ಗಾಂಧಿನಗರದ ಸೊಗಡು ನೋಡಿ ಸಿನಿಮಾ ಮೈ ಡಾರ್ಲಿಂಗ್ ಅಂತಿದ್ದಾರೆ ಗೌರೀಶ್ ಅಕ್ಕಿ..!

ಸೋಮಶೇಖರ ಪಿ. ಭದ್ರಾವತಿ

ಸಿನಿಮಾ, ಕೆಲವರಿಗೆ ಇದು ಕೇವಲ ಒಂದು ಪದ, ಮನರಂಜನಾ ಸಾಧನಾ ಅಥವಾ ಒಂದು ಮಾಧ್ಯಮ. ಆದರೆ ಮತ್ತೇ ಕೆಲವರಿಗೆ ಇದೇ ಉಸಿರು. ಹೌದು, ಸಿನಿಮಾವನ್ನೇ ತಮ್ಮ ಕನಸಾಗಿಸಿಕೊಂಡು ಗಾಂಧಿ ನಗರಕ್ಕೆ ಬರುವವರ ಸಂಖ್ಯೆ ಕಡಿಮೆಯಂತೂ ಇಲ್ಲ. ಈ ರೀತಿ ಬಂದವರು ಎದುರಿಸುವ ಸವಾಲು, ಅವರ ಹಾದಿ, ಸಾಧನೆ, ಅವರ ಪರದಾಟ ಒಂದೆರಡಲ್ಲ. ಈ ಎಲ್ಲ ಅಂಶವನ್ನು ತೆರೆ ಮೇಲೆ ತರುವ ಪ್ರಯತ್ನವೇ ಸಿನಿಮಾ ಮೈ ಡಾರ್ಲಿಂಗ್.

ಸಿನಿಮಾ ಪತ್ರಕರ್ತರಾಗಿ ಸುಮಾರು ದಶಕಗಳ ಕಾಲ ಅನುಭವ ಹೊಂದಿರುವ ಗೌರೀಶ್ ಅಕ್ಕಿ, ಚಿತ್ರರಂಗವನ್ನು ತೀರಾ ಹತ್ತಿರದಿಂದ ಅವಲೋಕಿಸಿದ್ದಾರೆ. ಈ ಅನುಭವದ ಆಧಾರದ ಮೇಲೆ, ಸಿನಿಮಾ ಬಗ್ಗೆ ಬಣ್ಣ ಬಣ್ಣದ ಕನಸು ಹೊತ್ತು ಬರುವ ಯುವಕರ ಕಥೆಯನ್ನಾಧರಿಸಿ ಈ ಚಿತ್ರ ತಯಾರಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಅಕ್ಕಿ, ಚೊಚ್ಚಲ ಪ್ರಯತ್ನ ಈ ಡಾರ್ಲಿಂಗ್ ರೂಪ ತಾಳಿದೆ. ಸಿನಿಮಾರಂಗಕ್ಕೆ ಬಂದ ಯುವಕರು ತಪ್ಪು ಹೆಜ್ಜೆಗಳನ್ನಿಟ್ಟಾಗ ಏನಾಗುತ್ತದೆ ಎಂಬುದು ಚಿತ್ರದ ಮೂಲ ಎಳೆ. ಸ್ನೇಹದ ಅಂಶವೂ ಚಿತ್ರದ ಪ್ರಮುಖ ಭಾಗವಾಗಿದೆ. ಸಿನಿಮಾವನ್ನು ಅದಮ್ಯವಾಗಿ ಪ್ರೀತಿಸುವವರ ಮೇಲಿನ ಚಿತ್ರವಾಗಿದ್ದರಿಂದ ಇದು ಸಿನಿಮಾ ಮೈ ಡಾರ್ಲಿಂಗ್ ಆಗಿದೆ.

ಹೆಚ್ಚು ಸದ್ದು ಗದ್ದಲವಿಲ್ಲದೇ ಅಚ್ಚುಕಟ್ಟಾಗಿ ಶೂಟಿಂಗ್ ಮುಗಿಸಿರುವ ಈ ಚಿತ್ರ, ಇದೇ ತಿಂಗಳು 25ರಂದು ಸಿನಿ ರಸಿಕರ ಮುಂದೆ ಬರಲು ಸಜ್ಜಾಗಿದೆ. ಇದೇ ವಾರ ಚಿತ್ರ ಸೆನ್ಸಾರ್ ಮಂಡಳಿಯಲ್ಲಿ ಪರೀಕ್ಷೆ ಬರೆಯಲಿದೆ. ಇತ್ತ ಚಿತ್ರ ತಂಡ ಸಿನಿಮಾ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತಿದೆ. ಅದರಲ್ಲೂ ಬೆಂಗಳೂರಿನ ಹೊರತಾಗಿ, ಇತರೆ ಜಿಲ್ಲೆಗಳಲ್ಲಿ ಸಿನಿಮಾ ಮಾರ್ಕೆಟ್ ಬೆಳೆಯಬೇಕು ಎಂಬುದು ತಂಡ ಗುರಿಯಾಗಿದೆ.

ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ನಿರ್ದೇಶಕ ಗೌರೀಶ್, ‘ ಸಿನಿಮಾ ಪತ್ರಕರ್ತನಾಗಿದ್ದ 12 ವರ್ಷಗಳಲ್ಲಿ ನನಗೆ ಸಿಕ್ಕ ಮಾಹಿತಿ, ಮೂಲಗಳ ಒಳ ಮಾಹಿತಿ ಇಟ್ಟುಕೊಂಡು ಮಾಡಿರುವ ಚಿತ್ರ. ಕಥೆಯಲ್ಲಿ ಹೊಸತನವಿದ್ದು, ಚಿತ್ರ ಉತ್ತಮ ಗುಣಮಟ್ಟದಲ್ಲಿ ಮೂಡಿ ಬಂದಿದೆ. ಸಿನಿಮಾ ಬಗ್ಗೆ ಪೂರ್ಣ ಆತ್ಮವಿಶ್ವಾಸವಿದೆ. ಪ್ರೇಕ್ಷಕರು ಸಿನಿಮಾ ನೋಡಲು ಬಂದರೆ ಸಾಕು, ಚಿತ್ರವನ್ನು ಇಷ್ಟಪಡುವುದರಲ್ಲಿ ಅನುಮಾನವಿಲ್ಲ. ಚಿತ್ರದಲ್ಲಿ ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ಕಂಪ್ಲೀಟ್ ಫ್ಯಾಮಿಲಿ ಕೂತು ನೋಡುವ ಚಿತ್ರವಿದು’ ಎಂಬ ಭರವಸೆ ನೀಡಿದ್ದಾರೆ.

akki

ಇನ್ನು ಚಿತ್ರ ತಂಡದ ಬಗ್ಗೆ ಹೇಳೊದಾದ್ರೆ, ಅಗ್ನೀಶ್ ಲೋಕನಾಥ್ ಸಂಗೀತ, ಜಯಂತ್ ಕಾಯ್ಕಿಣಿ, ಮಳವಳ್ಳಿ ಸಾಯಿಕೃಷ್ಣ, ನಾಗೇಂದ್ರ ಪ್ರಸಾದ್, ಗೋಪಾಲ್ ವಾಜಪೇಯ್ ಸಾಹಿತ್ಯವಿದೆ. ಇನ್ನು ತಾರಾಗಣದಲ್ಲಿ ವಿಹಾನ್ ಗೌಡ, ಮನೋಜವಾ ಗಲಗಲ್ಲಿ, ಶಶಿದೇಶಪಾಂಡೆ, ಶ್ರೇಯಸ್ ಹೊಸ ಪ್ರತಿಭೆಗಳಾಗಿದ್ದಾರೆ. ಸಂಜನಾ ಗಾಂಧಿ, ಮಾನಸ, ಮಂಜುಳ, ಪಾಂಚಾಲಿ ನಾಯಕಿಯರ ಪಾತ್ರದಲ್ಲಿಲ್ಲಾದೆರೆ. ರಾಜು ತಾಳಿಕೋಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗಾಂಧಿನಗರದಲ್ಲಿ ಒಂದು ಕಮರ್ಷಿಯಲ್ ಸಿನಿಮಾ ಹೇಗೆ ಮಾಡ್ತಾರೆ ಎಂಬುದನ್ನು ಒಂದೇ ಒಂದು ಹಾಡಿನಲ್ಲಿ ಹೇಳೊ ಪ್ರಯತ್ನ ‘ಮಾಯದಂತ ಮಾಯಾ ಲೋಕಾನೊ’ ಉತ್ತಮವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಹೊಸತನದ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿರುವ ಹೊಸ ತಂಡಕ್ಕೆ ಸಿನಿಮಾ ಪ್ರೇಕ್ಷಕರ ಬೆಂಬಲ ಮುಖ್ಯ. ಹಾಗಾಗಿ ಜನರು ಈ ಸಿನಿಮಾ ಒಪ್ಪುವರು ಎಂಬ ನಿರೀಕ್ಷೆಯಲ್ಲಿದೆ ಚಿತ್ರ ತಂಡ.

Leave a Reply