ನೀವು ತಿಳಿಯಬೇಕಿರೋ ಸುದ್ದಿಗಳು: ಮಲ್ಯ ಬರಲ್ಲ-ಮನೆ ಕೊಳ್ಳೋರಿಲ್ಲ, ಸಚಿವ ಸಂಪುಟದ ನಿರ್ಣಯಗಳು

ಮಲ್ಯ ನಾಳೆ ಬರಲ್ವಂತೆ, ಮುಂಬೈ ಮನೆ ಕೊಳ್ಳೋರಿಲ್ಲ..

ಮದ್ಯದ ದೊರೆ ವಿಜಯ್ ಮಲ್ಯಗೆ ಸಂಬಂಧಿಸಿದಂತೆ ಗುರುವಾರ ಹಲವು ವಿದ್ಯಾಮಾನಗಳು ನಡೆದಿವೆ. ಆ ಪೈಕಿ ಪ್ರಮುಖ ಅಂಶಗಳು ಹೀಗಿವೆ.

 • 2009ರಲ್ಲಿ ಐಡಿಬಿಐ ಬ್ಯಾಂಕಿನಿಂದ ₹900 ಕೋಟಿ ಸಾಲ ಪಡೆದ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಗಾಗಬೇಕಿರುವ ವಿಜಯ್ ಮಲ್ಯ, ನಾಳೆ ಮುಂಬೈಗೆ ಆಗಮಿಸುವುದಿಲ್ಲವಂತೆ. ತನಗೆ ಏಪ್ರಿಲ್ ಮೊದಲ ವಾರದವರೆಗೂ ಕಾಲಾವಕಾಶ ಕೊಡಿ ಎಂದು ಮಲ್ಯ ಜಾರಿ ನಿರ್ದೇಶನಾಲಯಕ್ಕೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
 • ಮುಂಬೈನಲ್ಲಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಮನೆಯನ್ನು ಇ ಆಕ್ಷನ್ ಮೂಲಕ ಹರಾಜು ಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಯತ್ನಿಸಿತು. ಆದರೆ, ಈ ಮನೆಯನ್ನು ಕೊಳ್ಳಲು ಆಸಕ್ತರು ಮುಂದೆ ಬಾರದ ಹಿನ್ನೆಲೆಯಲ್ಲಿ ಈ ಹರಾಜು ಪ್ರಕ್ರಿಯೆ ಫ್ಲಾಪ್ ಆಗಿದೆ. ಈ ಮನೆಯ ಮೂಲ ಬೆಲೆ ₹150 ಕೋಟಿಗೆ ನಿಗದಿ ಪಡಿಸಲಾಗಿತ್ತು. ಅಲ್ಲದೆ ಹರಾಜು ಪ್ರಕ್ರಿಯೆಯಲ್ಲಿ ₹ 5 ಲಕ್ಷ ಹೆಚ್ಚಳಕ್ಕೆ ಸೂಚನೆ ನೀಡಲಾಗಿತ್ತು. ಈ ಮನೆಯ ನೈಜ್ಯ ಮೌಲ್ಯಕ್ಕಿಂತ ಮೂಲಬೆಲೆ ಹೆಚ್ಚಾಗಿದ್ದರಿಂದ ಯಾವುದೇ ಬಿಡ್ ಗಳು ಹರಾಜಿನಲ್ಲಿ ಕಂಡುಬರಲಿಲ್ಲ ಎಂದು ಮೂಲಗಳು ತಿಳಿಸಿವೆ.
 • ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ಸಾಲ ಮರು ಪಾವತಿಸದೇ ಉದ್ದೇಶಪೂರ್ವತ ಸುಸ್ಥಿದಾರನಾಗಿರುವ ವಿಜಯ್ ಮಲ್ಯರನ್ನು ಯುನೈಟೆಡ್ ಬ್ರೇವರಿಸ್ ಮಂಡಳಿಯಿಂದ ಕೆಳಗಿಳಿಯುವಂತೆ ಹೈನೆಕೆನ್ ಸಮೂಹ ಸೂಚನೆ ನೀಡುವ ಸಾಧ್ಯತೆಗಳಿವೆ. 2008ರಲ್ಲಿ ಯುನೈಟೆಡ್ ಬ್ರೇವರಿಸ್ ನಲ್ಲಿ ಶೇ. 37.5 ರಷ್ಟು ಹಕ್ಕು ಹೊಂದಿದ್ದ ಹೈನೆಕೆನ್, ಸ್ಕಾಟಿಷ್ ಮತ್ತು ನ್ಯೂಕಾಸ್ಟೆಲ್ ಅನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಶೇ. 42.4 ರಷ್ಟು ಹಕ್ಕು ಹೆಚ್ಚಿಸಿಕೊಂಡಿತ್ತು. ಈಗ ಮಲ್ಯ ಪರಿಸ್ಥಿತಿಯ ಲಾಭ ಪಡೆದು ಮಾರುಕಟ್ಟೆಯಲ್ಲಿ ಮತ್ತಷ್ಟು ವೇಗವಾಗಿ ಬೆಳೆಯಲು ಚಿಂತನೆ ನಡೆಸಿದೆ. ಹಾಗಾಗಿ ಮಲ್ಯ ಯುಬಿ ಮಂಡಳಿಯಿಂದ ಕೆಳಗಿಳಿಯುವಂತೆ ಸೂಚನೆ ನೀಡಲು ನಿರ್ಧರಿಸಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
 • ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಬೆಂಗಳೂರು ಫ್ರಾಂಚೈಸಿ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕತ್ವಕ್ಕೆ ವಿಜಯ್ ಮಲ್ಯ ರಾಜಿನಾಮೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೆಟ್ ಲಿಮಿಟೆಡ್, ಮಲ್ಯ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ರಾಜಿನಾಮೆ ನೀಡಿರುವುದಾಗಿ ಬಿಸಿಸಿಐಗೆ ಇ ಮೇಲ್ ಕಳುಹಿಸಿದೆ ಎಂದು ಸ್ಪೋರ್ಟ್ಸ್ ಕೀಡಾ ವರದಿ ಮಾಡಿದೆ. ಇನ್ನು ಮೂಲಗಳ ಪ್ರಕಾರ ಈ ಸ್ಥಾನಕ್ಕೆ ರಸೆಲ್ ಆ್ಯಡಮ್ಸ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ.

ಸಚಿವ ಸಂಪುಟದಲ್ಲಿ ಹಲವು ನಿರ್ಣಯಗಳು

ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಗೆ ಪೂರ್ವಭಾವಿಯಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆ ಪೈಕಿ ಪ್ರಮುಖ ಅಂಶಗಳು ಈ ರೀತಿ ಇವೆ.

 • ವಿಶ್ವಬ್ಯಾಂಕ್ ನೆರವಿನಿಂದ ಅಭಿವೃದ್ಧಿಪಡಿಸುತ್ತಿರುವ ರಾಜ್ಯದ ಆರು ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆ.
 • ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1 ಲಕ್ಷಕ್ಕೂ ಹೆಚ್ಚು ಕಿರಿಯ ಶ್ರೇಣಿಯ ಕೆಎಎಸ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸಮ್ಮತಿ.
 • ಬಡ ಮತ್ತು ಪ್ರತಿಭಾನ್ವಿತ ಪರಿಶಿಷ್ಟ ಜಾತಿ/ ಪಂಗಡ ವಿದ್ಯಾರ್ಥಿಗಳಿಗೆ ಹೊಸದಾಗಿ 100 ವಸತಿ ನಿಲಯ ಆರಂಭಕ್ಕೆ ಅನುಮತಿ.
 • ಖಾಲಿ ಇರುವ 288 ಕೆಎಎಸ್ ಹುದ್ದೆಗಳ ಪೈಕಿ 50 ಕಿರಿಯ ಶ್ರೇಣಿ ಹುದ್ದೆಗಳ ಭರ್ತಿಗೆ ರಾಜ್ಯ ಲೋಕಸೇವಾ ಆಯೋಗ ಕಾರ್ಯೋನ್ಮುಖವಾಗಿದ್ದು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಇತರೆ ಹುದ್ದೆಗಳ ನೇಮಕಕ್ಕೂ ಮನವಿ.
 • ಹಾಸನದಲ್ಲಿ 660 ಮೆಗಾವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಘಟಕ ಆರಂಭಕ್ಕೆ ಅವಕಾಶ.
 • ಪ್ರೊ.ಎನ್.ವಿ ನರಸಿಂಹಯ್ಯ ಅವರನ್ನು ದೇವರಾಜ ಅರಸು ಸಂಶೋಧನಾ ಸಂಸ್ಥೆಗೆ ನಿರ್ದೇಶಕರನ್ನಾಗಿ ನೇಮಕ. ಹಾಗೂ ಸಾಕ್ಷರ ಭಾರತ್ ಕಾರ್ಯಕ್ರಮ ಅನುಷ್ಠಾನಕ್ಕೆ ನಿರ್ಧಾರ.
 • ರೇಷ್ಮೆ ಇಲಾಖೆಯನ್ನು ಸಮಗ್ರ ಗಣಕೀಕರಣ, ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಹೃದ್ರೋಗ ಚಿಕಿತ್ಸಾ ಸಂಕಿರಣ, ಸುಟ್ಟ ಗಾಯಗಳ ವಿಭಾಗ ಹಾಗೂ ತಾಯಿ ಮಗುವಿನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಮ್ಮತಿ.
 • ಕೋಲಾರ, ಚಿಕ್ಕಬಳ್ಳಾಪುರ ರೈಲ್ವೆ ಗೇಜ್ ಪರಿವರ್ತನೆ ಹಾಗೂ ನಗರದಲ್ಲಿ ನಿರ್ಮಿಸಲಾಗುತ್ತಿರುವ ಹಜ್ ಭವನದ ಎರಡನೇ ಹಂತದ ಕಾಮಗಾರಿಗೆ ₹25 ಕೋಟಿ ಬಿಡುಗಡೆ ಮಾಡಲು ಅನುಮೋದನೆ.

Leave a Reply