ್ ಅತಿರೇಕಿಯೇ. ಏಕೆಂದರೆ ಟ್ರಂಪ್ ಮಾತಿನಲ್ಲೆಲ್ಲ ವಲಸಿಗರ ಮೇಲಿನ ಆಕ್ರೋಶ, ಯಾರನ್ನೋ ಮಟ್ಟಹಾಕುತ್ತೇನೆಂಬ ಧಾವಂತ ಇವೇ ಅನುರಣಿಸಿವೆ. ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಚಿಕ್ಕ ಅವಲೋಕನ ಮಾಡಿದರೆ ಇದು ಸ್ಪಷ್ಟವಾಗುತ್ತದೆ. – ಅಮೆರಿಕಕ್ಕೆ ವಲಸೆ ಬರುವ ಮುಸ್ಲಿಮರನ್ನು ನಿಷೇಧಿಸಿದರೆ ಭಯೋತ್ಪಾದನೆ ನಿಯಂತ್ರಣಗೊಳ್ಳುತ್ತದೆ.

-ಭಾರತೀಯರು ಕಿತ್ತುಕೊಂಡಿರುವ ಉದ್ಯೋಗಗಳನ್ನು ಮರಳಿ ಅಮೆರಿಕಕ್ಕೆ ತರುತ್ತೇನೆ.

– ಈ ಮೆಕ್ಸಿಕನ್ನರಿದ್ದಾರಲ್ಲಾ, ಅವರು ಅಮೆರಿಕಕ್ಕೆ ವಲಸೆ ಬರುವಾಗ ಒಳ್ಳೆಯದನ್ನು ತರೋದಿಲ್ಲ. ಅನುಪಯುಕ್ತರೇ ಇಲ್ಲಿಗೆ ಬರೋದು. ಅವರನ್ನೆಲ್ಲ ಮರಳಿ ಕಳುಹಿಸಬೇಕಿದೆ.

– ಭಾರತೀಯ ವಿದ್ಯಾರ್ಥಿಗಳು ಅಮೆರಿಕಕ್ಕೆ ಬರಬಾರದು. ಅವರು ಬಂದರೆ ನೇರವಾಗಿ ಹಾರ್ವಡ್ ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ. ನಂತರ ಇಲ್ಲಿ ಕಲಿತು ತಮ್ಮ ದೇಶದಲ್ಲಿ ಕಂಪನಿ ಪ್ರಾರಂಭಿಸಿ ಹೆಚ್ಚು ಹಣ ಗಳಿಸುತ್ತಾರೆ. ಹೆಚ್ಚು ಉದ್ಯೋಗ ಬಾಚಿಕೊಳ್ಳುತ್ತಾರೆ.

ಆದರೂ ಅಮೆರಿಕ ಜನರೇಕೆ ಟ್ರಂಪ್ ಬಗ್ಗೆ ಒಲವು ತೋರಿಸುತ್ತಿದ್ದಾರೆ ಎಂಬ ಪ್ರಶ್ನೆ ಕೌತುಕದ್ದು. ಏಕೆಂದರೆ ನಾವು ಹೊರಗೆ ನಿಂತು ಟ್ರಂಪ್ ಮಾತುಗಳೆಲ್ಲ ಮೂಲಭೂತವಾದ ಹರಡ್ತಿವೆ, ಅತಿರೇಕಿ, ಪ್ರಬುದ್ಧತೆ ಇಲ್ಲ ಅಂತೆಲ್ಲ ತೀರ್ಪು ಕೊಡಬಹುದು. ಆದರೆ ಅಮೆರಿಕದ ದೊಡ್ಡ ಜನವರ್ಗಕ್ಕೆ, ಅದರಲ್ಲೂ ಮಧ್ಯಮ ವರ್ಗಕ್ಕೆ ಟ್ರಂಪ್ ಮಾತು ಉಗ್ರವೇ ಆದರೂ ಹೇಳಿರೋದ್ರಲ್ಲಿ ತಪ್ಪೇನಿದೆ ಎನಿಸಿಬಿಟ್ಟಿದೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಅಲ್ಲಿನ ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂಥ ಅಸುರಕ್ಷಿತ ವಾತಾವರಣದಲ್ಲಿ, ‘ನಿಮ್ಮ ಉದ್ಯೋಗ ಯಾರೋ ಕಸೀತಿದಾರೆ, ವಲಸಿಗರನ್ನು ಹೊರಗೋಡಿಸೋಣ’ ಎಂಬ ಮಾತುಗಳು ಆಪ್ತವಾಗಿಯೇ ಕೇಳುತ್ತವೆ.

ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಸೆಂಟ್ ಲೂಯಿಸ್ ಪ್ರಕಟಿಸಿದ ಆಸಕ್ತಿಕರ ಸಮೀಕ್ಷೆಯ ಪ್ರಕಾರ, ಈ ಮಧ್ಯಮ ವರ್ಗದ ಆದಾಯ 1989 ರಲ್ಲಿ 54000 ಡಾಲರ್ಸ್ ಇದ್ದರೆ 2013 ರಲ್ಲಿ 45248 ಡಾಲರ್ಸ್ ಗೆ ಇಳಿದಿದೆ. ಹಣದುಬ್ಬರ ಪ್ರಮಾಣವನ್ನೂ ಗಣನೆಗೆ ತೆಗೆದುಕೊಂಡರೆ ಇದು ಬಾರೀ ಕುಸಿತವೇ ಸರಿ.

ಈ ಆದಾಯ ಕುಸಿತಕ್ಕೂ ಕಾರಣವಿದೆ. ಇವರ ಸಂಪಾದನೆ ಅಮೆರಿಕದ ಹೈಸ್ಕೂಲ್ ಡಿಪ್ಲೋಮಾ ಶಿಕ್ಷಣದ ಮೇಲೆ ನಿಂತಿರುವುದು. ಅರ್ಥಾತ್ ಇವರ್ಯಾರು ಕಾಲೇಜು ಪದವಿ ಪಡೆಯುವಲ್ಲಿಆಸಕ್ತರಲ್ಲ. 1990 ಮತ್ತು 2013 ರ ನಡುವೆ ಪದವಿ ಗಳಿಕೆ ಪ್ರಮಾಣ ಶೇಕಡಾ 13 ರಷ್ಟು ಕುಸಿದಿದೆ. ಉನ್ನತ ಶಿಕ್ಷಣ ಇಲ್ಲದಿರುವಾಗ ಉದ್ಯೋಗಗಳೆಲ್ಲ ಭಾರತೀಯರಿಗೋ ಅಥವಾ ಇನ್ಯಾವುದೋ ರಾಷ್ಟ್ರದ ಪ್ರತಿಭಾವಂತರಿಗೋ ದಕ್ಕುವುದು ಸಹಜವೇ. ಆದರೆ, ಆರ್ಥಿಕ ಅಸರುಕ್ಷತೆಯಿಂದ ಕಂಗೆಟ್ಟವರಿಗೆ ತರ್ಕಗಳೆಲ್ಲ ಮನಸಿಗೆ ಬರುವುದಿಲ್ಲ. ಇನ್ಯಾರೋ ತಮ್ಮನ್ನು ಆಕ್ರಮಿಸಿರುವುದರಿಂದ ಈ ಸ್ಥಿತಿ ಅಂತಲೇ ಅಂದುಕೊಳ್ಳುತ್ತಾರೆ.

ಹಾಗೆಂದೇ ಡೋನಾಲ್ಡ್ ಟ್ರಂಪ್ ‘ನಮ್ಮ ಉದ್ಯೋಗವನ್ನು ಚೀನಿಯರು, ಜಪಾನಿಯರು, ಭಾರತೀಯರು ಕಸೀತಿದಾರೆ’ ಅಂತ ಡೈಲಾಗು ಹೊಡೆದಾಗ ಆತನನ್ನು ಹೀರೋವಿನಂತೆ ಕಾಣುತ್ತಿದ್ದಾರೆ; ಚಪ್ಪಾಳೆ ಹೊಡೀತಿದಾರೆ.

ನಮ್ಮಲ್ಲಿ ಆಂತರಿಕ ಮತಬ್ಯಾಂಕ್ ಗಾಗಿ ಮುಸ್ಲಿಂ ತುಷ್ಟೀಕರಣ ಹೇಗಿದೆಯೋ ಅಮೆರಿಕದಲ್ಲಿ ಆಂತರಿಕ ಮಟ್ಟದಲ್ಲಲ್ಲದಿದ್ದರೂ ಜಾಗತಿಕ ರಾಜಕೀಯಕ್ಕಾಗಿ ತುಷ್ಟೀಕರಣಗಳಿವೆ. ಅಲ್ಲಿನ ಜನಕ್ಕೆ ಈ ಬಗ್ಗೆಯೂ ಬೇಸರವಿದೆ. ಉಗ್ರವಾದಿಗಳೆಲ್ಲ ಅಮೆರಿಕವನ್ನೇ ಗುರಿಯಾಗಿಸಿ ಭೀಕರ ಹೇಳಿಕೆಗಳನ್ನು ಹೊರಡಿಸುತ್ತಿರುವಾಗ ಸೆಕ್ಯುಲರ್ ಸೋಗಿನ ಶಾಂತಿಮಾತುಗಳು ಅಮೆರಿಕ ಮಧ್ಯಮವರ್ಗಕ್ಕೂ ರುಚಿಸುತ್ತಿಲ್ಲ. ಹಾಗಾಗಿಯೇ ಪರೋಕ್ಷವಾಗಿ ಇಸ್ಲಾಂ ಮತಸ್ಥರನ್ನು ಕೆಣಕುವ ಟ್ರಂಪ್ ಮಾತುಗಳೆಲ್ಲವೂ ಮಾಧ್ಯಮದಲ್ಲಿ ಟೀಕೆಗೊಳಗಾದರೂ ಅಮೆರಿಕದ ದೊಡ್ಡ ಜನವರ್ಗಕ್ಕೆ ಹೌದೆನಿಸುತ್ತಿದೆ.

ಹಾಗಾದರೆ, ನಾಳೆ ಡೋನಾಲ್ಡ್ ಟ್ರಂಪ್ ಅವರೇ ಅಮೆರಿಕ ಅಧ್ಯಕ್ಷರಾಗಿಬಿಟ್ಟರೆ ತಮ್ಮ ಉಗ್ರಮಾತುಗಳನ್ನೆಲ್ಲ ಅನುಷ್ಠಾನಕ್ಕೆ ತಂದುಬಿಡ್ತಾರಾ?

ರಿಲ್ಯಾಕ್ಸ್…..

ಚುನಾವಣೆ ಸಂದರ್ಭದ ಬಿಸಿಮಾತುಗಳೇ ಬೇರೆ, ಆಡಳಿತ ನಡೆಸುವಾಗಿನ ಒತ್ತಡಗಳೇ ಬೇರೆ. ಅತಿರೇಕಿಯಂತೆ ತೋರುತ್ತಿರುವ ಡೋನಾಲ್ಡ್ ಟ್ರಂಪ್ ಗೂ ಇದು ಗೊತ್ತು. ಹಾಗೆಂದೇ ಬರಬರುತ್ತ ಅವರ ಮಾತುಗಳು ಸೌಮ್ಯವಾಗುತ್ತಿವೆ. ಅಮೆರಿಕನ್ನರ ಅಸರುಕ್ಷಿತ ಭಾವದ ಬೆಳೆ ತೆಗೆಯುತ್ತಲೇ ಅವರು ವಾಸ್ತವಕ್ಕೂ ಮರಳುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಅಂತಂದ್ರೆ ಭಾರತೀಯರ ವಿರುದ್ಧ ಮೊದಲೆಲ್ಲ ಕಠೋರವಾಗಿ ಹರಿಹಾಯ್ದಿದ್ದ ಟ್ರಂಪ್ ಈಗ ಹೇಳಿದ್ದಾರೆ- ‘ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರು. ಇಂತಹವರು ಅಮೆರಿಕಕ್ಕೆ ಅವಶ್ಯಕವಾಗಿ ಬೇಕು. ಯಾವುದೇ ಕಾರಣಕ್ಕೂ ಇವರನ್ನು ದೇಶದಿಂದ ಹೊರ ಹಾಕುವ ಪ್ರಶ್ನೆಯೆ ಇಲ್ಲ’.

ಅಧ್ಯಕ್ಷೀಯ ಚುನಾವಣೆ ಆರಂಭದಲ್ಲಿ ಸರ್ವಾಧಿಕಾರಿ ಅತಿರೇಕಿಯಂತೆ ಬಿಂಬಿತರಾದ ಟ್ರಂಪ್, ಅಮೆರಿಕ ಪ್ರಜಾಪ್ರಭುತ್ವದ ಅಧ್ಯಕ್ಷ ಗಾದಿ ಮೇಲೆ ವಿರಾಜಮಾನರಾದರೆ ಅನ್ಬಿಲೀವೆಬ್ಲ್ ಎಂಬಂಥ ಸ್ಥಿತಿಯೇನೂ ಇಲ್ಲ. ಹಾಗಂತ ಟ್ರಂಪ್ ಗೆದ್ದರೆ ಅಮೆರಿಕದಲ್ಲಿ ಮೂಲಭೂತವಾದ ಬಂದುಬಿಡುತ್ತೆ, ಹಿಟ್ಲರ್ ಆಡಳಿತ ಶುರುವಾಗುತ್ತೆ ಅಂತೆಲ್ಲ ಜಗತ್ತು ಬೆಚ್ಚಿಬೀಳಬೇಕಾಗಿಯೂ ಇಲ್ಲ.

ಹೋಲಿಕೆ ಸರಿಯಲ್ಲ, ಆದರೂ ಒಂದು ಮಾತು. ಭಾರತದಲ್ಲೂ ಲೋಕಸಭೆ ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ ಭಾರತ ನಾಜಿ ಕ್ಯಾಂಪ್ ಆಗಿಬಿಡುತ್ತೆ ಎಂಬರ್ಥದಲ್ಲೇ ಬೊಬ್ಬೆ ಹಾಕಿದವರ ಪಡೆ ದೊಡ್ಡದಿತ್ತು!

1 COMMENT

Leave a Reply