ಜಾಕ್ ಮಾ ಎಂಬ ಅಲಿಬಾಬಾನ ಅಪ್ಪ, ಭಾರತವನ್ನೂ ಆಸೆಗಣ್ಣಿಂದ ನೋಡ್ತಿರೋ ಇವನ ಜಾತಕ ತಿಳ್ಕೊಳ್ರಪ್ಪ…

ಡಿಜಿಟಲ್ ಕನ್ನಡ ಟೀಮ್

ಜೀವನದಲ್ಲಿ ಒಂದೆರಡು ವೈಫಲ್ಯಗಳನ್ನು ನೋಡಿ ಜೀವನ ಸಾಕು ಎಂದು ದುಡುಕುವ ಮಂದಿ ನೂರಾರು. ಅದೇ ಸಂಕಷ್ಟಗಳ ಹಾದಿಯಲ್ಲಿ ತನ್ನ ಆತ್ಮಸ್ಥೈರ್ಯ ಕುಗ್ಗಿಸಿಕೊಳ್ಳದೇ ಯಶಸ್ಸಿನ ಪರ್ವತ ಏರುವ ಮಂದಿ ಕಲವೇಕೆಲವರು ಮಾತ್ರ. ಅದಕ್ಕಾಗಿ ಅವರನ್ನು ಸಾಧಕರೆನ್ನುತ್ತೇವೆ. ಅರೇ, ಇಷ್ಟೆಲ್ಲಾ ಪೀಠಿಕೆ ಏಕೆ ಅಂದುಕೊಳ್ಳುತ್ತಿದ್ದೀರಾ, ಕಾರಣ ಇದೆ. ಈಗ ನಾವು ಹೇಳುತ್ತಿರೋದು, ಜೀವನದಲ್ಲಿ ವೈಫಲ್ಯದ ಮೇಲೆ ವೈಫಲ್ಯ ಅನುಭವಿಸಿದ ವ್ಯಕ್ತಿ ಈಗ ವಿಶ್ವದ ಅಗ್ರ ಶ್ರೀಮಂತರಲ್ಲಿ ಒಬ್ಬ. ಆತ ಬೇರೆ ಯಾರೂ ಅಲ್ಲ ಚೀನಾದ ಕುಬೇರ ಜಾಕ್ ಮಾ.

ಭಾರತದಲ್ಲಿ ಈಗ ಇ ಕಾಮರ್ಸ್ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಈ ಮಾರುಕಟ್ಟೆಯಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಈಗ ಜಾಕ್ ಮಾ ಕಣ್ಣಿಟ್ಟಿದ್ದಾನೆ. ಹೌದು.. ಚೀನಾದ ದೊಡ್ಡ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆಯುತ್ತಿರುವ ಜಾಕ್ ಮಾ ಅವರ ಅಲಿಬಾಬಾ ಕಂಪನಿ ಈ ವರ್ಷದಿಂದ ಭಾರತಕ್ಕೂ ಪ್ರವೇಶಿಸಲಿದೆ. ಹಾಗಾಗಿ ಈ ವಾರಾಂತ್ಯದಲ್ಲಿ ಈ ಅಲಿಬಾಬಾ ಸೃಷ್ಟಿಕರ್ತ ಜಾಕ್ ಮಾ ಬಗ್ಗೆ ತಿಳಿಯೋಣ.

1964 ಅಕ್ಟೋಬರ್ 15ರಂದು ಹಾಂಗ್ ಜೌ ನಲ್ಲಿ ಜನಿಸಿದ ಮಾ, ಸಾಧಾರಣ ಮಕ್ಕಳಂತೆ ಆಟವಾಡುತ್ತಾ ಬೆಳೆದ. 1972ರಲ್ಲಿ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಹಾಂಗ್ ಜೌಗೆ ಭೇಟಿ ನೀಡಿದಾಗ, ಅಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಆಗ ಬೆಳಗಿನ ಜಾವ ಬೇಗ ಎದ್ದು ಮಾ, ಅಲ್ಲಿನ ಪ್ರಮುಖ ಹೊಟೇಲ್ ಗಳಲ್ಲಿ ಇರುತ್ತಿದ್ದ ಪ್ರವಾಸಿಗರಿಗೆ ನಗರವನ್ನು ಪರಿಚಯಿಸುತ್ತಿದ್ದ. ಅದಕ್ಕೆ ಆತ ಪ್ರತಿಯಾಗಿ ಪಡೆದಿದ್ದು, ಇಂಗ್ಲಿಷ್ ಪಾಠ. ಈ ರೀತಿಯಾಗಿ ಮಾಡುವಾಗ ಆತನ ಹೆಸರಿಗೆ ಜಾಕ್ ಎಂಬ ಪದ ಸೇರಿಕೊಂಡಿದ್ದು.

ಸೋಲುಗಳ ಸರಮಾಲೆ!

ಜಾಕ್ ಮಾ ಯಶಸ್ಸಿನ ಹಾದಿ ನೋಡೊ ಮುನ್ನ, ಆತನ ವೈಫಲ್ಯಗಳನ್ನೊಮ್ಮೆ ನೋಡೋಣ. ಕಾಲೇಜಿನಲ್ಲಿ 3 ಬಾರಿ ಫೇಲ್ ಆಗಿದ್ದ ಮಾ, 30 ಹೆಚ್ಚು ಕಡೆ ಕೆಲಸಕ್ಕಾಗಿ ಪ್ರಯತ್ನಿಸಿದ. ಆದರೆ, ಎಲ್ಲೂ ಕೆಲಸ ಸಿಗದೇ ನಿರಾಸೆ ಅನುಭವಿದ. ಕೆಎಫ್ ಸಿ ಚೀನಾಗೆ ಆಗಮಿಸಿದಾಗ ಅಲ್ಲಿ ಕೆಲಸಕ್ಕೆ ಪ್ರಯತ್ನಿಸಿದ ಮಾ, 24 ಅಭ್ಯರ್ಥಿಗಳ ಪೈಕಿ ಕೆಲಸಕ್ಕೆ ಆಯ್ಕೆಯಾಗದ ಏಕೈಕ ವ್ಯಕ್ತಿಯಾಗಿ ಉಳಿದರು. ಪೋಲೀಸ್ ಕೆಲಸಕ್ಕೆ ಪ್ರಯತ್ನಿಸಿದರೂ ಅಲ್ಲಿಯೂ ಅರ್ಹತೆ ಪಡೆಯಲಿಲ್ಲ. ಅಮೆರಿಕದ ಹಾರ್ವಡ್ ವಿಶ್ವವಿದ್ಯಾಲಯಕ್ಕೆ ಸೇರಲು ಒಂದೆರಡಲ್ಲ ಬರೋಬ್ಬರಿ 10 ಬಾರಿ ಪ್ರಯತ್ನಿಸಿದ ಆದರೂ ಆಯ್ಕೆಯಾಗಲಿಲ್ಲ.

ಇಷ್ಟು ವೈಫಲ್ಯವನ್ನು ನಾವು ಅನುಭವಿಸಿದ್ದರೆ, ನಮ್ಮ ಮನಸ್ಥಿತಿ, ನಮ್ಮಲ್ಲಿ ಮೂಡುತ್ತಿದ್ದ ಆಲೋಚನೆಯೇ ಬೇರೆ. ಆದರೆ ಇದಾವುದಕ್ಕೂ ತಲೆ ಕೆಡೆಸಿಕೊಳ್ಳದ ಮಾ, ತನ್ನ ಜೀವನದಲ್ಲಿ ಪ್ರಯತ್ನ ಮಾತ್ರ ಬಿಡಲಿಲ್ಲ.

ಯಶಸ್ಸಿನ ಹಾದಿ

ಹಾಗೊ ಹೀಗೊ ಮಾಡಿ ಮಾ, ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಆಗ ಆತನ ಸಂಬಳ ಪ್ರತಿ ತಿಂಗಳಿಗೆ 12 ಅಮೆರಿಕನ್ ಡಾಲರ್. ಕಂಪ್ಯೂಟರ್ ಬಗ್ಗೆ ಹೆಚ್ಚು ಜ್ಞಾನವಿಲ್ಲದಿದ್ದರೂ, 1995ರಲ್ಲಿ ಮೊದಲ ಬಾರಿಗೆ ಇಂಟರ್ ನೆಟ್ ಬಳಸಿದ. ಆತ ಅಂತರ್ಜಾಲದಲ್ಲಿ ಮೊದಲು ಹುಡುಕಿದ್ದು, ಬಿಯರ್ ನನ್ನು. ಆಗ ಇಂಟರ್ ನೆಟ್ ನಲ್ಲಿ ಚೀನಾದ ಒಂದೇ ಒಂದು ಬಿಯರ್ ಬ್ರಾಂಡ್ ಕಾಣಿಸದೇ ಇರುವುದನ್ನು ಕಂಡು ಅಚ್ಚರಿಗೊಂಡ. ಆಗ ಆತನಲ್ಲಿ ಮೂಡಿದ್ದು, ಇಂಟರ್ ನೆಟ್ ನಲ್ಲಿ ಚೀನಾ ಕಂಪನಿ ಕಾಣಿಸುವಂತೆ ಮಾಡಬೇಕು ಎಂಬ ಕನಸು.

ಈ ಕನಸಿನ ಬೆನ್ನತ್ತಿದ ಮಾ, ಈ ಬಗ್ಗೆ ಪ್ರಯತ್ನಿಸಿದ. ಆರಂಭದಲ್ಲಿನ ಎರಡು ಪ್ರಯತ್ನ ವಿಫಲವಾಯಿತು. ಆದರೂ ಸುಮ್ಮನೆ ಕೂರದ ಮಾ, ತನ್ನ 17 ಸ್ನೇಹಿತರನ್ನು ಒಟ್ಟುಗೂಡಿಸಿದ. ಅವರಿಗೆ ಇ ಮಾರುಕಟ್ಟೆ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಮನವೊಲಿಸಿದ. ಆ ಮೂಲಕ ರೂಪತಾಳಿದ್ದೇ ಅಲಿಬಾಬಾ ಎಂಬ ಅಂತರ್ಜಾಲ ಮಾರುಕಟ್ಟೆ. ಅಲ್ಲಿಂದ ಮತ್ತೆ ಮಾ, ಹಿಂತಿರುಗಿ ನೋಡಿದ್ದೇ ಇಲ್ಲ.

ಜಾಕ್ ಮಾ ಈಗ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿರುವ ಉದ್ಯಮಿ ಹಾಗೂ ಚೀನಾದ ಅತಿ ದೊಡ್ಡ ಶ್ರೀಮಂತ. ಈತನ ಆಸ್ತಿಯ ಮೌಲ್ಯ 22.8 ಬಿಲಿಯನ್ ಅಮೆರಿಕನ್ ಡಾಲರ್ (₹ 96,900 ಕೋಟಿ). ಆರಂಭದಲ್ಲಿ ಕೆಲಸಕ್ಕಾಗಿ ಹರಸಾಹಸ ಪಟ್ಟಿದ್ದ ಜಾಕ್ ಮಾ, ಈಗ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿರುವ ಉದ್ಯಮಿ..!

ಹೌದು.. 2016 ಭಾರತದ ಮಾರುಕಟ್ಟೆಗೆ ಪದಾರ್ಪಣೆ ಮಾಡುತ್ತಿರೋ ಈ ಅಲಿಬಾಬಾ, ಇತರರ ಸ್ಫರ್ಧಿಗಳಿಗೆ ಯಾವ ರೀತಿ ಸವಾಲೊಡ್ಡತ್ತೆ ಎಂಬುದನ್ನು ಕಾದು ನೋಡಬೇಕು. ಭಾರತಕ್ಕೆ ಕಾಲಿಡಲು ಅಲಿಬಾಬಾ ಮಾಲೀಕ ಜಾಕ್ ಮಾ, ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ‘ಭಾರತದಲ್ಲಿ ಈಗ ಡಿಜಿಟಲ್ ಇಂಡಿಯಾ ಅಲೆ ಹೆಚ್ಚಾಗಿದೆ. ಈ ಹಂತದಲ್ಲಿ ಭಾರತದ ಮಾರುಕಟ್ಟೆಗೆ ಕಾಲಿಡುತ್ತಿರುವುದು ಸಾಕಷ್ಟು ನಿರೀಕ್ಷೆ ಇದೆ. ಇಲ್ಲಿ ಇರುವ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುಬೇಕು’ ಎಂದಿದ್ದಾರೆ ಜಾಕ್.

ಜಾಕ್ ಮಾ ಈಗಾಗಲೇ ಭಾರತದಲ್ಲಿರುವ ಸ್ನ್ಯಾಪ್ ಡೀಲ್ ಮತ್ತು ಪೇಟಿಎಂ ನಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ಇತ್ತೀಚೆಗೆ ಫ್ಲಿಪ್ ಕಾರ್ಟ್ ಷೇರು ಪಡೆಯುವ ಪ್ರಯತ್ನವೂ ನಡೆದಿತ್ತು ಎಂಬ ವರದಿಗಳಿವೆ.

ನಮ್ಮಲ್ಲಿ ಪರೀಕ್ಷೆ ಫೇಲಾದರೆ, ಒಂದೆರಡು ಪ್ರಯತ್ನದಲ್ಲಿ ಕೆಲಸ ಸಿಗದಿದ್ದರೆ, ದಿಕ್ಕು ತೋಚದಂತೆ ಕಂಗಾಲಾಗುವವರು ಸಂಖ್ಯೆ ಲೆಕ್ಕಕ್ಕೆ ಸಿಗದು. ಹುಟ್ಟಿನಿಂದ ಶ್ರೀಮಂತರಾಗಿದ್ದರೆ ಅದು ದೊಡ್ಡ ಸಾಧನೆ ಎನಿಸಿಕೊಳ್ಳುವುದಿಲ್ಲ, ಬದಲಾಗಿ ಅದೃಷ್ಟ ಎಂದು ಕರೆಯುವರು ಹೆಚ್ಚು. ಆದರೆ, ಬಡವನಾಗಿ ಹುಟ್ಟಿ ಎಷ್ಟೇ ವೈಫಲ್ಯ ಎದುರಾದರೂ ಪ್ರಯತ್ನ ಮಾತ್ರ ಬಿಡಬಾರದು ಎಂಬುದಕ್ಕೆ ಜಾಕ್ ಮಾ ನಮ್ಮ ಮುಂದಿರುವ ದೊಡ್ಡ ಸ್ಫೂರ್ತಿ.

ಕೊನೆಯಲ್ಲಿ.. ಇದು ಬದುಕಿನ ಅಡೆತಡೆಗಳನ್ನು ಎದುರಿಸುವುದಕ್ಕೆ ಸ್ಫೂರ್ತಿಗಾಥೆಯಾಗಿ ಮಾತ್ರವೇ ಓದಿಕೊಳ್ಳಬೇಕು. ಜಗತ್ತಿನ ಅಗ್ರಗಣ್ಯ ಶ್ರೀಮಂತರಾಗುವುದೇ ಆದರ್ಶ ಎಂಬುದನ್ನು ಖಂಡಿತ ನಾವಂತೂ ಪ್ರತಿಪಾದಿಸುವುದಿಲ್ಲ. ಬದುಕಿನ ಸಾರ್ಥಕ್ಯಕ್ಕೆ ಹೀಗೆ ಹಣದ ಮೂಲಕ ಹೆಸರು ಮಾಡದ ಹಲವರೂ ನಮಗೆ ಪ್ರೇರಣಾದಾಯಿ ಆಗುತ್ತಾರೆ. ಆದರೆ ವೈಫಲ್ಯದ ವಿರುದ್ಧ ಪುಟಿದು ನಿಲ್ಲೋದಕ್ಕೆ ಜಾಕ್ ಮಾರಲ್ಲಿ ಸ್ಫೂರ್ತಿ ಕಂಡುಕೊಳ್ಳಬಹುದು.

Leave a Reply