ಬಾಬಾ ಸಾಹೇಬರಿಗೆ ಗೌರವ ಸಲ್ಲಿಸೋದು ಅಂದ್ರೆ ಬ್ರಾಹ್ಮಣರನ್ನು ಬಯ್ಯೋದು ಅಂದುಕೊಂಡವರೆಲ್ಲ ಓದಿಕೊಳ್ಳಬೇಕಾದ ಪ್ರಧಾನಿ ಮೋದಿ ಭಾಷಣ!

ಡಿಜಿಟಲ್ ಕನ್ನಡ ಟೀಮ್

ಅಂಬೇಡ್ಕರರನ್ನು ಕೇವಲ ಎಡಪಂಥೀಯರ ಏಕಸ್ವಾಮ್ಯ ಎಂಬಂತೆ ಏಕೆ ಮಾಡ್ತೀರಿ, ಅಂಬೇಡ್ಕರ್ ಚಿಂತನೆಗಳ ಕಾಳಜಿ ನಿಮ್ಮೆಲ್ಲರಿಗಿಂತ ನಮಗೆ ಹೆಚ್ಚಿದೆ- ಹಾಗಂತ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಹೇಳಲಿಲ್ಲವಾದರೂ ಸೋಮವಾರ ದೆಹಲಿಯಲ್ಲಿ ಅಂಬೇಡ್ಕರ್ ಸ್ಮಾರಕ ಉಪನ್ಯಾಸ ನೀಡುತ್ತ, ಪ್ರತಿ ಮಾತಿನಲ್ಲೂ ಈ ಮೇಲಿನದ್ದನ್ನೇ ಧ್ವನಿಸಿದರು.

ಅಂಬೇಡ್ಕರ್ ಕುರಿತು ಯಾರಾದರೂ ಭಾಷಣಕ್ಕೆ ನಿಂತರೆ ಅಲ್ಲೊಂದು ಸಿದ್ಧಸೂತ್ರವಿರುತ್ತದೆ. ಮೊದಲಿಗೆ ಕಾರ್ಲ್ ಮಾರ್ಕ್ಸ್ ಎಂಬ ಮಹಾಶಯನನ್ನು ಎಳೆದುತಂದು ಸಮೀಕರಿಸುವುದು. ಇವತ್ತಿನ ಯಾವ ಬ್ರಾಹ್ಮಣನೂ ತಲೆಕೆಡಿಸಿಕೊಂಡಿರದ ಮನುವಾದ ಉಲ್ಲೇಖಿಸಿ ಮೇಲ್ವರ್ಗ ದೂಷಣೆ. ದಲಿತರ ಕಾಳಜಿಯಿಂದ ಶುರುವಾಗುವ ಮಾತನ್ನು ಧಾರ್ಮಿಕ ಅಲ್ಪಸಂಖ್ಯಾತರು, ಹಿಂದುಳಿದವರು ಹೀಗೆಲ್ಲ ಮತಪ್ರಮಾಣಕ್ಕೆ ಸರಿಯಾಗಿ ವಿಸ್ತರಿಸಿ ಮಾತು ಹೆಣೆಯುವುದು.

ಆದರೆ, ಅಂಬೇಡ್ಕರ್ ಕುರಿತ ಪ್ರಧಾನಿ ಮೋದಿಯವರ ಸೋಮವಾರದ ಭಾಷಣ ಭಿನ್ನ ಹೊರಳಿನಲ್ಲಿತ್ತು. ‘ಬಾಬಾ ಸಾಹೇಬರನ್ನು ಕೇವಲ ದಲಿತರ ಉದ್ಧಾರಕರನ್ನಾಗಿ ಮಾತ್ರವೇ ಚಿತ್ರಿಸೋದು ಮಹಾಪ್ರಮಾದ’ ಎಂದರು ಮೋದಿ. ‘ಇವತ್ತಿನ ಕಾರ್ಮಿಕ ಕಾನೂನುಗಳು, ಕಾರ್ಮಿಕರ ಹಕ್ಕುಗಳು ಇವಕ್ಕೆ ಅಡಿಪಾಯ ಹಾಕಿದವರು ಬಾಬಾ ಸಾಹೇಬರು. ಹಿಂದು ಕೋಡ್ ಬಿಲ್ ಮುಖಾಂತರ ಮಹಿಳೆಯರ ಹಕ್ಕುಗಳಿಗೂ ಹೋರಾಡಿದವರು ಅವರು. ಕೇವಲ ಬಡವರ್ಗದ ಮಹಿಳೆಯ ಕಾಳಜಿ ಮಾತ್ರ ಅವರಿಗಿತ್ತು ಎಂದೇನಲ್ಲ. ಟಾಟಾ ಮತ್ತು ಬಿರ್ಲಾಗಳ ಮನೆಯ ಹೆಂಗಸರ ಹಕ್ಕುಗಳ ಕಾಳಜಿಯೂ ಅವರಲ್ಲಿತ್ತು’ ಎಂದು ವ್ಯಾಖ್ಯಾನಿಸಿದ ನರೇಂದ್ರ ಮೋದಿ, ಅಂಬೇಡ್ಕರರು ಮಾರ್ಟಿನ್ ಲೂಥರ್ ಕಿಂಗ್ ಅವರಷ್ಟೇ ಜಗತ್ತಿಗೆ ಪ್ರೇರಣಾದಾಯಿ ಆಗುವ ವ್ಯಕ್ತಿ ಅಂದರು. ಕಾರ್ಮಿಕ ಸುಧಾರಣೆಗಳು ಆಗಬೇಕು ಹಾಗೂ ಜತೆಯಲ್ಲೇ ದೇಶದ ಅಭಿವೃದ್ಧಿಗೆ ಕೈಗಾರೀಕರಣವೂ ಅಗತ್ಯ ಎಂಬ ಮುನ್ನೋಟ ಹೊಂದಿದ್ದ ವಿರಳ ವ್ಯಕ್ತಿತ್ವ ಅಂಬೇಡ್ಕರರದ್ದಾಗಿತ್ತು ಅಂತಲೂ ಮೋದಿ ಒಳನೋಟ ಬಿಚ್ಚಿಟ್ಟರು.

ಬಿಜೆಪಿ ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿದೆ ಅಂತ ಬಿಂಬಿಸುವ ರಾಜಕೀಯ ಎದುರಾಳಿಗಳ ಪ್ರಯತ್ನವನ್ನೂ ಅವರು ತರಾಟೆಗೆ ತೆಗೆದುಕೊಂಡರು. ‘ಇದು ಅಂಬೇಡ್ಕರರ ಆರನೇ ಸ್ಮಾರಕ ಉಪನ್ಯಾಸ. ಈ ಉಪನ್ಯಾಸದಲ್ಲಿ ಭಾಗಿಯಾಗುತ್ತಿರುವ ಮೊದಲ ಪ್ರಧಾನಿ ನಾನೇ. ಪ್ರತಿಪಕ್ಷಗಳು ಅಂಬೇಡ್ಕರರ ವಿಚಾರದಲ್ಲಿ ನಮ್ಮನ್ನು ದೂಷಿಸುತ್ತವೆ. ಆದರೆ ಅವರು ತೀರಿಕೊಂಡ ಅರವತ್ತು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್ ಅವರಿಗೊಂದು ಭವ್ಯ ಸ್ಮಾರಕ ನಿರ್ಮಾಣ ಏಕಾಗಲಿಲ್ಲ? ಇದಕ್ಕೆ ವಿವರಣೆ ಸಿಗುವುದಿಲ್ಲ. ಆದರೆ ನನ್ನ ಕೈಯಲ್ಲೇ ಈ ಕೆಲಸ ಆಗಬೇಕೆಂದು ಬಾಬಾ ಸಾಹೇಬರ ಆಶೀರ್ವಾದ ಇದ್ದಿರಬಹುದು. ಈ ಸಮಯದಲ್ಲಿ ನಾನು ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅಂಬೇಡ್ಕರ ಸ್ಮಾರಕ ನಿರ್ಮಾಣದ ನಿರ್ಣಯ ಅವರ ಸರ್ಕಾರದ ಅವಧಿಯಲ್ಲೇ ತೆಗೆದುಕೊಂಡದ್ದು. ನಂತರದ ಸರ್ಕಾರಗಳು ಈ ಬಗ್ಗೆ ಗಮನಹರಿಸಲೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಿರುವ ಯಾವ ರಾಜ್ಯಗಳಲ್ಲೂ ದಲಿತರು- ಬುಡಕಟ್ಟು ಜನರಿಗೆ ನೀಡಿರುವ ಮೀಸಲು ಸೌಲಭ್ಯವನ್ನು ಕಡಿತಗೊಳಿಸಿಲ್ಲ. ಅದನ್ನು ಯಾರೂ ಕಸಿಯಲಾಗುವುದೂ ಇಲ್ಲ. ಆದರೂ ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ಧ ಮೀಸಲಾತಿ ಕಸಿಯುತ್ತಿದ್ದಾರೆಂಬ ಮಿಥ್ಯಾರೋಪಗಳನ್ನು ಮಾಡಲಾಗುತ್ತಿದೆ.’

ರಾಜರಾಡಳಿತಗಳಲ್ಲಿ ಹಂಚಿಹೋಗಿದ್ದ ರಾಜ್ಯಗಳನ್ನೆಲ್ಲ ಭಾರತ ಒಕ್ಕೂಟದೊಳಗೆ ತಂದ ಶ್ರೇಯಸ್ಸು ಸರ್ದಾರ್ ಪಟೇಲರಿಗೆ ಸಲ್ಲುವಂತೆಯೇ, ಸಾಮಾಜಿಕ ಬಿರುಕುಗಳನ್ನು ಮುಚ್ಚುವುದಕ್ಕೆ ಹೋರಾಡಿದ ಶ್ರೇಯಸ್ಸು ಅಂಬೇಡ್ಕರರಿಗೆ ಸಲ್ಲುತ್ತದೆ ಎಂದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಹಲವು ಯೋಜನೆಗಳ ಚಿಂತನೆಯ ಶ್ರೇಯಸ್ಸನ್ನು ಅಂಬೇಡ್ಕರರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. ‘ನೀರಿನ ಮಾರ್ಗ, ಜಲಸಂಚಾರಕ್ಕೆ ಅನುವು ಮಾಡಿಕೊಡುವ ಮಸೂದೆಯೊಂದನ್ನು ಲೋಕಸಭೆಯಲ್ಲಿ ಮಂಡಿಸಿದ್ದೇವೆ. ಇದು ನರೇಂದ್ರ ಮೋದಿ ಸರ್ಕಾರದ ದೃಷ್ಟಿಕೋನ ಎಂದುಕೊಳ್ಳಬೇಡಿ. ಅಂಬೇಡ್ಕರರ ವಿಚಾರ ಇದಾಗಿತ್ತು. ಇದೇ ಏಪ್ರಿಲ್ 14ರ ಬಾಬಾ ಸಾಹೇಬರ ಜನ್ಮದಿನದಂದು ನಾವು ರೈತರಿಗೆ ಅಂತರ್ಜಾಲ ಮಾರುಕಟ್ಟೆ ವೇದಿಕೆ ಒದಗಿಸಲಿದ್ದೇವೆ. ಅಲ್ಲಿ ರೈತ ತನ್ನ ಬೆಳೆಗೆ ಯಾವ ಮಾರುಕಟ್ಟೆಯಲ್ಲಿ ಹೆಚ್ಚು ದರವಿದೆ ಎಂಬುದನ್ನು ತಿಳಿದುಕೊಂಡೇ ಮಾರಬಹುದು. ಇದು ಸಹ ಅಂಬೇಡ್ಕರ್ ನೆನಪಿಗೆ. ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಇನ್ನೂ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ತಲುಪಿಲ್ಲ ಎಂದಾದರೆ ನಾವು ಬಾಬಾ ಸಾಹೇಬರಿಗೆ ಹೇಗೆ ಗೌರವ ಕೊಟ್ಟಂತಾಯಿತು? ಹಾಗೆಂದೇ ನಾನು ಕೆಂಪುಕೋಟೆಯ ಮೇಲೆ ನಿಂತು ಮಾತು ಕೊಟ್ಟಿರುವೆ- ಈ ಕೆಲಸವನ್ನು ಸಾವಿರ ದಿನಗಳೊಳಗೆ ಮಾಡುತ್ತೇವೆ ಅಂತ.’

ಅಂಬೇಡ್ಕರರ ಹೆಸರಲ್ಲಿಘೋಷಣೆ ಕೂಗಿಕೊಂಡಿರುವವರು, ದ್ವೇಷಭಾವದಲ್ಲಿ ಬೇರೆಯವರನ್ನು ದೂಷಿಸುವವರು ಇವರೆಲ್ಲರಿಗೂ ಪರೋಕ್ಷವಾಗಿ ಬುದ್ಧಿ ಹೇಳಿದಂತೆಯೂ ಇದ್ದವು ಮೋದಿಯವರ ಕೆಲ ಮಾತುಗಳು.

‘ಮಾತಾಡುವಾಗ ಕೆಲವೊಮ್ಮೆ ನಾವು ನಾಲಗೆ ಕಚ್ಚಿಕೊಂಡುಬಿಡುತ್ತೇವೆ. ಅದಕ್ಕೆ ಶಿಕ್ಷೆ ಅಂತ ಹಲ್ಲುದುರಿಸುವುದಿಲ್ಲವಲ್ಲ? ಬಾಬಾ ಸಾಹೇಬರು ಎಲ್ಲರನ್ನೂ ತಮ್ಮವರೆಂದುಕೊಂಡಿದ್ದರು. ಬಹಳಷ್ಟು ಅನ್ಯಾಯಗಳ ವಿರುದ್ಧ ಹೋರಾಡಿದರೂ ಅಲ್ಲಿ ಸೇಡು ತೀರಿಸಿಕೊಳ್ಳುವ ಭಾವವಿರಲಿಲ್ಲ.’

‘ನಿಮ್ಮ ಹಕ್ಕುಗಳಿಗೆ ಹೋರಾಡಿ ಎಂಬ ಬಾಬಾ ಸಾಹೇಬರ ಕೊನೆಯ ಸಂದೇಶವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಆದರೆ ಅವರ ಮೊದಲ ಸಂದೇಶ- ಶಿಕ್ಷಿತರಾಗಿರಿ ಎಂಬುದನ್ನು ನೆನಪಿಸಿಕೊಳ್ಳಿ ಅಂತ ನಾನು ಒತ್ತಾಯಿಸುವೆ.’

‘ದಲಿತರು ಭೂಮಾಲಿಕರಲ್ಲ. ಹಾಗೆಂದೇ ಕೈಗಾರೀಕರಣವು ಈ ವರ್ಗಕ್ಕೆ ಒಳಿತನ್ನು ಮಾಡುತ್ತದೆ ಎಂಬುದು ಅಂಬೇಡ್ಕರರ ಪ್ರತಿಪಾದನೆಯಾಗಿತ್ತು. ಇತ್ತೀಚೆಗಷ್ಟೇ ದಲಿತರ ಸಮೂಹವು ನನ್ನನ್ನು ಭೇಟಿಯಾಗಿತ್ತು. ಅಲ್ಲಿ ಮಹಿಳೆಯರೂ ಇದ್ದರು. ದಲಿತರು ಉದ್ಯೋಗ ಕೇಳುವವರಲ್ಲದೇ ಉದ್ಯೋಗದಾತರಾಗುವುದಕ್ಕೆ ಸರ್ಕಾರದಿಂದ ಬೇಕಾದ ಕೆಲವು ಸಹಾಯಗಳನ್ನು ಕೇಳಿದರು. ಅವನ್ನು ನಾವು ಈ ಬಾರಿ ಬಜೆಟ್ ನಲ್ಲಿ ಅಳವಡಿಸಿಕೊಂಡಿದ್ದೇವೆ. ಇಂಥ ಒಳ್ಳೇ ಸುದ್ದಿಗಳೆಲ್ಲ ನಿಮಗೆ ವೃತ್ತಪತ್ರಿಕೆಗಳಲ್ಲಿ ಓದಲು ಸಿಗುವುದಿಲ್ಲ!’

‘ಭಾರತೀಯ ಪರಂಪರೆಯನ್ನು ಹಳಿಯುವುದರಲ್ಲೇ ಖುಷಿಪಡುತ್ತಿರುವವರು ಗಮನಿಸಬೇಕು. ಬಾಬಾ ಸಾಹೇಬರು ತಮ್ಮ ಪಿಎಚ್ ಡಿ ಅಧ್ಯಯನಕ್ಕೆ ಪ್ರಾಚೀನ ಭಾರತದ ವ್ಯವಹಾರ ಪದ್ಧತಿ ಹೇಗಿತ್ತೆಂಬ ಸಂಗತಿಯನ್ನೇ ಆರಿಸಿಕೊಂಡಿದ್ದರು.’

Leave a Reply