ಆರೆಸ್ಸೆಸ್ ನಲ್ಲಿ ಬದಲಾಗ್ತಿರೋದು ವಸ್ತ್ರ ಮಾತ್ರವೋ ಅಥವಾ ಹೊರಡುತ್ತಿರೋದು ಹೊಸನಾಳೆಗಳ ಸಂಕೇತವೋ?

ಇಂಡಿಯಾ ಟುಡೆ ಸಮಾವೇಶದಲ್ಲಿ ದತ್ತಾತ್ರೇಯ ಹೊಸಬಾಳೆ- ರಾಹುಲ್ ಗಾಂಧಿ ಮುಖಾಮುಖಿ

ಪ್ರವೀಣ್ ಕುಮಾರ್

ತನ್ನ ವಸ್ತ್ರಸಂಹಿತೆ ಬದಲಿಸಿಕೊಳ್ಳುವ ನಿರ್ಧಾರದ ಮೂಲಕ ಸುದ್ದಿಯಾದ ಆರೆಸ್ಸೆಸ್, ಸಂಘಟನೆಯ ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರ ‘ಸಲಿಂಗ ಕಾಮ ಅಪರಾಧವಲ್ಲ’ ಎಂಬ ಹೇಳಿಕೆಯಿಂದ ಮತ್ತಷ್ಟು ಚರ್ಚೆಯಲ್ಲಿದೆ. ಚರ್ಚೆಯ ಮಾತು ಹಾಗಿರಲಿ, ಈಗ ಕಾಣುತ್ತಿರುವುದು ಪೀಳಿಗೆ ಬದಲಾವಣೆ ಸಂಕೇತವೇ. ಅದೇಕೆ ಅಂತ ಅರ್ಥಮಾಡಿಕೊಳ್ಳುವುದಕ್ಕೆ ಮೊದಲು ಆರೆಸ್ಸೆಸ್ಸಿನ ಇತ್ತೀಚಿನ ನಡೆಗಳನ್ನು ಗಮನಿಸಬೇಕು.

ಮೊದಲಿಗೆ ಆರೆಸ್ಸೆಸ್ ನ ವೇಷ  ಬದಲಾವಣೆ ಸುದ್ದಿ ಬಂತು. ನಿಜ, ಕೇವಲ ಡ್ರೆಸ್ ಬದಲಾವಣೆ ಯಾವುದೇ ಸಂಘಟನೆಯಲ್ಲಿ ಅಷ್ಟು ಸುದ್ದಿಯಾಗಬೇಕಿಲ್ಲ. ಆದರೆ ಆರೆಸ್ಸೆಸ್ ಗಣವೇಷ ಬದಲಾಗುತ್ತದೆ ಎಂಬ ಸುದ್ದಿಗಳು ವರ್ಷಗಳಿಂದ, ‘ಬಲ್ಲ ಮೂಲಗಳನ್ನು’ ಉಲ್ಲೇಖಿಸಿ ವರದಿಯಾಗುವುದು, ನಂತರ ಸಂಘ ಅದನ್ನು ನಿರಾಕರಿಸುವುದು ನಡೆದುಕೊಂಡೇ ಬಂದಿತ್ತು. ಹೀಗಾಗಿ ಕೊನೆಗೂ ಆರೆಸ್ಸೆಸ್ ಚಡ್ಡಿ ಬದಲಿಸಿ ಪ್ಯಾಂಟ್ ಗೆ ಬಂದ ವಿದ್ಯಮಾನ ದೊಡ್ಡ ಸುದ್ದಿಯೇ. ಅಂದರೆ ಡ್ರೆಸ್ ಬದಲಾವಣೆ ವಿಷಯದಲ್ಲೂ ಸಂಘಟನೆಯ ಹಳೆ- ಹೊಸ ತಲೆಗಳ ನಡುವೆ ಸಾಕಷ್ಟು ಚೌಕಾಶಿಯಾಗಿರುವುದು ಸ್ಪಷ್ಟ.

ಡ್ರೆಸ್ ಒಂದು ಸೂಚನೆ ಅಷ್ಟೆ. ಯಾವುದನ್ನೇ ಆಗಲಿ ತೀರ ಸಂಕೀರ್ಣದಲ್ಲಿ ಇಡದೇ ಸರಳ ಮಾರ್ಗ ಅನುಸರಿಸುವ ಹಾದಿಗೆ ಆರೆಸ್ಸೆಸ್ ಹೊರಳಿಕೊಳ್ಳುತ್ತಿದೆ. ‘ನಮ್ಮದು ಸಾವಿರಾರು ವರ್ಷಗಳ ಸನಾತನ ಪರಂಪರೆಯಾದ್ದರಿಂದ ಹಿಂದಿನವರು ಏನೋ ಮಾಡಿದ್ದಾರೆ ಅಂದ್ರೆ ಅದರಲ್ಲಿ ಅರ್ಥ ಇದ್ದೇ ಇರುತ್ತೆ. ಯಾವ ದೇವಾಲಯಕ್ಕೆ ಯಾರು ಹೋಗಬಾರದು ಎಂಬುದರಲ್ಲೂ ವೈಜ್ಞಾನಿಕ ಕಾರಣಗಳಿದ್ದಿರುತ್ತವೆ’ ಅಂತೆಲ್ಲ ವಾದಿಸುವ ಸನಾತನಿಗಳಿಗೆ ಮಾತ್ರವೇ ಆತುಕೊಂಡು ಹೊಸರಕ್ತವನ್ನು ಕಡೆಗಣಿಸುವ ಸ್ಥಿತಿಯಲ್ಲಿಲ್ಲಆರೆಸ್ಸೆಸ್. ಹಾಗೆಂದೇ ಕಳೆದ ಭಾನುವಾರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜೀ ಜೋಷಿ ಅವರು ಸಹ ‘ಕೆಲವು ದೇವಸ್ಥಾನಗಳಿಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ದೇವಸ್ಥಾನಗಳ ಆಡಳಿತ ಮಂಡಳಿಯವರು ತಮ್ಮ ಮನಸ್ಥಿತಿಯನ್ನು ಬದಲಾಯಿಕೊಳ್ಳಬೇಕು’ ಎಂದಿದ್ದರು. ಹಲವು ದಿನಗಳಿಂದ ಶನಿಸಿಂಗ್ಣಾಪುರ ದೇವಸ್ಥಾನ ಮತ್ತು ತ್ರಯಂಬಕೇಶ್ವರ ದೇವಸ್ಥಾನದ ವಿಚಾರದಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಘದ ನಿಲುವು ಮಹತ್ವ ಪಡೆದುಕೊಳ್ಳುತ್ತದೆ.

ಈಗ ಬಹುಚರ್ಚೆಯಲ್ಲಿರುವ ಸಲಿಂಗ ಕಾಮದ ವಿಚಾರದಲ್ಲೂಆರೆಸ್ಸೆಸ್ ಇಂಥ ಸರಳ ನಡೆಯನ್ನೇ ಅನುಸರಿಸಿದೆ. ಸಲಿಂಗರತಿಯನ್ನು ಕಾಯ್ದೆಯಲ್ಲಿ ಅಪರಾಧ ಕೃತ್ಯವಾಗಿ ನೋಡಬೇಕಿಲ್ಲ ಎಂದು ಹೇಳುತ್ತಲೇ, ಅದಕ್ಕೆ ತನ್ನ ಸಮ್ಮತಿ ಇಲ್ಲ, ಅನುಕಂಪವಷ್ಟೇ ಇದೆ ಎಂಬ ಸಂದೇಶವನ್ನೂ ನೀಡಲು ಆರೆಸ್ಸೆಸ್ ಪ್ರಯತ್ನಿಸಿದೆ. ‘ಸಲಿಂಗರತಿ ಶಿಕ್ಷಿಸಬೇಕಾದ ಕೃತ್ಯವಲ್ಲ. ಆದರೆ ನಮ್ಮ ಸಮಾಜದಲ್ಲಿ ಇದೊಂದು ಅನೈತಿಕ ಕೃತ್ಯ ಎನಿಸಿಕೊಳ್ಳುತ್ತದೆ. ಅಂಥವರಿಗೆ ಮಾನಸಿಕ ಚಿಕಿತ್ಸೆ ಬೇಕು’ ಎಂದಿದ್ದಾರೆ ಆರ್ ಎಸ್ ಎಸ್ ನ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ. ಇಂಥದೊಂದು ಪದ್ಧತಿಯಿಂದ ಬೇರೆಯವರಿಗೆ ತೊಂದರೆ ಆಗುತ್ತಿಲ್ಲ ಎಂದಾದರೆ ಅದನ್ನು ಕಾನೂನಿನ ಮೂಲಕ ನಿಯಂತ್ರಿಸಬೇಕಿಲ್ಲ ಎಂಬ ಅಭಿಮತ ಅವರದ್ದು. ಅಂದರೆ ಎಲ್ಲವನ್ನೂ ಒಪ್ಪುವ ಪ್ರೊಗ್ರೆಸ್ಸಿವ್ ದಡಕ್ಕೂ ಜಿಗಿಯಬೇಕಿಲ್ಲ, ಹಂಗಂತ ವೈಯಕ್ತಿಕ ಹಂತದ ಪ್ರಶ್ನೆಯಾಗಿರುವ ಲೈಂಗಿಕತೆಯನ್ನು ಕಾನೂನಿನ ಜಾಲರಿಯಲ್ಲಿ ಜಾಲಾಡಬೇಕಾಗಿಯೂ ಇಲ್ಲ ಎಂಬಂಥ ನಿಲುವದು. ಪರೋಕ್ಷವಾಗಿ ಹೇಳಬೇಕೆಂದರೆ, ಇಂಥ ವಿಷಯಗಳಲ್ಲಿ ಸಮಯ ಹಾಳುಮಾಡಿಕೊಳ್ಳಬೇಕಿಲ್ಲ, ಚರ್ಚಿಸೋದಕ್ಕೆ ಬೇರೆ ಸಂಗತಿಗಳು ಬೇಕಷ್ಟಿವೆ ಎಂದಂತಿದೆ ಇದು.

ಇಂಥ ಹೊರಳುಗಳಿಗೆ ಕಾರಣಗಳು ಇಲ್ಲದಿಲ್ಲ. ಕೇಂದ್ರದಲ್ಲಿ ಬಿಜೆಪಿಯ ಉತ್ಥಾನ ಮತ್ತು ಸಾಮಾಜಿಕ ಮಾಧ್ಯಮದ ಬೆಳವಣಿಗೆ ಇವುಗಳಿಂದ ಯುವ ಸಮುದಾಯ ದೊಡ್ಡಮಟ್ಟದಲ್ಲಿ ರಾಜಕೀಯ ಚರ್ಚೆಯಲ್ಲಿ ಪಾಲುಗೊಳ್ಳುತ್ತಿದೆ. ಇವರೆಲ್ಲ ಆರೆಸ್ಸೆಸ್ ಬಗ್ಗೆ ದೂರದಿಂದಲೇ ಪುಳಕ ಇಟ್ಟುಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಅನಾಯಾಸವಾಗಿ ‘ಆರೆಸ್ಸೆಸ್ ಪರ’ ಎನಿಸಿರುವವರು. ಅನಾಯಾಸ ಎಂದರೆ- ಇವರನ್ನು ಬೆಳಗ್ಗೆ ಎಬ್ಬಿಸಿ, ಮೈದಾನಗಳಿಗೆ ಕರೆತಂದು, ನಮಸ್ತೆ ಸದಾ ವತ್ಸಲೇ ಹಾಡಿಸಿ, ಸಂಘದ ಹಿರಿಯರ ಬೌದ್ಧಿಕ್ ಭಾಷಣಗಳನ್ನು ಕೇಳಿಸಿ ತರಬೇತುಗೊಳಿಸಿಲ್ಲ. ತಮ್ಮ ಟ್ವೀಟ್- ಫೇಸ್ಬುಕ್ ವಿಚಾರಗಳ ಆಶ್ರಯಕ್ಕೆ ಆರೆಸ್ಸೆಸ್ ಇದೆ, ಅದು ತಮ್ಮ ಬೆನ್ನಹಿಂದೆ ಯಾವಾಗಲೂ ಇದ್ದಿರುತ್ತೆ ಅಂತ ನಂಬಿದವರು ಇವರೆಲ್ಲ. ಈಗ ಸಾವರ್ಕರ್ ಅಥವಾ ಇನ್ಯಾರಾದರೂ ಹಿಂದು ಸಿದ್ಧಾಂತ ಪ್ರಮುಖರ ವಿರುದ್ಧ ಲೂಸ್ ಟಾಕ್ ಆದರೆ ಆರೆಸ್ಸೆಸ್ ನಲ್ಲಿರುವವರೇ ಅದಕ್ಕೆ ತಕ್ಕ ಮಾಧ್ಯಮ ಹುಡುಕಿ ಪ್ರತಿರೋಧ ಸಲ್ಲಿಸಬೇಕು ಅಂತೇನಿಲ್ಲ. ಆರೆಸ್ಸೆಸ್ ಕಚೇರಿಗೇನೂ ಭೇಟಿ ಕೊಡದ ನವರಾಷ್ಟ್ರವಾದಿಗಳ ಪಡೆ ಆಗಲೇ ನವಮಾಧ್ಯಮಗಳಲ್ಲಿ ಫೀಲ್ಡಿಗೆ ಇಳಿದಿರುತ್ತದೆ.

ಇಂಥ ಹೊಸವರ್ಗದಿಂದ ಹಲವರನ್ನು ಸೆಮಿನಾರುಗಳ ಮೂಲಕ, ವಾರಾಂತ್ಯದ ಶಾಖೆಗಳ ಮೂಲಕ ಹೀಗೆಲ್ಲ ಹಲ ಬಗೆಯಲ್ಲಿ ಆರೆಸ್ಸೆಸ್ ಬೆಸೆದುಕೊಳ್ಳುತ್ತಿದೆ. ಸುಮ್ಮನೇ ಒಂದು ಕೌತುಕ, ಆಸಕ್ತಿಯೊಂದಿಗೆ ಆರಂಭವಾಗಿರುವ ಈ ಯುವಕರೊಂದಿಗಿನ ಬೆಸೆದಾಟವನ್ನು ಮುಂದುವರಿಸಿಕೊಂಡು ಹೋಗಬೇಕಿರೋದು ಆರೆಸ್ಸೆಸ್ಸಿನ ಸವಾಲು. ಪ್ರತಿದಿನ ಬೆಳಗ್ಗೆ ಬಂದು ಹಿಂದು ಸಮಾಜೋದ್ಧಾರಕರ ಬಗೆಗಿನ ರೋಮ್ಯಾಂಟಿಕ್ ಕತೆಗಳನ್ನಷ್ಟೇ ಕೇಳಿಕೊಂಡಿರುವುದಕ್ಕೆ ಇವರಿಗೆ ಪುರಸೊತ್ತಿಲ್ಲ. ಬಹಳ ಮುಖ್ಯವಾಗಿ ಈ ಪರಮ ಉತ್ಸಾಹಿ ಯುವ ಸಮೂಹಕ್ಕೆ ಅದು ಮಾಡಬೇಡಿ- ಇದು ಮಾಡಬೇಡಿ ಅಂತ ಹಿರಿಯಣ್ಣನಂತೆ ಉಪದೇಶ ಕೊಡಲು ಹೋದರೆ ವೈಫಲ್ಯವೇ ಕಟ್ಟಿಟ್ಟ ಬುತ್ತಿ. ಹೀಗಾಗಿ, ದೇಗುಲಕ್ಕೆ ಇಂಥವರು, ಇಂಥ ಸಂದರ್ಭದಲ್ಲಿ ಹೋಗಬಾರದು; ಲೈಂಗಿಕತೆ ಹೀಗೆಲ್ಲ ಇರಕೂಡದು ಎಂಬೆಲ್ಲ ನಿಷಿದ್ಧಗಳ ಪಟ್ಟಿಯಲ್ಲಿ ಇವರನ್ನು ಹಿಡಿದಿಡಲಾಗುವುದಿಲ್ಲ. ಆರೆಸ್ಸೆಸ್ ಬಗ್ಗೆ ಕುತೂಹಲ ಆಕರ್ಷಣೆಗಳೊಂದಿಗೆ ಬಳಿ ಸಾರಿರುವ ಈ ವರ್ಗ ಹೇಗಿದೆ ಅಂದರೆ, ಸ್ಯೂಡೋ ಸೆಕ್ಯುಲರ್ ರಾಜ್ದೀಪ್ ಸರ್ದೇಸಾಯಿ ಅಂತ ಬಯ್ಯುತ್ತ ಈ ಪತ್ರಕರ್ತನ ಮದ್ಯದ ಬ್ರಾಂಡ್ ಅನ್ನು ಗೇಲಿ ಮಾಡುತ್ತೆ. ಹಾಗಂತ ಅದೇ ಬ್ರಾಂಡಿನೆದರು ವಾರಾಂತ್ಯದಲ್ಲಿ ತಾನೂ ಠಳಾಯಿಸಿ ಹೀರುತ್ತ- ಮೆಲ್ಲುತ್ತ ಬದುಕನ್ನು ಆಸ್ವಾದಿಸುತ್ತೆ. ಹೀಗಾಗಿ ಮೊದಲಿಗಿಂತ ಹೆಚ್ಚು ಯುವಕರು ಆರೆಸ್ಸೆಸ್ ಕಡೆ ಆಕರ್ಷಿತರಾಗುತ್ತಿದ್ದಾರೆ ಎಂಬ ಮಾತಿನಲ್ಲಿ ಸತ್ಯವಿದ್ದರೂ, ಅಲ್ಲವರು ಬಯಸಿ ಬಂದಿರುವ ಸಂವಿಧಾನವೇ ಬೇರೆಯಾಗಿದೆ.

ಹೀಗೆ ಬಂದಿರುವವರನ್ನು ‘ಟ್ಯೂನ್’ ಮಾಡುವ ಕೆಲಸ ಆಗಬೇಕಲ್ಲ. ಹೀಗಾಗಿ ಹೊಸ ಥರದ ವೇಷಭೂಷಣ, ಹೊಸಥರದ ಭಾಷೆ ಆರೆಸ್ಸೆಸ್ಸಿಗೂ ಅನಿವಾರ್ಯವೇ. ಪ್ರಸ್ತುತ ಸಂಘ ಅಂಥದೊಂದು ಪ್ರಕ್ರಿಯೆಯಲ್ಲಿದೆ.

ಇದಕ್ಕೆ ಸರಿಯಾಗಿ ಆರೆಸ್ಸೆಸ್ ನ ನಂ.3 ಹುದ್ದೆ ಅಂತ ಪರಿಗಣಿತವಾಗುವ ಜಾಗದಲ್ಲಿರುವವರು ಕನ್ನಡಿಗ, ದತ್ತಾತ್ರೇಯ ಹೊಸಬಾಳೆ. ದೀರ್ಘಕಾಲ ಎಬಿವಿಪಿಯ ಸಂಘಟನೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳು, ಹೊಸತಲೆಮಾರುಗಳ ತಲೆಯಲ್ಲಿ ನಡೆಯುತ್ತಿರೋದೇನು ಎಂಬುದರ ಖಚಿತ ಸುಳಿವುಗಳನ್ನು ಇಟ್ಟುಕೊಂಡವರು. ಜೆಪಿ ಚಳವಳಿಯಲ್ಲಿ ಪಾಲ್ಗೊಂಡ ಹಿರಿಮೆ ಇದೆ. ಆಗ ವಿದ್ಯಾರ್ಥಿ ಸಂಘಟನೆಯಲ್ಲಿ ಜತೆಗಿದ್ದವರೆಲ್ಲ ಇವತ್ತಿನ ಬಿಜೆಪಿ- ಸಂಘ ಪರಿವಾರಗಳ ಹಲವು ಶಾಖೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸಂಘಟನೆ ದೃಷ್ಟಿಯಿಂದ ಇವರೆಲ್ಲರನ್ನು ಒಗ್ಗೂಡುವುದು ಉಳಿದವರಿಗಿಂತ ಹೊಸಬಾಳೆಯವರಿಗೆ ಸುಲಭಸಾಧ್ಯ. ಆರೆಸ್ಸೆಸ್ಸಿನ ಪ್ರಮುಖರನ್ನು ಹುದ್ದೆಯ ಆಧಾರದಲ್ಲಿ ಗೌರವದಿಂದ ಕಾಣುವುದು ಬೇರೆ. ಅದರ ಹೊರತಾಗಿಯೂ ಸಂಘಪರಿವಾರದ ಹೊಸತಲೆಮಾರಿನವರಲ್ಲಿ ದತ್ತಾತ್ರೇಯ ಹೊಸಬಾಳೆಯವರ ಹೆಸರಿನೊಂದಿಗೆ ವೈಯಕ್ತಿಕ ನಲೆಯಲ್ಲಿರುವ ಆದರವನ್ನೂ ಕಾಣುವುದಕ್ಕೆ ಸಾಧ್ಯ.

hosabale

ಈ ಎಲ್ಲ ಹಿನ್ನೆಲೆಗಳಲ್ಲಿ… ಆರೆಸ್ಸೆಸ್ ವಸ್ತ್ರಸಂಹಿತೆ ಬದಲಾವಣೆ, ಇಂಡಿಯಾ ಟುಡೆ ಕಾನ್ಕ್ಲೇವ್ ನಂಥ ಚಿಂತನಕೂಟದಲ್ಲಿಹೊಸಬಾಳೆಯವರ ಉಪಸ್ಥಿತಿ, ಸಲಿಂಗಕಾಮದ ಕುರಿತ ಅವರ ಟ್ವೀಟ್ ಇವೆಲ್ಲವನ್ನೂ ಅನಾಯಾಸವಾಗಿ ನಡೆದ ವಿದ್ಯಮಾನಗಳೆನ್ನಲಾಗದು. ಆರೆಸ್ಸೆಸ್ ನಲ್ಲಿ ತಲೆಮಾರಿನ ಬದಲಾವಣೆಯೊಂದು ಆಗುತ್ತಿದೆ. ರಾಜಕೀಯವಾಗಿ ಆಡ್ವಾಣಿಯುಗದಿಂದ ಮೋದಿಯುಗಕ್ಕೆ ಕಾಲಿಟ್ಟಂಥದೇ ಪ್ರಾಮುಖ್ಯ ಇಲ್ಲೂ ಇದೆ.

Leave a Reply