ಮಲ್ಯ ಸಾಲ ವಸೂಲಿಯಾಗ್ಬೇಕು ಸರಿ, ಇನ್ನೂ ಇದ್ದಾರೆ 5275 ಕುಳಗಳು!

ದೇಶದ ವಿವಿಧ ಬ್ಯಾಂಕ್ ಗಳಲ್ಲಿ 7 ಸಾವಿರ ಕೋಟಿ ರು ಗೂ ಹೆಚ್ಚು ಸಾಲ ಉಳಿಸಿಕೊಂಡು, ಉದ್ದೇಶ ಪೂರ್ವಕ ಸುಸ್ತಿದಾರ ಪಟ್ಟ ಕಟ್ಟಿಕೊಂಡು, ದೇಶ ತೊರೆದು, ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಈಗ ದೇಶದ ಜನರ ಮನ್ನಸ್ಸಿನಲ್ಲಿ ವಿಲನ್ ಆಗಿರುವುದು ಸುಳ್ಳಲ್ಲ. ಅಷ್ಟೇ ಅಲ್ಲದೇ ಮಲ್ಯ ದೇಶ ತೊರೆದಿರುವ ಮತ್ತು ಸಾಲದ ವಿಚಾರ ಎಲ್ಲಾ ಮಾಧ್ಯಮಗಳಲ್ಲಿ ಮತ್ತು ಸಂಸತ್ತಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ದೇಶದ ಬ್ಯಾಂಕ್ ಗಳಲ್ಲಿ ಮಲ್ಯ ಮಾತ್ರವೇ ಸಾಲ ಮಾಡಿ ಉದ್ದೇಶಿ ಪೂರ್ವಕ ಸುಸ್ತಿದಾರ ಪಟ್ಟಿಯಲ್ಲಿ ಇದ್ದಾರಾ? ಬೇರೆಯವರು ಇದ್ದು ಅವರನ್ನೇಕೆ ಸಾಲ ಮರುಪಾವತಿ ಮಾಡಿ ಎಂದು ಒತ್ತಡ ಹೇರುತ್ತಿಲ್ಲ? ಈ ರೀತಿಯ ಸುಸ್ತಿದಾರರ ಸಂಖ್ಯೆ ಎಷ್ಟು? ಇವರಿಂದ ಎಷ್ಟು ಸಾಲ ಮರುಪಾವತಿಯಾಗಬೇಕು? ಈ ಲೆಕ್ಕಗಳೆಲ್ಲ ಪಕ್ಕಾ ಗೊತ್ತಾಗಬೇಕಾದರೆ ಕ್ರೆಡಿಟ್ ಇನ್ಫಾರ್ಮೆಶನ್ ಬ್ಯೂರೋ (ಸಿಬಿಲ್) ಬಿಡುಗಡೆಗೊಳಿಸಿರುವ ದಾಖಲೆಗಳನ್ನು ಇಟ್ಟುಕೊಂಡು ಇಂಡಿಯಾ ಸ್ಪೆಂಡ್ ಪ್ರಕಟಿಸಿರುವ ವರದಿಯನ್ನು ಗಮನಿಸಬೇಕು.

ದೇಶದ 42 ಬ್ಯಾಂಕ್ ಗಳ ನೂರಾರು ಶಾಖೆಗಳಲ್ಲಿ ಸಾಲಪಡೆದು ತೀರಿಸದೇ ಇರುವವರ ಸಂಖ್ಯೆ ಬರೋಬ್ಬರಿ 5275! ಮತ್ತೊಂದು ಶಾಕಿಂಗ್ ಸುದ್ದಿ ಎಂದರೆ ಇವರ ಒಟ್ಟು ಸಾಲ ₹56, 521 ಕೋಟಿಗಳು.

ಉದ್ದೇಶ ಪೂರ್ವಕ ಸುಸ್ತಿದಾರರು ಉಳಿಸಿಕೊಂಡಿರುವ ಸಾಲದ ಮೊತ್ತ ಕಳೆದ 13 ವರ್ಷಗಳಲ್ಲಿ 9 ಪಟ್ಟು ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರ 2016-17 ರ ಬಜೆಟ್ ನಲ್ಲಿ ಕೃಷಿಕ್ಷೇತ್ರಕ್ಕೆ ಮಿಸಲಿಟ್ಟ (₹35984 ಕೋಟಿ) ಮೊತ್ತಕ್ಕಿಂತ ಒಂದೂವರೆ ಪಟ್ಟು ಹೆಚ್ಚಿದೆ. ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡದೇ ಇದ್ದಾಗ, ಬ್ಯಾಂಕ್ ಗಳು ಇವರಿಗೆ ನೋಟಿಸ್ ನೀಡಿವೆ. ಆಗ ಸಾಲಗಾರರು ತಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬ ಸಬೂಬು ಹೇಳಿ ಬ್ಯಾಂಕುಗಳನ್ನು ನಂಬಿಸುತ್ತಿದ್ದರು. ಆದರೆ ಇವರೆಲ್ಲರೂ ಉದ್ದೇಶ ಪೂರ್ವಕವಾಗಿಯೇ ಸಾಲ ತೀರಿಸುತ್ತಿಲ್ಲ ಎಂದು ಗೊತ್ತಾದಾಗ ಎಲ್ಲರನ್ನೂ ಕಪ್ಪು ಪಟ್ಟಿಗೆ ಸೇರಿಸಿವೆ.

ವಿಜಯ್ ಮಲ್ಯ ಹೊರತಾಗಿ ಕೆಲ ಸುಸ್ತಿದಾರರ ಪಟ್ಟಿ ಇಲ್ಲಿದೆ. ಇದು ಅವರ ಒಟ್ಟಾರೆ ಸಾಲದ ಮೊತ್ತವಲ್ಲ. ಬ್ಯಾಂಕ್ ಒಂದರಿಂದ ಪಡೆದ ಅತಿ ಹೆಚ್ಚಿನ ಮೊಬಲಗು.

  • ವಿನ್ ಸಮ್ ಡೈಮಂಡ್ಸ್ ಮತ್ತು ಜುವೆಲರಿ ಲಿಮಿಟೆಡ್ ನ ನಿರ್ದೇಶಕ ಜತಿನ್ ಮೆಹ್ತಾ, ಮುಂಬೈನ ಎಸ್ ಬಿ ಐ ಸೇರಿದಂತೆ ಒಟ್ಟು 7 ಬ್ಯಾಂಕುಗಳಲ್ಲಿ 3263 ಕೋಟಿ ರು ಸಾಲ ಪಡೆದಿದ್ದಾರೆ.
  • ಝೂಮ್ ಡೆವಲಪರ್ಸ್ ಪ್ರೆ.ಲಿ ನ ವಿಜಯ್ ಚೌಧರಿ ಮುಂಬೈನ ಎಸ್ ಬಿ ಐ ಸೇರಿದಂತೆ ಇತರ 9 ಬ್ಯಾಂಕುಗಳಲ್ಲಿ 1647 ಕೋಟಿ ರು ಸಾಲ ಪಡೆದಿದ್ದಾರೆ.
  • ಬೆಟಾ ನ್ಯಾಪ್ತಾಲ್ ಸಂಸ್ಥೆಯ ದೀಪಕ್ ಬವೆಜಾ ಮುಂಬೈನ ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ 951 ಕೋಟಿ ರು ಸಾಲ ಪಡೆದಿದ್ದಾರೆ.
  • ರಜಾ ಟೆಕ್ಸ್ ಟೈಲ್ಸ್ ಲಿ, ವಿ ಕೆ ಶ್ರೀವಾತ್ಸವ್ ಮುಂಬೈನ ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ 694 ರು ಕೋಟಿ ಸಾಲ ಪಡೆದಿದ್ದಾರೆ.
  • ರ್ಯಾಂಕ್ ಇಂಡಸ್ಟ್ರಿಸ್ ಲಿ, ಡಿ ವಿ ರಮೇಶ್ ಮುಂಬೈನ ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ 551 ಕೋಟಿ ರು ಸಾಲ ಪಡೆದಿದ್ದಾರೆ.
  • ಎಕ್ಸ್ ಎಲ್ ಎನರ್ಜಿ ಲಿ, ಪೆರುಮ್ ಥೋತಾತಿಲ್ ರವಿಂದ್ರನಾಥನ್ ವಿಷ್ಣು ದೇರಾಬಾದ್ ನ ಎಸ್ ಬಿ ಐ ನಲ್ಲಿ 413 ಕೋಟಿ ರು ಸಾಲ ಪಡೆದಿದ್ದಾರೆ.
  • ಡೆಕನ್ ಕ್ರೋನಿಕಲ್ ಹೊಲ್ಡಿಂಗ್ಸ್ ಲಿ, ಟಿ ವಂಕಟರಾಮ್ ರೆಡ್ಡಿ, ಹೈದರಾಬಾದ್ ನ ಆಕ್ಸಿಸ್ಸ್ ಬ್ಯಾಂಕ್ ನಲ್ಲಿ 409 ಕೋಟಿ ರು ಸಾಲ ಪಡೆದಿದ್ದಾರೆ.
  • ಎಲೆಕ್ಟ್ರೋಥೆರಮ್ (ಇಂಡಿಯಾ) ಲಿ, ಶ್ರೀಮುಖೇಶ್ ಭಂಡಾರಿ ಅಹಮದಾಬಾದ್ ನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 385 ಕೋಟಿ ರು ಸಾಲ ಪಡೆದಿದ್ದಾರೆ.
  • ಜೈಲಾಗ್ ಸಿಸ್ಟಮ್ ಲಿ, ಸುದರ್ಶನ್ ಚೆನೈನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 361 ಕೋಟಿ ಸಾಲ ಪಡೆದಿದ್ದಾರೆ.

ಬೃಹತ್ ಸುಸ್ತಿದಾರರ ಪೈಕಿ ಶೇಕಡಾ 32 ರಷ್ಟು ಬಾಕಿಸಾಲಗಳು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೇ ಇರುವಂಥದ್ದು. ಎಸ್ ಬಿ ಐ ಸೇರಿದಂತೆ 19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ.79 ರಷ್ಟು ಸಾಲಬಾಕಿ ಇದೆ ಎಂದು ‘ಇಂಡಿಯಾ ಸ್ಪೆಂಡ್’ ವರದಿ ಮಾಡಿದೆ. 2002ರಲ್ಲಿಸಾಲಬಾಕಿ 6291 ಕೋಟಿ ರು ಆಗಿದ್ದರೆ 13 ವರ್ಷಗಳ ಹೊತ್ತಿಗೆ 13 ಪಟ್ಟು ಏರಿಕೆಯಾಗಿ 56521 ಕೋಟಿ ರು ಗೆ ತಲುಪಿದೆ. ಅತಿ ಹೆಚ್ಚು ಬೃಹತ್ ಸುಸ್ತಿದಾರರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರವಾದರೆ ಕರ್ನಾಟಕ 6ನೇ ಸ್ಥಾನದಲ್ಲಿದೆ.

ಏನೋ ಪಾಪ, ಬಿಸಿನೆಸ್ ನಲ್ಲಿ ಲಾಸ್ ಆಗಿಹೋಯಿತು ಅಂತ ಉದ್ಯಮಿಗಳ ವಿಚಾರದಲ್ಲಿ ರಾಗ ಎಳೆಯುವವರಿದ್ದಾರೆ. ಆದರೆ ಗಮನಿಸಬೇಕಾದ ಸಂಗತಿ ಎಂದರೆ, ಬಹುತೇಕ ಸಾಲದಾರ ಉದ್ಯಮಿಗಳು ಪಡೆದ ಹಣವನ್ನು ಉದ್ಯಮಕ್ಕಲ್ಲದೇ ಎಲ್ಲೆಲ್ಲೋ ಹೊರಳಿಸಿರುವ ಹಣ ಸಾಗಣೆಯ ಅನುಮಾನಗಳು ದಟ್ಟವಾಗಿವೆ. ಏಕೆಂದರೆ ಹೆಚ್ಚಿನ ಸುಸ್ತಿದಾರ ಉದ್ಯಮಿಗಳ್ಯಾರೂ ತಮ್ಮ ಬದುಕಿನ ಐಷರಾಮಿ ಸವಲತ್ತುಗಳನ್ನು ಕಡೆಗಣಿಸಿದವರೇ ಅಲ್ಲ. ವಿದೇಶಗಳಲ್ಲಿ ವೈಭವೋಪೇತ ಮನೆಗಳು, ಕ್ರೀಡಾವಿಹಾರ ಇತ್ಯಾದಿ ಸುಖ ಲೋಲುಪತೆಗಳಿಂದ ತುಸುವೂ ವಿಮುಖರಾಗದೇ, ನಷ್ಟವಾಯ್ತು ಏನ್ ಮಾಡೋದು ಅನ್ನೋವ್ರನ್ನು ಅಮಾಯಕರೆನ್ನಬೇಕಾ?

Leave a Reply