ಮಗುವಿಗೆ ಹಾಡು ಸುಮ್ಮನೇ ಖುಷಿಗಲ್ಲ, ಇಲ್ಲಿಹುದು ಕ್ರಿಯಾಶೀಲತೆ ಅರಳಿಸುವ ಪಾಠಶಾಲೆ!

author-shama“ಮಲಗು ಮಲಗೆನ್ನ ಮರಿಯೇ

ಬಣ್ಣದ ನವಿಲಿನ ಗರಿಯೇ

ಎಲ್ಲಿಂದ ಬಂದೆ ಈ ಮನೆಗೆ

ನಂದನ ಇಳಿದಂತೆ ಭುವಿಗೆ”

ಲಾಲಿ ಹಾಡುವುದನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ರಂಪ ಮಾಡಿ ಮಲಗಲು ಒಲ್ಲದೇ ಅತ್ತು ಹೊರಳಾಡುತ್ತಿದ್ದ ತೊಟ್ಟಿಲ ಸಿರಿ  ಮೋಡಿಗೊಳಗಾದಂತೆ ನಿರುಂಬಳವಾಗಿ ನಿದ್ದೆಗೆ ಜಾರುತ್ತದೆ. ಸಂಗೀತದ ಮಾಯೆಯೇ ಅಂಥದ್ದು. ಆಗಿನ್ನೂ ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲರಿಗೂ ಅರ್ಥವಾಗಬಲ್ಲ ಒಂದೇ ಭಾಷೆಯೆಂದರೆ ಅದು ಸಂಗೀತ. ಈ ಮೋಹಕತೆಯಲ್ಲಿ ಬರೀ ಖುಷಿಯಲ್ಲ ಅದರಾಚೆಗೆ ಬಹಳಷ್ಟಿದೆ. ಮತ್ತು ಎಳೆಯ ಮಕ್ಕಳಿಗೆ ದೊರಕಬಹುದಾದ್ದು ಇನ್ನೂ ಹೆಚ್ಚಿದೆ.

ಹಾಗೆ ನೋಡಿದರೆ ಹಾಡು ಎಂಬುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಒಂದಲ್ಲ ಒಂದು ರೀತಿಯಲ್ಲಿ ನಮ್ಮೊಡನೆ ಬೆರೆತು ಹೋಗಿರುವ ಭಾಷೆಯದು. ನಮ್ಮಲ್ಲಿ ಹುಟ್ಟು, ಸಾವು, ಮದುವೆ, ಮುಂಜಿಗಳಂಥವುಗಳಿಗೆ ಮಾತ್ರವಲ್ಲ ದೈನಂದಿನ ಕೆಲಸಗಳೂ ಬಹುತೇಕ ನಡೆಯುತ್ತಿದ್ದುದು ಈ ಹಾಡುಗಳ ಜತೆಗೇ. ಒಮ್ಮೆ ಹಿಂತಿರುಗಿ ನೋಡಿದರೆ ನಮಗೇ ಅರಿವಾಗುತ್ತದೆ ರಾಗಿ ಬೀಸೋಕೆ, ಹಿಟ್ಟು ಕುಟ್ಟೋಕೆ ರಂಗೋಲಿ ಬಿಡಿಸೋಕೆ ಎಲ್ಲಕ್ಕೂ ಹಾಡುಗಳು. ಜನಪದ ಶ್ರೀಮಂತವಾಗಿದ್ದು ಕೂಡ ಹೀಗೆಯೇ. ಅಚ್ಚರಿಯೆಂದರೆ ಇದಕ್ಕಿರುವ ವೈಜ್ಞಾನಿಕ ಹಿನ್ನೆಲೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಮಕ್ಕಳಿಗೆ ಲಾಲಿ ಹಾಡುವ ಸಂಪ್ರದಾಯವನ್ನು ಹುಟ್ಟು ಹಾಕಿರಬಹುದು.

ಸಂಗೀತ ಮಕ್ಕಳಿಗೆ ಕೊಡುವ ಕೊಡುಗೆ ಬಹುಮುಖಿ ಮತ್ತು ಅನನ್ಯವಾದ್ದು. ಇದು ಮಕ್ಕಳಲ್ಲಿ ಎಲ್ಲ ವಿಧದ ಅಂದರೆ ಬೌದ್ಧಿಕ, ಸಾಮಾಜಿಕ ಮತ್ತು ಭಾವನಾತ್ಮಕ, ದೈಹಿಕ, ಭಾಷಿಕ ಬೆಳವಣಿಗೆ ಮತ್ತು ಓದಿನ ಸಾಮರ್ಥ್ಯವನ್ನು ಕೂಡ ಹೆಚ್ಚಿಸುವ ಸುಲಭ ದಾರಿ. ಜತೆಗೆ ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಎನ್ನುತ್ತಾವೆ ಸಂಶೋಧನೆಗಳು.

ನ್ಯೂ ಜೆರ್ಸಿಯ ರೋವನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಲಿಲಿ ಎಂ ಲೆವಿನೋವಿಟ್ಝ್ ಅವರ ಪ್ರಕಾರ ಸಂಗೀತವನ್ನೂ ಇತರ ಪಾಠಗಳ ಹಾಗೇ ಎಳವೆಯಿಂದಲೇ ಮಕ್ಕಳಿಗೆ ಕಲಿಸುವುದರಿಂದ ಅವರಲ್ಲಿ ಬಹುಮುಖ ಪ್ರತಿಭೆ ಬೆಳೆಯುತ್ತದೆ. ಸಂಗೀತ ಮಕ್ಕಳ ಸ್ವಾಭಿವ್ಯಕ್ತಿಯ ಅದ್ಭುತ  ಮಾಧ್ಯಮ ಕೂಡ ಹೌದು. ಆದ್ದರಿಂದಲೇ ಬಹುವಿಧ ಬುದ್ಧಿಮತ್ತೆ ((Multiple Intelligence)  ಪ್ರತಿಪಾದಕನಾದ ಹೋವರ್ಡ್ ಗಾರ್ಡ್^ನರ್ ಕೂಡ ತನ್ನ ಫ್ರೇಮ್ಸ್ ಆಫ್ ಮೈಂಡ್ ಪುಸ್ತಕದಲ್ಲಿ ಸೇರಿಸಿರುವ ಎಂಟು ವಿಧದ ಬುದ್ಧಿವಂತಿಕೆಗಳಲ್ಲಿ ಸಂಗೀತವನ್ನು ಕೂಡ ಸೇರಿಸಿರುತ್ತಾರೆ.

ಮಕ್ಕಳು ಯಾವುದೇ ಒಂದು ಸಣ್ಣ ಸದ್ದಿಗೂ ದೊಡ್ಡವರಿಗಿಂತ ಹೆಚ್ಚಾಗಿ ಮತ್ತು ಭಿನ್ನವಾಗಿ ಪ್ರತಿಕ್ರಿಯೆ ನೀಡುವುದನ್ನು ಗಮನಿಸಿರಬಹುದು. ಇದಕ್ಕೆ ಕಾರಣ ಅವರ ಸೂಕ್ಷ್ಮ ಶ್ರವಣ ಶಕ್ತಿ. ಇಂದಿನ ಸಾಫ್ಟ್ ಸ್ಕಿಲ್ಸ್ ಡೆವಲಪ್^ಮೆಂಟ್ ಯುಗದಲ್ಲಿ ಇದನ್ನು ವೃದ್ಧಿಸಲಿಕ್ಕಾಗಿಯೇ ಲಕ್ಷಗಟ್ಟಲೇ ಸುರಿದು ಕಾರ್ಯಾಗಾರ ನಡೆಸಲಾಗುತ್ತದೆ. ಬದಲಿಗೆ ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಸಂಗೀತ ಕೇಳಿಸಿದರೆ ಸಾಕು; ಸಾಫ್ಟ್ ಮೆದುಳಿನೊಳಗೆ ಸ್ಕಿಲ್ ತಾನಾಗಿ ಅರಳುತ್ತದೆ.  “ಮಿನುಗೆಲೆ ಮಿನುಗೆಲೆ ನಕ್ಷತ್ರ; ನಿನ್ನಯ ಪರಿಯಿದು ವಿಚಿತ್ರ” ಹಾಡಿ ಕುಣಿವ ಮಗು ಯಾರೂ ಹೇಳದೆಯೇ ನಕ್ಷತ್ರವೆಂಬುದು ಸೃಷ್ಟಿ ವಿಸ್ಮಯ ಮತ್ತು ಮಿನುಗು ತಾರೆಯದು ಅನ್ನೋದನ್ನ ಅರ್ಥ ಮಾಡಿಕೊಳ್ಳುತ್ತದೆ. ಬದಲಿಗೆ ಒಂದು ಪುಸ್ತಕ ಹಿಡಿದು ಕೂಡಿಸಿ ನಕ್ಷತ್ರ, ಆಕಾಶಕಾಯಗಳ ಬಗ್ಗೆ ಒಂದಿಡೀ ಗಂಟೆ ಕೊರೆದರೂ ತಲೆ ಕೊಡವಿ ಎದ್ದು ಹೋಗಬಹುದು. ಹೀಗೇ “ಒಂದು ಎರಡು ಬಾಳೆಲೆ ಹರಡು”ವಾಗ ಗಣಿತ, “ಬೇಕೇ ಬೇಕೇ ತರಕಾರಿ” ಕೇಳುತ್ತ ಕುಣಿವಾಗ ಆಹಾರ ಕ್ರಮಗಳ ಬಗ್ಗೆ ತಂತಾನೇ ತಿಳಿದುಕೊಳ್ಳುತ್ತದೆ.

ಪಶ್ಚಿಮ ಒಂಟಾರಿಯೋದಲ್ಲಿರುವ ಬೌದ್ಧಿಕ ನರ ವಿಜ್ಞಾನಿ ಜೆಸ್ಸಿಕಾ ಗ್ರಾಹ್ ಪ್ರಕಾರ ಒಂದು ವರ್ಷ ಸತತವಾಗಿ ಪಿಯಾನೋ ಅಭ್ಯಸಿಸಿದ ಮಕ್ಕಳು ಐಕ್ಯು ಇತರ ಮಕ್ಕಳಿಗಿಂತ ಮೂರು ಪಾಯಿಂಟ್ ಹೆಚ್ಚು ಇತ್ತು. ಅಂದರೆ ಅವರ ಬುದ್ಧಿಮತ್ತೆಯನ್ನು ನೇರವಾಗಿ ಬೂಸ್ಟ್ ಮಾಡಿದ ಹೆಮ್ಮೆ ಸಂಗೀತಕ್ಕೆ ಸಲ್ಲುತ್ತದೆ. ಜತೆಗೇ ಸಂಗೀತ ಕೇಳುವುದಕ್ಕೆ ಭಾಷೆಯ ಹಂಗಿಲ್ಲದ ಕಾರಣ ಬಹು ಭಾಷೆಯ ಹಾಡು ಕೇಳುವ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಕೂಡ ಇದು ರಾಜ ಮಾರ್ಗವೇ. ಒಂದಷ್ಟು ಸಲ “ಧೋಬಿ ಆಯಾ ಕಪಡೇ ಸಾಥ್” ಕೇಳಿದ ಕನ್ನಡ ಕುವರಿ ಮಗಳು ಬಂದು “ಹಂಗಂದ್ರೇನಮ್ಮಾ” ಪ್ರಶ್ನಿಸುವಾಗ ಅಲ್ಲಿ ಹಿಂದಿ ಭಾಷೆಯ ಜತೆಗೇ ಧೋಬಿ ಅಂದರೆ ಯಾರು ? ಅವರ ಕೆಲಸವೇನು ? ಹೀಗೆ ಬಹಳಷ್ಟು ಕಲಿಕೆಯ ಅವಕಾಶವೂ ತೆರೆದುಕೊಳ್ಳುತ್ತ ಹೋಗುತ್ತದೆ. ಅಮ್ಮನ ಕಾರು ಬಿಟ್ಟು ಒಮ್ಮೆಯೂ ಬಸ್ಸಲ್ಲಿ ಪ್ರಯಾಣ ಮಾಡದ ನಾಲ್ಕು ವರ್ಷದ ಸಿದ್ಧಾಂತ್ ಮನೆಯಾಚೆ ಬಂದಾಗ ಬಸ್ಸು ಗುರುತಿಸಿ “ಅದ್ರೊಳಗೆ ಕಂಡಕ್ಟರ್ ಇರ್ತಾರಮ್ಮಾ, ಟಿಕೆಟ್ ಕೊಡ್ತಾರೆ” ಅಂದಿದ್ದರ ಕಾರಣ ಪಾಠವಲ್ಲ “ಬಸ್ಸು ಬಂತು ಬಸ್ಸು ಕೆಂಪು ಬಿಳಿ ಬಸ್ಸು” ಶಾಲೆಯಲ್ಲಿ ಹಾಡಿಸಿದ ಹಾಡು.

ಮಕ್ಕಳ ಕ್ರಿಯಾಶೀಲತೆಗೊಂದು ಹೊಸ ಹಾದಿಯೂ ಹೌದು. ಈಗಾಗಲೇ ಗೊತ್ತಿರುವ ಹಾಡನ್ನು ಸ್ವಲ್ಪ ಬದಲಿಸಿ ಅಥವಾ ತಾನೇ ಸರಷ್ಟಿ ಮಾಡಿ ಪುಟ್ಟ ಮಗು ಹಾಡುವುದು ಸೊಗಸೇ ಹೌದು. ಗರ್ಭದೊಳಗಿದ್ದಾಗಿಂದಲೇ ನಿತ್ಯ ಹಾಡಿನ ಮೋಡಿಗೆ ಒಳಗಾಗಿದ್ದ ಮಗು

“ಡಿಂಪಿ ಡಿಂಪಿ ಮುದ್ದಿನ ಡಿಂಪಿ

ಎಲ್ಲಿಗೆ ಹೋಗಿದ್ದೆ ?

ಸೋನು ಮಂಚದ ಕೆಳಗಡೆ ಇರುವ

ಚೆಂಡು ಆಡ್ತಿದ್ದೆ”

ತಾನೇ ಪದ ಜೋಡಿಸಿ ಹಾಡಿದಾಗ ಕೇವಲ ಮೂರೂವರೆ ವರ್ಷವೆಂದರೆ ಅಚ್ಚರಿ ಹೆಮ್ಮೆ ಎರಡೂ ಹೌದು. ಇದರ ಶ್ರೇಯದಲ್ಲಿ ಪಾಲಿರುವುದು ಗಾನ ಸುಧೆಗೇ ಹೌದು. ಇಂಥ ಪುಟ್ಟ ಪುಟ್ಟ ಚಟುವಟಿಕೆಗಳು ಅವರ ಆತ್ಮ ವಿಶ್ವಾಸ ವೃದ್ಧಿಗೂ ಪೂರಕ.

ಭಾಷೆಯೇ ಬರದಿದ್ದರೂ ಆಲಿಸಬಹುದಾದ್ದು, ಖುಷಿಗೂ ಬೇಸರಕ್ಕೂ ಎರಡಕ್ಕೂ ಒದಗಿ ಬರಬಹುದಾದ್ದು, ವಯಸ್ಸು, ಜಾತಿ, ಲಿಂಗ ಯಾವ ಬೇಧವಿಲ್ಲದೇ ಸಂಭ್ರಮಿಸಬಹುದಾದ್ದು ಏನಾದರೂ ಜಗತ್ತಿನಲ್ಲಿದ್ದರೆ ಅದು ಸಂಗೀತ. ಗೇಯತೆ, ಶ್ರುತಿ, ಲಯ, ಮಾಧುರ್ಯ, ರೂಪಕ ಎಲ್ಲ ಸೇರಿದ ಸಂಗೀತವೆಂಬ ರಸಪಾಕವನ್ನ ಮಕ್ಕಳಿಗೆ ಸಾಧ್ಯವಾದಷ್ಟೂ ಉಣಬಡಿಸೋಣ. ಅದರ ಸವಿ ಅವರನ್ನು ಸಲಹಲಿ.

4 COMMENTS

  1. kelvondashTu vishayagaLanna naavu gamanisirOdilla, adellavanna achchukaTTaagi hELiddeeya Shamakka 🙂 🙂 🙂 shishugeetegaLa hindina vaijnaanika satya gottE iralla, kEvala manaranjane ashTE anta tumbaa jana andkonDirtaare, aadare namma poorvajara kelavondishTu paddhatigaLu adeshTu vaijnaanikavaagidvu annOdikke idondu nidarshana 🙂 🙂 🙂

  2. @ Shree

    Thanks ಪುಟ್ಟಣ್ಣ. ನೀ ಅಂದಿದ್ದು ನಿಜ. ಹಿಂದಿನ ತಲೆಮಾರಿನವರು ಪ್ರತಿಯೊಂದನ್ನೂ ವೈಜ್ಞಾನಿಕ ತಳಹದಿಯ ಮೇಲೇ ಮಾಡಿದ್ದರು. ಆದರೆ ಕಾರಣ ವಿವರಿಸಲಾಗದೇ ಹೋದರು. ಜಗತ್ತು ಅದನ್ನು ಮೂಢ ನಂಬಿಕೆ ಎಂಬ ಹೆಸರಿನಿಂದ ಕರೆಯಿತು. ದುರಂತ ಅಂದರೆ ನಮ್ಮ ಇಂಥ ಎಲ್ಲ ಆಚರಣೆಗಳ ಬಗ್ಗೆ ಪಾಶ್ಚಾತ್ಯರು ಸಂಶೋಧಿಸಿ “Right” ಅಂದಾಗ ನಾವು ಅದನ್ನು ಒಪ್ಪಿ ಅಪ್ಪುತ್ತೇವೆ.

  3. “ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನ ರಸಂ ಫಣಿಃ” ಅಂದರಂತೆ ವಾಲ್ಮೀಕಿ. ಸಂಗೀತವೆಂದರೆ ಮಕ್ಕಳಿಗೂ, ಪಶುಗಳಿಗೂ ಏಕೆ, ಸರ್ಪಗಳಿಗೂ ಇಷ್ಟವಂತೆ. ಈ ಎಳೆಯನ್ನು ಇಂದಿನ ಅವಶ್ಯಕತೆಗಳಿಗನುಗುಣವಾಗಿ ಆಪ್ತವಾಗಿ ತೆಗೆದಿಟ್ಟಿದ್ದೀರಿ. ಗಾನಕೆ ಒಲಿಯದ ಮನಸೇ ಇಲ್ಲ, ಗಾನಕೆ ಒಲಿಯದ ಜೀವವೆ ಇಲ್ಲ, ಗಾನಕೆ ಒಲಿಯದ ದೇವರೆ ಇಲ್ಲ. ಗಾನದೇ ತುಂಬಿದೆ ಈ ಜಗವೆಲ್ಲ. ಇಂತಹ ಗಾನಸ್ತುತಿಗಳನ್ನೆಷ್ಟೇ ಕೇಳಿದ್ದರೂ ಇವುಗಳನ್ನೆಲ್ಲಾ ಆಗಾಗ ನೆನಪಿಸಿ ದೈನಂದಿನದ ಯಾಂತ್ರಿಕತೆಯಲ್ಲಿ ಕಳೆದುಕೊಂಡದ್ದನ್ನು ಹುಡುಕಿಕೊಡುವಂತಹ ಇಂತಹ ಲೇಖನಗಳು ಸದಾ ಸ್ವಾಗತಾರ್ಹ.

  4. @ T. S. Sridhara, ನಿಮ್ಮ ಸಹೃದಯತೆಗೆ ಸಲಾಂ. ನೀವು ಕಾಮೆಂಟ್ ಮಾಡಿದ ನಂತರ ಅದರಿಂದಲೇ ಅದೆಷ್ಟೋ ಸಲ ಹೊಸ ಹೊಳಹುಗಳು ಥಟ್ಟನೆ ನನ್ನನ್ನು ಸುತ್ತುವರಿಯುತ್ತವೆ. ಈ ಅಕ್ಷರ ಮೈತ್ರಿಗೆ ವಂದೇ

Leave a Reply