ಟಿವಿಯಲ್ಲಿ ಬರೀ ನೆಗೆಟಿವ್ ತೋರಿಸ್ತಾರೆ ಎಂದು ದೂರುವ ನಾವೇ ಅಲ್ವೇ ಕೆಟ್ಟದ್ದಕ್ಕೆ ಪ್ರೋತ್ಸಾಹಿಸ್ತಿರೋದು?

author-geetha‘ಮೇಡಂ !.. ನಮಸ್ಕಾರ.. ’

‘ನಮಸ್ಕಾರ’

‘ನಾಳೆ ಸಂಜೆ ಐದು ಗಂಟೆದೆ ಡಿಸ್ಕಷನ್ ಮೇಡಂ..’

‘ಟಾಪಿಕ್ ಏನಪ್ಪ?’

‘ಅದೇ ಮೇಡಂ.. ದರ್ಶನ್.. ಅವರ ಹೆಂಡತಿಯ ಜಗಳ.. ಸುದೀಪ್ ಡೈವೋರ್ಸ್ ತೊಗೊಂಡ್ರಲ್ಲಾ..’

‘ನಾನು ಬರೋದಿಲ್ಲ.. ಅದು ಅವರ ವೈಯಕ್ತಿಕ ವಿಷಯ.. ಬೇರೆ ವಿಷಯ ಚರ್ಚೆಗೆ ಬಂದಾಗ ಕರೆಯಿರಿ..’

ಫೋನಿಟ್ಟು ಕುಳಿತೆ. ಕೆಲವು ಬಾರಿ ಸಾರ್ವಜನಿಕ ವಿಷಯ, ಸಮಸ್ಯೆ ಎಂದು ಕರೆದಿರುತ್ತಾರೆ. ಚಾನೆಲ್ಲಿಗೆ ಹೋಗಿ ಕ್ಯಾಮೆರಾ ಮುಂದೆ ಕುಳಿತು, ಮೈಕ್ ಹಾಕಿಕೊಂಡ ಮೇಲೆ ಗೊತ್ತಾಗುತ್ತದೆ ವಿಷಯ ವೈಯಕ್ತಿಕವೇ ಅಂತ. ಎದ್ದು ಬರಲು ಆಗದೇ, ಪೂರಾ ವಿಷಯ ತಿಳಿಯದೆ, ಆ ಸಮಯಕ್ಕೆ ತೋಚಿದ ಎರಡು ಮಾತಾಡಿ ಎದ್ದು ಬಂದಿದ್ದೂ ಇದೆ.

ಪರಿಚಯ ಕೂಡ ಅಷ್ಟೇ. ನಾನು ಗೀತಾ ಬಿ.ಯು ಲೇಖಕಿ ಎಂದು ಗೊತ್ತಿದ್ದು ಕರೆದಿರುತ್ತಾರೆ ಎಂದು ಭಾವಿಸಿ ಹೋಗಿರುತ್ತೇನೆ. ಒಮ್ಮೆ ಡಾ. ಗೀತಾ ಬಿ.ಯು ಎನ್ನುತ್ತಾರೆ.. ಮತ್ತೊಮ್ಮೆ ಮಹಿಳಾವಾದಿ ಗೀತಾ ಬಿ.ಯು ಎನ್ನುತ್ತಾರೆ.. ಅವರಿಗೆ ತೋಚಿದಂತೆ ಪರಿಚಯ..!

ನಾನು ಲೇಖಕಿ ಅಷ್ಟೇ.. ಡಾಕ್ಟರ್ ಅಲ್ಲ. ಡಾಕ್ಟರೇಟ್ ಪಡೆದಿಲ್ಲ.. ಲಾ ಓದಿಲ್ಲ.. ಎಂದು ಹೇಳಲಾಗುವುದಿಲ್ಲ. ಸುಮ್ಮನೆ ನಕ್ಕು ಮಾತು ಮುಂದುವರಿಸಬೇಕು. ಇದು ಬಿಡಿ.

‘ಸುದ್ದಿ ಬಿತ್ತರಿಸುವ ಚಾನೆಲ್ಲುಗಳೇ ಏಳೆಂಟು. ಕನಿಷ್ಠ ಹತ್ತುಗಂಟೆಯಾದರೂ ಸುದ್ದಿ, ವಾರ್ತೆ, ಚರ್ಚೆ ಕೊಡುತ್ತಲೇ ಇರಬೇಕು. ಹಾಗಾಗಿ ಎಲ್ಲರ ಮನೆ ಬೆಡ್ ರೂಮಿಗೂ ನುಗ್ಗುತ್ತಾರೆ. ಎಲ್ಲರ ಜಗಳದಲ್ಲೂ ಮೂಗು ತೂರಿಸುತ್ತಾರೆ. ತೀರ್ಪು ಕೊಡುತ್ತಾರೆ. ಶಿಕ್ಷೆಯನ್ನು ವಿಧಿಸಿಬಿಡ್ತಾರೆ..’

ಗೊಣಗಿದರು ನನ್ನ ಸ್ನೇಹಿತರೊಬ್ಬರು. ಹೌದೇ? ಹಿಂದೆ ಹೀಗಿರಲಿಲ್ಲವೇ? ಇಂದು, ನೆನ್ನೆಯಲ್ಲ ಹಲವು ವರ್ಷಗಳ ಹಿಂದೆ, ಈ ಚಾನೆಲ್ಲುಗಳು ಇಲ್ಲದೆ ಇದ್ದ ಕಾಲ.. ಪತ್ರಿಕೆಗಳು ರಾರಾಜಿಸುತ್ತಿದ್ದ ಕಾಲಕ್ಕೆ ಹೋಗಿ ಕಣ್ಣಾಡಿಸಿ, ಕಿವಿಯಗಲಿಸಿ ನಿಂತು ಯೋಚಿಸಿ.

ಫಿಲ್ಮಿ ಸುದ್ದಿ, ಗಾಸಿಪ್ಪು, ಕ್ರೈಮು.. ಅದಕ್ಕೇ ಪುಟಗಳು ಮೀಸಲಿದ್ದವು ದಿನಪತ್ರಿಕೆಗಳಲ್ಲಿ. ಈ ಮೂರನ್ನೇ ಬಂಡವಾಳ ಮಾಡಿಕೊಂಡು ರಾರಾಜಿಸಿದ ದಿನಪತ್ರಿಕೆಗಳನ್ನು ಹಿಂದಕ್ಕೆ ಹಾಕಿದ ವಾರಪತ್ರಿಕೆಗಳು ಸೂಪರ್ ಸಕ್ಸಸ್ ಆದವು. ಜೊತೆಗೆ ಅಫೇರು, ಸೆಕ್ಸು, ಕೊಲೆ, ಹೊಲಸು ರಾಜಕೀಯದ ಸುದ್ದಿ! ‘ಗುಪ್ತ ಸಮಾಲೋಚನೆ’ಯಿಂದಲೇ ನಡೆದ ಪತ್ರಿಕೆಯೂ ಇತ್ತು.

ಲಕ್ಷಾಂತರ ರುಪಾಯಿ ದಾನ ಮಾಡಿದವರ ಸುದ್ದಿಗಿಂಥ, ಲಕ್ಷಾಂತರ ರುಪಾಯಿ ದರೋಡೆ ಮಾಡಿದವರ ಸುದ್ದಿಯೇ ಪ್ರಮುಖ.. ಅಂದೂ ಅಷ್ಟೇ, ಇಂದೂ ಅಷ್ಟೇ.

ಅಂದು ಅಕ್ಷರಗಳಲ್ಲಿ ಬಂದದ್ದು ಮರೆತು ಹೋಗಿದೆ.. ಅಥವಾ ಮನಃಪಟಲದಲ್ಲಿ ಹಿಂದಕ್ಕೆ ಸರಿದಿದೆ.. ಇಂದು ಟಿ.ವಿಯಲ್ಲಿ, ನಮ್ಮ ಮನೆಯ ಹಾಲ್ ನಲ್ಲಿ ಅಥವಾ ಬೆಡ್ ರೂಮಿನಲ್ಲಿ ಬರುತ್ತಿರುವ ಸುದ್ದಿ ಢಾಳಾಗಿ ಗೋಚರಿಸುತ್ತಿದೆ. ಚಾನೆಲ್ ಬದಲಿಸಿ ಹಾಡು, ಪೂಜೆ, ಶ್ಲೋಕ, ನೋಡಬಹುದು ಕೇಳಬಹುದು. ಹಾಗೇ ಮಾಡುವುದಿಲ್ಲವಲ್ಲ ನಾವು. ನಮಗೆ ದರ್ಶನ್ ಬೇಕು.. ಅವನು ಅವನ ಹೆಂಡತಿಗೆ ಹೊಡೆದರೆ.. ಹೊಡೆದಿದ್ದು ಕಾಣಲಿಲ್ಲವಲ್ಲ ಕಂಡಿದ್ದು ಬರೀ ಅವಳು ಕೈಗೆ ಕಟ್ಟಿಕೊಂಡಿದ್ದ ಬ್ಯಾಂಡೇಜು ಎಂಬ ಬೇಸರ! ಸುದೀಪ್ ಅವನ ಹೆಂಡತಿಗೆ ಹತ್ತೊಂಬತ್ತು ಕೋಟಿ ಕೊಟ್ಟಿದ್ದು, ನಮಗೆ ಕೊಟ್ಟಂತೆ ಸಂತೋಷದಿಂದ ಆ ಸುದ್ದಿ ನೋಡುತ್ತೇವೆ, ಹಂಚಿಕೊಳ್ಳುತ್ತೇವೆ. ಶೃತಿ ಮನೆ ಕೆಲಸದವಳು ಚಾನೆಲ್ಲಿಗೆ ಬಂದು ಕೂತರೆ ಅವಳ ಮಾತು ಕೇಳುತ್ತೇವೆ. ನಿತ್ಯಾನಂದರ ಗರ್ಲ್ ಫ್ರೆಂಡ್ಸು, ರಾಮಚಂದ್ರಪುರ ಮಠದ ಸ್ವಾಮಿಗಳ ಅಫೇರು, ಸದಾನಂದ ಗೌಡರ ಮಗನ ಪ್ರತಾಪ, ಆ ಹುಡುಗಿ ಚಾನೆಲ್ಲಿನಲ್ಲಿ ಕುಳಿತು ‘ನಾನು ನನ್ನ ಮೊಬೈಲ್ ಫೋನ್ ಮಾತುಗಳನ್ನು ಸದಾ ರೆಕಾರ್ಡು ಮಾಡುತ್ತೇನೆ.. ಎಲ್ಲರೂ ಮಾಡುತ್ತಾರಲ್ಲವೇ’ ಎಂದು ಮುಗ್ಧವಾಗಿ ಪ್ರಶ್ನಿಸಿದಾಗ ನಮ್ಮ ಮೊಬೈಲ್ ನಲ್ಲೂ ಆ ಸೌಲಭ್ಯ ಇದೆಯೇ ಎಂದು ಹುಡುಕುತ್ತೇವೆ.

ಇಷ್ಟೆಲ್ಲಾ ಉದ್ದಕ್ಕೆ ಯಾಕೆ ಹೇಳಿದೆ ಅಂದರೆ, ಮೂಲಭೂತವಾಗಿ ಮನುಷ್ಯ ಸಂಘಜೀವಿ. ಅವನಿಗೆ/ಳಿಗೆ ಬೇರೆ ಜನರ ಅದರಲ್ಲೂ ಅವನು ಆರಾಧಿಸುವವರ ಅಥವಾ ಅವನು ಬಲಾಢ್ಯರು ಎಂದುಕೊಳ್ಳುವ ಜನರ ಒಳ ಕಥೆಗಳು ಬೇಕು. ಬೇರೆಯವರ ವೈಯಕ್ತಿಕ ವಿಷಯಗಳ ಬಗ್ಗೆ ಅವನಿಗೆ ಆಸಕ್ತಿ. ಕೆಟ್ಟ ಸುದ್ದಿಯಾದರಂತೂ ಎಲ್ಲಿಲ್ಲದ ಆಸಕ್ತಿ. ತನ್ನದನ್ನೂ ಇತರರೊಡನೆ ಹಂಚಿಕೊಳ್ಳುವ ಚಪಲ. ಬಂಧು ಬಳಗದಲ್ಲಿಯೇ ಹುಟ್ಟಿಗೆ ಹೋಗಿ ಅವರ ಸಂತಸದಲ್ಲಿ ಭಾಗಿಯಾಗದಿದ್ದರೂ, ಸಾವಿಗೆ ಹೋಗಿ ಸಂತಾಪ ವ್ಯಕ್ತಪಡಿಸಿಬರುತ್ತಾರೆ. ಅಪಘಾತ, ಕೊಲೆಯಾದರಂತೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ಹೋಗುತ್ತಾರೆ. ಅಪರಿಚಿತರೋ, ಪ್ರಖ್ಯಾತರೋ.. ಕೊಲೆಯಾದರಂತೂ ಇನ್ನು ಹೆಚ್ಚಿನ ಆಸಕ್ತಿ.

ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿಯೇ ನೋಡಿದೆವಲ್ಲಾ.. ರಸ್ತೆಯಲ್ಲಿ ಅಪಘಾತದಲ್ಲಿ ಅರ್ಧ ತುಂಡಾಗಿ ಬಿದ್ದವನಿಗೆ ಸಹಾಯ ಮಾಡುವುದಕ್ಕಿಂತ ತಮ್ಮ ಮೊಬೈಲುಗಳಲ್ಲಿ ಫೋಟೋ ತೆಗೆಯುತ್ತಿದ್ದವರನ್ನು..! ನಡುರಸ್ತೆಯಲ್ಲಿ ಹೆಣ್ಣಿನ ರೇಪ್ (‘ಮಾನಭಂಗ’ ಪದದ ಬಳಕೆ ನನಗೆ ಸರಿ ಎನಿಸುವುದಿಲ್ಲ. ಮಾನ ಹೋಗಬೇಕಿರುವುದು ರೇಪ್ ಮಾಡುವವನದು) ಆದರೂ ಮೊಬೈಲಿನಲ್ಲಿ ಕ್ಯಾಮೆರಾ ಆನ್ ಮಾಡಿಕೊಳ್ಳಬಹುದು ನಮ್ಮ ಜನ.

ಸಾರ್ವಜನಿಕ ವಿಷಯಗಳು, ಸಮಸ್ಯೆಗಳು ನಮಗೆ ಆಸಕ್ತಿದಾಯಕವೆನ್ನಿಸುವುದಿಲ್ಲ. ರಸ್ತೆಯಲ್ಲಿ ನಾರುತ್ತಾ ಬಿದ್ದಿರುವ ಕಸ, ಕಾಣೆಯಾಗುತ್ತಿರುವ ಕೆರೆಗಳು, ಮರೆಯಾಗುತ್ತಿರುವ ಪಕ್ಷಿಗಳು, ಮಾಯವಾಗುತ್ತಿರುವ ಕಾಡು.. ಮಾಲಿನ್ಯದಿಂದ ಬಳಲಿ ಬೆಂಡಾಗುತ್ತಿರುವ ನಾವು.. ನಮಗೆ ಬೇಡ. ಬೇಕಿರುವುದು ಸೆಲೆಬ್ರಿಟಿಗಳ ಕಲಹ, ವ್ಯಾಜ್ಯ, ಗಾಸಿಪ್.

ಅವಕಾಶ ಸಿಕ್ಕರೆ ತಮ್ಮ ವೈಯಕ್ತಿಕ ಸಮಸ್ಯೆಗಳನ್ನೂ ಚಾನೆಲ್ಲಿಗೆ ತೆಗೆದುಕೊಂಡು ಹೋಗಿ ಟಾಂಟಾಂ.. ಹೊಡೆದ ಸಾಮಾನ್ಯ ಜನರನ್ನೂ ನೋಡುತ್ತಿದ್ದೇವೆ. ನಮಗೆ ಇತರರ ವೈಯಕ್ತಿಕ ಬದುಕಿನಲ್ಲಿ ಇಣುಕಲು ಇಷ್ಟ. ನಮ್ಮದನ್ನು ಹೇಳಿಕೊಳ್ಳಲೂ ಅಷ್ಟೇ ಇಷ್ಟ. ಸಂಬಂಧಗಳು ಹಳಸಿದಾಗ ಪೊಲೀಸ್ ಠಾಣೆ ಅಥವಾ ಕೋರ್ಟಿನ ಮೆಟ್ಟಿಲು ಹತ್ತುವುದಕ್ಕೆ ಮುನ್ನ ಪತ್ರಿಕಾ ಕಚೇರಿ ಅಥವಾ ಚಾನೆಲ್ಲೊಂದರ ಮೆಟ್ಟಿಲು ಹತ್ತಿರುತ್ತಾರೆ. ಹೆದರಿಸುವುದಕ್ಕೆ ಅದೊಂದು ಅಸ್ತ್ರ ಬೇರೆ ಆಗಿದೆ.

ವಾಹಿನಿಯೊಂದರಲ್ಲಿ ಹೆಸರಾಂತ ನಟಿಯೊಬ್ಬರು ನಡೆಸುತ್ತಿದ್ದ ಕಾರ್ಯಕ್ರಮವೊಂದರಲ್ಲಿ ನಾನೂ ಭಾಗಿಯಾಗಿದ್ದೆ. ತನ್ನ ತಾಪತ್ರಯ, ತನ್ನ ದುಃಖಭರಿತ ಕಥೆ ಹೇಳಲು 23-24 ವರ್ಷದ ಹೆಂಗಸೊಬ್ಬಳು ಬಂದಿದ್ದಳು. ಅವಳ ಅಪ್ಪ- ಅಮ್ಮ ಅವಳನ್ನು ಮನೆಯಿಂದ ಹೊರಗೆ ಹಾಕಿದ್ದರು ಅಥವಾ ಅವಳೇ ಅವಳ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಅವಳು ಬಸುರಿಯಾದ ಮೇಲೆ ಜವಾಬ್ದಾರಿ ಹೊರಲು ಸಿದ್ಧನಿರದ ಅವನು ಅವಳನ್ನು ಬಿಟ್ಟು ಹೋಗಿದ್ದ. ಅವಳ ತಂದೆ ತಾಯಿ ಅವಳನ್ನು ಮನೆಗೆ ಸೇರಿಸಿರಲಿಲ್ಲ. ಯಾರೋ ಅವಳಿಗೆ ಆಶ್ರಮವೊಂದರಲ್ಲಿ ಆಶ್ರಯ ಕೊಟ್ಟಿದ್ದರು. ಚೆಂದದ ಸೀರೆಯನ್ನು ಅಂದವಾಗಿ ಉಟ್ಟುಕೊಂಡು, ಪೂರಾ ಮೇಕ್ ಅಪ್ ಮಾಡಿಕೊಂಡು ಬಂದಿದ್ದಳು ಅವಳು. “ಗ್ಲೀಸರೀನ್ (ಕಣ್ಣೀರು ತರಿಸುವ eye drops) ಇಲ್ಲಾ ಸರ್ ?” ಎಂದು ಮೇಕ್ ಅಪ್ ಮ್ಯಾನನ್ನು ವಿಚಾರಿಸುತ್ತಿದ್ದಳು.. ಅವಳ ಕಥೆ ಹೇಳಲು ಅವಳಿಗೆ ಗ್ಲೀಸರೀನ್ ಬೇಕಿತ್ತು. ನಾನು ತಬ್ಬಿಬ್ಬು.

‘ಯಥಾ ಪ್ರಜಾ ತಥಾ ರಾಜಾ’ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿದ್ದಂತೆ ಆಳುತ್ತಿರುವವರು. ನೋಟ್ ತೆಗೆದು ಕೊಂಡು ವೋಟ್ ಮಾಡಿದ ಮೇಲೆ ನೋಟುಗಳ ಕಂತೆ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು.

ಬೇರೆಯವರ ವೈಯುಕ್ತಿಕ ವಿಷಯಗಳು ನಮಗೆ ಅತ್ಯಂತ ಆಸಕ್ತಿದಾಯಕವಾಗಿರುವಾಗ ಈ ಚಾನೆಲ್ಲುಗಳು ನಮಗೆ ಅದನ್ನೇ ತೋರಿಸುತ್ತವೆ.. ಅಕ್ಷರಕ್ಕಿಂತ ವಿಷ್ಯುಯಲ್ ಮೀಡಿಯಾದಲ್ಲಿ ರಾಚುವಂತೆ ತೋರಿಸುವುದರಿಂದ ಮುಜುಗರವಾಗುತ್ತದೆ. ಕಾಲಕ್ರಮೇಣ ಸರಿ ಹೋಗುತ್ತದೆ. ಒರಟಾಗುತ್ತಾ  ನಡೆದಿದ್ದೇವೆ.

5 COMMENTS

  1. ಶ್ರೀಮತಿ ಗೀತಾ ಬಿ. ಯು. ಅವರು ಈ ಲೇಖನದ ಲೇಖಕಿ ಅನ್ನುವುದು ಓದುತ್ತಾಹೋದಂತೆ ನನ್ನ ಅರಿವಿಗೆ ಬಂತು.

    ಯಾಕೆ ಅವರ ಹೆಸರನ್ನು ಎಲ್ಲೂ ಪ್ರಕಟಿಸಿಲ್ಲ?

  2. ಕ್ಷಮಿಸಿ, ಲೇಖಕರ ಹೆಸರೊಂದಿಗಿನ ಲೋಗೋ ಬಿಟ್ಟುಹೋಗಿತ್ತು. ಸರಿಪಡಿಸಲಾಗಿದೆ.

  3. Agree with the Author. Human brain is tuned (by us????)to first register negativity. Request people to please visit http://www.indiashining.biz which is primarily aimed at enabling people shift their focus more towards Positive Progress for both themselves and their surrounding.

  4. ‘ಮಾನಭಂಗ ಮಾಡಿಕೊಂಡವನು ‘ ಎನ್ನಬಹುದೇ ?!
    ಅಂಜಲಿ ರಾಮಣ್ಣ

Leave a Reply to ಆತ್ರಾಡಿ ಸುರೇಶ ಹೆಗ್ಡೆ Cancel reply