ಪಾಕಿಸ್ತಾನಕ್ಕಿಲ್ಲ ಈ ಹಿಂದಿನ ಆಕ್ರಮಣದ ಛಲ, ವಿರಾಟ ಪರ್ವದ ಭಾರತದಲ್ಲಿ ಚೇಸಿಂಗ್ ಗೂ ಬಂದಿದೆ ಬಲ

ಸೋಮಶೇಖರ ಪಿ, ಭದ್ರಾವತಿ

ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತೊಮ್ಮೆ ಗೆದ್ದು, ವಿಶ್ವಕಪ್ ನಲ್ಲಿ ತನ್ನ ಅಜೇಯ ಯಾತ್ರೆಯನ್ನು 11-0 ಗೆ ಮುಂದುವರಿಸಿದೆ. ಇದೇ ಗುಂಗಿನಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮೌಕಾ.. ಮೌಕಾ.. ಎಂದು ಹಾಡುತ್ತಾ ವೀಕೆಂಡ್ ಕಳೆಯುವುದರಲ್ಲಿ ಅನುಮಾನವಿಲ್ಲ.

ಈ ಮಹತ್ವದ ಪಂದ್ಯ ಉಭಯರ ಪಾಲಿಗೂ ಮಹತ್ವದ್ದಾಗಿತ್ತು. ಒಂದೆಡೆ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಸೋಲರಿಯದ ತಂಡವಾಗಿರುವುದು ಟೀಂ ಇಂಡಿಯಾ ಬೆನ್ನಿಗಿದ್ದ ದಾಖಲೆ. ಮತ್ತೊಂದೆಡೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಭಾರತ ವಿರುದ್ಧ ಆಡಿದ್ದ ಎಲ್ಲ ಪಂದ್ಯ ಗೆದ್ದಿದ್ದ ದಾಖಲೆ ಪಾಕಿಸ್ತಾನದ ಬೆನ್ನಿಗಿತ್ತು. ಹಾಗಾಗಿ ಈ ಪಂದ್ಯ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿತ್ತು. ಅಂತಿಮವಾಗಿ ಭಾರತ ತನ್ನ ದಾಖಲೆಯ ಹಾದಿಯಲ್ಲಿ ಮುಂದುವರಿದಿದೆ.

ಈ ಪಂದ್ಯದ ನಂತರ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭಿಕ ಶಿಖರ್ ಧವನ್ ಮತ್ತು ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಮೇಲೆ ಪುಂಖಾನುಪುಂಖವಾಗಿ ಟೀಕೆಗಳನ್ನು ಹರಿಬಿಡುತ್ತಿದ್ದಾರೆ. ಆದರೆ, ಈ ಇಬ್ಬರೂ ಚಾಂಪಿಯನ್ ಆಟಗಾರರು ಮುಂದಿನ ಪಂದ್ಯಗಳಲ್ಲಿ ಟೀಕೆಗಳಿಗೆ ಬ್ಯಾಟ್ ನಿಂದಲೇ ಉತ್ತರಿಸಿದರೆ ಅಚ್ಚರಿ ಪಡಬೇಕಿಲ್ಲ. ಈ ಎಲ್ಲದರ ಹೊರತಾಗಿ ಈ ಪಂದ್ಯದಲ್ಲಿ ನಮಗೆ ಕಾಣ ಸಿಗುವುದು ಎರಡು ಪ್ರಮುಖ ಅಂಶ. ಅದು ವಿರಾಟ್ ಕೊಹ್ಲಿ ತಾನೊಬ್ಬ ವಿಶ್ವ ಚಾಂಪಿಯನ್ ಆಟಗಾರ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿರೋದು. ಮತ್ತೊಂದು ಪಾಕಿಸ್ತಾನ ತಂಡ ಮೊದಲಿನಂತೆ ಭಾರತ ವಿರುದ್ಧ ಹೋರಾಟಕಾರಿ ಮನೋಭಾವ ಕಡಿಮೆಯಾಗಿರೋದು.

ಹೌದು.. ವಿರಾಟ್ ಕೊಹ್ಲಿ ಈಗಾಗಲೇ ಭಾರತ ಕಂಡ ಅತ್ಯುತ್ತಮ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ತಮ್ಮದೇ ಆದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಹಿಂದೆ ಒಂದು ಕಾಲವಿತ್ತು. ಚೇಸಿಂಗ್ ಎಂದರೆ, ಭಾರತ ತಂಡಕ್ಕೆ ನುಂಗಲಾರದ ತುತ್ತು. ಅವರಿಗೆ ಚೇಸಿಂಗ್ ಒತ್ತಡ ನಿಭಾಯಿಸುವುದು ಗೊತ್ತಿಲ್ಲ ಎಂಬ ಟೀಕೆಗಳಿದ್ದವು. ಆದರೆ, ಈಗ ಯಾರಾದರೂ ಆ ಮಾತು ಹೇಳಲು ಸಾಧ್ಯವೆ, ನೋ ಚಾನ್ಸ್.. ಇದಕ್ಕೆ ಪ್ರಮುಖ ಕಾರಣ ವಿರಾಟ್ ಕೊಹ್ಲಿ.

ಸವಾಲು ಎಂಥಹದೇ ಆಗಿರಲಿ, ಪಿಚ್ ಯಾವುದೇ ರೀತಿಯಲ್ಲಿ ವರ್ತಿಸಲಿ, ಚೇಸಿಂಗ್ ನಲ್ಲಿ ತಾನೊಬ್ಬ ಮಹಾನ್ ಪಂಟರ್ ಎಂಬುದನ್ನು ಕೊಹ್ಲಿ ಮನದಟ್ಟು ಮಾಡುತ್ತಲೇ ಬಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸ್ಪಿನ್ ದಾಳಿಗೆ ತತ್ತರಿಸಿದ ನಂತರ, ಭಾರತದ ಅಭಿಮಾನಿಗಳಲ್ಲಿ ಮೂಡಿದ್ದ ಒಂದು ಪ್ರಶ್ನೆ ಪಾಕ್ ಬೌಲಿಂಗ್ ದಾಳಿಗೆ ಭಾರತ ಹೇಗೆ ಉತ್ತರಿಸುವುದು ಎಂದು. ಚೆಂಡು ಬ್ಯಾಟ್ಸ್ ಮನ್ ಗಳ ಊಹೆಗೆ ನಿಲುಕದಂತೆ ತಿರುವು ಪಡೆಯುತ್ತಿದ್ದರೆ, ಯಾವುದೇ ತಂಡದ ಆಟಗಾರನಾಗಿದ್ದರೂ ಪತರಗುಟ್ಟೋದು ಸಹಜ. ಆದರೆ, ಎಂಥಹುದೇ ಪರಿಸ್ಥಿತಿ ಇರಲಿ, ತನ್ನ ಚಾಕಚಕ್ಯ ಆಟದಿಂದ ಎದುರಾಳಿ ಬೌಲರ್ ಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕೊಹ್ಲಿ ಬ್ಯಾಟಿಂಗ್, ನೋಡುಗರಿಗೆ ರನ್  ಗಳಿಸೋದು ನೀರು ಕುಡಿದಷ್ಟು ಸುಲಭವಿದೆ ಎಂಬ ಭಾವನೆ ಮೂಡಿಸುತ್ತದೆ. ಅದೇ ಕೊಹ್ಲಿ ಬ್ಯಾಟಿಂಗ್ ವಿಶೇಷ.

ಟೆಸ್ಟ್ ಕ್ರಿಕೆಟ್ ಜತೆಗೆ ಅದರಲ್ಲೂ ಏಕದಿನ ಮತ್ತು ಟಿ20ಯಲ್ಲಿ ಭಾರತದ ಇತ್ತೀಚಿನ ಯಶಸ್ಸಿನ ಹಾದಿಯಲ್ಲಿ ನಮಗೆ ಕಾಣಸಿಗುವುದು ಕೊಹ್ಲಿಯ ಸಿಂಹಪಾಲು ಕಾಣಿಕೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ಬ್ಯಾಟಿಂಗ್ ನೋಡಿ ಹೊಗಳಿರೋರು ಒಂದಿಬ್ಬರಲ್ಲ. ಫೇಸ್ ಬುಕ್ ನಲ್ಲಿ ಅಭಿಮಾನಿಗಳಿಂದ ಹಿಡಿದು, ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್, ನಾಯಕ ಮಹೇಂದ್ರ ಸಿಂಗ್ ಧೋನಿ, ಅಷ್ಟೇ ಯಾಕೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಇತರೆ ಮಾಜಿ ಆಟಗಾರರು ಟ್ವಿಟರ್ ನಲ್ಲಿ ಕೊಹ್ಲಿಯ ಗುಣಗಾನ ಮಾಡಿದ್ದಾರೆ.

ಭಾರತ ತಂಡ ಎಂತಹುದೇ ಸಂದರ್ಭದಲ್ಲಿರಲಿ, ಕೊಹ್ಲಿ ಇದ್ದಾನೆಂದರೆ ತಂಡದಿಂದ ಹಿಡಿದು ಅಭಿಮಾನಿಗಳಿಗೆ ಒಂದು ಸಮಾಧಾನ. ಅದೇ ಎದುರಾಳಿ ತಂಡದಲ್ಲಿ ನಡುಕ. ಆ ಮಟ್ಟಿಗೆ ಕೊಹ್ಲಿ ತನ್ನ ಪ್ರಭಾವ ಬೀರಿದ್ದಾರೆ.

ಇವಿಷ್ಟೂ ಕೊಹ್ಲಿ ಕಥೆಯಾದರೆ, ಈಗ ಪಾಕಿಸ್ತಾನ ತಂಡದ ವಿಷಯಕ್ಕೆ ಬರೋಣ. 90ರ ದಶಕದ ಆಸುಪಾಸಿನಿಂದ ಹಿಡಿದು 2007ರ ಟಿ20 ವಿಶ್ವಕಪ್ ವರೆಗೂ ಭಾರತ ಪಾಕಿಸ್ತಾನ ಪಂದ್ಯ ಎಂದರೆ, ಕೊನೇ ಕ್ಷಣದ ವರೆಗೂ ರೋಚಕ ಕದನವಾಗುತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾರಣ, 2011ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಜಯಿಸಲು ಹರಸಾಹಸ ಪಡಬೇಕಾಗಲಿಲ್ಲ. ಇನ್ನು ಮೊನ್ನೆ ಏಷ್ಯಾಕಪ್ ನಲ್ಲಿ ಮೊಹಮದ್ ಆಮೀರ್ ಹೊರತಾಗಿ ಯಾರೊಬ್ಬರು ಹೋರಾಟ ನೀಡಲಿಲ್ಲ. ಇನ್ನು ನಿನ್ನೆಯ ಪಂದ್ಯದಲ್ಲಿಯೂ ಅದೇ ಕಥೆ.

ಇತ್ತೀಚಿನ ಪಂದ್ಯಗಳಲ್ಲಿ ಪಾಕಿಸ್ತಾನ ಎಲ್ಲೋ ತನ್ನ ಹೋರಾಟಕಾರಿ ಮನೋಭಾವ ಕಳೆದುಕೊಂಡಿರುವಂತೆ ಕಾಣುತ್ತಿದೆ. ಈ ಹಿಂದೆ ವಿಶ್ವಕಪ್ ಪಂದ್ಯವಿರಲಿ ಅಥವಾ ಸಾಮಾನ್ಯ ಪಂದ್ಯವಾಗಿರಲಿ, ಪಾಕಿಸ್ತಾನ ತಂಡದ ಪ್ರತಿಯೊಬ್ಬ ಆಟಗಾರರಲ್ಲೂ ಭಾರತ ವಿರುದ್ಧ ಗೆದ್ದೆ ತೀರಬೇಕು ಎಂಬ ಹಠ ಆಟ ಮತ್ತು ವರ್ತನೆಯಲ್ಲಿ ಎದ್ದು ಕಾಣುತ್ತಿತ್ತು. ಅದೇ ಈಗ, ಆ ಹೋರಾಟದ ಛಲ ಬತ್ತಿಹೊದಂತೆ ಕಾಣುತ್ತಿದೆ. ಭಾರತ ಸ್ವಲ್ಪ ಮೇಲುಗೈ ಸಾಧಿಸಿದರೂ, ಪಾಕಿಸ್ತಾನ ತಾನಾಗಿಯೇ ಶರಣಾಗುವಂತೆ ಬೇಗನೆ ಪಂದ್ಯವನ್ನು ಕೈಚೆಲ್ಲುತ್ತಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಪ್ರಿಯರಲ್ಲಿ ತಮ್ಮ ಆಟಗಾರರ ಮೇಲಿನ ಅಭಿಮಾನ ಕಡಿಮೆಯಾಗಿರೋದು.

ಒಟ್ಟಿನಲ್ಲಿ ಭಾರತ- ಪಾಕಿಸ್ತಾನ ಪಂದ್ಯದಲ್ಲಿ ಪಾಕ್ ಆಟಗಾರರಲ್ಲಿ ಒತ್ತಡ ಕಾಣಿಸುತ್ತಿದೆಯೇ ಹೊರತು ಗೆದ್ದೇ ತೀರಬೇಕೆಂಬ ಹಂಬಲ ಬತ್ತಿಹೋಗುತ್ತಿದೆ. ತಂಡದಲ್ಲಿ ಹೊಂದಾಣಿಕೆ ಮತ್ತು ಸಂಘಟಿತ ಪ್ರದರ್ಶನದ ಕೊರತೆಯೂ ಇದಕ್ಕೆ ಕಾರಣ ಎಂದರೆ ತಪ್ಪಿಲ್ಲ. ಇನ್ನು ತಂಡದ ಅಂತಿಮ 11 ಆಟಗಾರರ ಆಯ್ಕೆಯಲ್ಲೂ ಪಾಕಿಸ್ತಾನ ಎಡವಿತ್ತು. ಪಿಚ್ ಪರಿಶೀಲಿಸುವ ಮುನ್ನವೇ ಅಂತಿಮ ಬಳಗವನ್ನು ಆಯ್ಕೆ ಮಾಡಿತ್ತು. ಇದರಿಂದ ಪಾಕಿಸ್ತಾನ ಒಬ್ಬ ಸ್ಪಿನ್ ಬೌಲರ್ ಅನುಪಸ್ಥಿತಿ ಎದುರಿಸುವಂತೆ ಮಾಡಿತ್ತು. ಈ ಎಲ್ಲ ಅಂಶಗಳು ಪಾಕಿಸ್ತಾನ ಈ ಮೊದಲಿನಂತೆ ಹೆಚ್ಚು ಹಠದಿಂದ ಕಣಕ್ಕಿಳಿಯುತ್ತಿಲ್ಲ ಎಂಬುದನ್ನು ತೋರುತ್ತದೆ.

Leave a Reply