ಮೋದಿ ಅಧಿಕಾರಕ್ಕೆ ಬರುತ್ತಲೇ ಮುಗುಳ್ನಕ್ಕಿದ್ದ ಮೊನ್ಸಾಂಟೊ ಈಗ ಮುನಿಸಿಕೊಂಡಿರುವುದೇಕೆ?

ಪ್ರಾತಿನಿಧಿಕ ಚಿತ್ರ

ಚೈತನ್ಯ ಹೆಗಡೆ

ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮುಂಚಿಂದಲೇ, ಮೋದಿಯವರಿಗೆ ತಮ್ಮ ಉತ್ಕಂಟಿತ ಬೆಂಬಲದ ನಡುವೆಯೇ ಬಲಪಂಥೀಯ ಸಂಘಟನೆಗಳು ಕೆಲವು ವಿಚಾರಗಳಲ್ಲಿ ಪ್ರತಿರೋಧವನ್ನೂ ಹೊಂದಿದ್ದವು. ಕುಲಾಂತರಿ ತಳಿಗಳ (ಜಿ ಎಮ್- ಜೆನಟಿಕಲಿ ಮಾಡಿಫೈಡ್) ಬಗ್ಗೆ ನರೇಂದ್ರ ಮೋದಿ ಹೊಂದಿದ್ದ ಒಲವು ಸ್ವದೇಶಿ ಜಾಗರಣ್ ಮಂಚ್ ಸೇರಿದಂತೆ ಬಲಪಂಥೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಹಲವರಿಗೆ ಒಪ್ಪಲಾಗದ ವಿಷಯವಾಗಿತ್ತು.

ಇದೀಗ ಮೋದಿ ಮುನ್ನಡೆಸುತ್ತಿರುವ ಸರ್ಕಾರವು ಜಿ ಎಮ್ ಬೇಕೋ- ಬೇಡವೋ ಅಂಥ ಎರಡೇ ನೆಲೆಗಳಲ್ಲಿ ಕೇಂದ್ರೀಕೃತವಾಗಿದ್ದ ಪರ- ವಿರೋಧ ಚರ್ಚೆಗಳನ್ನು ಬೇರೆಯದೇ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಸೂಚನೆ ನೀಡಿದೆ. ಇದರ ಬಿಸಿ ಮುಟ್ಟಿರೋದು ವಿದೇಶಿ ಬೀಜೋದ್ಯಮ ದೈತ್ಯ ಮೊನ್ಸಾಂಟೊ ಕಂಪನಿಗೆ. ಕಂಪನಿ ಪರವಾಗಿ ಜಿ ಎಮ್ ಲಾಬಿಯಲ್ಲಿದ್ದ ಹಲವರು ನರೇಂದ್ರ ಮೋದಿ ನಾಯಕತ್ವವನ್ನು ಯದ್ವಾತದ್ವಾ ಹೊಗಳಿಕೊಂಡಿದ್ದರು. ಹಾಗಂತ ಅಲ್ಲಿದ್ದದ್ದು ಸಮಗ್ರ ನೋಟದ ಪ್ರಾಮಾಣಿಕ ಪ್ರಶಂಸೆ ಏನಲ್ಲ, ಬದಲಿಗೆ ತಮ್ಮ ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಲೆಂಬ ಅಭೀಪ್ಸೆ.

ಅಂಥ ಮಾನ್ಸಾಂಟೊ ಮತ್ತವರ ಬೆಂಬಲಿಗರೆಲ್ಲ ಈಗ ಕೇಂದ್ರ ಸರ್ಕಾರದ ವಿರುದ್ಧ ಕುದಿಯುತ್ತಿದ್ದಾರೆ ಅಂತಂದ್ರೆ ನಿಮಗೆ ಆಶ್ಚರ್ಯವಾಗಬಹುದು. ಇವಕ್ಕೆಲ್ಲ ಕಾರಣ ಕುಲಾಂತರಿ ಹತ್ತಿ ಬೀಜಗಳ ವಿತರಣೆ ಸಂಬಂಧ ಮೋದಿ ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರ.

2016-17ರ ಸಾಲಿನಲ್ಲಿ ಬಿಟಿ ಹತ್ತಿಯ 400 ಗ್ರಾಂ ಪ್ಯಾಕೆಟ್ ಗೆ ₹800 ಮಾತ್ರ ವಸೂಲು ಮಾಡಬಹುದು ಅಂತ ದರ ನಿಗದಿ ಮಾಡಿದೆ. ಅಷ್ಟೇ ಅಲ್ಲ, ಈ ಬೀಜದ ವಿಶಿಷ್ಟ ತಂತ್ರಜ್ಞಾನ ಒದಗಿಸುವಿಕೆಗೆ ರಾಯಲ್ಟಿ ಎಂದು ಮೊನ್ಸಾಂಟೊ ಕಂಪನಿ ಸ್ಥಳೀಯ ಬೀಜ ವಿತರಕರಿಂದ ಪಡೆಯುತ್ತಿದ್ದ ಹಣದ ಪ್ರಮಾಣವನ್ನೂ ನಿರ್ದಿಷ್ಟಗೊಳಿಸಿರುವ ಕೇಂದ್ರ ಸರ್ಕಾರ, ಪ್ರತಿ ಪ್ಯಾಕೆಟ್ ಗೆ ₹49 ಮಾತ್ರ ಅಂತ ನಿಗದಿಪಡಿಸಿದೆ. ಇದಕ್ಕೂ ಪೂರ್ವದಲ್ಲಿ ಕಂಪನಿ ಆಡಿದ್ದೇ ಆಟವಾಗಿತ್ತು. ಏಕೆಂದರೆ, 2015ರಲ್ಲಿ ಪ್ಯಾಕೆಟ್ ಗೆ ₹830 ರಿಂದ ₹1000ದವರೆಗೂ ಮಾರಲಾಗಿತ್ತು.

2002ರಿಂದ ಬಿಟಿ ಕಾಟನ್ ಬೀಜಗಳ ಮಾರಾಟವಾಗುತ್ತ ಬಂದಿದೆ. ಈವರೆಗೆ ಯಾವ ಸರ್ಕಾರವೂ ಬೆಲೆ ನಿಯಂತ್ರಣಕ್ಕೆ ಕೈ ಹಾಕಿರಲಿಲ್ಲ. ಭಾರತದ ರಾಷ್ಟ್ರೀಯ ಬೀಜ ಒಕ್ಕೂಟದ ಪ್ರಕಾರ 2006ರಿಂದ ಮೊನ್ಸಾಂಟೊ ಕಂಪನಿ ಕಲೆಹಾಕಿರುವ ರಾಯಲ್ಟಿ ಹಣವೇ ಅಂದಾಜು 4400 ಕೋಟಿ ರುಪಾಯಿಗಳು. ಮಹಿಕೊ ಸಹಯೋಗದಲ್ಲಿ ಭಾರತದಲ್ಲಿ ಬಿಟಿ ಹತ್ತಿಬೀಜ ವಿತರಿಸುತ್ತಿರುವ ಮೊನ್ಸಾಂಟೊ ಶೇ. 90ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಮಾರ್ಚ್ 9ರಂದು ಹೀಗೊಂದು ಬೆಲೆ ನಿಯಂತ್ರಣದ ನಿಯಮ ವಿಧಿಸುತ್ತಲೇ ಮೊನ್ಸಾಂಟೊ ಹೀಗೆ ಪ್ರತಿಕ್ರಿಯಿಸಿದೆ- ‘ಹೀಗೆಲ್ಲ ಆದರೆ ನಾವು ಸಂಶೋಧನೆ ಮತ್ತು ಅಭಿವೃದ್ಧಿಗೆ ಹಾಕಿದ ಬಂಡವಾಳ ತಿರುಗಿ ದುಡಿಯುವುದಕ್ಕೆ ಕಷ್ಟವಾಗುತ್ತದೆ. ಈ ತಂತ್ರಜ್ಞಾನವನ್ನು ಭಾರತದಿಂದ ಹಿಂತೆಗೆದುಕೊಳ್ಳುವುದಕ್ಕೆ ನಾವು ಯೋಚಿಸಬೇಕಾಗುತ್ತದೆ.’

ಹೀಗಂದಿದ್ದೇ ಕೆಲವು ಇಂಗ್ಲಿಷ್ ಪತ್ರಿಕೆಗಳು, ಅಯ್ಯೋ ಭಾರತಕ್ಕೆ ತೊಂದರೆ ಎದುರಾಯ್ತು ಎಂಬರ್ಥದಲ್ಲಿ ಶೀರ್ಷಿಕೆಗಳನ್ನು ಜಳಪಳಿಸಿವೆ. ಬಿಟಿ ಹತ್ತಿಯ ಆಗಮನದಿಂದ ಭಾರತದಲ್ಲಿ ಇಳುವರಿ ಕ್ರಾಂತಿಯೇ ಆಗಿದೆ ಅನ್ನೋದನ್ನು ಮರೆಯಬಾರದು ಅಂತಲೂ ವಿಶ್ಲೇಷಣೆಗಳು ಪ್ರಕಟವಾಗುತ್ತಿವೆ. ವಾಸ್ತವ ಏನೆಂದರೆ, ಸರ್ಕಾರ ಬೀಜದ ಬೆಲೆ ನಿಯಂತ್ರಣಕ್ಕೆ ಮುಂದಾಗಿದ್ದೇ ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ಹತ್ತಿ ಬೆಳೆಗಾರರ ಆತ್ಮಹತ್ಯೆ ದೃಷ್ಟಿಯಲ್ಲಿಟ್ಟುಕೊಂಡು. ಈ ಆತ್ಮಹತ್ಯೆಗಳಿಗೆ ಅತಿಯಾದ ಸಾಲದ ಹೊರೆಯೇ ಕಾರಣ. ಸಾಲಕ್ಕೆ ಬೇರೆ ಕಾರಣಗಳೂ ಇರುತ್ತಾವಾದರೂ ಮುಖ್ಯವಾಗಿ ಬಿತ್ತಿದ ಬೀಜ ಫಸಲಾಗಿ, ಲಾಭ ತರದೇ ಹೋಗಿದ್ದೇ ಮುಖ್ಯ ಕಾರಣ. ಆದರೆ ಹತ್ತಿಯ ಇಳುವರಿ ಹೆಚ್ಚಾಗಿದ್ದಕ್ಕೆ ತಮಗೇ ಶ್ರೇಯಸ್ಸು ಸಲ್ಲಬೇಕೆಂದು ಸಂಭ್ರಮಿಸುವ ಬೀಜ ಕಂಪನಿಗಳು, ವೈಫಲ್ಯಕ್ಕೆ ಮಾತ್ರ ಪ್ರಕೃತಿಯನ್ನು ದೂರುತ್ತವೆ. ಪರಿಸ್ಥಿತಿ ಹೀಗಿರುವಾಗ, ಈವರೆಗೆ ತಮ್ಮ ಏಕಸ್ವಾಮ್ಯದಲ್ಲಿ ಸಾಕಷ್ಟು ಹಣ ಮಾಡಿಕೊಂಡಿರುವ ಮೊನ್ಸಾಂಟೊ, ಬೀಜಕ್ಕೆ ಬೆಲೆ ನಿಯಂತ್ರಣವೇ ಇರಬಾರದೆಂದು ವಾದಿಸುವುದು ಯಾವ ನ್ಯಾಯ?

ತಾನು ಎದ್ದುಹೋಗಿಬಿಡುತ್ತೇನೆ ಹುಷಾರ್ ಎಂಬ ಮೊನ್ಸಾಂಟೊ ಬೆದರಿಕೆಗೆ ತೀರ ತಲೆಕೆಡಿಸಿಕೊಳ್ಳಬೇಕಿಲ್ಲ ಅಂತ ಮೋದಿ ಸರ್ಕಾರಕ್ಕೂ ಗೊತ್ತು. ಬಿಟಿ ತಂತ್ರಜ್ಞಾನದಿಂದ ರೈತರಿಗೆ ಸಹಾಯವೇ ಆಗಿದ್ದಿರಬಹುದಾದರೂ, ಇಲ್ಲಿರುವಂಥ ವ್ಯಾಪಾರ ವ್ಯಾಪ್ತಿ ಮೊನ್ಸಾಂಟೊಕ್ಕೆ ಬೇರೆಡೆ ಸಿಗದು. ಅದರಲ್ಲೂ ಶೇ. 90ರಷ್ಟು ಮಾರುಕಟ್ಟೆ ತನ್ನದಾಗಿಸಿಕೊಂಡಿರುವಾಗ ಹುಸಿ ಮುನಿಸಿಂದ ಎದ್ದುಹೋದರೆ, ಆ ಜಾಗಕ್ಕೆ ಇನ್ನೊಂದು ಬೀಜ ತಂತ್ರಜ್ಞಾನದ ಕಂಪನಿ ಬರುತ್ತದೆ ಅಷ್ಟೆ ಎಂಬ ಸತ್ಯವೂ ಅದಕ್ಕೆ ಗೊತ್ತು. ಎಪ್ಪತ್ತು ಲಕ್ಷ ರೈತರ ಸಮೂಹ ಇನ್ನೆಲ್ಲಿ ಸಿಗೋದಕ್ಕೆ ಸಾಧ್ಯ?

ಬಿಟಿ ಹತ್ತಿಯ ಬಗ್ಗೆ ಮೋದಿ ಸರ್ಕಾರ ತಾಳಿರುವ ನಿಲುವಿನಲ್ಲಿ ಅವರ ಮಧ್ಯಮ ಮಾರ್ಗವೂ ನಿಚ್ಚಳವಾಗುತ್ತಿದೆ. ಎಡ- ಬಲಗಳನ್ನೆಲ್ಲ ಬಿಟ್ಟು ಚಾಣಾಕ್ಷ್ಯ ವ್ಯಾಪಾರಿಯಂತೆಯೇ ಮೋದಿ ವರ್ತಿಸುತ್ತಿದ್ದಾರೆ. ಅಂದರೆ, ಕೃಷಿಯಲ್ಲಿ ಹೊಸ ತಂತ್ರಜ್ಞಾನಕ್ಕೆ ಅವರದ್ದು ಯಾವತ್ತೂ ಸ್ವಾಗತವೇ. ಆದರೆ ಆ ತಂತ್ರಜ್ಞಾನ ಬಲದಿಂದ ಮಾರುಕಟ್ಟೆ ಏಕಸ್ವಾಮ್ಯದ ಕನಸಿದ್ದರೆ ಬಿಟ್ಟುಬಿಡಿ, ಇಬ್ಬರಿಗೂ ಲಾಭವಾಗುವ ರೀತಿ ಏನಾದರೂ ಮಾಡುವುದಿದ್ದರೆ ಬನ್ನಿ ಎಂಬ ಸಂದೇಶವೊಂದು ಇಲ್ಲಿದೆ.

ಬದನೆ, ಬತ್ತ ಹೀಗೆ ಆಹಾರ ಬೆಳೆಗಳಲ್ಲೂಕುಲಾಂತರಿ ತಂತ್ರಜ್ಞಾನಕ್ಕೆ ಅವಕಾಶ ಕೊಡಿ ಅಂತ ಮಾನ್ಸಾಂಟೊ ಹಲವು ವರ್ಷಗಳಿಂದ ಲಾಬಿ ಮಾಡುತ್ತಿದೆ. ಇದಕ್ಕೆ ಹಲವು ಮಗ್ಗುಲುಗಳಲ್ಲಿ ಪ್ರತಿರೋಧವೂ ಎದುರಾಗಿದೆ. ಅಂಥ ಪ್ರತಿರೋಧದಲ್ಲಿ ಎರಡು ಮುಖ್ಯ ಪ್ರತಿಪಾದನೆಗಳಿವೆ. ಕುಲಾಂತರಿ ಬೆಳೆಗಳಿಂದ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ದೀರ್ಘಾವಧಿ ಪ್ರಯೋಗಗಳಾಗಿಲ್ಲ ಎಂಬ ಆತಂಕ ಹಲವರದ್ದು. ಇದನ್ನು ಕುಲಾಂತರಿ ಪರ ವಾದ ಮಾಡುವವರು ಸುಲಭಕ್ಕೆ ನಿವಾಳಿಸುತ್ತಿದ್ದಾರೆ. ಇದೀಗ ತಂತ್ರಜ್ಞಾನರಹಿತವಾಗಿ ಬೆಳೆಯುತ್ತಿರುವ ಬೆಳೆಗಳಿಗೆ ರೋಗಬಾಧೆ ತಪ್ಪಿಸಲೆಂದು ರಾಸಾಯನಿಕಗಳ ಅತಿ ಸಿಂಪಡಣೆ ಸಾಮಾನ್ಯವಾಗಿದೆ. ಹೀಗಿರುವಾಗ ಅಂಥ ಆಹಾರ ತಿನ್ನುವುದಕ್ಕಿಂತ ಕುಲಾಂತರಿ ಸುರಕ್ಷಿತ ಅನ್ನೋದು.

ಆದರೆ ಇನ್ನೊಂದು ನೆಲೆಯ ಆತಂಕ ಇರೋದು ಈ ತಂತ್ರಜ್ಞಾನ ಬಳಸುತ್ತಲೇ ರೈತ ಸಿಕ್ಕಿಕೊಳ್ಳಬಹುದಾದ ದಾಸ್ಯದ ಕುರಿತು. ಕುಲಾಂತರಿ ಬೀಜ ಪಡೆಯುವುದಕ್ಕೆ ಪ್ರತಿಬಾರಿ ಕಂಪನಿಗಳ ಎದುರೇ ಕೈಯೊಡ್ಡಬೇಕಾಗುತ್ತದೆ ಹಾಗೂ ಅವರು ವಿಧಿಸಬಹುದಾದ ಬೆಲೆ ತೆರದೇ ಅನ್ಯಮಾರ್ಗವಿರೋಲ್ಲ ಎಂಬುದು ನಿಜ ಆತಂಕ. ಇದೀಗ ಹತ್ತಿಬೀಜಗಳ ಬೆಲೆ ನಿಯಂತ್ರಣ ಮಾಡುತ್ತಲೇ ಮೊನ್ಸಾಂಟೊ ಪ್ರತಿಕ್ರಿಯಿಸಿರುವ ರೀತಿ ನೋಡಿದರೆ, ‘ಹಸಿವುಮುಕ್ತ ಜಗತ್ತಿಗಾಗಿ ಮಾತ್ರವೇ ಈ ತಂತ್ರಜ್ಞಾನ ತರುತ್ತಿದ್ದೇವೆ’ ಎಂಬ ಪರೋಪಕಾರದ ಮಾತಿನಲ್ಲಿ ಇರುವ ಸತ್ವ ಏನು ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತಿದೆ.

ಹೀಗೆ ಕುಲಾಂತರಿ ಚರ್ಚೆಯನ್ನು ಪರೋಕ್ಷವಾಗಿ ಚೌಕಾಶಿ ಹಂತಕ್ಕೆ ತಂದುನಿಲ್ಲಿಸಿರುವುದು ನರೇಂದ್ರ ಮೋದಿಯವರ ಚಕಿತ ನಡೆಗಳಲ್ಲೊಂದು. ಏಕೆಂದರೆ, ಆರೆಸ್ಸೆಸ್ ಮಾತನ್ನೇ ಪೂರ್ಣ ಕೇಳುವವರಾಗಿದ್ದರೆ ಈ ಕುಲಾಂತರಿ ಉಸಾಬರಿಯೇ ಬೇಡ ಎಂಬ ಧೋರಣೆ ತೋರಿಸಿಬಿಡಬೇಕಿತ್ತು. ಬಹುರಾಷ್ಟ್ರೀಯ ಕಂಪನಿಗಳೊಂದಿಗಿನ ವ್ಯಾಮೋಹವೇ ಅತಿಯಾಗಿದ್ದರೆ, ನಿಮ್ಮ ಎಲ್ಲ ಬಗೆಯ ವಹಿವಾಟಿಗೂ ಬೆಂಬಲವಿದೆ ಎಂಬಂತೆ ಸುಮ್ಮನಿದ್ದುಬಿಡಬಹುದಾಗಿತ್ತು. ಆದರೆ, ಕಳೆದ ಡಿಸೆಂಬರ್ ನಲ್ಲಿ ಬಿಟಿ ಕಾಟನ್ ಬೀಜಗಳ ಬೆಲೆ ನಿಯಂತ್ರಣ ಮತ್ತು ರಾಯಧನ ನಿಗದಿಗೆ ಕೃಷಿ ಸಚಿವಾಲಯದ ಸಮಿತಿಯೊಂದನ್ನು ನೇಮಿಸಿ, ಅದರ ಶಿಫಾರಸುಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವ ಮೂಲಕ ತಮ್ಮದೇನಿದ್ದರೂ ಗುಜರಾತಿ ವ್ಯಾಪಾರದ ಸ್ಟೈಲು ಅಂತ ಪ್ರಧಾನಿ ಸ್ಪಷ್ಟಪಡಿಸಿದಂತಾಗಿದೆ.

ಆಹಾರ ಬೆಳೆಗಳಲ್ಲೂ ಕುಲಾಂತರಿ ತಂತ್ರಜ್ಞಾನ ತರುವುದಕ್ಕೆ ಮೋದಿ ಸರ್ಕಾರ ಒಪ್ಪಿಗೆ ಕೊಟ್ಟೀತು ಎಂಬ ಉತ್ಸಾಹದಲ್ಲಿದ್ದ ಕಂಪನಿಗಳಿಗೆ, ಬಿಟಿ ಕಾಟನ್ ವಿಷಯದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರದ ಮೂಲಕ ಮೋದಿ, ಭಾರತದ ಪರವಾದ ಚೌಕಾಶಿ ರೂಪುರೇಷೆಯೊಂದನ್ನು ಈಗಲೇ ಹರವಿ ಇಟ್ಟಿದ್ದಾರಾ?

Leave a Reply