‘ಭಾರತ್ ಮಾತಾ ಕೀ ಜೈ’ ಚರ್ಚೆಯ ವಿಷಯವೇ ಅಲ್ಲ, ಈಡನ್ ಗಾರ್ಡನ್ ನೋಡಿ ಗೊತ್ತಾಗುತ್ತೆ ಅಂದ್ರು ಜೇಟ್ಲಿ!

ಡಿಜಿಟಲ್ ಕನ್ನಡ ಟೀಮ್

ಭಾನುವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೀತು. ಈ ಸಂಬಂಧ ಅರುಣ್ ಜೇಟ್ಲಿಯವರ ಪತ್ರಿಕಾಗೋಷ್ಠಿಯ ಮಾತುಗಳನ್ನು ಕೇಳಿಸಿಕೊಂಡಾಗ, ಬಿಜೆಪಿಯು ಜೈ ಶ್ರೀರಾಂ ಘೋಷದಿಂದ ಭಾರತ್ ಮಾತಾ ಕೀ ಜೈಗೆ ಸಂಪೂರ್ಣ ಹೊರಳಿಕೊಂಡಿರೋದು ತಿಳಿಯುತ್ತಿದೆ.

‘ರಾಷ್ಟ್ರವಾದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಒಟ್ಟೊಟ್ಟಿಗೆ ಇರಬಲ್ಲ ಸಂಗತಿಗಳು. ಸರ್ಕಾರದ ನೀತಿ- ನಿಯಮಗಳ ಬಗ್ಗೆ ಅಸಮ್ಮತಿ ಸೂಚಿಸುವ, ಪ್ರತಿರೋಧ ವ್ಯಕ್ತಪಡಿಸುವ ಅವಕಾಶವನ್ನು ಸಂವಿಧಾನವೇ ನೀಡಿದೆ. ಅದಕ್ಕೆ ಅಂಕುಶವಿಲ್ಲ. ಆದರೆ ದೇಶ ವಿಧ್ವಂಸಗೊಳಿಸುವ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ’ ಎಂಬ ನಿರ್ಣಯಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಒತ್ತುಕೊಟ್ಟಿರುವುದಾಗಿ ವಿತ್ತಸಚಿವ ಜೇಟ್ಲಿ ಹೇಳಿದರು.

ಕಾರ್ಯಕಾರಿಣಿಯಲ್ಲಿ ‘ಭಾರತ್ ಮಾತಾ ಕೀ ಜೈ’ ಘೋಷಣೆ ಸುತ್ತಲಿನ ಚರ್ಚೆಗಳ ಬಗ್ಗೆ ಪ್ರಸ್ತಾಪವಾಯಿತೇ ಎಂಬ ಪ್ರಶ್ನೆ ಪತ್ರಕರ್ತರಿಂದ ಎದುರಾಯಿತು. ಭಾರತವಿನ್ನೂ ಶನಿವಾರದ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯ ದಾಖಲಿಸಿದ ಮೆಲುಕಿನಲ್ಲಿರುವುದನ್ನು ಚೆನ್ನಾಗಿಯೇ ಬಳಸಿಕೊಂಡ ಜೇಟ್ಲಿ- ‘ಇದು ಚರ್ಚೆಯಾಗಬೇಕಾದ ವಿಷಯ ಎಂದೇ ಅನಿಸಲಿಲ್ಲ. ಭಾರತ್ ಮಾತಾ ಕೀ ಜೈ ಎನ್ನುವುದರ ಬಗ್ಗೆ ಯಾರಿಗೂ ತಕರಾರು ಇರುವುದಕ್ಕೆ ಸಾಧ್ಯವಿಲ್ಲ. ಕೋಲ್ಕತ್ತದ ಈಡನ್ ಗಾರ್ಡನ್ ನಲ್ಲಿ ಶನಿವಾರ ಮೊಳಗಿದ ಈ ಘೋಷಣೆಯನ್ನೇ ನೋಡಿ ಬೇಕಾದರೆ’ ಅಂತ ಪ್ರತಿಕ್ರಿಯಾತ್ಮಕ ಸಿಕ್ಸರ್ ಎತ್ತಿದರು ಜೇಟ್ಲಿ.

ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧವೂ ಕೆಲವು ಶಾಟ್ ಗಳು ಜೇಟ್ಲಿ ಕಡೆಯಿಂದ ಚಿಮ್ಮಿದವು. ಪ್ರಮುಖ ಪ್ರತಿಪಕ್ಷ ಎಂದುಕೊಳ್ಳುತ್ತಿರುವ ಕಾಂಗ್ರೆಸ್ ಸ್ಥಿತಿ ಹೇಗಾಗಿದೆ ಎಂದರೆ ಮೈತ್ರಿ ರಾಜಕಾರಣದ ಬಾಲವಾಗಿ ಉಳಿದುಕೊಳ್ಳುತ್ತಿದೆ ಅಂತ ವ್ಯಂಗ್ಯವಾಡಿದರು. ಅಲ್ಲದೇ, ಪಿಪಿಎಫ್ ಉಳಿತಾಯದ ಬಡ್ಡಿದರ ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಜನರಿಗೆ ಮೋಸ ಮಾಡಿದೆ ಎಂಬ ರಾಹುಲ್ ಗಾಂಧಿಯವರ ಆರೋಪಕ್ಕೂ ಜೇಟ್ಲಿ ಉತ್ತರಿಸಿದರು. ಯುಪಿಎ ಅವಧಿಯಲ್ಲಿ ಆರ್ಥಿಕತೆ ಕೆಟ್ಟದಾಗಿತ್ತು. ಈಗ ಆರ್ಥಿಕ ಬೆಳವಣಿಗೆ ಹಂತದಲ್ಲಿರುವಾಗ ಬಡ್ಡಿದರ ತಗ್ಗಿಸುವುದು ಸೂಕ್ತ ಕ್ರಮ. ಪಿಪಿಎಫ್ ಮೇಲೆ ಈಗಿರುವ ಶೇ. 8.1 ಬಡ್ಡಿದರವೂ ಆಕರ್ಷಕವಾಗಿಯೇ ಇದೆ. ಇಂಥ ಅವಕಾಶ ಜಗತ್ತಿನ ಬೇರೆ ರಾಷ್ಟ್ರಗಳಿಲ್ಲ. ಅಲ್ಲದೇ ಈ ಉಳಿತಾಯ ಮೊತ್ತ ತೆರಿಗೆ ರಹಿತವಾಗಿರುವುದರಿಂದ ಒಟ್ಟಾರೆ ಶೇ. 11.2ರಷ್ಟನ್ನು ಗಳಿಸಿದಂತಾಗುತ್ತದೆ ಅಂತ ಜೇಟ್ಲಿ ಸಮರ್ಥಿಸಿಕೊಂಡರು. ದೇಶ ಜಿಎಸ್ಟಿ ವ್ಯವಸ್ಥೆಯತ್ತ ಸಾಗುತ್ತಿರುವುದರಿಂದ ಲಕ್ಸುರಿ ವಸ್ತುಗಳು ತೆರಿಗೆಗೆ ಒಳಪಡಲೇಬೇಕು ಎಂದ ಜೇಟ್ಲಿ, ಬಂಗಾರದ ಆಭರಣಗಳ ಮೇಲೆ ಶೇ. 1ರ ಅಬಕಾರಿ ಸುಂಕವನ್ನು ಸಮರ್ಥಿಸಿಕೊಂಡರು.

Leave a Reply