ಸುದ್ದಿಸಂತೆ: ರಾಜ್ಯ ಬಜೆಟ್ ವ್ಯಾಪ್ತಿ ಗೊತ್ತಾ?, ಜಾವೇದ್ ಅಖ್ತರ್ ಭಾರತ್ ಮಾತಾ ಕೀ ಜೈ.., ಏರ್ತು ತೈಲಬೆಲೆ.. ಇಂದಿನ 9 ಪ್ರಮುಖಾಂಶ

ರಾಜ್ಯಕ್ಕೆ ಬಾರಿ 1.50 ಲಕ್ಷ ಕೋಟಿ ರುಪಾಯಿ ಬೃಹತ್ ಗಾತ್ರದ ಬಜೆಟ್

ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 1.50 ಲಕ್ಷ ಕೋಟಿ ರುಪಾಯಿ ಬೃಹತ್ ಗಾತ್ರದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಇದೇ 18 ರಂದು ಮಂಡಿಸಲಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಅಧಿಕಾರಾವಧಿಯ ಕೊನೇ ವರ್ಷ ಒಂದು ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದರಾದರೂ, ಅಧಿಕಾರ ಪಲ್ಲಟದಿಂದ ಆ ಅದೃಷ್ಟ ಡಿ.ವಿ.ಸದಾನಂದಗೌಡರಿಗೆ ದಕ್ಕಿತ್ತು. ಇದೀಗ ಸಿದ್ಧರಾಮಯ್ಯನವರು ಆ ಗಾತ್ರ ಮೀರಿಸುತ್ತಿದ್ದಾರೆ.

ಚುನಾವಣೆಗೆ ಇನ್ನೆರಡು ವರ್ಷಗಳಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಇರುವುದಿಲ್ಲ. ಆದರೆ ಉಳ್ಳವರಿಗೆ ಇದು ಅನ್ವಯ ಆಗುವುದಿಲ್ಲ. ವಿದ್ಯುತ್ ಖಾಸಗಿ ಉತ್ಟಾದನೆಗೆ ಒತ್ತು,  ಜಲ ಸಂರಕ್ಷಣೆ, ಸರಕಾರಿ ನೌಕರರು, ರೈತರ ಕಲ್ಯಾಣಕ್ಕೆ ಹೊಸ ಯೋಜನೆಗಳಿರಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮರಳಿಗೆ ಪರ್ಯಾಯವಾಗಿ ಜೆಲ್ಲಿಪುಡಿ ಉತ್ಪಾದನೆ

ಮರಳು ಕ್ಷಾಮದ ಹಿನ್ನೆಲೆಯಲ್ಲಿ ಜೆಲ್ಲಿಪುಡಿ (ಎಂಸ್ಯಾಂಡ್) ಉತ್ಪಾದನೆಗೆ ಅನುಮತಿ ನೀಡುವಂತೆ ಶಿಫಾರಸ್ಸು ಮಾಡಲು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಬುಧವಾರ ತೀರ್ಮಾನಕ್ಕೆ ಬರಲಾಗಿದೆ.

ರಾಜ್ಯದ ನಾನಾ ಕಡೆ ಸುಮಾರು 15 ಲಕ್ಷ ಟನ್ ಜೆಲ್ಲಿಪುಡಿ ಉತ್ಪಾದನೆ ಉದ್ದೇಶದ ಈ ಶಿಫಾರಸ್ಸಿಗೆ

ನಾಳೆ ಸಂಜೆ ನಡೆಯುವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಇದರ ಜತೆಗೆ ರಾಜ್ಯದಲ್ಲಿ ಮತ್ತಷ್ಟು ಮರಳು ನಿಕ್ಷೇಪಗಳನ್ನು ಗುರುತಿಸಿ, ಅಲ್ಲಿ ಮರಳು ಗಣಿಕಾರಿಕೆಗೆ ಅವಕಾಶ ನೀಡುವಂತೆಯೂ ಈ ಸಮಿತಿ ಶಿಫಾರಸ್ಸು ಮಾಡಲಿದೆ.

 ತೈಲ ದರದಲ್ಲಿ ಭಾರಿ ಏರಿಕೆ

ವಾಹನ ಸವಾರರಿಗೆ ಮತ್ತೆ ತಟ್ಟಿದೆ ತೈಲ ಬೆಲೆ ಏರಿಕೆ ಬಿಸಿ. ಎರಡು ವಾರಗಳ ಹಿಂದಷ್ಟೆ ಪೆಟ್ರೋಲ್ ದರದಲ್ಲಿ 3.02 ರು ಇಳಿಕೆ ಹಾಗೂ ಡಿಸೇಲ್ ದರದಲ್ಲಿ 1.47 ರು ಏರಿಕೆಯ ಸಿಹಿ ಕಹಿ ಮಿಶ್ರಣ ಪಡೆದಿದ್ದ ವಾಹನ ಸವಾರರಿಗೆ ಬುಧವಾರ ದೊಡ್ಡ ಪ್ರಮಾಣದ ಕಹಿ ಸುದ್ದಿ ಎದುರಾಗಿದೆ. ಪೆಟ್ರೋಲ್ 3.07 ರು ಮತ್ತು ಡಿಸೇಲ್ 1.90 ರು ಏರಿಕೆ ಕಂಡಿದ್ದು, ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಒವೈಸಿ ವಿರುದ್ಧ ಜಾವೇದ್ ಖ್ತರ್ ಕಿಡಿ

ಸದ್ಯದಲ್ಲೇ ತಮ್ಮ ರಾಜ್ಯಸಭೆ ಸದಸ್ಯತ್ವದ ಅವಧಿ ಮುಕ್ತಾಯಗೊಳಿಸುತ್ತಿರುವ ಬಾಲಿವುಡ್ ನಟ ಜಾವೇದ್ ಅಖ್ತರ್ ಬುಧವಾರ ತಮ್ಮ ವಿದಾಯದ ಭಾಷಣದಲ್ಲಿ ಸಖತ್ ಸದ್ದು ಮಾಡಿದ್ದಾರೆ. ಭಾರತ್ ಮಾತಾಕೀ ಜೈ ಎಂಬ ಘೋಷಣೆ ಕೂಗಲ್ಲ ಎಂದು ವಿವಾದ ಸೃಷ್ಟಿಸಿದ್ದ ಎಐಎಂಐಎಂ ಮುಖಂಡ ಒವೈಸಿ ವಿರುದ್ಧ ಕಿಡಿ ಕಾರಿದರು. ‘ನೀವು ಶೇರ್ವಾನಿ ಧರಿಸಿ ಟೋಪಿ ಹಾಕಿಕೊಳ್ಳುವಂತೆ ಸಂವಿಧಾನದಲ್ಲಿ ತಿಳಿಸಿಲ್ಲ. ಭಾರತ ಮಾತಾಕೀ ಜೈ ಎನ್ನುವುದು ನಮ್ಮ ಕರ್ತವ್ಯವೇ ಅಥವಾ ಅಲ್ಲವೇ ಎಂಬುದಕ್ಕಿಂತ ಅದು ನನ್ನ ಅಧಿಕಾರ’ ಎಂದು ಭಾರತ್ ಮಾತಾಕೀ ಜೈ ಎಂಬ ಘೋಷಣೆ ಕೂಗಿದ ಅಕ್ತರ್, ಇತರೆ ಸದಸ್ಯರಿಂದ ಬೆಂಬಲ ಪಡೆದರು.

‘ತನ್ನ ಅನುಭವದಿಂದ ಕಲಿತವ ಜಾಣ. ಅದೇ ಬೇರೆಯವರ ಅನುಭವದಿಂದ ಕಲಿತವ ಚತುರನಾಗುತ್ತಾನೆ. ಕೆಲವು ದೇಶಗಳಲ್ಲಿ ಧರ್ಮಕ್ಕೆ ಹೆಚ್ಚು ಮಾನ್ಯತೆ ನೀಡಲಾಗುತ್ತಿದೆ. ಅಲ್ಲಿ ಧರ್ಮ ಅಥವಾ ದೇಶದ ಬಗ್ಗೆ ಮಾತನಾಡಿದರೆ, ನಾಲಿಗೆ ಕತ್ತರಿಸುತ್ತಾರೆ ಅಥವಾ ನೇಣು ಹಾಕುತ್ತಾರೆ. ಹಾಗಾಗಿ ನಮ್ಮಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅರಿಯಬೇಕು ಎಂದರು.

ನಮ್ಮಲ್ಲಿ ಸರ್ಕಾರ, ವ್ಯವಸ್ಥೆ ಎಲ್ಲವೂ ಇದೆ. ಆದರೂ ಅಭಿವೃದ್ಧಿ ಯಾಕೆ ಸಾಗುತ್ತಿಲ್ಲ? ನಮಗೆ ಬೆಳವಣಿಗೆ ಬೇಕು. ಅದು ಯಾರ ಬೆಳವಣಿಗೆ? ಯಾರಿಗಾಗಿ ಬೆಳವಣಿಗೆ? ಎಂಬುದನ್ನು ಚೆನ್ನಾಗಿ ಅರಿಯಬೇಕು. ನಾವು ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ. ಸರ್ಕಾರ ಮತ್ತು ಸಮಾಜವನ್ನು ಟೀಕಿಸುವ ಅಧಿಕಾರ ಹೊಂದಿದ್ದೇವೆ. ನಮಗಿರುವ ಅಧಿಕಾರಕ್ಕೆ ನಾವು ಧನ್ಯವಾದ ಹೇಳಲ್ಲ. ನಮ್ಮ ಸಂವಿಧಾನಕ್ಕೆ ನಾವು ಋಣಿಯಾಗಿಲ್ಲ. ಜಾತ್ಯಾತೀತತೆಯಿಲ್ಲದೇ ಪ್ರಜಾಪ್ರಭುತ್ವ ಸಾಧ್ಯವಿಲ್ಲ’ ಎಂದರು ಜಾವೇದ್. ಇದೇ ವೇಳೆ ಮೋದಿ ಸರ್ಕಾರದಲ್ಲಿ ಉತ್ತಮ ಕೆಲಸಗಳನ್ನು ಮಾಡಬಲ್ಲ ನಾಯಕರಿದ್ದಾರೆ. ಸರ್ಕಾರ ಹಾಗೂ ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದಿದ್ದಾರೆ.

ಜಾವೇದ್ ಅಕ್ತರ್ ಅವರ ರಾಜ್ಯಸಭೆಯಲ್ಲಿನ ಮಾತು ಬಾಲಿವುಡ್ ನಲ್ಲೂ ಸಾಕಷ್ಟು ಪ್ರಶಂಸೆ ಪಡೆದಿದೆ. ಕರ್ನಾಟಕದ ಬಿ.ಜಯಶ್ರೀ ಸಹ ತಮ್ಮ ವಿದಾಯದ ಭಾಷಣ ಮಾಡಿದರು.

ನಾರದಾ ನ್ಯೂಸ್ ಸ್ಟಿಂಗ್ ಪ್ರಕರಣ, ಲೋಕ ಸಭೆ ನೀತಿ ಸಮಿತಿಯಿಂದ ತನಿಖೆ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರು ಭ್ರಷ್ಟಾಚಾರದಲ್ಲಿ ಭಾಗಿಯಾದ ಪ್ರಕರಣ ತನಿಖೆಯನ್ನು ಲೋಕಸಭೆ ನೀತಿ ಸಮಿತಿಗೆ ವಹಿಸಲಾಗಿದೆ. ಮಂಗಳವಾರ ಈ ವಿವಾದ ಲೋಕಸಭೆಯಲ್ಲೂ ಸಾಕಷ್ಟು ಸದ್ದು ಮಾಡಿತ್ತು. ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ ಎಂ ಪಕ್ಷಗಳು ಟಿಎಂಸಿ ಸಂಸದರ ವಿರುದ್ಧ ತನಿಖೆ ನಡೆಸಲು ಒತ್ತಾಯ ನಡೆಸಿದ್ದವು. ಹಾಗಾಗಿ ಬುಧವಾರ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನಾ ಅವಧಿ ಮುಗಿದ ಬಳಿಕ ಈ ಪ್ರಕರಣವನ್ನು ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ನೇತೃತ್ವದ ನೀತಿ ಸಮಿತಿಗೆ ವಹಿಸಿದ್ದಾರೆ. ಇತ್ತೀಚೆಗಷ್ಟೇ 2014ರ ಲೋಕ ಸಭೆ ಚುನಾವಣೆ ವೇಳೆ ನಾರದಾ ನ್ಯೂಸ್ ಎಂಬ ಪೊರ್ಟಲ್ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಂಸದರ ಬಗ್ಗೆ ನಡೆಸಿದ್ದ ಕುಟುಕು ಕಾರ್ಯಾಚರಣೆಯ ಪ್ರಕರಣ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಕಾನೂನು ಸಮರದಲ್ಲಿ ಹೃತಿಕ್- ಕಂಗನಾ

ಕೆಲ ತಿಂಗಳ ಹಿಂದೆ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಹಾಗೂ ಕಂಗನಾ ರಣಾವತ್ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡು ಇಬ್ಬರು ನಡುವೆ ಸಮ್ ಥಿಂಗ್ ಸಮ್ ಥಿಂಗ್ ನಡಿತಿದೆ ಎಂಬ ಗುಲ್ ಬಾಲಿವುಡ್ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಈ ಇಬ್ಬರು ತಾರೆಯರು ಈಗ ವಿವಾದದ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಏನಪ್ಪಾ ಅಂತದ್ದು ಅಂತೀರಾ? ಇಲ್ಲಿದೆ ಕತೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೃತಿಕ್ ಬಗ್ಗೆ ಮಾತನಾಡುವಾಗ ಕಂಗನಾ ಆತ ‘ಸಿಲ್ಲಿ ಎಕ್ಸ್’ ಎಂದು ಕರೆದಿದ್ದಳು. ಇದನ್ನು ಒಂದು ಕಿವಿಲಿ ಕೇಳಿ ಮತ್ತೊಂದು ಕಿವಿಲಿ ಬಿಡದ ಹೃತಿಕ್, ಆಕೆಗೆ ನೋಟೀಸ್ ಜಾರಿ ಮಾಡಿದ. ನೋಟೀಸ್ ನಲ್ಲಿ ಕಂಗನಾ ತನಗೆ 1439 ಇ ಮೇಲ್ ಮಾಡಿದ್ದು, ಅದರಲ್ಲಿ ವೈಯಕ್ತಿಕ, ಅವಿವೇಕ ಹಾಗೂ ಅಸಂಬದ್ಧ ಸಂದೇಶ ಕಳುಹಿಸಿದ್ದಾರೆ ಅಂತಲೂ ಆರೋಪಿಸಿದ್ದಾಗಿ ವರದಿಗಳು ಪ್ರಕಟವಾಗಿವೆ. ಇವನ್ನು ನಿರಾಕರಿಸದೇ, ಪುರಸ್ಕಾರವನ್ನೂ ಮಾಡದೇ ಉಭಯರ ವಕೀಲರೂ ವಿವಾದ ಪ್ರಚಲಿತದಲ್ಲಿರುವಂತೆ ಮಾಡಿದ್ದಾರೆ.

ಇದಕ್ಕೆ ತಾನೇನು ಕಮ್ಮಿ ಇಲ್ಲ ಎಂದು ಕಂಗನಾ ಮತ್ತೊಂದು ನೋಟೀಸ್ ನೀಡಿ ವೈಯಕ್ತಿಕ ತೇಜೋವಧೆ ಆರೋಪ ಹೊರೆಸಿರುವುದಾಗಿ ವದಂತಿಗಳಿವೆ.

ಸ್ಕೈಪ್ ನೋಡ್ತಿರುವಾಗ್ಲೆ ತೆಲುಗು ಟಿವಿ ನಿರೂಪಕಿ ಆತ್ಮಹತ್ಯೆ

ಎರಡು ದಿನಗಳ ಹಿಂದಷ್ಟೇ ತಮಿಳು ನಟ ಸಾಯಿ ಪ್ರಶಾಂತ್ ಆತ್ಮಹತ್ಯೆ ಸುದ್ದಿ ಕಂಡಿದ್ದೆವು. ಈಗ ತೆಲುಗು ಟಿವಿ ನಿರೂಪಕಿ ನಿರುಶಾ ತನ್ನ ಪಿಜಿ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ. ತೆಲುಗು ಮ್ಯೂಸಿಕ್ ಚಾನೆಲ್ ನಲ್ಲಿ ನಿರೂಪಕಿಯಾಗಿದ್ದ 23 ವರ್ಷದ ನಿರುಶಾ ಬುಧವಾರ ಮೃತಪಟ್ಟಿದ್ದಾಳೆ. ಪೋಲೀಸರ ಪ್ರಕಾರ ನಿರುಶಾ ಸ್ಕೈಪ್ ಮೂಲಕ ಕೆನಡಾದಲ್ಲಿರುವ ಸ್ನೇಹಿತೆ ಜತೆ ವಿಡಿಯೊ ಕಾಲ್ ನಲ್ಲಿ ಮಾತನಾಡುವಾಗಲೇ ಮಾತಿಗೆ ಮಾತು ಬೆಳೆದು ನೇಣಿಗೆ ಶರಣಾಗಿದ್ದಾಳೆ. ಆಕೆಯ ಸ್ನೇಹಿತೆ ಹೈದರಾಬಾದ್ ನಲ್ಲಿರುವ ಮತ್ತೊರ್ವ ಸ್ನೇಹಿತರಿಗೆ ತಿಳಿಸಿ ರಕ್ಷಿಸುವ ಪ್ರಯತ್ನ ನಡೆಸಲಾಯಿತಾದರೂ ಅವರು ಬರುವ ವೇಳೆಗೆ ನಿರುಶಾ ಮೃತಪಟ್ಟಿದ್ದಳು ಎಂದು ಹೇಳಲಾಗಿದೆ. ಇನ್ನು ಚಿತ್ತೂರಿನಲ್ಲಿ ನೆಲೆಸಿರುವ ಆಕೆಯ ತಂದೆ, ನಿರುಶಾ ನಿರಂತರವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅದನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.

ಕಬಡ್ಡಿ ಆಟಗಾರನ ಹತ್ಯೆ

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಸುಖ್ವಿಂದರ್ ನರ್ವಾಲ್ ರನ್ನು ಹಾಡಹಗಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಂಗಳವಾರ ಫೋನ್ ನಲ್ಲಿ ಮಾತನಾಡಿಕೊಂಡು ತಮ್ಮ ಮನೆಗೆ ಬರುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಸುಖ್ವಿಂದರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು, ಘಟನೆ ನಡೆದ ಸಮೀಪದಲ್ಲಿದ್ದ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೊದಲು ನೇರವಾಗಿ ತಲೆಗು ಗುಂಡು ಹಾರಿಸಿದ ಪರಿಣಾಮ ಸುಖ್ವಿಂದರ್ ನೆಲಕ್ಕೆ ಕುಸಿದ. ನಂತರವೂ ದುಷ್ಕರ್ಮಿಗಳು ಸತತವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ತಿಂಗಳಷ್ಟೇ ದೀಪಕ್ ಕುಮಾರ್ ಎಂಬ ಕಬಡ್ಡಿ ಆಟಗಾರನ ಮೇಲೆ ಇದೇ ರೀತಿಯ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

 ನಗರ ಸಿಸಿಬಿ ಪೊಲೀಸರಿಂದ ಅಸ್ಸಾಂನ ಬೋಡಾ ಉಗ್ರರ ಬಂಧನ

ಭೂತಾನ್ ಮೂಲದ ಮೂವರು ಉಗ್ರರನ್ನು ಬೆಂಗಳೂರು ಸಿಸಿಬಿ ಪೊಲೀಸರು ನಗರದ ಅವಲಹಳ್ಳಿಯಲ್ಲಿ ಬುಧವಾರ ಬಂಧಿಸಿದ್ದಾರೆ. ಅಪಹರಣ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದ ಬೊಬೇನ್ ಮುಶಾಯ್(43), ಚೆಲ್ಸನ್(25) ನರ್ಜಾರಿ(30) ಎಂಬ ಆರೋಪಿಗಳು ಇಲ್ಲಿನ ಕಾರ್ಮಿಕರ ಶೆಡ್ ಒಂದರಲ್ಲಿ ತಲೆಮರೆಸಿಕೊಂಡಿದ್ದರು. ಇವರಲ್ಲಿ ಒಬ್ಬ ಬೋಡಾ ಉಗ್ರ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರ ಮಾಹಿತಿಗೆ ವಿಚಾರಣೆ ನಡೆಯಲಿದೆ.

ಭೂತಾನ್ ಮೂಲದ ಉದ್ಯಮಿಯೊಬ್ಬರ ಪುತ್ರನಾದ ಅಜಿತ್ ರಾಯ್ ಮತ್ತು ಮನೆ ಕೆಲಸದಾಳಾದ ಬಲೂ ಬಹುದೂರ್ ಎಂಬುವವರನ್ನು ಫೆಬ್ರವರಿ 22 ರಂದು ಅಪಹರಿಸಿದ್ದರು. ಭೂತಾನ್ ಗಡಿ ಮೂಲಕ ಒತ್ತೆಯಾಳುಗಳನ್ನು ಅಸ್ಸಾಂಗೆ ಕರೆತಂದು, ಇಲ್ಲಿನ ಚಿರಾಂಗ್ ಜಿಲ್ಲೆಯ ಅರಣ್ಯದಲ್ಲಿ ಇರಿಸಿ ಉದ್ಯಮಿಯಿಂದ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. 5 ದಿನಗಳ ನಂತರ ಹಣ ಪಡೆದು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಈ ಪ್ರಕರಣವನ್ನು ಬೆನ್ನಟ್ಟಿದ ಅಸ್ಸಾಂ ಪೊಲೀಸರು ಕೆಲವು ದಿನಗಳ ಹಿಂದೆ 5 ಮಂದಿಯನ್ನು ಬಂಧಿಸಿದ್ದರು. ಈ ಬಂಧಿತರಿಂದ ಅಸ್ಸಾಂ ಪೊಲೀಸರು ಕಲೆ ಹಾಕಿದ ಮಾಹಿತಿ ಸಹಾಯದಿಂದ ನಗರ ಸಿಸಿಬಿ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ.

Leave a Reply