ಇಟಲಿ ಸೂಪರ್ ಮಾರ್ಕೆಟ್ ನಲ್ಲಿ ಮಾರಾಟವಾಗದ ಆಹಾರ ಚೆಲ್ಲಂಗಿಲ್ಲ, ಇಂಥ ಬುದ್ಧಿ ನಮ್ಗೂ ಬೇಕಲ್ಲ?

ಡಿಜಿಟಲ್ ಕನ್ನಡ ಟೀಮ್

ನಮ್ಮ ದೇಶದ ಹಲವು ಸರ್ಕಾರಿ ಗೋದಾಮಿನಲ್ಲೇ ಹೆಚ್ಚು ಪ್ರಮಾಣದ ಅಕ್ಕಿ ಹಾಗೂ ಇತರೆ ಆಹಾರ ಪ್ರದಾರ್ಥ ಮುಗ್ಗಲು ಹಿಡಿಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿ ನೋಡಿದ್ದೇವೆ. ಇದರ ಮಧ್ಯೆ ನಮ್ಮ ಸರ್ಕಾರಗಳು ಆಹಾರ ಭದ್ರತೆ ಕಾಯ್ದೆಯ ಬಗ್ಗೆ ಹರಸಾಹಸ ಪಡುತ್ತಿರುವುದನ್ನು ನೋಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಸ್ಫೂರ್ತಿಯಾಗಿ ನಿಲ್ಲಬಹುದಾದದ್ದು, ಇಟಲಿಯ ಸೂತ್ರ.

ಹೌದು.. ಇಟಲಿ ಈಗ ಆಹಾರ ನಿರ್ವಹಣೆಯ ಕುರಿತು ಹೊಸ ಕಾನೂನು ಪರಿಚಯಿಸಲು ಮುಂದಾಗಿದೆ. ಅದು ಇತರೆ ದೇಶಗಳಿಗೂ ಸ್ಫೂರ್ತಿಯಾಗುವಂತದ್ದು. ಅದೇನಪ್ಪಾ ಅಂದ್ರೆ, ಈ ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟವಾಗದೇ ವ್ಯರ್ಥವಾಗುವ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ದಾನ ಮಾಡುವುದು. ಅಂದರೆ, ಆ ಪದಾರ್ಥ ಮಾರಟವಾಗದೇ ಉಳಿದಾಗ ಅದು ಕೆಡುವ ಮುನ್ನ ಅಗತ್ಯ ಇರುವವರಿಗೆ ದಾನವಾಗಿ ನೀಡುವುದು..! ಹೌದಲ್ಲ, ಈ ಕಾನೂನು ಎಷ್ಟು ಚೆನ್ನಾಗಿದೆ.. ಮಾರಾಟವಾಗದ ಆಹಾರವನ್ನು ಕೊಳೆಸಿ ತಿಪ್ಪೆಗೆ ಎಸೆಯುವ ಬದಲಿಗೆ ಅಗತ್ಯವಿರುವ ಬಡವರಿಗೆ ನೀಡುವುದು ಎಂಥಾ ಉತ್ತಮ ಆಲೋಚನೆ ಎಂದು ನಿಮಗನಿಸುವುದು ಸಹಜ.

ಈ ರೀತಿಯ ನಿರ್ಧಾರ ಇಟಲಿಯಲ್ಲಿ ಮೊದಲಲ್ಲ. ಕಳೆದ ತಿಂಗಳು ಯುರೋಪ್ ನ ಮತ್ತೊಂದು ರಾಷ್ಟ್ರವಾಗಿರುವ ಫ್ರಾನ್ಸ್ ನಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇಲ್ಲಿ ಸೂಪರ್ ಮಾರ್ಕೆಟ್ ಗಳಲ್ಲಿ ಆಹಾರ ಎಸೆಯುವುದನ್ನು ನಿಷೇಧಿಸಿದೆ. ಇಲ್ಲಿ ಫ್ರೆಂಚ್ ಕಾನೂನಿಗೂ ಹಾಗೂ ಇಟಲಿ ತರಲು ಹೊರಟಿರುವ ಕಾನೂನಿಗೂ ಸ್ವಲ್ಪ ವ್ಯತ್ಯಾಸವಿದೆ. ಅದು, ಫ್ರಾನ್ಸ್ ನಲ್ಲಿ ಸೂಪರ್ ಮಾರ್ಕೆಟ್ ಗಳು ಆಹಾರ ಎಸೆದರೆ ದಂಡ ವಿಧಿಸಲಾಗುತ್ತದೆ. ಇನ್ನು ಇಟಲಿ, ದಾನ ಮಾಡಲು ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. ಅಂದರೆ, ಆಹಾರ ಪದಾರ್ಥ ಖರ್ಚಾಗುತ್ತಿಲ್ಲ ಅಂತ ಗೊತ್ತಾದಾಗ, ಅದು ಅಂತಿಮ ದಿನಾಂಕ ಮೀರುವುದಕ್ಕೂ ಮುನ್ನ ದಾನ ಮಾಡಿದ್ದೇ ಆದರೆ ತೆರಿಗೆ ವಿನಾಯ್ತಿಯಂಥ ಸೌಲಭ್ಯಗಳು ಸಿಗಲಿವೆ.

ಇನ್ನು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲೂ ಈ ಪದ್ಧತಿ ಜಾರಿಗೆ ತರಲು ಮುಂದಾಗಿದ್ದು, ದಾನ ಮಾಡಲು ಮುಂದಾಗುವವರು ಆಹಾರ ಪದಾರ್ಥ ದಾನ ಮಾಡುವ ಬಗ್ಗೆ ಮುಂಚಿತವಾಗಿ ಘೋಷಿಸಬೇಕಿದೆ.

ಅಲ್ಲದೆ ಈ ರೀತಿಯ ದಾನ ನೀಡುವ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿನಾಯಿತಿಯನ್ನು ನೀಡಲು ನಿರ್ಧರಿಸಲಾಗಿದೆ. ಪರಿಶೀಲನೆಯಲ್ಲಿರುವ ಈ ಆಹಾರ ಭದ್ರತೆ ಕಾಯ್ದೆ 17 ಅನುಚ್ಛೇದಗಳನ್ನು ಹೊಂದಿದೆ. ಈ ನಿಯಮದ ಮೂಲಕ 550 ಮಿಲಿಯನ್ ಟನ್ ಗಳಷ್ಟು ಆಹಾರ ಹಾಳಾಗುವುದನ್ನು ತಪ್ಪಿಸಬಹುದಾಗಿದ್ದು, 2016ರ ಮುಕ್ತಾಯದ ವೇಳೆಗೆ 1 ಬಿಲಿಯನ್ ಟನ್ ನಷ್ಟು ಗುರಿ ಮುಟ್ಟುವ ನಿರೀಕ್ಷೆ ಇದೆ ಎಂದು ಇಟಲಿ ಕೃಷಿ ಸಚಿವ ಮೌರಿಜಿಯೊ ಮಾರ್ಟೀನಾ ತಿಳಿಸಿದ್ದಾರೆ.

ನಮ್ಮಲ್ಲಿ ಕೇವಲ ಸರ್ಕಾರಿ ಗೋದಾಮಿನಲ್ಲಿ ಮಾತ್ರವಲ್ಲ. ಹಲವು ಸಮಾರಂಭಗಳು, ಹೊಟೇಲ್ ಗಳು ಮನೆಗಳು, ಮಾಲ್, ಸೂಪರ್ ಮಾರ್ಕೆಟ್ ಹೀಗೆ ಹಲವು ಕಡೆ ಆಹಾರ ಮನಸೋ ಇಚ್ಛೆ ಹಾಳಾಗುತ್ತಿದೆ. ಹಾಗಾಗಿ ಭಾರತಕ್ಕೂ ಈ ರೀತಿಯಾದ ಕಾನೂನು ಬಂದರೆ ಉತ್ತಮ. ಆಗ ಒಪ್ಪತ್ತಿನ ಊಟಕ್ಕೂ ಪರದಾಡುವ ಅವೆಷ್ಟೋ ಹೊಟ್ಟೆಗೆ ಅನ್ನ ಸೇರಲು ಸಾಧ್ಯ.

Leave a Reply