ಕನ್ಹಯ್ಯ ಈಗಿನ ಭಗತ್ ಆದ್ರೆ ಗಾಂಧಿಗಳು ಇಂದಿನ ಮಹಾತ್ಮರಾ? ತರೂರ್ ಪ್ರಲಾಪ- ಇತರ ಸುದ್ದಿಗಳು

ಸೋಮವಾರ ನಂಜನಗೂಡಿನ ನಂಜುಂಡೇಶ್ವರ ರಥೋತ್ಸವದಲ್ಲಿ ಸೇರಿದ್ದ ಶ್ರದ್ಧಾಳುಗಳ ಸಮೂಹ

ದೇಶದ್ರೋಹ ಆರೋಪ ಹೊತ್ತಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ರನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಎಂದು ಹೋಲಿಕೆ ಮಾಡುವ ಮೂಲಕ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿವಾದಕ್ಕೆ ಸಿಲುಕಿದ್ದಾರೆ.

ಭಾನುವಾರ ಸಂಜೆ ಜೆಎನ್ ಯು ಆವರಣದಲ್ಲಿ ಸುದೀರ್ಘ 43 ನಿಮಿಷ ನೀಡಿದ ಭಾಷಣದ ವೇಳೆ ‘ಭಗತ್ ಸಿಂಗ್ ತಮ್ಮ 20ನೇ ವಯಸ್ಸಿನಲ್ಲೇ ಮಾರ್ಕ್ಸ್ ವಾದವನ್ನು ನಂಬಿ ತಾಯ್ನಾಡಿಗಾಗಿ ಹೋರಾಟ ನಡೆಸಿದ್ದ. ಈಗ ಕನ್ಹಯ್ಯ ಕುಮಾರ್ ನಲ್ಲೂ ಅದೇ ಗುಣವಿದೆ’ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತರೂರ್, ನಾನು ಕನ್ಹಯ್ಯ ಮತ್ತು ಭಗತ್ ಸಿಂಗ್ ಹೋಲಿಕೆ ಮಾಡಿಲ್ಲ. ಮಾರ್ಕ್ಸ್ ವಾದ, ಆತನ ವಯಸ್ಸು, ಸಿದ್ಧಾಂತಗಳು ಏಕ ರೂಪದಲ್ಲಿದೆ ಎಂದಷ್ಟೇ ಹೇಳಿದೆ ಎಂದು ಸಮರ್ಥನೆಯನ್ನು ಕೊಟ್ಟಿದ್ದಾರೆ.

‘ಇಂದು ರಾಷ್ಟ್ರಭಕ್ತಿಯನ್ನು ಭಾರತ ಮಾತಾಕಿ ಜೈ ಎನ್ನುವುದರಲ್ಲಿ ಅಳೆಯಲಾಗುತ್ತಿದೆ. ಸಂವಿಧಾನದಲ್ಲಿ ಇದನ್ನು ಹೇಳಲು ಹೇಗೆ ಹಕ್ಕು ನೀಡಿದೆಯೋ ಅದನ್ನು ಹೇಳದಿರುವ ಹಕ್ಕನ್ನು ನೀಡಿದೆ. ಭಾರತ ಕೇವಲ ಹಿಂದೂಗಳ ರಾಷ್ಟ್ರವಲ್ಲ. ಇಲ್ಲಿ ಕೃಷ್ಣನೂ ಬೇಕು ಕನ್ಹಯ್ಯನೂ ಬೇಕು’ ಎಂಬುದು ಶಶಿ ತರೂರ್ ಭಾಷಣದ ಇತರೆ ಪ್ರಮುಖ ಅಂಶವಾಗಿತ್ತು.

ದೂರ ಉಳಿದ ಕಾಂಗ್ರೆಸ್: ಶಶಿ ತರೂರ್ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಸ್ವತಃ ಕಾಂಗ್ರೆಸ್ ಒಪ್ಪಿಕೊಳ್ಳಲು ಮುಂದಾಗಲಿಲ್ಲ. ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್, ‘ಭಗತ್ ಸಿಂಗ್ ಕೇವಲ ಒಬ್ಬರೆ. ಯಾರ ಜತೆಗೂ ಅವರನ್ನು ಹೋಲಿಕೆ ಮಾಡಲಾಗದು. ಭಗತ್ ಸಿಂಗ್ ರಂತೆ ಮತ್ತೊಬ್ಬ ವ್ಯಕ್ತಿ ಬರಲಾರ. ಈಗಿನ ಕಾಲದ ಯಾವುದೇ ಯುವಕನಿಗೂ ಅವರನ್ನು ಹೋಲಿಸ ಬಾರದು’ ಎಂದು ಜಾಣ್ಮೆಯ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯಿಂದ ಟೀಕೆ: ತರೂರ್ ಮಾತಿಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ವ್ಯಾಪಕ ಟೀಕೆ ಸುರಿಸಿದೆ. ‘ಭಗತ್ ಸಿಂಗ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ಭಾರತ್ ಮಾತಾಕಿ ಜೈ ಎಂದು ಘೋಷಿಸಿ ನೇಣುಗಂಬ ಏರಿದರು. ಅವರಿಗೂ ಕನ್ಹಯ್ಯನಿಗೂ ಹೋಲಿಕೆ ಮಾಡಿ ಶಶಿ ತರೂರ್ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಅಪಮಾನ ಮಾಡಿದ್ದಾರೆ. ಕನ್ಹಯ್ಯ, ಭಗತ್ ಸಿಂಗ್ ಆಗುವುದಾದರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಯಾರಾಗುತ್ತಾರೆ ಎಂದು ತಿಳಿಸಬೇಕು’ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ತಿಳಿಸಿದ್ದಾರೆ.

ಇನ್ನು ಮತ್ತೊಬ್ಬ ಬಿಜೆಪಿ ನಾಯಕ ಹಾಗೂ ಬಾಲಿವುಡ್ ನಟ ಪರೇಶ್ ರಾವಲ್, ‘ಶಶಿತರೂರ್ ಅವರ ಬುದ್ಧಿಮಟ್ಟ ಅವರ ಚಪ್ಪಲಿ ಅಳತೆಗಿಂತ ಕಡಿಮೆ ಇದೆ’ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

15 ಎಫ್ ಡಿಐ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ

ಫಾರಿನ್ ಇನ್ವೆಸ್ಟ್ ಮೆಂಟ್ ಪ್ರಮೋಷನ್ ಬೋರ್ಡ್ (ಎಫ್ಐಪಿಬಿ) ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಸಂಪುಟ ಸೋಮವಾರ 15 ಪ್ರಸ್ತಾವಗಳಿಗೆ ಒಪ್ಪಿಗೆ ನೀಡಿದೆ. ಮಾ.7ರಂದು ಎಫ್ಐಪಿಬಿ ಸಭೆ ನಡೆಸಿ ಈ ಎಫ್ ಡಿಐಗಳಿಗೆ ಸಮ್ಮತಿ ನೀಡುವಂತೆ ಶಿಫಾರಸ್ಸು ಮಾಡಿತ್ತು. ಈ 15 ಎಫ್ ಡಿಐಗಳ ಒಟ್ಟು ಮೊತ್ತ ₹ 7261 ಕೋಟಿ ಆಗಿದೆ.

ಚೀನಾ- ನೇಪಾಳ ರೈಲು ಮರು ಒಪ್ಪಂದ, ಭಾರತಕ್ಕೆ ಟಾಂಗ್

ನೇಪಾಳ ಮತ್ತು ಚೀನಾ ನಡುವಿನ ಆಯಕಟ್ಟಿನ ಪ್ರದೇಶದಲ್ಲಿ ರೈಲು ಮಾರ್ಗ ಸ್ಥಾಪಿಸಲು ಉಭಯ ರಾಷ್ಟ್ರಗಳ ನಾಯಕರು ಸೋಮವಾರ ಒಪ್ಪಿಗೆ ಸೂಚಿಸಿದ್ದಾರೆ.

ಭಾರತದ ಮೇಲೆ ನೇಪಾಳದ ಅವಲಂಬನೆ ತಗ್ಗಿಸುವಲ್ಲಿ ಅತಿ ಪ್ರಮುಖ ಬೆಳವಣಿಗೆ ಇದಾಗಿದೆ. ನೇಪಾಳ ಸಂವಿಧಾನ ವಿಚಾರವಾಗಿ ಅಲ್ಲಿನ ಮಾದೇಸಿ ಸಮುದಾಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಿತ್ತು. ಭಾರತದ ಗಡಿಯಲ್ಲಿರುವ ಈ ಸಮುದಾಯ ಪ್ರತಿಭಟನೆಗಿಳಿದ ಪರಿಣಾಮದಿಂದ ಸತತ ಆರು ತಿಂಗಳವರೆಗೆ ಭಾರತದಿಂದ ಹೋಗುವ ಎಲ್ಲ ಪೂರೈಕೆಗಳಿಗೆ ತಡೆ ಉಂಟಾಗಿತ್ತು. ಈ ಮಾದೇಸಿ ಸಮುದಾಯಕ್ಕೆ ಭಾರತದ ಬೆಂಬಲ ಇದೆ ಅನ್ನೋದು ನೇಪಾಳದ ಆರೋಪ ಹಾಗೂ ಕಹಿಭಾವ. ಹಾಗೆಂದೇ, ಇನ್ನೊಮ್ಮೆ ಇಂಥ ಸ್ಥಿತಿ ಎದುರಾದರೆ ಚೀನಾವನ್ನೇ ನೆಚ್ಚಿಕೊಳ್ಳುತ್ತೇವೆ ಎಂದು ಸಂದೇಶ ರವಾನಿಸಿರುವ ನೇಪಾಳ, ಆ ದೇಶದೊಂದಿಗೆ ರೈಲ್ವೆ ಕೊಂಡಿ ಬೆಸೆದುಕೊಳ್ಳುವುದಕ್ಕೆ ಒಪ್ಪಂದ ಮಾಡಿಕೊಂಡಿದೆ.

ಬರಾಕ್ ಐತಿಹಾಸಿಕ ಭೇಟಿ

ಚೋಟುದ್ದ ರಾಷ್ಟ್ರವಾದ್ರೂ ಅಂಥ ದೈತ್ಯ ಅಮೆರಿಕವನ್ನು ತನ್ನ ನೆಲದಲ್ಲೇ ಬಿಟ್ಟುಕೊಳ್ಳಲೇ ಇಲ್ಲ ಶಹಭಾಸ್ ಎಂಬುದೊಂದು ಅಚ್ಚರಿ ಕ್ಯೂಬಾ ಬಗ್ಗೆ ಮಾತನಾಡುವವರಿಗೆಲ್ಲ ಸಹಜವಾಗಿತ್ತು.

ಸೋಮವಾರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕ್ಯೂಬಾಕ್ಕೆ ಭೇಟಿ ನೀಡುವುದರೊಂದಿಗೆ ಅಮೆರಿಕ- ಕ್ಯೂಬಾಗಳ ನಡುವೆ ಸಂಬಂಧ ಸುಧಾರಣೆ ಹೆಜ್ಜೆಗಳು ಶುರುವಾಗಿವೆ.  1928ರ ನಂತರ ಅಮೆರಿಕದ ಯಾವ ಅಧ್ಯಕ್ಷರೂ ಕ್ಯೂಬಾಕ್ಕೆ ಭೇಟಿ ನೀಡಿರಲಿಲ್ಲ.

ಈಗಲೂ ಅಮೆರಿಕ ಮತ್ತು ಕ್ಯೂಬಾ ಎರಡೂ ಕಡೆಗಳ ಕಠೋರವಾದಿಗಳು ಈ ಮೈತ್ರಿ ಬೇಡ ಎನ್ನುತ್ತಿದ್ದಾರೆ. ಅದರ ನಡುವೆಯೇ ಬರಾಕ್ ಒಬಾಮಾ ಕ್ಯೂಬಾದ ಉದ್ಯಮಿಗಳೊಂದಿಗೆ ಮಾತುಕತೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ.

Leave a Reply