ಮೊನ್ನೆ ಇಂಗ್ಲೆಂಡ್ ತನ್ನ ಬಜೆಟ್ ನಲ್ಲಿ ವಿಧಿಸಿದ ‘ಸಕ್ಕರೆ ತೆರಿಗೆ’ ಗೊತ್ತಾ ನಿಮಗೆ? ಇಟ್ ಈಸ್ ಸಚ್ ಅ ಸ್ವೀಟ್ ಐಡಿಯಾ!

ಡಿಜಿಟಲ್ ಕನ್ನಡ ಟೀಮ್

ಇಂಗ್ಲೆಂಡ್ ನಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಆಗುತ್ತಲೇ ಅಲ್ಲಿನ ಚಾನ್ಸಲರ್ (ವಿತ್ತ ಸಚಿವ) ಜಾರ್ಜ್ ಒಸ್ಬರ್ನೆ ತಾವು ವಿಧಿಸಿರುವ ವಿಶಿಷ್ಟ ಟ್ಯಾಕ್ಸ್ ಒಂದರಿಂದ ಸುದ್ದಿ ಮಾಡಿದ್ದಾರೆ.

ತಾವೇನೋ ಮಹಾ ಸಿಕ್ರೆಟ್ ಮೆನು ಇರಿಸಿಕೊಂಡಿದ್ದೇವೆ ಅಂತ ಜನರನ್ನು ಜಾಹೀರಾತುಗಳ ಮೂಲಕ ಸೆಳೆದು ಬಿಕರಿಯಾಗುತ್ತಿರುವ ಸಾಫ್ಟ್ ಡ್ರಿಂಕ್ ಗಳಲ್ಲಿ ಢಾಳಾಗಿರೋದು ಸಕ್ಕರೆ ಪ್ರಮಾಣ ಮಾತ್ರ ಅನ್ನೋದು ವಾಸ್ತವ. ಈ ಸಕ್ಕರೆ ಮಿತಿ ಆಧಾರದ ಮೇಲೆ ತೆರಿಗೆ ವಿಧಿಸಿದ್ದಾರೆ ಒಸ್ಬರ್ನೆ. ಸಾಫ್ಟ್ ಡ್ರಿಂಕ್ಸ್ ತಯಾರಿಕಾ ಕಂಪನಿಗಳು ತೆರಲಿರುವ ತೆರಿಗೆ ಅವರು ತಮ್ಮ ಪಾನೀಯಗಳಲ್ಲಿ ಬಳಸುವ ಸಕ್ಕರೆ ಪ್ರಮಾಣದ ಮೇಲೆ ಅವಲಂಬಿತ!

ಇಲ್ಲಿ ಎರಡು ವರ್ಗಗಳನ್ನು ಮಾಡಲಾಗಿದೆ. ಒಂದು, ಪ್ರತಿ 100 ಎಂ.ಎಲ್ ಪಾನೀಯದಲ್ಲಿ 5 ಗ್ರಾಂಗಿಂತ ಹೆಚ್ಚಿನ ಸಕ್ಕರೆ ಪ್ರಮಾಣ, ಮತ್ತೊಂದು 8 ಗ್ರಾಂಗಿಂತ ಹೆಚ್ಚಿನ ಪ್ರಮಾಣ. ಆರೋಗ್ಯಕರ ಹಣ್ಣಿನ ರಸ ಮತ್ತು ಹಾಲು ಉತ್ಪನ್ನಗಳು ಈ ತೆರಿಗೆ ವ್ಯಾಪ್ತಿಗೆ ಬರೋದಿಲ್ಲ.

ಮುಂದಿನ 2 ವರ್ಷಗಳ ಕಾಲ ಕಂಪನಿಗಳಿಗೆ ಕಾಲಾವಕಾಶ ನೀಡಲಾಗಿದೆ. ಆ ಪೈಕಿ ಕಂಪನಿ ತಮ್ಮ ಉತ್ಪನ್ನದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿದೆ. ತೆರಿಗೆ ಹೆಚ್ಚಳದಿಂದ ಈ ಸಾಫ್ಟ್ ಡ್ರಿಂಕ್ ಗಳ ಬೆಲೆಯೂ ಹೆಚ್ಚುವ ಸಾಧ್ಯತೆಗಳಿವೆ. ಅದು ಕಂಪನಿಗೆ ಬಿಟ್ಟ ವಿಚಾರ.

ಅಂದಾಜಿನ ಪ್ರಕಾರ ಈ ರೀತಿಯಿಂದ ಬರುವ ತೆರಿಗೆ ಮೊತ್ತ 520 ಮಿಲಿಯನ್ ಯೂರೊಗಳು. ಈ ಮೊತ್ತವನ್ನು ಸರ್ಕಾರ ಅಲ್ಲಿನ ಪ್ರಾಥಮಿಕ ಹಂತದ ಶಾಲೆಗಳಲ್ಲಿ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತೇಜನ ನೀಡಲು ಖರ್ಚು ಮಾಡಲು ನಿರ್ಧರಿಸಿದೆ. ಅಲ್ಲದೇ ಸುದೀರ್ಘ ಶಾಲಾ ದಿನವನ್ನು ಕಡಿತಗೊಳಿಸಿ ಕ್ರೀಡೆಗೆ ಮಹತ್ವವನ್ನೂ ನೀಡಲು ನಿರ್ಧರಿಸಿದೆ.

ಯುರೋಪಿಯನ್ ರಾಷ್ಟ್ರಗಳಲ್ಲಿ ಬೊಜ್ಜು ದೊಡ್ಡ ಸಮಸ್ಯೆ. ಆಹಾರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಇಟ್ಟುಕೊಂಡಿರುವ ಸಾಫ್ಟ್ ಡ್ರಿಂಕ್ ಗಳ ಕೊಡುಗೆಯೂ ದೊಡ್ಡದು. ತಜ್ಞರ ಪ್ರಕಾರ ಮುಂದಿನ ಒಂದು ಅಥವಾ ಎರಡು ತಲೆಮಾರಿನಲ್ಲಿ ಶೇ.75ರಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಾರೆ.

ಹೀಗಾಗಿ ಆರೋಗ್ಯ, ಸಂಪನ್ಮೂಲ ಕ್ರೋಢಿಕರಣ ಎರಡು ಅಂಶವನ್ನು ನಿಭಾಯಿಸುವ ಈ ತೆರಿಗೆ ಪದ್ಧತಿ ವಿಭಿನ್ನವೇ ಸರಿ. ಭಾರತವೂ ಸೇರಿದಂತೆ ಬೇರೆಲ್ಲ ದೇಶಗಳೂ ಗಮನಿಸಬಹುದಾದಂತದ್ದು.

Leave a Reply