ಸಿಎಂ ಸಾಲದ ಬಜೆಟ್ ನಲ್ಲಿ ಕೊಟ್ಟಿದ್ದೇನೂ ಕಡಿಮೆ ಅಲ್ಲ, ಆದ್ರೆ ಸದನದಲ್ಲಿ ಕೈಕೊಟ್ಟ ಕರೆಂಟ್ ಹಂಗೆ ಆಗ್ಬಾರ್ದಲ್ಲ?

Chief Minister Siddaramaiah presenting 2016-2017 Budget at Vidhana Soudha in Bengaluru on Friday.

ಡಿಜಿಟಲ್ ಕನ್ನಡ ಟೀಮ್

ನಂಗೆ ಕೊಟ್ಟಿಲ್ಲ, ಇವರಿಗೆ ಹೆಚ್ಚಾಯ್ತು, ಅವರಿಗೆ ಕಮ್ಮಿ ಆಯ್ತು ಅಂತ ಗೊಣಗಾಡುವಂತಿಲ್ಲ. ಸಿದ್ದರಾಮಯ್ಯನವರ ಈ ಬಾರಿ ಬಜೆಟ್ ನಲ್ಲಿ ಅಂಕಿಅಂಶಗಳು ಭರಪೂರ ವಿಜೃಂಭಿಸಿವೆ. ಸಾಲದ ಬಜೆಟ್ ಅನುಷ್ಠಾನವಾಗಿ ಘೋಷಣೆಯಾಗಿರುವುದೆಲ್ಲ ಜನಕ್ಕೆ ಮುಟ್ಟಬೇಕಷ್ಟೆ. ಅದುವೇ ಸವಾಲು.

1,63, 419 ರುಪಾಯಿಗಳ ಭಾರೀ ಗಾತ್ರದ್ದು ಈ ಬಜೆಟ್. ರಾಜ್ಯದಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿರೋದು ರೈತರ ಆತ್ಮಹತ್ಯೆಗಳು, ಕುಡಿಯುವ ನೀರು ಕೇಳಲು ಬೆಂಗಳೂರಿಗೆ ಬಂದ ರೈತರಿಗೆ ಲಾಠಿ ಏಟು ಬಿದ್ದಿದ್ದು… ಇತ್ಯಾದಿ ಅನಪೇಕ್ಷಿತ ವಿದ್ಯಮಾನಗಳೇ.

ಹೀಗಾಗಿ ಸಿದ್ದರಾಮಯ್ಯನವರ ಗಮನ ಹೆಚ್ಚು ಬಿದ್ದಿರುವುದು ಕೃಷಿ ಮತ್ತು ನೀರಾವರಿ ವಲಯಕ್ಕೆ. 14, 477 ಕೋಟಿ ರುಪಾಯಿಗಳನ್ನು ಜಲ ಸಂಪನ್ಮೂಲದ ಅಭಿವೃದ್ಧಿಗೆ ಎತ್ತಿಡಲಾಗಿದ್ದರೆ, ₹4034 ಕೋಟಿ ರುಪಾಯಿಗಳನ್ನು ಕೃಷಿ ವಲಯಕ್ಕೆ, ₹1886 ಕೋಟಿ ರುಪಾಯಿಗಳು ಪಶುಸಂಗೋಪನೆಗೆ ಹಾಗೂ ₹753 ಕೋಟಿ ರುಪಾಯಿಗಳು ತೋಟಗಾರಿಕೆಗೆ ಸಿಕ್ಕಿವೆ. ಇವೆಲ್ಲವೂ ರೈತಾಪಿ ಬದುಕಿಗೆ ಪೂರಕವಾಗಿ ಒದಗಿರುವಂಥ ಮೊತ್ತಗಳೇ. ಇವುಗಳನ್ನು ಹೇಗೆಲ್ಲ ವೆಚ್ಚ ಮಾಡಲಾಗುವುದೆಂಬುದಕ್ಕೆ ಪೂರಕವಾಗಿ ಹಮ್ಮಿಕೊಂಡಿರುವ ಯೋಜನೆಗಳ ಪಟ್ಟಿ ದೊಡ್ಡದಿದೆ.

 ಅದ್ಸರಿ ನಗರಕ್ಕಿಲ್ವಾ?

ಕೃಷಿಗೇನೋ ಕೊಟ್ಟಿರಿ ಸರಿ, ಆದ್ರೆ ಬೆಂಗಳೂರಲ್ಲಿ ಬದುಕು ತಳ್ತಿರೋ ನಮಗೂ ಕಷ್ಟಗಳೈತ್ರಿ ಅಂತ ಕೇಳ್ತೀವಲ್ಲ… ಹಿಂಗಾಗಿ, ತಗಳ್ರಪ್ಪಾ ಅಂತ ಬೆಂಗಳೂರು ನಗರಕ್ಕೆ ಅಂತಲೇ ₹5000 ಕೋಟಿ ಸ್ಪೆಷಲ್ ಪ್ಯಾಕೇಜು. ಕೆರೆಯಲ್ಲಿ ನೊರೆ ಬಂತು, ಕೆರೆಗಳೆಲ್ಲ ಅತಿಕ್ರಮಣವಾಗಿವೆ ಅಂತೆಲ್ಲ ಕೂಗ್ತೀರಿ… ತಗಳಿ ₹100 ಕೋಟಿ ಕೆರೆಗಳ ಅಭಿವೃದ್ಧಿಗಂತ್ಲೇ ಕೊಟ್ಟಿದೀವಿ. (ಸಮಸ್ಯೆ ಪರಿಹಾರವಾಗುತ್ತಾ ಅಂತೆಲ್ಲ ತಲೆ ತಿನ್ಬೇಡಿ ಮೇಲಿಂದ)

 ಮತ್ತೇ…ಅಹಿಂದಕ್ಕೆ?

‘ರೈತ್ರು, ಬೆಂಗಳೂರಿಗರು ಎಲ್ಲ ಸರೀನ್ರೀ… ನಾವ್ ನಿಮ್ ಓಟ್ ಬ್ಯಾಂಕ್, ‘ಅಹಿಂದ’ಕ್ಕೆ ಏನಯ್ತಣ್ಣೋ?’

ತಡ್ಕಳ್ರಪ್ಪಾ, ನಿಮ್ಮ ಮರ್ಯಕಾಯ್ತದಾ? ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪೀಠ ಸ್ಥಾಪನೆ. ದೇವರಾಜ ಅರಸು ಕೌಶಲ್ಯ ಅಭಿವೃದ್ಧಿ, ತರಬೇತಿ ಮತ್ತು ಸಂಶೋಧನೆ ಸಂಸ್ಥೆಯ ಮೂಲಕ ಅಹಿಂದ ವರ್ಗಕ್ಕೆ ಕೌಶಲ ತರಬೇತಿಗೆ ಸಹಾಯ. ಎಸ್ ಸಿ – ಎಸ್ಟಿ ರೈತರು ತೋಟಗಾರಿಕೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅನುಕೂಲವಾಗುವಂತೆಯೂ ನೀರಾವರಿಯಲ್ಲಿ ಸಬ್ಸಿಡಿ. ಉಳಿದಂತೆ ಹಜ್ ಭವನ ಇತ್ಯಾದಿಗಳಿಗೆಲ್ಲ ಹಣ ಹರಿಸಲಾಗಿದೆ.

ಗ್ರಾಹಕನಿಗೇನಿದೆ?

ಇದೆಲ್ಲ ಅವರಿಗೆ- ಇವರಿಗೆ ಅಂತಾಯ್ತು… ಆದರೆ ಎಲ್ಲ ವರ್ಗಗಳಲ್ಲೂ ಇರುವ ಗ್ರಾಹಕನಿಗೆ ಈ ಬಾರಿಯ ಆಯವ್ಯಯದಲ್ಲಿ ಕೈಗೊಂಡಿರುವ ಕ್ರಮಗಳಿಂದ ಆಗುವ ಲಾಭ- ನಷ್ಟಗಳ ಲೆಕ್ಕಾಚಾರವೇನು?

ಇಲ್ಲಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಅನುಸರಿಸಿರುವುದು ಖರೆ. ದಿನನಿತ್ಯದ ಉಣ್ಣೋದು-ತಿನ್ನೋದು ಎಲ್ಲ ಮೂಲಭೂತ ಅಗತ್ಯ. ಆದ್ರೆ ವಾರಾಂತ್ಯದಲ್ಲಿ ಒಳ್ಳೇ ಮೂವಿ ನೋಡ್ಕೊಂಡು, ಸಾಫ್ಟ್ ಡ್ರಿಂಕ್ ಹೀರಬೇಕು ಅಂತಾದ್ರೆ ಹೆಚ್ಚಿಗೆ ದುಡ್ಡು ತೆರಿ ಅಂದವ್ರೆ ಸಿದ್ರಾಮಣ್ಣ. ಅಬಕಾರಿ ಸುಂಕದಲ್ಲೂ ಏರಿಕೆ ಆಗಿದೆ. ಹೀಗಾಗಿ ಎಣ್ಣೆ ಹೊಡೆದು ಜಗತ್ತು ಮರೆಯುವ ವೈಭೋಗಕ್ಕೂ ಹಣ ಹೆಚ್ಚು ತೆರಬೇಕಾಗ್ತದೆ.

ಮೋದಿ ಸರ್ಕಾರ ಪೆಟ್ರೋಲ್- ಡಿಸೆಲ್ ಬೆಲೆ ಇಳಿಸಿ ಕಚ್ಚಾತೈಲದ ದರದಲ್ಲಾದ ಇಳಿಕೆಯನ್ನು ಜನರಿಗೆ ಮುಟ್ಟಿಸಬೇಕು ಅಂತ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಭಾಷಣ ಹೊಡೆದಿದ್ದೇ ಬಂತು. ಇಲ್ಲಿ ನೋಡಿದರೆ ಆಯವ್ಯಯದ ಕೊಡುಗೆಯಾಗಿ ಪೆಟ್ರೋಲ್- ಡಿಸೇಲ್ ಸಹ ರಾಜ್ಯದಲ್ಲಿ ತುಟ್ಟಿ. ಆದ್ರೆ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯವಾಗಿಬಿಟ್ಟಿದೆ ಅಂತ ಒದ್ದಾಡ್ತಿದ್ರಲ್ಲ… ಶಿರಸ್ತ್ರಾಣ ಅಗ್ಗವಾಗಲಿದೆ, ಅಷ್ಟು ಸಮಾಧಾನ. ಕೇಂದ್ರ- ರಾಜ್ಯ ಸರ್ಕಾರಗಳು ವಿದ್ಯುತ್ ನ ಪರಿಣಾಮಕಾರಿ ಬಳಕೆ ಹಾಗೂ ಮಿತವ್ಯಯದ ಬಗ್ಗೆ ಮನಸು ಮಾಡಿರುವ ಸಂದರ್ಭಕ್ಕೆ ಪೂರಕವಾಗಿ ಎಲ್ ಇಡಿ ಬಲ್ಬ್ ಗಳೂ ಕಡಿಮೆ ಬೆಲೆಯಲ್ಲೇ ಸಿಗುತ್ತವೆ.

ಗಾಢವಾಗಿ ಸಿಗ್ತಿರೋ ಚಿತ್ರಣ ಅಂದ್ರೆ…

ಇದೊಂದು ಕೃಷಿ ಬಜೆಟ್. ಸಹಾಯಧನಗಳ ಮೂಲಕ ಕೃಷಿ, ಹೈನುಗಾರಿಕೆ, ರೇಷ್ಮೆ ಇತ್ಯಾದಿ ವಲಯಗಳನ್ನು ಮುಟ್ಟುವ ಹಲವು ಪ್ರಸ್ತಾವಗಳು ಇವೆ. ಅವು ಎಲ್ಲ ಆಯವ್ಯಯಗಳಲ್ಲೂ ಇರುತ್ತವೆ. ಅದರ ಹೊರತಾಗಿ ಕೃಷಿ ಕಾಲೇಜುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ, ಜಿಕೆವಿಕೆ-  ಐಐಎಂ-ಬಿ ಇಂಥ ಸಂಸ್ಥೆಗಳ ಸಹಯೋಗದಿಂದ ಅಗ್ರಿ ಕ್ಲಿನಿಕ್ ತೆರೆಯುವ ಯೋಜನೆಗಳ ಪ್ರಸ್ತಾಪವಿದೆ. ಕೃಷಿ ಸಂಬಂಧಿ ನವೋದ್ದಿಮೆಗಳ ಪ್ರೋತ್ಸಾಹಕ್ಕೆ 10 ಕೋಟಿ ರುಪಾಯಿ ಎತ್ತಿಡಲಾಗಿದೆ. ಕೇಂದ್ರ ಸರ್ಕಾರ, ವಿಶೇಷವಾಗಿ ಪ್ರಧಾನಿ ಮೋದಿ ದೇಶದಲ್ಲಿ ದ್ವಿದಳ ಧಾನ್ಯ ಉತ್ಪಾದನೆಗೆ ಒತ್ತುಕೊಡಬೇಕಾದ ಅಗತ್ಯವನ್ನು ಹೇಳುತ್ತ ಬಂದಿದ್ದಾರೆ. ರಾಜ್ಯದ ಬಜೆಟ್ ನಲ್ಲಿ ಸಹ ದ್ವಿದಳ ಧಾನ್ಯ ಉತ್ಪಾದನೆಗೆ ಪಲ್ಸ್ ಮಿಷನ್ ಪ್ರಸ್ತಾಪ ಮಾಡಿರುವುದು ಅತ್ಯಂತ ಪೂರಕ ಬೆಳವಣಿಗೆ. ಸಾಮಾನ್ಯನಿಗೆ ಪ್ರೋಟಿನ್ ಸಿಗುವುದೇ ದ್ವಿದಳ ಧಾನ್ಯ ಬಳಕೆಯಿಂದ. ಈ ಹಿನ್ನೆಲೆಯಲ್ಲಿ, ಪೌಷ್ಟಿಕಾಂಶದ ಸಮಸ್ಯೆ ಎದುರಿಸುವಲ್ಲಿ ಇದು ಸಣ್ಣದಾದರೂ ಮುಖ್ಯ ಹೆಜ್ಜೆಯಾಗುತ್ತದೆ.

ಬಹಳ ಮುಖ್ಯವಾಗಿ ಕೃಷಿ ಆದಾಯದ ಮೇಲಿನ ತೆರಿಗೆಯನ್ನು ತೆಗೆದು ಹಾಕಿರುವುದು ಕಾಫಿ, ಟೀ, ರಬ್ಬರ್ ಸೇರಿದಂತೆ ತೋಟಗಾರಿಕಾ ಬೆಳೆಗಾರರಿಗೆ ವರದಾನ. ಕೃಷಿಗೆ ಪೂರಕವೆಂಬಂತೆ ಪ್ರಮುಖ ನೀರಾವರಿ ಕಾಲುವೆಗಳ ಕಾಮಗಾರಿ- ದುರಸ್ತಿಗಳಿಗೆಂದೇ 3000 ಕೋಟಿ ರುಪಾಯಿಗಳನ್ನುವ್ಯಯಕ್ಕಾಗಿ ಗುರುತಿಸಲಾಗಿದೆ.

ಇವೆಲ್ಲ ಆಗಲೇಬೇಕಿದ್ದದ್ದು. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದಂತೆ 2014-15ರಲ್ಲಿಶೇ. 7.8 ರಷ್ಟು ಬೆಳವಣಿಗೆ ತೋರಿದ್ದ ಕರ್ನಾಟಕದ ಆರ್ಥಿಕತೆ,  2015-16ರಲ್ಲಿ ಶೇ. 6.2ಕ್ಕೆ ಕುಸಿಯುವುದಕ್ಕೆ ಕೃಷಿ ವಲಯದ ಕುಸಿತವೇ ಕಾರಣ.

ರೆ….!

ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗಲೇ ಕರೆಂಟ್ ಕೈಕೊಟ್ಟು ಸದನವನ್ನು ಕತ್ತಲಲ್ಲಿ ಮುಳುಗಿಸಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತು. ಜನರೇಟರ್ ಸಹ ತ್ವರಿತವಾಗಿ ಚಾಲೂ ಆಗದೇ ಕೆಲ ನಿಮಿಷಗಳ ಮಟ್ಟಿಗೆ ಸಿಎಂ ಬಜೆಟ್ ಮಂಡನೆ ನಿಲ್ಲಿಸಬೇಕಾಯಿತು. ಪ್ರತಿಪಕ್ಷಗಳು ಈ ಸಂದರ್ಭವನ್ನು ಸರ್ಕಾರದ ಟೀಕೆಗೆ ಸರಿಯಾಗಿಯೇ ಬಳಸಿಕೊಂಡವು.

ಉಪಸಂಹಾರ ಇಷ್ಟೆ. ಆಯವ್ಯಯದ ಅಂಕಿಅಂಶಗಳೆಲ್ಲ ಮೊದಲೇ ಹೇಳಿದಂತೆ ಅವ್ರಿಗೂ ಕೊಟ್ಟಿದೀನಿ, ಇವ್ರಿಗೂ ಕೊಟ್ಟಿದೀನಿ, ಕೃಷಿಪರ ಎಂಬಂತೆ ಇದೆ. ಆದರೆ ಭಾಷಣ ಜೋರಿತ್ತು, ಆದ್ರೇನ್ ಮಾಡ್ತೀರಿ ಕರೆಂಟ್ ಹೋಯ್ತು ಎಂಬಂತೆ- ಆಯವ್ಯಯದ ಅಂಕಿಯಾಟ ಜೋರಿತ್ತು, ಆದರೆ ಅನುಷ್ಠಾನ ಮಾತ್ರ ಕತ್ತಲಾಯ್ತು ಎಂದಾಗುವ ಸಾಧ್ಯತೆ ಇದೆ. ಸಾಲದ ಇಟ್ಟಿಗೆ ಮೇಲೆ ಕುಳಿತಿರುವಾಗ ಇಂಥ ‘ರೆ’ ಸಾಧ್ಯತೆಗಳೇ ಹೆಚ್ಚು.

Leave a Reply