
ವೆಂಕಟಪ್ಪ ಆರ್ಟ್ ಗ್ಯಾಲರಿ ಖಾಸಗಿಯವರಿಗೆ ನೀಡಲು ತೀವ್ರ ವಿರೋಧ
ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಆರ್ಟ್ ಗ್ಯಾಲರಿಯಾಗಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ತಸ್ವೀರ್ ಫೌಂಡೇಷನ್ ಗೆ ದತ್ತು ನೀಡುವ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ರಾಜ್ಯದ ಕಲಾವಿದರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದ ಕಲೆ, ಪರಂಪರೆ ಮತ್ತು ಪ್ರವಾಸೋದ್ಯಮ ಪ್ರದೇಶಗಳ ಅಭಿವೃದ್ಧಿಗೆ ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಮುಂದಾಗಿತ್ತು. ಹಾಗಾಗಿ ಸಾಮಾಜಿಕ ಹೊಣೆಗಾರಿಕೆ (ಸಿಎಸ್ ಆರ್) ಅಡಿಯಲ್ಲಿ ಈ ಅಭಿವೃದ್ಧಿಗೆ ಕೆಲವು ಕಂಪನಿಗಳು ಮುಂದಾಗಿದ್ದವು. ಅದೇ ರೀತಿ ತಸ್ವೀರ್ ಫೌಂಡೇಷನ್ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಐದು ವರ್ಷಗಳ ದತ್ತು ಪಡೆಯಲು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಸರ್ಕಾರದ ಈ ಕ್ರಮದ ವಿರುದ್ಧವಾಗಿ ಭಾನುವಾರ ಕಲಾವಿದರು ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದ್ದು, ಸರ್ಕಾದ ಕ್ರಮವನ್ನು ಟೀಕಿಸಿದ್ದಾರೆ. ಇದೇ ವೇಳೆ ಕಲಾವಿದರು ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪೈಕಿ ಪ್ರಮುಖ ಪ್ರಶ್ನೆ ಹೀಗಿವೆ.
- ನಗರದಲ್ಲಿರುವ ಏಕೈಕ ಆರ್ಟ್ ಗ್ಯಾಲರಿಯನ್ನು ನಡೆಸಲು ಸಾಮರ್ಥ್ಯವಿಲ್ಲದೇ ಸರ್ಕಾರ ದತ್ತು ನೀಡಲು ಮುಂದಾಗಿದೆಯೇ?
- ಇದೇ ರೀತಿ ಸರ್ಕಾರ ಮುಂದೊಂದು ದಿನ ವಿಧಾನಸೌಧವನ್ನು ಖಾಸಗಿಯವರ ಕೈಗೆ ನೀಡುತ್ತದೆಯೇ?
- ಸರ್ಕಾರದ ಪಾಲಿಗೆ ಸಾವಿರಾರು ಕಲಾವಿದರಿಗಿಂತ ಒಬ್ಬ ಉದ್ಯಮಿ ಹೆಚ್ಚಾದರೆ?
- ಈ ಒಪ್ಪಂದವನ್ನು ಗುಟ್ಟಾಗಿ ಮಾಡಿಕೊಂಡಿದ್ದೇ? ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಲಾವಿದರನ್ನು ಪರಿಗಣಿಸಲಿಲ್ಲವೇಕೆ? ರಿಯಲ್ ಎಸ್ಟೇಟ್ ಮಾಫಿಯಾಗೆ ಸಂಸ್ಕೃತಿಯನ್ನು ಮಾರಲು ಹೊರಟಿದೆಯೇ?
- ವೆಂಕಟಪ್ಪ ಆರ್ಟ್ ಗ್ಯಾಲರಿ ಮೇಲೆ ತಸ್ವೀರ್ ಫೌಂಡೇಷನ್ ಗೆ ಕಾಳಜಿ ಇರುವುದೇ ಆದರೆ, ಆರ್ಥಿಕ ನೆರವು ನೀಡಿ, ಆಡಳಿತದಿಂದ ದೂರವಿರಬಹುದಲ್ಲ?
- ಈ ಗ್ಯಾಲರಿಯನ್ನು ದತ್ತು ನೀಡಲು ತಸ್ವೀರ್ ಫೌಂಡೇಶನ್ ಮುಖ್ಯಸ್ಥ ಅಭಿಷೇಕ್ ಪೊದ್ದಾರ್ ಈವರೆಗೂ ಯಾವ ಕಲಾವಿದನಿಗೆ ನೆರವಾಗಿದ್ದಾರೆ?
ಇನ್ನು ಈ ಎಲ್ಲ ಪ್ರಶ್ನೆಗಳ ಜತೆಗೆ ಕಲಾವಿದರು ಸರ್ಕಾರಕ್ಕೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ರಾಜ್ಯದಲ್ಲಿನ ಕಲಾವಿದರ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರ ಈ ಕೂಡಲೇ ಒಪ್ಪಂದವನ್ನು ರದ್ದು ಮಾಡಬೇಕು. ಇದು ಕರ್ನಾಟಕದ ಏಕೈಕ ಸರ್ಕಾರಿ ಆರ್ಟ್ ಗ್ಯಾಲರಿಯಾಗಿದ್ದು, ಇದನ್ನು ಸರ್ಕಾರವೇ ನಡೆಸಬೇಕು. ಇದರ ಬಗೆಗಿನ ಮಹತ್ವದ ನಿರ್ಧಾರದ ವೇಳೆ ಕಲಾವಿದರನ್ನೂ ಪರಿಗಣನೆಗೆ ತೆಗೆದುಕೊಂಡು ಅಭಿವೃದ್ಧಿ ಕ್ರಮ ಕೈಗೊಳ್ಳಬೇಕು.

