ಸಿದ್ರಾಮಯ್ಯ ಸರಕಾರದ ಭ್ರಷ್ಟ ಮಂತ್ರಿ, ಮಹೋದಯರ ರಕ್ಷಣೆಗೆ ಎಸಿಬಿ ರಚನೆ; ಕಾಂಗ್ರೆಸ್ ಪಸೆ ಆರಿಸಿದ ಪ್ರತಿಪಕ್ಷ ಪ್ರಲಾಪ!

ಡಿಜಿಟಲ್ ಕನ್ನಡ ಟೀಮ್

ಕದ್ದು ಮುಚ್ಚಿ ರಾತ್ರೋರಾತ್ರಿ ಲೋಕಾಯುಕ್ತಕ್ಕೆ ಬೀಗ ಜಡಿದು, ಭ್ರಷ್ಟಾಚಾರ ನಿಗ್ರಹ ದಳ ರಚನೆಗೆ (ಎಸಿಬಿ) ಮುಂದಾದ ಸಿದ್ದರಾಮಯ್ಯನವರ ಸರಕಾರವನ್ನು ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಸೋಮವಾರ ಹಣ್ಣುಗಾಯಿ ನೀರುಗಾಯಿ ಮಾಡಿಟ್ಟವು. ಆಡಳಿತ ಪಕ್ಷದವರೇ ಆದ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಸರಕಾರದ ನಿಲುವು ಟೀಕಿಸಿರುವುದು ತಂದುಕೊಟ್ಟ ಮತ್ತಷ್ಟು ಬಲವನ್ನು ಸಮರ್ಪಕವಾಗಿಯೇ ಬಳಸಿಕೊಂಡ ನಾಯಕರು ಸರಕಾರ ಕಣ್ಕಣ್ ಬಿಡುವಂತೆ ಮಾಡಿದ್ದು ಸೋಮವಾರದ  ವಿಶೇಷ.

ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಂದ ಹಿಡಿದು ದೇವರಾಜ ಅರಸು ಅವರವರೆಗೆ ಪ್ರತಿಪಾದಿಸಿದ, ರಾಮಕೃಷ್ಣ ಹೆಗಡೆ ಅವರಿಂದ ಅನುಷ್ಠಾನಕ್ಕೆ ಬಂದು ಎಸ್.ಎಂ. ಕೃಷ್ಣ ಅವರಂಥ ನಾಯಕರಿಂದ ಅನುಮೋದನೆ ಪಡೆದ ಭ್ರಷ್ಟಾಚಾರ ನಿಯಂತ್ರಣ ಸ್ವಾಯತ್ತ ವ್ಯವಸ್ಥೆಯನ್ನು ದಿಕ್ಕುತಪ್ಪಿಸಲು ಹೊರಟಿರುವುದರ ಹಿಂದೆ ಸಿದ್ದರಾಮಯ್ಯನವರ ಸರಕಾರದ ಭ್ರಷ್ಟ ಮಂತ್ರಿಗಳು ಹಾಗೂ ಅಧಿಕಾರಿಗಳನ್ನು ಭವಿಷ್ಯದಲ್ಲಿ ರಕ್ಷಿಸಿಕೊಳ್ಳುವ ಹುನ್ನಾರವಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿದ್ದ ದೃಢತೆ ಒಂದು ಕ್ಷಣ ಆಡಳಿತ ಪಕ್ಷವನ್ನು ತಡವಿಕೊಂಡದ್ದು ಸುಳ್ಳಲ್ಲ. ಅಂತ್ಯದಲ್ಲಿ ಸಂಪ್ರದಾಯದಂತೆ ಸರಕಾರ ಕೊಟ್ಟ ಉತ್ತರವೇನೂ ಅದನ್ನು ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಲಿಲ್ಲ.

ನಿಲುವಳಿ ಸೂಚನೆ ಮಂಡನೆ ಕುರಿತು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರಕಾರದ ಮೇಲೆ ನೇರ ದಾಳಿಗಿಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟದ ಕೆಲ ಸಚಿವರು ಹಾಗೂ ಅಧಿಕಾರಿಗಳ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಸರಕಾರದ ಅಧೀನದಲ್ಲಿರುವ ಅಧಿಕಾರಿಗಳನ್ನು ಒಳಗೊಂಡ ಎಸಿಬಿ ರಚಿಸಲು ಹೊರಟಿದೆ ಎಂದು ಅವರು ಹೇಳಿದ್ದರಲ್ಲಿ ಇಡೀ ಪ್ರಕ್ರಿಯೆ ಹಿಂದಿರುವ ಮರ್ಮ, ಹುನ್ನಾರ, ಅದರ ಆಳ-ಆಗಲ ಅನಾವರಣಗೊಂಡಿತು. ಎಸಿಬಿ ರಚನೆ ನಿರ್ಧಾರವನ್ನು ಬದಲಿಸದಿದ್ದರೆ ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಮುಂದೆ ನೀವು ಇದಕ್ಕಾಗಿ ಪಶ್ಚಾತ್ತಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು ಶೆಟ್ಟರ್.

ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಅದರ ಹೊಣೆಗಾರಿಕೆಯನ್ನು ಇದೇ ಸಿದ್ದರಾಮಯ್ಯನವರು ಆ ಸರಕಾರಕ್ಕೆ ಕಟ್ಟಿದ್ದರು. ಬಿಜೆಪಿಯವರು ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದ್ದಾರೆ ಎಂದು ಆಪಾದಿಸಿದ್ದನ್ನು ನೆನಪಿಸಿದ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತಾ, ಅಂಥಾ ಸಿದ್ದರಾಮಯ್ಯನವರು ಈಗೇನು ಹೇಳುತ್ತಾರೆ ಎಂದು ಕೇಳಿದಾಗ ಆಡಳಿತ ಪಕ್ಷದವರ ಗಂಟಲ ಪಸೆ ಆರಿಹೋಗಿತ್ತು. ‘ನಾವೇನೊ ಪ್ರತಿಪಕ್ಷದವರು, ಆದರೆ ಅವರದೇ ಪಕ್ಷದ ಎಸ್.ಎಂ. ಕೃಷ್ಣ ಟೀಕೆ ಮಾಡಿದ್ದಾರಲ್ಲ ಅದಕ್ಕೇನು ಹೇಳುತ್ತೀರಿ’ ಎಂಬ ಪ್ರಶ್ನೆ ಸರಕಾರಕ್ಕೆ ಮರ್ಮಾಘಾತ ನೀಡಿತ್ತು. ‘ಹಿಂದೆ ಅಂಬೇಡ್ಕರ್ ಒಂದು ಮಾತು ಹೇಳಿದ್ದರು. ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಎಳೆದೊಯ್ಯಲು ಆಗದಿದ್ದರೆ, ಅದನ್ನು ಇದ್ದಲ್ಲಿಯೇ ಬಿಟ್ಟುಬಿಡಿ. ಆದರೆ ಹಿಂದಕ್ಕೆ ಮಾತ್ರ ಎಳೆದುಕೊಂಡು ಹೋಗಬೇಡಿ ಅಂತ. ಅದರಂತೆ ಈ ಸರಕಾರ ಕೂಡ ನ್ಯಾಯ ಪರಿಪಾಲನೆ ರಥವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗದಿದ್ದರೆ ಅದನ್ನು ಈಗಿರುವ ಸ್ಥಿತಿಯಲ್ಲೇ ಬಿಟ್ಟುಬಿಡಲಿ. ಹಿಂದಕ್ಕೆ ಎಳೆದುಕೊಂಡು ಹೋಗುವುದು ಬೇಡ’ ಎಂದು ದತ್ತಾ ಹೇಳಿದ್ದು ಬಾರಕೋಲಿನಿಂದ ಬಾರಿಸಿದಂತಿತ್ತು.

ಪ್ರತಿಪಕ್ಷಗಳ ವಾಗ್ಸರಣಿ ಬರೀ ಮಾತಿಗೆ ಮಾತು ಎಂಬಂತಿರಲಿಲ್ಲ. ಬದಲಿಗೆ ಸರಕಾರದ ಆತ್ಮಗೌರವವನ್ನು ಕೆಣಕುವಂತಿತ್ತು. ಮರ್ಯಾದೆ ಎಂಬ ಪದದ ಅರ್ಥಾನ್ವೇಷಣೆಗೆ ಪ್ರೇರಣೆ ನೀಡುವಂತಿತ್ತು. ತಮ್ಮದೇ ಆದ ಶೈಲಿಯಲ್ಲಿ ಇದನ್ನು ಯಶಸ್ವಿಯಾಗಿ ನಿಭಾಯಿಸಿದ ಬಿಜೆಪಿಯ ಮತ್ತೊಬ್ಬ ಮುಖಂಡ ಎಸ್. ಸುರೇಶ್ ಕುಮಾರ್, ‘ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ಅನುಮಾನಿಸಿ, ಅವಮಾನಿಸಿ ಕೊನೆಗೆ ಅವಸಾನದ ಅಂಚಿಗೆ ತಳ್ಳಿದೆ. ಇದು ಯಾವುದೇ ಕಾರಣಕ್ಕೂ ಶ್ರೇಯಕಾರಕ ಅಲ್ಲ. ಎಸಿಬಿ ರಚನೆ ಬಗ್ಗೆ ಯಾರಿಗೂ ಸುಳಿವು ಕೊಡದೆ, ಸಂಪುಟ ಸಭೆಯಲ್ಲೂ ಚರ್ಚಿಸದೇ, ಅವರ ಪಕ್ಷದ ನಾಯಕರ ಜತೆಗೂ ಸಮಾಲೋಚಿಸದೆ ರಾತ್ರೋರಾತ್ರಿ ಮಾಧ್ಯಮಗಳಿಗೆ ಇ-ಮೇಲ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೆ ಬಿಡುಗಡೆ ಮಾಡುವ ಹರ್ಕತ್ತು ಏನಿತ್ತು? ಕಾನೂನು ಸಚಿವರಾದ ಜಯಚಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿಯೇ ಈ ಮಾಹಿತಿ ಹಂಚಿಕೊಳ್ಳಬಹುದಿತ್ತಲ್ಲ? ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಆತ್ಮಸ್ಥೆರ್ಯ ಇಲ್ಲದೇ ಈ ಪಲಾಯನವಾದ ಅನುಸರಿಸಿದ್ದಾರೆಂದ ಮೇಲೆ ಇದರ ಹಿಂದೆ ಭಾರೀ ಹುನ್ನಾರವೇ ಆಡಗಿದೆ’ ಎಂದು ಎಳೆಎಳೆಯಾಗಿ ಬಿಡಿಸಿಟ್ಟಾಗ ಅದನ್ನಾಲಿಸಿದವರಿಗೆ ಹೌದಲ್ಲವೇ ಎನ್ನಿಸದಿರಲಿಲ್ಲ.

ಕೊನೆಗೆ ಸಚಿವ ಜಯಚಂದ್ರ ಅವರು ಯಥಾಪ್ರಕಾರ ಕೊಟ್ಟ ಸಮರ್ಥನೆಯ ಉತ್ತರ, ‘ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಪ್ರಕಾರ ಎಸಿಬಿ ರಚನೆಗೆ ಸರಕಾರ ಮುಂದಾಗಿದೆ. ಇದರಿಂದ ಲೋಕಾಯುಕ್ತ ವ್ಯವಸ್ಥೆಗೆ ಯಾವುದೇ ಭಂಗ ಇಲ್ಲ’ ಎಂಬುದು. ಅವರು ಸಾರಿಸಿದ ತಿಪ್ಪೆಯಲ್ಲಿ ಸರಕಾರದ ವೈಫಲ್ಯಗಳ ಹುಳುಗಳೇ ಎದ್ದು ಕಂಡಿದ್ದರಿಂದ ಹೌಹಾರಿದ ಪ್ರತಿಪಕ್ಷಗಳು ಧರಣಿ ಮೊರೆ ಹೋದವು. ಸಭಾಧ್ಯಕ್ಷರು ಕಲಾಪ ಮುಂದೂಡಿ, ಪರಿಸ್ಥಿತಿಯನ್ನು ಇವತ್ತಿನ ಮಟ್ಟಿಗೆ ಬರ್ಕಾಸ್ತು ಮಾಡಿದರು.

Leave a Reply