ಎಂಥೆಂಥವರೆಲ್ಲ ಹೀರೋ ಪೋಸು ಕೊಡ್ತಿರೋವಾಗ ದೇಶ ಗಮನಿಸಬೇಕಿರುವ ಸುಮೇರ್ ಸಿಂಗ್!

ಡಿಜಿಟಲ್ ಕನ್ನಡ ಟೀಮ್

ನಾಲ್ಕು ದಿನಗಳ ಹಿಂದೆ ಒಬ್ಬರು ನೂರನೇ ಜನ್ಮದಿನ ಆಚರಿಸಿಕೊಂಡರು. ನೂರು ತಲುಪೋದೇ ಕೌತುಕದ ಸಂಗತಿ. ಅದರಲ್ಲೂ ಇವರು ಆರ್ಮಿ ಮನುಷ್ಯ ಅಂದಮೇಲೆ ನಾವೆಲ್ಲ ಆ ಬಗ್ಗೆ ತಿಳಿದುಕೊಳ್ಳಲೇಬೇಕು.

ಎರಡನೇ ಮಹಾಯುದ್ಧದಿಂದ ಹಿಡಿದು, ಭಾರತ – ಪಾಕಿಸ್ತಾನ ಯುದ್ಧದವರೆಗೂ ಹಲವು ರಣರಂಗದಲ್ಲಿ ಸೆಣಸಾಡಿರುವ ಭಾರತೀಯ ಯೋಧ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸುಮೇರ್ ಸಿಂಗ್.

ಯುದ್ಧಭೂಮಿಯಲ್ಲಿ ಸುಮೇರ್ ಸಿಂಗ್ ಅವರ ಹಾದಿ ಚಿಕ್ಕದಲ್ಲ. ಅದೊಂದು ಸುದೀರ್ಘ ಪಯಣ. ಜರ್ಮನಿ, ಅಫ್ಘನ್, ಪಾಕಿಸ್ತಾನ ಹೀಗೆ ಹಲವು ರಾಷ್ಟ್ರಗಳ ಸೇನೆ ವಿರುದ್ಧ ಸೆಣಸಾಡಿದ ಹೆಮ್ಮೆ ಇವರದು. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸೇನೆ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಸುಮೇರ್, 1945ರಲ್ಲಿ ಬ್ರಿಟಿಷ್ ಸೇನೆಯ ಪ್ರತಿಷ್ಠಿತ ಗೌರವವಾಗಿರುವ ‘ಮೊಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್’ (ಎಂಇಬಿ) ಗೌರವವನ್ನು ಸಂಪಾದಿಸಿದ್ದರು.

ಆಗ್ರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಸುಮೇರ್, ಜೈಪುರ ರಾಜ್ಯದ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಅವಕಾಶವನ್ನು ಬಿಟ್ಟು, ಜೈಪುರ ಸ್ಟೇಟ್ಸ್ ಸರ್ವಿಸ್ ಮನ್ ಗಾರ್ಡ್ಸ್ ಹುದ್ದೆಯನ್ನು ಆಯ್ದುಕೊಂಡರು. ಅವರಲ್ಲಿದ್ದ ಸೇನೆ ಮೇಲಿನ ಒಲವಿಗೆ ಇದೊಂದು ಉತ್ತಮ ಉದಾಹರಣೆ.

ಸುಮೇರ್, 1942ರಲ್ಲಿ ನಡೆದ ಎರಡನೇ ಮಹಾಯುದ್ಧದ ವೇಳೆ ಬ್ರಿಟಿಷ್ ಸೇನೆ ಪರ ಕಾದಾಟ ನಡೆಸಿದ್ದರು. ಕೇವಲ ಇದೊಂದೇ ಅಲ್ಲ. ನಂತರ ಬಲೂಚಿಸ್ತಾನವನ್ನು ಕಾಪಾಡುವ ಸಲುವಾಗಿ ಅಫ್ಘನ್ ಬಂಡಾಯಕೋರರ ವಿರುದ್ಧ ಸೆಣೆಸಿದ್ದರು. ಆಫ್ರಿಕಾ ನೆಲದಲ್ಲಿ ಬ್ರಿಟಿಷ್ ಸೇನೆ ಪರ ಇಟಲಿಯ ವಿರುದ್ಧ ಸೆಣಸಿ ಗೊಂಡಾಲ್ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ನೆರವಾಗಿದ್ದರು. ನಂತರ ಇಟಲಿಯಲ್ಲಿ ಸ್ಥಾಪಿಸಲಾದ ಬೀಚ್ ಗ್ರೂಪ್ ನ ಸದಸ್ಯನಾಗಿಯೂ ಸೇವೆ ಸಲ್ಲಿಸಿದರು. ಈ ಗುಂಪಿನಲ್ಲಿ ಭೂ ಸೇನೆ ಜತೆಗೆ ವಾಯು ಹಾಗೂ ನೌಕಾ ಸೇನೆಯೂ ಮಿಶ್ರಿತಗೊಂಡಿತ್ತು. ಈ ಸಮಯದಲ್ಲಿ ಸುಮೇರ್ ಎಂಇಬಿ ಗೌರವವನ್ನು ಪಡೆದರು.

ಈ ಯುದ್ಧದ ಬಳಿಕ ಸುಮೇರ್ ರನ್ನು ಹಾಂಕಾಂಗ್ ಗೆ ತೆರಳಿ, ಅಲ್ಲಿ ಬಂಧಿತರಾಗಿದ್ದ ಜಪಾನ್ ನ ಸೇನಾನಿಗಳನ್ನು ಕಾವಲು ಪಡೆಯಲ್ಲಿಯೂ ಇದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ 1948 ರಲ್ಲಿ ಹಾಗೂ 1965ರ ಇಂಡೊ-ಪಾಕ್ ಯುದ್ಧದಲ್ಲಿ ಸೆಣಸಿದ್ದರು.

sumer1

ಇಷ್ಟೆಲ್ಲಾ ಸೇವೆ ಸಲ್ಲಿಸಿ ನೂರು ವರ್ಷ ಬದುಕಿರುವ ಸುಮೇರ್ ಗೆ ಜೀವನದಲ್ಲಿ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಕೇವಲ ಇವರೊಬ್ಬರೇ ಅಲ್ಲ, ಇವರ ಮಕ್ಕಳೂ ಸಹ ಸೈನಿಕರೆ. ಮೊದಲ ಮಗ ನಿ. ಲೆಫ್ಟಿನೆಂಟ್ ಜನರಲ್ ಕುನ್ವಾರ್ ದೌಲತ್ ಸಿಂಗ್ ಶೆಖಾವತ್ 2007ರಲ್ಲಿ ಮೆಕನೈಸ್ಡ್ ಫೋರ್ಸ್ ನ ಪ್ರಧಾನ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಎರಡನೇ ಮಗ ರೇರ್ ಅಡ್ಮಿರಲ್ ಕುನ್ವಾರ್ ಕರ್ಣಿ ಸಿಂಗ್, ಭಾರತೀಯ ನೌಕಾ ಪಡೆಯಲ್ಲಿ ನ್ಯೂರೊಲಜಿಸ್ಟ್ ಆಗಿದ್ದರು.

ಹಾಂಕಾಂಗ್ ನಲ್ಲಿದ್ದ ಸಂದರ್ಭದಲ್ಲಿ ಫುಟ್ಬಾಲ್ ಆಡುವಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರ ಪರಿಣಾಮ ವಯಸ್ಸಾಗುತ್ತಿದ್ದಂತೆ ಗಾಲಿ ಕುರ್ಚಿಯಲ್ಲಿ ಕೂರಿಸಿದೆ. ಇದರ ಹೊರತಾಗಿ ಸುಮೇರ್ ಈಗಲೂ ಉತ್ಸಾಹದಿಂದ ಪುಟಿಯುತ್ತಾರೆ. ಯಾವುದೇ ಕನ್ನಡಕದ ನೆರವಿಲ್ಲದೇ ಓದಬಲ್ಲರು. ನಿಯಮಿತ ಆಹಾರ ಪದ್ಧತಿ ಪಾಲಿಸುವ ಸುಮೇರ್, ಅತ್ಯುತ್ತಮವಾಗಿ ಫಿಟ್ ಆಗಿದ್ದಾರೆ. ತಮ್ಮ ಮೂವರು ಮಕ್ಕಳು, ಐವರು ಮೊಮ್ಮಕ್ಕಳು ಹಾಗೂ ಮರಿಮಕ್ಕಳೊಂದಿಗೆ ಸಂತೃಪ್ತ ಜೀವನ. ಒಂದಿಷ್ಟೂ ಮುಕ್ಕಾಗಿರದ ಬದುಕಿನ ಆಸ್ವಾದ.

ಮಾಹಿತಿ ಸ್ಫೋಟದ ಈ ದಿನಗಳಲ್ಲಿ ಯಾರ್ಯಾರೋ ಏನೇನೋ ಕಾರಣಗಳಿಗೆ ಹೀರೋ ಆಗ್ತಿರುವಾಗ ಇಂಥ ಜೀವಗಳನ್ನು ನಾವಾದರೂ ಸಂಭ್ರಮಿಸಬೇಕಲ್ಲವೇ?

Leave a Reply