ಡಿಜಿಟಲ್ ಕನ್ನಡ ವಿಶೇಷ
ಜಗತ್ತಿನಲ್ಲಿ ಹಲವು ‘ಇಸಂ’ ಗಳಿಗೆ ಪರ ವಿರೋಧ ನಿತ್ಯ ಹೊಡೆದಾಟ ನಡೆಸುತ್ತಲೇ ಬಂದಿದ್ದೇವೆ. ಹುಟ್ಟಿದ ಮರುಕ್ಷಣ ನಿಮಗೊಂದು ಹೆಸರು ಕೊಡುತ್ತಾರೆ. ಜಾತಿ, ಭಾಷೆ, ದೇಶದ ಹಣೆಪಟ್ಟಿ ಕೂಡ ನಿಮ್ಮ ಒಪ್ಪಿಗೆ ಇಲ್ಲದೆ ಸಂದಾಯವಾಗಿ ಬಿಡುತ್ತದೆ. ಹುಟ್ಟಿದಾರಭ್ಯ ಸಾಯುವ ತನಕ ಇವುಗಳನ್ನು ತನ್ನದೆಂದು ಅದನ್ನು ಕಾಯ್ದಿಡಲು ಜಗತ್ತಿನ 99 ಕ್ಕೂ ಹೆಚ್ಚು ಜನ ಬದುಕುತ್ತಾರೆ, ಬದುಕಬೇಕು- ಅದು ಈ ಜಗದ ಅಲಿಖಿತ ನಿಯಮ!
ಇದು 99 ಜನರ ಕಥೆ. ಉಳಿದವರ ಕಥೆ ಕೇಳಿ, ನಿಜವಾದ ಮಜಾ ಇರುವುದು ಇಲ್ಲಿಯೇ.
ಪ್ರತಿ ವರ್ಷ Debutante Ball ಎನ್ನುವ ಒಂದು ಕೂಟ ನಡೆಯುತ್ತದೆ. ವಿಶೇಷ ಏನಪ್ಪಾ ಅಂದ್ರೆ ಜಗತ್ತಿನ ಅತಿ ಹೆಚ್ಚು ಶ್ರೀಮಂತರ ಮಕ್ಕಳು ಇಲ್ಲಿ ಸೇರುತ್ತಾರೆ. ಮುಖ್ಯ ಉದ್ದೇಶ ತಮ್ಮ ಘನೆತೆಗೆ ಹೊಂದುವ ಹುಡುಗ / ಹುಡುಗಿಯ ಪರಿಚಯ ಮಾಡಿಕೊಳ್ಳುವುದು. ಮುಕ್ಕಾಲು ಪಾಲು ಇವು ವಿವಾಹದಲ್ಲಿ ಅಂತ್ಯವಾಗುತ್ತವೆ. ಇಲ್ಲಿ ಜಾತಿ, ಮತ, ಗೋತ್ರ ಇಲ್ಲ. ಭಾಷೆ, ರಾಷ್ಟ್ರೀಯತೆ, ನಿಮ್ಮ ಬಣ್ಣ ಯಾವುದೂ ಇಲ್ಲಿ ಮುಖ್ಯವೇ ಅಲ್ಲ! ಹೌದ?! ಸೂಪರ್… ಇಗೋ ನಾನು ಹೊರಟೆ ಎಂದರೆ ನಿಧಾನಿಸಿ. ಇಲ್ಲಿ ಜಾಗ ಪಡೆಯಲು ಶ್ರೀಮಂತರಾಗಿದ್ದ ಮಾತ್ರಕ್ಕೆ ಸಾಧ್ಯವಿಲ್ಲ. ಈ ಬಾಲ್ ನಲ್ಲಿ ಪಾಲ್ಗೊಂಡಿದ್ದ ಜನರಿಂದ ಅಥವಾ ಅಂತಹ ಪ್ರಖ್ಯಾತ ಕುಟುಂಬದಿಂದ ಆಹ್ವಾನ ಇದ್ದರೆ ಮಾತ್ರ ಇಲ್ಲಿ ನೀವು ಪಾಲ್ಗೊಳ್ಳಬಹುದು.
ನಾರ್ವೆ, ಸ್ವೀಡನ್, ಸ್ಪೇನ್ ಹೀಗೆ ಯೂರೋಪಿನ ರಾಜ ಮನೆತನದವರು ನಡೆಸಲು ಶುರು ಮಾಡಿದ ಔತಣ ಕೂಟ ಇಂದು ಪ್ರಖ್ಯಾತ ನಟರು ಹಾಗೂ ಉದ್ಯಮಿಗಳ ಮಕ್ಕಳು, ಮೊಮ್ಮಕ್ಕಳು ಕೂಡ ಭಾಗವಹಿಸಬಹುದು ಎನ್ನುವ ಮಟ್ಟಿಗೆ ವಿಸ್ತರಿಸಿದೆ. ಹಿಂದೆ ‘ರಾಯಲ್ ಬ್ಲಡ್’ ನಡುವಿನ ಸಂಬಂಧ ಮುಂದುವರಿಯಬೇಕು, ಅಲ್ಲಿ ‘ಇತರ’ ರಕ್ತ ಬೆರೆಯಬಾರದು ಎನ್ನುವ ಉದ್ದೇಶದಿಂದ ಇದನ್ನು ಆಯೋಜಿಸಲಾಗುತಿತ್ತು.
ಭಾರತದಿಂದ ಇಲ್ಲಿಯವರೆಗೆ ಕೇವಲ 9 ಹುಡುಗಿಯರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದರೆ ಇದರ ಪ್ರಾಮುಖ್ಯ ನಿಮಗೆ ಅರ್ಥ ಆಗಬಹುದು. ಮುಖೇಶ್ ಅಂಬಾನಿ ಮಗಳು ಇಶಾ, ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯ ನವೇಲಿ ಇವರಲ್ಲಿ ಪ್ರಮುಖರು.
ಮೊದಲೇ ಹೇಳಿದಂತೆ ಇದು ಆಹ್ವಾನದ ಮೇರೆಗೆ ಪಾಲ್ಗೊಳ್ಳಬಹುದಾದ ಔತಣ ಕೂಟ. ಆಹ್ವಾನ ಸಿಕ್ಕ ತಕ್ಷಣ ಪಾಲ್ಗೊಳ್ಳಲು ಆಗುವುದಿಲ್ಲ. ಮುಂದಿನ ವರ್ಷ ಪಾಲ್ಗೊಳ್ಳಲು ಈ ವರ್ಷವೇ ಆಹ್ವಾನ ಪಡೆದಿರಬೇಕು ಹಾಗೂ ವರ್ಷ ಪೂರ್ತಿ ಬಟ್ಟೆ ತೊಡುವುದು, ಹೈ ಹಿಲ್ಡ್ ಚಪ್ಪಲಿ ಧರಿಸಿ ನಡೆಯುವುದು, ಮುಗುಳ್ನಗುವುದು ಹೇಗೆ- ಹೀಗೆ ಪಟ್ಟಿ ದೊಡ್ಡದಿದೆ- ಇವುಗಳನ್ನು ಕಲಿಯುವುದರಲ್ಲಿ ಕಳೆಯಬೇಕು. ಹದಿನಾರರಿಂದ ಹದಿನೆಂಟು ಪ್ರಥಮ ಬಾರಿ (debute)ಭಾಗವಹಿಸಲು ಇರುವ ವಯೋಮಿತಿ.
ಹೀಗೆ ಜಗತ್ತಿನ ಅತೀ ಶ್ರೀಮಂತರು, ಪ್ರಸಿದ್ಧರು, ರಾಜ ಮನೆತನದವರು ಜಾತಿ, ಕುಲ, ಗೋತ್ರಗಳ, ಬಣ್ಣಗಳ ಕಾಟವಿಲ್ಲದೆ ಒಂದಾಗಿದ್ದಾರೆ, ಒಂದಾಗುತ್ತಿದ್ದಾರೆ. ಇವರ ಭಾಷೆ, ಧರ್ಮ ಎಲ್ಲಾ ದುಡ್ಡು. ದುಡ್ಡೇ ದೊಡ್ಡಪ್ಪ! ಜನ ಸಾಮಾನ್ಯ ಮಾತ್ರ ಜಾತಿಯಲ್ಲಿ ಉಪಜಾತಿ ಹುಡುಕಿ, ಭಾಷೆಯಲ್ಲಿ ಉಪಭಾಷೆ ಹುಡುಕುವ ಸಂಕುಚಿತ ಬುದ್ಧಿ ಹೆಚ್ಚಿಸಿ ಕೊಳ್ಳುತ್ತಲೇ ಇದ್ದಾನೆ.
ಜಗತ್ತಿನಲ್ಲಿ ಇಂದು ಯಾವುದಾದರು ಕ್ರಾಂತಿ, ಹೊಡೆದಾಟ ಆಗಬೇಕಿದ್ದರೆ ಅದು ಬಡವ ಶ್ರೀಮಂತರ ನುಡುವಿನ ಅಂತರ ಕಡಿಮೆ ಮಾಡಲು, ಹೆಣ್ಣು ಗಂಡಿನ ನಡುವಿನ ಬೇಧ ಭಾವ ಕಡಿಮೆಮಾಡಲು ಆಗಬೇಕು. ಉಳಿದಂತೆ ಜಾತಿ, ಭಾಷೆ ಎಲ್ಲಾ ನಮಗೆ ನಾವೇ ಹಾಕಿಕೊಂಡ ಸರಪಳಿಗಳು.
ಅಪ್ಪಿ ತಪ್ಪಿ ಇಂತಹ ಸಾಮಾಜಿಕ ಸಂಕೋಲೆಯ ಕಳಚಿ ಮುಕ್ತವಾಗಿ ಚಿಂತಿಸುವ ಒಂದಷ್ಟು ಜನ ಸಮಾಜ ಎದುರಿಸಿ ಬದುಕ ಬೇಕಾಗುತ್ತದೆ. ನಾವೇಕೆ ಹೀಗೆ? ಉತ್ತರ ಬಹಳ ಸುಲಭ. ಏಕೆಂದರೆ ಅದನ್ನು ಮೀರಿ ನಾವು ಚಿಂತಿಸಬಾರದು, ಪ್ರಶ್ನಿಸಬಾರದು. ನಮ್ಮ ವಿಧ್ಯಾಭ್ಯಾಸ, ನಮ್ಮ ಚಿಂತನ ಶಕ್ತಿ ಈ ಪರಿಧಿ ದಾಟಿ ಹೋಗದಂತೆ ಸೃಷ್ಟಿಯಾಗಿದೆ. ಪ್ರಶ್ನಿಸುವ ಸಮಾಜ, ಜನ , ಈ ಜಗತ್ತನ್ನು ಆಳುತ್ತಿರುವ ಹಲವೆ ಹಲವು ಕುಟುಂಬಗಳಿಗೆ ಮಾರಕ. ಸತ್ಯವ ಅರಿತು ನಾವು ಬದಲಾಗುವುದೆಂದು?