ರೈತರ ಪಾಲಿನ ಕ್ರಾಂತಿವೀರನಾಗುವ ಆದರ್ಶದಲ್ಲಿದ್ದಾರೆ ನಾನಾ ಪಾಟೇಕರ್!

ಚಿತ್ರಕೃಪೆ- ಅಮಿತ್ ಬಾಜ್ಪೇಯಿ

ಡಿಜಿಟಲ್ ಕನ್ನಡ ಟೀಮ್

ನಾನಾ ಪಾಟೇಕರ್ ಭಾರತ ಚಿತ್ರರಂಗದ ಖ್ಯಾತ ನಟ. ನಟನೆಯಲ್ಲಿ ಆತ ಇತರರಿಗಿಂತ ವಿಭಿನ್ನ ಎಂಬ ಭಾವನೆ ಸಹಜವಾಗಿದೆ. ಕೇವಲ ನಟನೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಪಾಟೇಕರ್ ಇತರೆ ಸೆಲೆಬ್ರಿಟಿಗಳಿಗಿಂತ ಭಿನ್ನ.

ಈಗ ಪಾಟೇಕರ್ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರ ನೆರವಿಗೆ ನಿಂತಿದ್ದಾರೆ. ಯೆಸ್.. ರೈತರ ಬಗೆಗೆ ನಾನಾ ಪಾಟೇಕರ್ ಈ ಹಿಂದಿನಿಂದಲೂ ಕಾಳಜಿ ತೋರಿರುವುದು ಗೊತ್ತಿರುವ ಸಂಗತಿ. ಈ ಹಿಂದೆ ಅವರು ರೈತರ ಸರಣಿ ಆತ್ಮ ಹತ್ಯೆ ಪ್ರಕರಣ ಕಂಡಾಗ, ‘ನಿಮಗೆ ಆತ್ಮ ಹತ್ಯೆ ಯೋಚನೆ ಬಂದರೆ, ನನ್ನ ಸಂಪರ್ಕಿಸಿ ನಾನು ನಿಮಗೆ ಸಹಾಯ ಮಾಡುತ್ತೇನೆ’ ಎಂದಿದ್ದೂ ಹಳೆಯ ವಿಚಾರ. ಅದು ಕೇವಲ ಮಾತಾಗಿರಲಿಲ್ಲ. ನಿಜವಾದ ಕಾಳಜಿ ಅವರ ಹೇಳಿಕೆಯಲ್ಲಿತ್ತು. ಇತ್ತೀಚೆಗೆ ನಾನಾ ಪಾಟೇಕರ್ ಮೃತ ರೈತರ ಪತ್ನಿಯರಿಗೆ ಹೊಲಿಗೆ ಯಂತ್ರವನ್ನು ವಿತರಿಸುವ ಮೂಲಕ ಅವರು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ನೆರವಾಗಿದ್ದಾರೆ.

ಪಾಟೇಕರ್ ಅವರ ಈ ಕಾರ್ಯದ ಬಗ್ಗೆ ಅಮಿತ್ ಬಾಜ್ ಪೈ ಎಂಬುವವರು ಫೇಸ್ ಬುಕ್ ನಲ್ಲಿ ಫೋಟೊ ಹಾಕಿ ಈ ವಿಷಯವನ್ನು ಬೆಳಕಿಗೆ ತಂದಿದ್ದರು. ಇವನ್ನೆಲ್ಲ ನಾನಾ ಪಾಟೇಕರ್ ಒಬ್ಬರೇ ನಿಂತು ಮಾಡುತ್ತಿಲ್ಲವಾದರೂ ನಟನೆ ಮಾಡಿಕೊಂಡಿದ್ದವರು ಸೇವಾಕಾರ್ಯಕ್ಕೆ ಈ ಮಟ್ಟದಲ್ಲಿ ತೊಡಗಿಸಿಕೊಂಡಿರೋದು ಶ್ಲಾಘನೀಯ ವಿಷಯ. ಸೆಪ್ಟೆಂಬರ್ 2015ರಲ್ಲಿ ಮರಾಠಿ ನಟ ಮಕರಂದ ಅನಸ್ಪುರೆ ಜತೆ ಸೇರಿಕೊಂಡು ನಾಮ್ ಎಂಬ ಸೇವಾಸಂಸ್ಥೆ ಹುಟ್ಟುಹಾಕಿರುವ ನಾನಾ, ಆ ಮೂಲಕ ರೈತರು ಹಾಗೂ ಆತ್ಮಹತ್ಯೆಗಳಾಗಿರುವ ರೈತ ಕುಟುಂಬದಲ್ಲಿನ ವಿಧವೆಯರಿಗೆ ಸಹಾಯ ಮಾಡುತ್ತಿದ್ದಾರೆ.

ಕೇವಲ ಒಂದು ಮೊತ್ತದ ಹಣ ಕೊಡುವುದರಿಂದ ಸಮಸ್ಯೆ ಪರಿಹಾರವಾಗದು ಅಂತ ಅರಿತಿರುವ ಅವರು, ಗವರ್ನನ್ಸ್ ನೌ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ರೈತರ ಬಿಕ್ಕಟ್ಟು ಪರಿಹಾರಕ್ಕೆ ಆಗಬೇಕಿರುವ ಕಾರ್ಯಗಳ ಬಗ್ಗೆ ಮಾತಾಡಿರುವುದು ಆಶಾದಾಯಕವಾಗಿದೆ.

ಟಿವಿಯಲ್ಲಿ ಬರುತ್ತಿದ್ದ ರೈತರ ಆತ್ಮಹತ್ಯೆ ಸುದ್ದಿ ನೋಡುತ್ತ ಅದಕ್ಕೆ ಸ್ಪಂದಿಸುವ ಮನಸ್ಸು ಮಾಡಿದಾಗ ಅವರ ಬಳಿ ಒಂದೂವರೆ ಕೋಟಿ ರುಪಾಯಿಗಳಿತ್ತಂತೆ. ಮಹಾರಾಷ್ಟ್ರದ ಬೀಡ್ ಎಂಬ ಸಂತ್ರಸ್ತ ಪ್ರದೇಶಕ್ಕೆ ಹೋಗಿ ಸುಮಾರು 180 ಮಹಿಳೆಯರಿಗೆ ಹಣ ಹಂಚಿದಾಗ, ಇದು ಒಂದು ದಿನದ ದಾನದಿಂದ ಬಗೆಹರಿಯೋ ಸಮಸ್ಯೆ ಅಲ್ಲ ಎಂಬ ವಾಸ್ತವದ ಅರಿವಾಗಿ, ದಾನಿಗಳಿಂದ ಹಣ ಕೋರಿ ನಾಮ್ ಪ್ರತಿಷ್ಠಾನ ಕಟ್ಟಿದರು. ಈಗ 22 ಕೋಟಿ ರುಪಾಯಿಗಳು ಸಂಗ್ರಹವಾಗಿವೆ.

ಹಳ್ಳಿಗಳಲ್ಲಿನ ಪ್ರಮುಖ ಸಮಸ್ಯೆ ಎಂದರೆ ಜಲಮೂಲಗಳು ಬತ್ತಿರೋದು ಎನ್ನುವ ನಾನಾ, ಇವುಗಳ ಪುನಶ್ಚೇತನಕ್ಕೆ ನಾಮ್ ವತಿಯಿಂದ ಕೆಲಸ ಮಾಡುತ್ತಿದ್ದಾರೆ. ತಾವು ದತ್ತು ತೆಗೆದುಕೊಂಡಿರುವ ಗೋಗಲಾಗಾಂವ್ ಚಿತ್ರಣ ಹರಡಿಡುತ್ತಾರವರು. ಹಳ್ಳಿಯಲ್ಲಿ ಗಟಾರ ವ್ಯವಸ್ಥೆ ಸರಿ ಇಲ್ಲದೇ, ಸ್ವಚ್ಛತೆಗೆ ಗಮನ ಇಲ್ಲವಾದಾಗ ರೋಗಗಳು ಹೆಚ್ಚುತ್ತವೆ. ಇಂಥ ಹಳ್ಳಿಗಳಲ್ಲಿ ವೈದ್ಯರಿಗೆ ತೆರುವ ಹಣವೇ ಕೃಷಿಗೆ ವ್ಯಯಿಸಿದ್ದಕ್ಕಿಂತ ಹೆಚ್ಚು. ಗೋಗಲಗಾಂವ್ ನಲ್ಲಿ ಶೇ. 80ರಷ್ಟು ವ್ಯವಸ್ಥೆ ಸರಿಯಾಗುತ್ತಲೇ ಹಳ್ಳಿಗರಲ್ಲಿ ಹೊಸ ವಿಶ್ವಾಸ ಬಂದಿದೆ. ಗ್ರಾಮದಲ್ಲಿ ಸರಾಯಿ ತರುವಂತಿಲ್ಲ. ಜಾತಿ ಹೊಡೆದಾಟಗಳೂ ಇಲ್ಲ. ಇವತ್ತು ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿರೋದು ನಮ್ಮೊಂದಿಗೆ ಯಾರೂ ಇಲ್ಲ ಎಂಬ ಭಾವನೆ. ಅದನ್ನು ಹೋಗಲಾಡಿಸಿ ಅವರೊಂದಿಗೆ ನಿಲ್ಲೋದು ಮುಖ್ಯ ಅಂತಾರಾ ನಾನಾ.

ನಾನಾ ಪಾಟೇಕರ್ ತೆರೆ ಮೇಲೆ ಕ್ರಾಂತಿಕಾರಿ. ರೈತರ ಬದುಕಿಗೆ ಸಹಕರಿಸುತ್ತಿರುವ ಅವರ ಕಾರ್ಯ ಗಮನಿಸಿದರೆ ನಿಜ ಜೀವನದಲ್ಲೂಸದ್ದಿಲ್ಲದ ಕ್ರಾಂತಿ ಮಾಡುತ್ತಿದ್ದಾರೆ ಅಂತನಿಸದಿರದು.

1 COMMENT

Leave a Reply