ಆಧಾರ್ ವಿರುದ್ಧ ಗುಡುಗಿದೆ ಕೈ, ನಂದನ್ ನಿಲೇಕಣಿ ಮಾತ್ರ ಹೇಳ್ತಿದಾರೆ ಸೈ!

ಡಿಜಿಟಲ್ ಕನ್ನಡ ಟೀಮ್

ಲೋಕಸಭೆಯಲ್ಲಿ ಆಧಾರ್ ವಿಧೇಯಕ ಪಾಸಾಗಿದೆ. ಇದನ್ನು ಹಣಕಾಸು ವಿಧೇಯಕದ ರೂಪದಲ್ಲಿ ಮಂಡಿಸಿ, ರಾಜ್ಯಸಭೆ ಶಿಫಾರಸುಗಳನ್ನು ಕಡೆಗಣಿಸಿ ಕಾನೂನಾಗಿ ತರುತ್ತಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಭಾರೀ ಪ್ರತಿರೋಧ ವ್ಯಕ್ತಪಡಿಸಿದೆ. ಹಣಕಾಸು ವಿಧೇಯಕ ರಾಜ್ಯಸಭೆಯಲ್ಲಿ ಅನುಮೋದನೆಗೊಳ್ಳುವುದು ಬೇಕಿಲ್ಲ, ಲೋಕಸಭೆಯಲ್ಲಿ ಪಾಸಾದರೆ ಮುಗಿಯಿತು. ಈ ನಿಯಮ ಉಪಯೋಗಿಸಿಕೊಂಡು ರಾಜ್ಯಸಭೆಯಲ್ಲಿ ತನಗಿರುವ ಅಲ್ಪಮತವನ್ನು ಬಿಜೆಪಿ ಜೀಕಿಕೊಂಡಿದೆ ಅಂತ ಕಾಂಗ್ರೆಸ್ ನ ತಕರಾರು.

ಸಬ್ಸಿಡಿ ಹಣವನ್ನು ಫಲಾನುಭವಿಗೆ ನೇರವಾಗಿ ತಲುಪಿಸಲು, ಹಣಕಾಸು ಪಾರದರ್ಶಕತೆ ತರಲು ಆಧಾರ್ ಸಂಖ್ಯೆ ಬಳಸಿಕೊಳ್ಳಲಾಗುತ್ತದೆ ಎನ್ನುವ ಮೂಲಕ ಸರ್ಕಾರ ಇದನ್ನು ಹಣಕಾಸು ವಿಧೇಯಕವನ್ನಾಗಿ ನೋಡುತ್ತಿದ್ದರೂ, ಇಲ್ಲಿ ನಾಗರಿಕರ ಗುರುತು ಸಂಗ್ರಹಿಸುವುದರಿಂದ ವೈಯಕ್ತಿಕ ಗೌಪ್ಯತೆಯ ಪ್ರಶ್ನೆಯಿದೆ ಎಂಬುದು ಕಾಂಗ್ರೆಸ್ ವಾದ. ಈ ಗೌಪ್ಯತೆ ಕಾಪಾಡುವುದಕ್ಕೆ ತಕ್ಕ ಕ್ರಮಗಳನ್ನು ಅಳವಡಿಸಿದ್ದೇವೆ ಅನ್ನೋದು ಬಿಜೆಪಿ ಪ್ರತಿವಾದ.

ಆದರೆ ಈ ಹಿಂದಿನ ಆಧಾರ್ ಪ್ರಾಧಿಕಾರದಲ್ಲಿ ಅಧ್ಯಕ್ಷರಾಗಿದ್ದ ನಂದನ್ ನೀಲೇಕಣಿ ಮಾತ್ರ, ‘ಎನ್ ಡಿ ಎ ರೂಪಿಸಿರುವ ಈಗಿನ ಆಧಾರ್ ವಿಧೇಯಕದಲ್ಲಿ ಗೌಪ್ಯತೆ ಕಾಪಾಡಲು ಹಿಂದಿನ ಯುಪಿಎಗಿಂತ ಉತ್ತಮ ಕ್ರಮಗಳನ್ನು ಕೈಗೊಳ್ಳಲಾಗಿದೆ.’ ಎಂದಿದ್ದಾರೆ.

ನೀಲೇಕಣಿ ಮಾತು ಮುಖ್ಯವಾಗೋದು ಏಕೆ ಅಂದ್ರೆ ಇದೇ ವಿಷಯದಲ್ಲಿ ಅವರು ಈ ಹಿಂದೆ ಬಿಜೆಪಿಯಿಂದ ಟೀಕೆಗೆ ಒಳಗಾಗಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗಲೂ, ಆಧಾರ್ ಎಂಬ ದುಂದುವೆಚ್ಚದ ಯೋಜನೆ ರೂಪಿಸಲಾಗಿದೆ ಎಂದೇ ಅವರ ವಿರುದ್ಧ ಬಿಜೆಪಿ ವ್ಯಾಪಕ ಪ್ರಚಾರ ಮಾಡಿತ್ತು.

ಇವೆಲ್ಲ ಏನೇ ಇದ್ದರೂ, ಈಗ ನಂದನ್ ನೀಲೇಕಣಿ ಬಿಜೆಪಿಯ ಆಧಾರ್ ವಿಧೇಯಕವನ್ನು ಪ್ರಶಂಸಿಸಿದ್ದಾರೆ. ರಾಜಕೀಯವಾಗಿ ಕಾಂಗ್ರೆಸ್ ನಲ್ಲಿ ಅವರಿಗೇನೂ ಸ್ಕೋಪ್ ಸಿಗಲಿಲ್ಲ ಎಂಬುದು ನಿಜವೇ ಆದರೂ, ‘ನಾನು ಪ್ರಾರಂಭಿಸಿದ ಯೋಜನೆಯನ್ನೇ ಹೈಜಾಕ್ ಮಾಡಿದ್ದಾರೆ. ಆಗ ಸುಮ್ಮನೇ ಟೀಕಿಸಿದರು’ ಎಂಬ ಧಾಟಿಯ ಯಾವ ಮಾತುಗಳನ್ನೂ ಆಡದಿರೋದೇ ವಿಶೇಷ.

ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಮಾತ್ರವೇ ಆಧಾರ್ ಯೋಜನೆ ಅಡಿಯಲ್ಲಿ ಸಂಗ್ರಹವಾದ ಮಾಹಿತಿ ಬಹಿರಂಗಗೊಳಿಸಬಹುದು ಎಂಬ ನಿಯಮ ವಿಧೇಯಕದಲ್ಲಿದೆ. ರಾಷ್ಟ್ರೀಯ ಭದ್ರತೆ ಎಂಬ ಪದವನ್ನು ಹೇಗಾದರೂ ಬಳಸಿಕೊಳ್ಳಬಹುದಾದ ಅಪಾಯವಿದೆ ಅಂತ ಕಾಂಗ್ರೆಸ್ ಪ್ರತಿರೋಧ ತೋರಿತು. ಆದರೆ ನೀಲೇಕಣಿ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡುತ್ತ ಹೇಳಿರುವುದು- ‘ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಮಾಹಿತಿ ಬಹಿರಂಗದ ಆಯ್ಕೆ ಜಗತ್ತಿನಾದ್ಯಂತ ರೂಢಿಯಲ್ಲಿರುವ ಸಂಗತಿ. ಪ್ರಶ್ನೆಯಿರೋದು ಇದರ ದುರುಪಯೋಗ ಆಗಬಹುದೇ ಅಂತ. ಪ್ರಸ್ತುತ ಆಧಾರ್ ವಿಧೇಯಕದಲ್ಲಿ ದುರುಪಯೋಗ ತಡೆಯುವ ಎಲ್ಲ ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ.’

ಹಾಗೆ ನೋಡಿದರೆ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸಂಗ್ರಹಿಸಿದ ಮಾಹಿತಿ ಹಂಚಿಕೊಳ್ಳಬಹುದೆಂಬ ಆಯ್ಕೆ, 2010ರ ವಿಶಿಷ್ಟ ಗುರುತು ಪ್ರಾಧಿಕಾರದ ನಿಯಮದಲ್ಲೂ ಇತ್ತು. ಆ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿಯು ಸಂಬಂಧಪಟ್ಟ ಸಚಿವರ ಅನುಮತಿ ಪಡೆಯಬೇಕಿತ್ತು. ಆದರೆ ಆಧಾರ್- 2016ರ ಕಾಯ್ದೆಯಲ್ಲಿ ಸಂಪುಟ ಕಾರ್ಯದರ್ಶಿ ನೇತೃತ್ವದ ಪರಿಶೀಲನಾ ಸಮಿತಿ ಈ ಸಂಬಂಧ ನಿರ್ಣಯ ಕೈಗೊಳ್ಳುತ್ತದೆ. ತಂಡದಲ್ಲಿ ಕಾನೂನು ವ್ಯವಹಾರ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳಿರುತ್ತಾರೆ.

Leave a Reply