ಮರುಭೂಮಿ ರಾಷ್ಟ್ರಗಳಲ್ಲಿ ತೈಲ ಖಾಲಿಯಾದ್ರೆ ಅವರ ಗತಿ ಎಂಥ? ಈ ಬಗ್ಗೆ ಸೌದಿ ಮಾಡ್ತಿರೋ ಯೋಚ್ನೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್

ಸದ್ಯ ತೈಲ ಹಾಗೂ ಅನಿಲ ಇಂಧನದ ಮೇಲೆ ಇಡೀ ವಿಶ್ವವೇ ಅವಲಂಬಿತವಾಗಿವೆ. ಮುಂದೊಂದು ದಿನ ಇದು ಖಾಲಿಯಾಗಲಿದೆ ಎಂಬುದನ್ನು ಅರಿತಿರುವ ಮಾನವ ಬದಲಿ ಇಂಧನದ ಮೊರೆ ಹೋಗುತ್ತಿದ್ದಾನೆ. ಒಂದು ವೇಳೆ ತೈಲ ಇಂಧನ ಸಂಪೂರ್ಣವಾಗಿ ಖಾಲಿಯಾದರೆ, ತೈಲ ರಾಷ್ಟ್ರಗಳ ಕಥೆ ಏನು? ತೈಲ ವ್ಯಾಪಾರವೇ ಪ್ರಮುಖ ಆರ್ಥಿಕ ಮೂಲವಾಗಿದ್ದು, ಮುಂದಿನ ಹಾದಿ ಏನು?

ತೈಲ ವ್ಯಾಪಾರ ನಿಂತುಹೋಗುವ ದಿನಗಳು ಬಹಳ ದೂರವಿದ್ದಿರಬಹುದು. ಆದರೆ ಈಗಾಗಲೇ ತೈಲದರದಲ್ಲಾಗಿರುವ ಕುಸಿತದಿಂದಲೇ ಅರಬ್ ರಾಷ್ಟ್ರಗಳ ಆರ್ಥಿಕತೆ ಕಂಪಿಸಿದೆ. ಹೀಗಿರುವಾಗ ತೈಲಾನಂತರದ ದಿನಗಳ ಬಗ್ಗೆ ಅವರಲ್ಲೂ ಏನಾದರೂ ಯೋಜನೆಗಳಿದ್ದಿರಬಹುದಲ್ಲವೇ? ಇದಕ್ಕೆ ಉತ್ತರವಾಗಿ ಜಗತ್ತಿನ ಅತಿದೊಡ್ಡ ಕಚ್ಚಾತೈಲ ರಫ್ತುದಾರ ಸೌದಿ ಅರೇಬಿಯಾ ಏನು ಯೋಚನೆ ಮಾಡ್ತಿದೆ ಅಂತ ನೋಡೋದು ಕುತೂಹಲವಾಗಿರುತ್ತೆ.

ಇತ್ತೀಚೆಗೆ ಬರ್ಲಿನ್ ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸೌದಿಯ ತೈಲ ಸಚಿವ ಅಲಿ ಅಲ್ ನಯಿಮಿ, ‘ಸೌರಶಕ್ತಿಯನ್ನು ಹೆಚ್ಚಾಗಿ ಪಡೆಯಲು ಸೌದಿ ಅರೇಬಿಯಾಗಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ಇಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಮರುಭೂಮಿ ಇದ್ದು, ಇಲ್ಲಿ ಸೌರಶಕ್ತಿಯನ್ನು ಅಧಿಕವಾಗಿ ಪಡೆಯಬಹುದು. ಅಲ್ಲದೇ ಸೌರಶಕ್ತಿ ಪಡೆಯಲು ಬೇಕಿರುವ ಎಲ್ಲ ಅಗತ್ಯಗಳು ನಾವೇ ಪೂರೈಸಿಕೊಳ್ಳಬಹುದಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾವು ಗಿಗಾವ್ಯಾಟ್ಸ್ ಪ್ರಮಾಣದಲ್ಲಿ ಸೌರವಿದ್ಯುತ್ ರಫ್ತು ಮಾಡುತ್ತೇವೆ’ಎಂದಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಪಂಚದ ಹಲವು ರಾಷ್ಟ್ರಗಳು ಕನಿಷ್ಠ 50 ವರ್ಷಗಳ ಕಾಲ ಈ ತೈಲವನ್ನೇ ಇಂಧನವಾಗಿ ಅವಲಂಬಿಸಲಿವೆ. ಹಾಗಾಗಿ ಸದ್ಯಕ್ಕೆ ಈ ರಾಷ್ಟ್ರಗಳು ಚಿಂತಿಸುವಂತಿಲ್ಲ. ಆದರೆ, ಮುಂಬರುವ ದಿನಗಳನ್ನು ಎದುರಿಸಲು ಈಗಿನಿಂದಲೇ ತಯಾರಿ ನಡೆಸುವುದು ಅಗತ್ಯ. ಇದನ್ನು ಮನಗಂಡಿರುವ ಸೌದಿ ಅರೇಬಿಯಾ ಈ ನಿಟ್ಟಿನಲ್ಲಿ ಗಮನ ಹರಿಸಿದೆ.

2040ರ ವೇಳೆಗೆ 54 ಗಿಗಾವ್ಯಾಟ್ಸ್ ಸೌರ ವಿದ್ಯುತ್ ಉತ್ಪಾದನೆಯ ಕೇಂದ್ರ ಸ್ಥಾಪನೆಗೆ ಸೌದಿ ಯೋಜನೆ ರೂಪಿಸುತ್ತಿದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಶೇ.14 ರಷ್ಟು ನವಿಕರಿಸಬಹುದಾದ ಇಂಧನವನ್ನು ಬಳಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಶೇ.19ರಷ್ಟು ಏರಿಕೆಯಾಗಲಿದೆ ಎಂಬುದು ಪರಿಣತರ ಅಂದಾಜು.

ಪ್ರಸ್ತುತ ತೈಲ ಉತ್ಪನ್ನ ರಾಷ್ಟ್ರಗಳೆಲ್ಲವೂ ಹೆಚ್ಚಾಗಿ ಬರಡು ಪ್ರದೇಶವನ್ನು ಹೊಂದಿವೆ. ಹೆಚ್ಚು ಬಿಸಿಲನ್ನು ಪಡೆಯುತ್ತವೆ. ಹಾಗಾಗಿ ಈ ರಾಷ್ಟ್ರಗಳಿಗೆ ಮುಂದಿನ ದಿನಗಳಲ್ಲಿ ಸೌರ ವಿದ್ಯುತ್ ಕೈಹಿಡಿಯುವ ವಿಶ್ವಾಸವಿದೆ.

Leave a Reply