ಕಿರಗೂರಿನ ಗಯ್ಯಾಳಿಗಳಿಗೆ ಕತ್ತರಿ, ಈ ಸೆನ್ಸಾರ್ ಮಂಡಳಿ ಬ್ರಿಟಿಷರ ಪಾರುಪತ್ಯೆ ಮುಂದುವರಿಸೋದರ ಸಂಕೇತವೇ..?

 

sridharamurthyಎನ್.ಎಸ್.ಶ್ರೀಧರ ಮೂರ್ತಿ

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಮನ ಸೆಳೆದ ಚಿತ್ರ ಎನ್ನುವ ಹೆಗ್ಗಳಿಕೆಗೆ ಸುಮನಾ ಕಿತ್ತೂರು ಅವರ ‘ಕಿರುಗೂರಿನ ಗಯ್ಯಾಳಿಗಳು’ ಪಾತ್ರವಾಗಿದೆ. ಚಿತ್ರವನ್ನು ಮೆಚ್ಚಿಕೊಂಡವರೆಲ್ಲರೂ ಸೆನ್ಸರ್‍ನ ವಿವೇಚನಾ ರಹಿತ ಕತ್ತರಿ ಪ್ರಯೋಗವನ್ನು ಟೀಕಿಸುತ್ತಿದ್ದಾರೆ. ನೆಲದ ಸೊಗಡನ್ನು ಅರಿಯದೆ ಹೀಗೆ ಕತ್ತರಿ ಆಡಿಸಿದರೆ ತೇಜಸ್ವಿ, ಬೆಸಗರಳ್ಳಿ, ಲಂಕೇಶ್‍, ದೇವನೂರು ಅಂತಹವರ ಕೃತಿಗಳನ್ನು ಚಿತ್ರವಾಗಿಸುವುದೇ ಅಸಾಧ್ಯ ಎನ್ನಿಸುತ್ತದೆ.

ಅಷ್ಟಕ್ಕೂ ಸೆನ್ಸಾರ್‍ನವರಿಗೆ ‘ಕಿರುಗೂರಿನ..’ ಚಿತ್ರದಲ್ಲಿ ಅಶ್ಲೀಲ ಎನ್ನಿಸಿದ ಪದಗಳಾದರೂ ಯಾವುದು? ನಿನ್ನ ಅಯ್ಯನ್, ಬೇವರ್ಸಿ ಮುಂಡೆ, ಕತ್ತೆ ಲೌಡಿ, ಚೆಡ್ಡಿ ಬಿಚ್ಹಾಕು, ಮಚ್ಕೊಂಡು ಹೋಗು ಮುಂತಾದವು. ಇವೆಲ್ಲವೂ ದೇಸಿ ಗುಣ ಇರುವ ಪ್ರಯೋಗಗಳು ಎಂದು ಯಾರಾದರೂ ಸುಲಭವಾಗಿ ತಿಳಿಯ ಬಲ್ಲರು. ಆದರೆ ಸೆನ್ಸಾರ್‍ನವರಿಗೆ ಹಾಗನ್ನಿಸಿಲ್ಲ. ಅಷ್ಟೇ ಅಲ್ಲ ಚೆಡ್ಡಿ ಚಿಚ್ಹಾಕು ಎನ್ನುವಲ್ಲಿ ಚೆಡ್ಡಿಯನ್ನು ಮ್ಯೂಟ್ ಮಾಡಿ ವಿಪರೀತಾರ್ಥದ ಕಲ್ಪನೆ ಬರುವಂತೆ ಮಾಡಿ ಸೆನ್ಸಾರ್‍ನವರೇ ಅದನ್ನು ಅಶ್ಲೀಲವಾಗಿಸಿದ್ದಾರೆ.

ಸಿನಿಮಾ ಎನ್ನುವುದು ದೃಶ್ಯ ಮಾಧ್ಯಮವಾಗಿದ್ದರಿಂದ ಇಲ್ಲಿ ದೃಶ್ಯಗಳಲ್ಲಿನ ಅಶ್ಲೀಲತೆ ಗಮನಿಸ ಬೇಕು, ಹೊಕ್ಕಳ ಮೇಲೆ ದ್ರಾಕ್ಷಿ ಇಡುವ, ಜೇನು ತುಪ್ಪು ಸುರಿಯುವ,ಮಚ್ಚು ಲಾಂಗ್‍ಗಳ ಮೂಲಕ ರಕ್ತದ ಕೋಡಿ ಹರಿಸುವ ದೃಶ್ಯಗಳಿಗೆ ಧಾರಾಳವಾಗಿ ಅನುಮತಿ ನೀಡಿರುವ ಸೆನ್ಸಾರ್ ಭಾಷೆಯ ಮೇಲೆ ಮುಗಿ ಬಿದ್ದಿರುವುದು ವಿಚಿತ್ರವೂ ಆಗಿದೆ. ಅದರಂತೆ ಹಳ್ಳಿಯಲ್ಲಿ ಮಕ್ಕಳು ಸಹಜವಾಗಿ ಬಯಲಿನಲ್ಲಿ ಶೌಚಕ್ಕೆ ಕುಳಿತು ಕೊಳ್ಳುವ ದೃಶ್ಯ ಸೆನ್ಸರ್‍ನವರ ಪಾಲಿಗೆ ಅಶ್ಲೀಲ ಎನ್ನಿಸಿದೆ. ಪ್ರೋಮೋದಲ್ಲಿ ಅನುಮತಿ ನೀಡಿದ ಸಂಭಾಷಣೆ ಬಿಡುಗಡೆ ಹೊತ್ತಿಗೆ ಅಶ್ಲೀಲ ಎನ್ನಿಸಿಕೊಂಡಿದ್ದು ಇನ್ನೊಂದು ಕೌತಕ ಕೂಡ ಆಗಿದೆ.

ಸೆನ್ಸಾರ್‍ ರೂಪುಗೊಂಡಿದ್ದು 1908ರಲ್ಲಿ. ಆಗ ಬ್ರಿಟೀಷರಿಗೆ ಭಾರತೀಯರು ಈ ಮಾಧ್ಯಮವನ್ನು ಬಳಸಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಬಹುದು ಎನ್ನುವ ಗುಮಾನಿ ಇತ್ತು. ಆದರೆ ಸ್ವಾತಂತ್ರ್ಯಾ ನಂತರವೂ ಈ ವಸಾಹತುಶಾಹಿ ಪಳಿಯುಳಿಕೆಯನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ. ಅಷ್ಟೇ ಅಲ್ಲ ಹೊಸದಾಗಿ ಸೆನ್ಸಾರ್ ಬೋರ್ಡ್‍ನ ಚೇರ್‍ಮೆನ್ ಆಗಿರುವ ಪಹ್ಲಾಜ್ ನಿಹಾನಿಯವರ ಮಾತುಗಳನ್ನು ಗಮನಿಸಿದರೆ ‘ಕಿರುಗೂರಿ..’ ಕತ್ತರಿ ಪ್ರಯೋಗ ಸಮಸ್ಯೆಯ ಆರಂಭ ಮಾತ್ರ ಎನ್ನಿಸುತ್ತದೆ. ‘ಸಂಸ್ಕೃತಿಗೆ ವಿರೋಧವಾದ ಸಂಭಾಷಣೆಗೆ ಅನುಮತಿ ನೀಡುವುದಿಲ್ಲ’ ಎಂದು ಅವರು ಫೆಬ್ರವರಿ 12ರ ಸಂದರ್ಶನದಲ್ಲಿ ಹೇಳಿದ್ದಾರೆ. ಇದು ಮುಂದೆ ಎಂತಹ ವ್ಯಾಖ್ಯಾನಗಳಿಗೆ ಒಳಪಡಬಹುದು, ಎಂಥೆಂಥ ಅನಾಹುತಗಳನ್ನು ತೆರೆದಿಡಬಹುದು ಎನ್ನುವುದನ್ನು ನಾವು ಸಹಜವಾಗಿಯೇ ಊಹಿಸಬಹುದಾಗಿದೆ. ಬಾಬು ಈಶ್ವರ ಪ್ರಸಾದರ ‘ಗಾಳಿ ಮತ್ತು ಬೀಜ’ ಸಿನಿಮಾ ಅನುಭವಿಸಿದ ಸಮಸ್ಯೆಗಳ ಪರಂಪರೆಯಂತೂ ನಮ್ಮ ಕಣ್ಮುಂದೆಯೇ ಇದೆ. ಅಂತಹ ಕಷ್ಟಗಳ ಪರಂಪರೆ ಮುಂದುವರೆಯುವುದಂತೂ ಖಚಿತ ಎನ್ನುವ ಭಾವವನ್ನು ‘ಕಿರುಗೂರಿನ ‘ ಸಮಸ್ಯೆ, ಪಹ್ಲಾಜ್ ನಿಹಾನಿ ಅವರಂಥವರ ಮನಸ್ಥಿತಿ ಒತ್ತಿ ಹೇಳಿದೆ.

ಮ್ಯೂಟ್‍ನ ಕಾಟದ ಹೊರತಾಗಿಯೂ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಉಳಿಸಿಕೊಂಡಿರುವುದು ‘ಕಿರುಗೂರಿನ ಗಯ್ಯಾಳಿ’ಗಳು ಚಿತ್ರದ ಯಶಸ್ಸಾಗಿದೆ. ಕನ್ನಡದಲ್ಲಿ ನಾಯಕಿಯರೇ ಇಲ್ಲದ ಕಾಲದಲ್ಲಿ ಇಷ್ಟೊಂದು ಪ್ರತಿಭಾವಂತೆಯರು ಒಬ್ಬರಿಗಿಂತ ಒಬ್ಬರು ಮಿಂಚಿರುವುದೇ ಗಮನ ಸೆಳೆಯುವ ಸಂಗತಿ ಎನ್ನಿಸಿದೆ. ಇದರ ಜೊತೆಗೆ ಬಹಳ ದಿನಗಳ ನಂತರ ಸಂಯಮದಿಂದ ಹಳ್ಳಿಯ ಕಥೆ ಹೇಳಿದ ಚಿತ್ರ ಕನ್ನಡದಲ್ಲಿ ಬಂದಿದೆ. ಅದೂ ಕೂಡ ಚಲನಶೀಲವಾಗಿ ಇಂದಿನ ಗುಣಗಳನ್ನು ಉಳ್ಳ ಹಳ್ಳಿಯಾಗಿದೆ. ಇದು ನಿಶ್ಚಿತವಾಗಿಯೂ ಚಿತ್ರದ ಧನಾತ್ಮಕ ಸಂಗತಿ.

‘ಕಿರುಗೂರಿನ ಗಯ್ಯಾಳಿಗಳು’ ಯಾವ ನೆಲೆಯಿಂದ ನೋಡಿದರೂ ತೇಜಸ್ವಿಯವರ ಮಾತ್ರವಲ್ಲ ಕನ್ನಡದ ಶ್ರೇಷ್ಠಕಥೆಗಳಲ್ಲಿ ಒಂದು. ಅದನ್ನು ತೇಜಸ್ವಿಯವರೇ ತಿಳಿ ಹಾಸ್ಯದ ನೆಲೆಯಲ್ಲಿ ನಿರೂಪಣೆ ಮಾಡಿದ್ದಾರೆ. ಸುಮನಾ ಕಿತ್ತೂರು ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಆದರೆ ತೇಜಸ್ವಿಯವರಿಗೆ ಹಾಸ್ಯ ಮಾರ್ಗವೇ ಹೊರತು ಗುರಿಯಲ್ಲ. ಆದರೆ ಸುಮನಾ ಅವರ ಚಿತ್ರದಲ್ಲಿ ಅದೇ ಗುರಿಯಾಗಿದೆ. ಆದರೆ ಈ ಮಾರ್ಗ ಮತ್ತು ಗುರಿ ನಡುವೆ ವ್ಯತ್ಯಾಸ ಢಾಳಾಗಿ ರಾಚದಂತೆ ನಿರೂಪಿಸುವಲ್ಲಿ ಸುಮನಾ ಕೈಚಳಕ ಎದ್ದುಕಂಡಿದೆ. ಅದೇ ರೀತಿ ಮನೆಯ ಮೂಲಕ ಬಿರುಗಾಳಿಯ ಅವಾಂತರಗಳು ಆರಂಭವಾಗುತ್ತವೆ. ಅಲ್ಲಿ ಉರುಳುವ ಮರದ ಬೇರುಗಳು ಮನೆಯನ್ನೆಲ್ಲಾ  ಆಕ್ರಮಿಸುತ್ತಿರುತ್ತವೆ. ಅಲ್ಲಿ ರೂಪಕವಾಗುವ ಮರ ಇಲ್ಲಿ ವಿವರ ರೂಪ ಪಡೆಯುತ್ತದೆ. ಅದರಂತೆ ಕಥೆಯಲ್ಲಿ ಅಬ್ಬರಿಸುವ  ದಾನಮ್ಮನಂತೆ ಮಾತೇ ಬಾರದ ನಾಗಮ್ಮ ಇದ್ದಾಳೆ. ಓಡಿ ಹೋಗುವವಳು ನಾಗಮ್ಮಳೇ. ಕೊನೆಯ ಘರ್ಷಣೆಯಲ್ಲಿ ದಾನಮ್ಮ ಒಂದು ಹಂತದಲ್ಲಿ ಬಂಡಾಯ ನಿಲ್ಲಿಸಿ ಶಂಕ್ರಪ್ಪನು ಕೋಲಿನಿಂದ ಹೊಡೆದಾಗ ಕಮಕ್ ಕಿಮಕ್ ಅನ್ನದೆ ಹೊಡತಗಳನ್ನು ತಿನ್ನುತ್ತಾಳೆ. ಆಗ ರುದ್ರಿ ಬೇಲಿಯ ಎರಡು ದಬ್ಬೆ ತೆಗೆದುಕೊಂಡು ಆಕ್ರಮಣಕ್ಕೆ ಮುಂದಾಗುತ್ತಾಳೆ. ಈ ಅಂಶ ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು. ಕನ್ನಡದಲ್ಲಿ ಎಲ್ಲರನ್ನೂ ತಲುಪುವ ಹಂಬಲದಲ್ಲಿರುವ ಚಿತ್ರಗಳು ಕೆಲವೊಮ್ಮೆ ಸಣ್ಣಪುಟ್ಟ ರಾಜಿ ಮಾಡಿಕೊಳ್ಳುವುದು ಅನಿವಾರ್ಯ.

ಕೊನೆಯದಾಗಿ ‘ಕಿರುಗೂರಿನ ಗಯ್ಯಾಳಿಗಳು’ ಚಿತ್ರ ಇಪ್ಪತ್ತು ವರ್ಷಗಳಷ್ಟು ಹಿಂದೆ ಬಂದಿದ್ದರೆ, ದಾನಮ್ಮನ ಪಾತ್ರವನ್ನು ಉಮಾಶ್ರೀಯವರು ಮಾಡಿದ್ದರೆ ಅದರ ಸೊಗಸೇ ಬೇರೆ ಇರುತ್ತಿತ್ತು ಎನ್ನುವ ಭಾವ, ಚಿತ್ರ ನೋಡಿದಾಗಿನಿಂದ ಕಾಡುತ್ತಿದೆ. ಹಾಗೆ ನೋಡಿದರೆ ಇದು ಕನ್ನಡ ಚಿತ್ರರಂಗದ ಸಮಸ್ಯೆಯೂ ಹೌದು. ಆದರೆ ತಡವಾಗಿಯಾದರೂ ಚಿತ್ರ ಬಂತಲ್ಲ ಅದೇ ಸಮಾಧಾನ ಮತ್ತು ಶ್ಲಾಘನೀಯ.

Leave a Reply