ಸ್ವಚ್ಛ ಶಕ್ತಿಮೂಲಗಳತ್ತ ಭಾರತದ ಪ್ರಗತಿ, ನಾವು ತಿಳಿದಿರಬೇಕಾದ ಸೌರ ಸಂಗತಿ

ಡಿಜಿಟಲ್ ಕನ್ನಡ ಟೀಮ್

ಪವರ್… ಯಾವುದೇ ದೇಶದ ಮುಖ್ಯ ಸವಾಲು. ಪವರ್ ಅಂದ್ರೆ ಅಧಿಕಾರ ಹಿಡಿಯೋದು ಎಂಬರ್ಥದಲ್ಲಿ ಹೇಳ್ತಾ ಇಲ್ಲ ಸ್ವಾಮಿ. ಇಂಧನಶಕ್ತಿ… ಲೈಟು ಉರಿಸೋದರಿಂದ ಹಿಡಿದು ಒಲೆ ಹೊತ್ತಿಸುವವರೆಗೆ, ಏನೆಲ್ಲ ಯಂತ್ರಗಳ ಚಲನೆಗೆ ಶಕ್ತಿ ಬೇಕಲ್ಲ.

ಭಾರತದ ವಿಷಯಕ್ಕೆ ಬಂದರೆ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲಗಳೇ ನಮ್ಮ ಮುಖ್ಯ ಶಕ್ತಿ ಮೂಲಗಳು. ಉಷ್ಣ ವಿದ್ಯುತ್ ಮತ್ತು ನೈಸರ್ಗಿಕ ಅನಿಲ ಸ್ಥಾವರಗಳಿಂದ ಶೇಕಡಾ 79.1 ರಷ್ಟು ಶಕ್ತಿ ಉತ್ಪಾದನೆಯಾಗುತ್ತದೆ. ಇಲ್ಲಿರುವ ಖ್ಯಾತೆ ಅಂತಂದ್ರೆ ಕಲ್ಲಿದ್ದಲು ಉರಿಸಿದಷ್ಟೂ ಮಾಲಿನ್ಯ ಹೆಚ್ಚುತ್ತೆ, ನೈಸರ್ಗಿಕ ಅನಿಲದ ವಿಷಯದಲ್ಲಿ ಮಾಲಿನ್ಯದ ಜತೆಗೆ ಪರಾವಲಂಬನೆಯ ಸಂಗತಿಯೂ ಇದೆ. ಜಲ ವಿದ್ಯುತ್ ಮೂಲದಿಂದ ಶೇಕಡಾ 11.6 ರಷ್ಟು ಶಕ್ತಿ ಉತ್ಪಾದನೆಯಾಗುತ್ತಿದೆ. ಇನ್ನೆಲ್ಲಾದರೂ ಡ್ಯಾಮ್ ಕಟ್ಟುವುದಕ್ಕೆ ಹೋದರೆ ಜನರಿಂದ ಒದೆಸಿಕೊಳ್ಳುವ ಪರಿಸ್ಥಿತಿ ಇದೆ. ಅಲ್ಲಿಗೆ ಅದರ ವ್ಯಾಪ್ತಿ ಅಷ್ಟೆ. ಅಣು ಸ್ಥಾವರ ಮೂಲದಿಂದ ಶೇಕಡಾ 3.2 ರಷ್ಟು ಶಕ್ತಿ ಉತ್ಪಾದನೆಯಾಗುತ್ತಿದೆ. ಆದರೆ ಇದರ ಅಪಾಯ ಸಾಧ್ಯತೆ, ಪರಿಸರವಾದಿಗಳ ಪ್ರತಿರೋಧ ಇವೆಲ್ಲದರ ನಡುವೆ ಬೆಳವಣಿಗೆ ಮಂಕು. ಭೂತಾನ್ ನಿಂದ 0.5ರಷ್ಟು ಶಕ್ತಿ ಆಮದಾಗುತ್ತಿದೆ.

ಇವೆಲ್ಲದರ ಕತೆ ಏನೇ ಇರಲಿ, ನಮಗಂತೂ ಕರೆಂಟ್ ಬೇಕೇ ಬೇಕು. ಶಕ್ತಿಯೂ ಬೇಕು, ಪರಿಸರವೂ ಉಳಿಬೇಕು ಅಂತಾದ್ರೆ ಅದಕ್ಕಿರೋ ದಾರಿ ನವೀಕರಿಸಬಲ್ಲ ಇಂಧನಮೂಲಗಳು. ಅವುಗಳಿಂದ ಸಿಗುತ್ತಿರುವ ಶಕ್ತಿ ಶೇ. 5.6ರಷ್ಟು ಮಾತ್ರ.

ಆದರೆ…

ಈ ನಡುವೆಯೇ ಒಂದು ಸಿಹಿ ಸುದ್ದಿ ಇದೆ. ಅದೆಂದರೆ ಈ ನವೀಕರಿಸಬಲ್ಲ ಶಕ್ತಿ ಉತ್ಪಾದನೆಯ ವೇಗ ಕಳೆದೆರಡು ವರ್ಷಗಳಿಂದ ಜೋರಿನಲ್ಲಿದೆ. ಎಷ್ಟು ಜೋರು ಅಂತಂದ್ರೆ ಅಣು ವಿದ್ಯುತ್ ಉತ್ಪಾದನೆಯನ್ನು ಹಿಂದಕ್ಕೆ ಹಾಕುವಷ್ಟು. 2014-15 ರ ಆರ್ಥಿಕ ವರ್ಷದಲ್ಲಿ ಅಣು ವಿದ್ಯುತ್ ಪ್ರಮಾಣ 36.1 ಬಿಲಿಯನ್ ಯೂನಿಟ್ ಗಳು ಉತ್ಪಾದನೆಯಾಗಿದ್ದರೆ, ನವೀಕರಿಸಬಹುದಾದ ಮೂಲದಿಂದ ಸಿಕ್ಕ ವಿದ್ಯುತ್ ಪ್ರಮಾಣ 61.8 ಬಿಲಿಯನ್ ಯೂನಿಟ್ ಗಳು. 2013-14 ಮತ್ತು 2014-15 ರಲ್ಲಿ ಅಣುವಿದ್ಯುತ್ ಗಿಂತ ನವೀಕರಿಸಬಹುದಾದ ವಿದ್ಯುತ್ ಪ್ರಮಾಣ ಕ್ರಮವಾಗಿ ಶೇ 11.7 ಮತ್ತು ಶೇ 16.2 ರಷ್ಟು ಏರಿಕೆಯಾಗಿದೆ.

ಈ ನವೀಕರಿಸಬಲ್ಲ ವಿಭಾಗದಲ್ಲಿ ಆಗುತ್ತಿರುವ ಪ್ರಗತಿ ಏನು ಎಂಬುದು ಆಸಕ್ತಿಕರ. ಸದ್ಯ ನವೀಕರಿಸಬಹುದಾದ ಮೂಲಗಳಿಂದ ಹೆಚ್ಚು ವಿದ್ಯುತ್ ಲಭ್ಯವಾಗುತ್ತಿರುವುದು ಪವನ ಶಕ್ತಿಯಿಂದ. ಆದರೆ ಹೆಚ್ಚು ವೇಗವಾಗಿ ಬೆಳವಣಿಗೆ ಪಡೆದುಕೊಳ್ಳುತ್ತಿರುವುದು ಮಾತ್ರ ಸೌರ ಶಕ್ತಿ. ಸೂರ್ಯನ ಕೃಪೆ ಢಾಳಾಗಿಯೇ ಇರುವ ಭಾರತಕ್ಕೆ ಇದೊಂದು ಉತ್ತಮ ಸಾಧ್ಯತೆಯೇ ಸರಿ. 2016 ರ ಫೆಬ್ರವರಿಯಲ್ಲಿ 5775 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದ್ದು, 2022 ರ ವೇಳೆಗೆ 1 ಲಕ್ಷ ಮೆಗಾ ವ್ಯಾಟ್ ಉತ್ಪಾದನೆಯ ಗುರಿಯನ್ನು ರಾಷ್ಟ್ರೀಯ ಸೌರ ಮಿಷನ್ ಹೊಂದಿದೆ. ಆ ಮೂಲಕ ಸೌರಶಕ್ತಿಯನ್ನು ಎರಡನೇ ದೊಡ್ಡ ಶಕ್ತಿಮೂಲವಾಗಿಸಬೇಕೆಂಬ ಉದ್ದೇಶ ಭಾರತದ್ದು.

ದೇಶದ ನವೀಕರಿಸಬಹುದಾದ ಶಕ್ತಿಮೂಲಗಳು ತಮ್ಮ ಕೆಟಗರಿಯಲ್ಲಿ ಈ ಕೆಳಗಿನಂತೆ ಪಾಲು ಹೊಂದಿವೆ.

  • ಪವನಶಕ್ತಿಯಿಂದ 25088 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಶೇ 64.6 ರಷ್ಟು ಪ್ರಮಾಣ ಹೊಂದಿದೆ.
  • ಸೌರಶಕ್ತಿಯಿಂದ 4879 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಶೇ 12.6 ರಷ್ಟು ಪ್ರಮಾಣ ಹೊಂದಿದೆ.
  • ಜೈವಿಕ ಅನಿಲದ ಕೊಡುಗೆ 4676 ಮೆಗಾವ್ಯಾಟ್. ಶೇ 12.0 ರಷ್ಟು ಪ್ರಮಾಣ ಹೊಂದಿದೆ.
  • ಕಿರು ಜಲವಿದ್ಯುತ್ ಯೋಜನೆಗಳಿಂದ 4177 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಶೇ 10.8 ರಷ್ಟು ಪ್ರಮಾಣ ಹೊಂದಿದೆ.

Leave a Reply