ಸುದ್ದಿಸಂತೆ: ಕೇಜ್ರಿವಾಲ್ ಇನ್ನು ಜಾಹೀರಾತುಗಳಲ್ಲಿ ಮುಖ ತಿರುಗಿಸಬೇಕಿಲ್ಲ, ಕುದುರೆ ಕಾಲ್ಮುರಿತ- ನ್ಯಾಯಾಂಗ ಬಂಧನಕ್ಕೆ ಶಾಸಕ

ಸರ್ಕಾರಿ ಜಾಹೀರಾತು: ರಾಜ್ಯಪಾಲ, ಸಿಎಂ, ಸಚಿವರ ಭಾವಚಿತ್ರ ಅಳವಡಿಕೆ ಅನುಮತಿ

ಇನ್ನುಮುಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಟಿವಿ ಜಾಹೀರಾತುಗಳಲ್ಲಿ ಕೆಮರಾದ ವಿರುದ್ಧ ದಿಕ್ಕಿನಲ್ಲಿ ನಿಂತು ಮಾತನಾಡುವ ಪ್ರಯಾಸ ತೆಗೆದುಕೊಳ್ಳಬೇಕಿಲ್ಲ. ಏಕೆಂದರೆ ಸರ್ಕಾರಿ ಹಣದಲ್ಲಿ ಬಿತ್ತರಿಸುವ ಜಾಹೀರಾತುಗಳಲ್ಲಿ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಮಾತ್ರ ಕಾಣಿಸಿಕೊಳ್ಳುವ ಅವಕಾಶ ಎಂಬ ನಿಯಮ ಸಡಿಲಾಗಿದೆ.

ಸರ್ಕಾರಿ ಜಾಹೀರಾತುಗಳಲ್ಲಿ ಇನ್ನು ಮುಂದೆ ಮುಖ್ಯಮಂತ್ರಿಗಳ, ರಾಜ್ಯಪಾಲರ, ಕೇಂದ್ರ ಮತ್ತು ರಾಜ್ಯ ಸಚಿವರ ಭಾವಚಿತ್ರಗಳನ್ನು ಹಾಕಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಸರ್ಕಾರಿ ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಭಾವಚಿತ್ರಗಳನ್ನು ಮಾತ್ರ ಪ್ರಕಟಿಸಬೇಕು ಎಂದು ಕಳೆದ ವರ್ಷ ನ್ಯಾಯಾಲಯ ಆದೇಶಿಸಿತ್ತು. ಈಗ ತನ್ನ ತೀರ್ಪನ್ನು ಮರುಪರಿಶೀಲಿಸಿ ಈ ಆದೇಶ ಹೊರಡಿಸಿದೆ.

 ಜೆಎನ್ ಯು ಪ್ರಕರಣ: ಉಮರ್, ಅನಿರ್ಬಾನ್ ಗೆ ರತ್ತುಬದ್ಧ ಜಾಮೀನು

ಜೆಎನ್ ಯು ವಿವಾದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಉಮರ್ ಖಾಲಿದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯಗೆ ದೆಹಲಿ ನ್ಯಾಯಾಲಯ 6 ತಿಂಗಳ ಕಾಲ ಷರತ್ತು ಬದ್ಧ ಜಾಮೀನು ನೀಡಿದೆ. ತಲಾ 25 ಸಾವಿರ ಮೌಲ್ಯದ ಬಾಂಡ್ ನೀಡಿದ ನಂತರ ಬಿಡುಗಡೆಯಾಗಲಿದ್ದು, ಅನುಮತಿ ಇಲ್ಲದೆ ದೆಹಲಿ ಬಿಟ್ಟು ಹೋಗದಂತೆ ಷರತ್ತು ವಿಧಿಸಿದೆ. ಫೆ.9 ರಂದು ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಫೆ. 23 ರಂದು ಬಂಧನಕ್ಕೆ ಒಳಗಾಗಿ ವಿಚಾರಣೆ ಎದುರಿಸುತ್ತಿದ್ದರು.

 ಮಲ್ಯ ಹಾಜರಿಗೆ ಏಪ್ರಿಲ್ 2 ಡೆಡ್ ಲೈನ್

ಐಡಿಬಿಐ ಬ್ಯಾಂಕಿನ 900 ಕೋಟಿ ರು ಸಾಲ ಮರುಪಾವತಿಸದೆ ಸುಸ್ತಿದಾರನಾಗಿರುವ ವಿಜಯ್ ಮಲ್ಯರಿಗೆ ಜಾರಿ ನಿರ್ದೇಶನಾಲಯ (ಇಡಿ) ಏಪ್ರಿಲ್ 2 ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಡೆಡ್ ಲೈನ್ ವಿಧಿಸಿದೆ. ಮಾರ್ಚ್ 2 ರಂದು ದೇಶ ತೊರೆದು ಯುಕೆಯಲ್ಲಿ ನೆಲೆಸಿರುವ ಮಲ್ಯ, ದೇಶದ 17 ಬ್ಯಾಂಕುಗಳಿಂದ ಪಡೆದಿರುವ ಸುಮಾರು 7 ಸಾವಿರ ಕೋಟಿ ರು ಸಾಲ ತಿರಿಸದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಕೋರ್ಟ್ ಮೋರೆ ಹೋಗಿದ್ದವು. ಐಡಿಬಿಐ ಬ್ಯಾಂಕಿನ ಸಾಲದ ವಿಚಾರವಾಗಿ ಈ ಹಿಂದೆ ಮಾರ್ಚ್ 18 ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಆದರೆ ಮಲ್ಯ ಕಾಲವಾಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಕುದುರೆ ಕಾಲು ಮುರಿತ: ಬಿಜೆಪಿ ಶಾಸಕನ ಬಂಧನ, ಕುದುರೆಗೆ ಕೃತಕ ಕಾಲು ಜೋಡಣೆ

ಉತ್ತರಾಖಂಡದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಪೊಲೀಸ್ ಕುದುರೆ ಶಕ್ತಿಮಾನ್ ಗೆ ಕಾಲು ಮುರಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಗಣೇಶ್ ಜೋಶಿಯವರನ್ನು ಸ್ಥಳೀಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಶುಕ್ರವಾರ ಆದೇಶಿಸಿದೆ. ಪ್ರತಿಭಟನೆ ವೇಳೆ ಶಕ್ತಿಮಾನ್ ನ ಹಿಂದಿನ ಎಡ ಕಾಲು ತೀವ್ರವಾಗಿ ಗಾಯಗೊಂಡಿತ್ತು. ಇಂದು ಸುಮಾರು 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ 10 ವೈದ್ಯರ ತಂಡ ಮುರಿತಕ್ಕೆ ಒಳಗಾಗಿದ್ದು ಕಾಲನ್ನು ತೆಗೆದು ಕೃತಕ ಕಾಲೊಂದನ್ನು ಅಳವಡಿಸಿ ಯಶಸ್ವಿಯಾಗಿದ್ದಾರೆ.

Leave a Reply