ಅಮೆರಿಕದ ವಿಸ್ಕಿಯೊಳಗಿನ ಕ್ಯೂಬಾಗಿ ಕರಗಬಹುದಿದ್ದ ಈ ದೇಶ, ಕೆತ್ತಿಟ್ಟಿರೋದು ಎಂಥ ಕೆಚ್ಚಿನ ಇತಿಹಾಸ!

ಚೈತನ್ಯ ಹೆಗಡೆ

ಅದೇನೇ ಹೇಳಿ, ಕ್ಯೂಬಾಕ್ಕೊಂದು ಸಲಾಂ ಹೊಡೆಯಲೇಬೇಕು!

ತನ್ನ ಪದತಲದ ಮಾಲೆಯಂತೆ ಹರಡಿಕೊಂಡಿರುವ ಈ ಚಿಕ್ಕ ದೇಶವನ್ನು ತನ್ನದನ್ನಾಗಿ ಮಾಡಿಕೊಳ್ಳಬೇಕು ಅಂತ ಶತಮಾನಗಳವರೆಗೆ ಪ್ರಯತ್ನಿಸಿದ ಅಮೆರಿಕಕ್ಕೆ ಸೆಡ್ಡು ಹೊಡೆದು ಇಲ್ಲಿಯವರೆಗೆ ಅಚಲವಾಗಿದ್ದದ್ದಕ್ಕೆ.

ನಿಜ, ಈಗ ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಮಾತಿಗೆ ಕುಳಿತಿದ್ದಾರೆ. ಕೆಲವು ರಾಜಿಗಳು ಆಗಿಯೇ ಆಗುತ್ತವೆ. ಹಾಗಂತ ಈ ಕ್ಷಣಕ್ಕೂ ಇದು ಕ್ಯೂಬಾದ ಶರಣಾಗತಿ ಅಲ್ಲವೇ ಅಲ್ಲ. ಈ ಹಿಂದೆ ಫೀಡಲ್ ಕ್ಯಾಸ್ಟ್ರೋಗಿದ್ದ ನಿಷ್ಠುರತೆ ರೌಲ್ ಗೆ ಸಾಧ್ಯವಾಗುತ್ತಿಲ್ಲ. ಕ್ಯೂಬಾ ಜನರ ಬದಲಾಗಿರುವ ಆಶೋತ್ತರ ಹಾಗೂ ಆರ್ಥಿಕತೆಯನ್ನು ಸರಿಪಡಿಸಿಕೊಳ್ಳಲೇಬೇಕಿರುವ ಅನಿವಾರ್ಯತೆ ಇವೆಲ್ಲ ಅಮೆರಿಕದ ಜತೆ ಕೈಕುಲುಕಲೇಬೇಕಾದ ಅಗತ್ಯವನ್ನು ತಂದೊಡ್ಡಿದೆ. ಇಷ್ಟು ವರ್ಷ ಏಕಚಕ್ರಾಧಿಪತ್ಯಕ್ಕೆ ಒಗ್ಗಿಕೊಂಡಿದ್ದ ಅಲ್ಲಿನ ಜನಕ್ಕೂ ಬದಲಾವಣೆ ಬೇಕೆನಿಸಿದೆ.

ಅಷ್ಟಾಗಿಯೂ… ಪತ್ರಕರ್ತರೆದುರು ರೌಲ್ ಕ್ಯಾಸ್ಟ್ರೊ ಪಕ್ಕ ಕುಳಿತು ಒಬಾಮಾ ಸಣ್ಣದಾಗಿ ಪೀಠಿಕೆ ಹಾಕ್ತಾರೆ- ‘ಏನೆಂದರೆ… ಈ ಸಂಬಂಧ ಸುಧಾರಣೆಯಿಂದ ಇಬ್ಬರಿಗೂ ಲಾಭವಾಗಲಿದೆ. ಅಮೆರಿಕ ಹೇರಿರುವ ದಿಗ್ಬಂಧನಗಳು ಒಂದೊಂದಾಗಿ ಸಡಿಲವಾಗುವ ಭರವಸೆ ಕೊಡುವೆ. ಕ್ಯೂಬಾದಲ್ಲಿ ಪ್ರಜಾಪ್ರಭುತ್ವದ ಮಾರ್ಗ ಶುರುವಾಗಬೇಕು… ರಾಜಕೀಯ ವಿರೋಧಿಗಳನ್ನು ಕೈದಿಗಳನ್ನಾಗಿ ಮಾಡಲಾಗುತ್ತಿದೆ ಎಂಬ ಕೂಗು ಇಲ್ಲಿದೆ..’

ಕಿವಿಗೆ ಸಿಕ್ಕಿಸಿಕೊಂಡಿರುವ ಉಪಕರಣದಲ್ಲಿ ಈ ಆಂಗ್ಲ ಮಾತುಗಳ ಅನುವಾದ ಅರ್ಥಮಾಡಿಕೊಂಡು ರೌಲ್ ಮುಖ ಸಿಂಡರಿಸುತ್ತಾರೆ.. ‘ಕ್ಯೂಬಾಕ್ಕೆ ಸೇರಿರುವ ಗುಂಟನಮೊ ಬೇನಲ್ಲಿ ಕೈದಿಗಳ ಕ್ಯಾಂಪ್ ಅನ್ನು ಅಮೆರಿಕ ಯಾವತ್ತು ಮುಚ್ಚುತ್ತೆ?’

ಅಮೆರಿಕವನ್ನು ಜಗತ್ತು ದೊಡ್ಡಣ್ಣ ಎಂದರೇನಂತೆ? ತಾನು ಚಿಕ್ಕರಾಷ್ಟ್ರವೇ ಆಗಿದ್ದರೇನಂತೆ? ಕ್ಯೂಬಾದ್ದೇನಿದ್ದರೂ ಅಲ್ಲೇ ಡ್ರಾ, ಅಲ್ಲೇ ಬಹುಮಾನದ ಶೈಲಿ. ಅಮೆರಿಕ ಸಾಮ್ರಾಜ್ಯಶಾಹಿ ವಿರುದ್ಧ ದಣಿವೇ ಇಲ್ಲದೇ ಹೋರಾಡಿ ಮಡಿದ ಚೆ ಗೆವರಾನಂಥ ಕ್ರಾಂತಿಕಾರಿಗಳ ನೆಲ ಅದು. ಕ್ಯೂಬಾ ಕ್ರಾಂತಿಯ ನಂತರದ ಏಕಚಕ್ರಾಧಿಪತ್ಯದ ಬಗ್ಗೆ, ಅಲ್ಲಿನ ಲೋಪಗಳ ಬಗ್ಗೆ ಟೀಕೆಗಳಿದ್ದಿರಬಹುದು. ಆದರೆ ಇತಿಹಾಸದ ಆ ಟೈಮ್ ಲೈನ್ ನಲ್ಲೇ ಇಟ್ಟುನೋಡಿದಾಗ ಕ್ಯೂಬಾಗೆ ಮತ್ಯಾವುದೇ ಉತ್ತಮ ಆಯ್ಕೆಗಳಿರಲಿಲ್ಲ ಎಂಬುದು ವಾಸ್ತವ.

ಕುಶಲ ಮಾತುಗಾರ ಒಬಾಮಾ, ನೀವು ಓಟು ಹಾಕುವಂತಿದ್ದರೆ ನಿಮ್ಮ ಮತ ಹಿಲರಿಗಿರ್ತಿತ್ತೋ, ಟ್ರಂಪ್ ಗೋ ಅಂತೆಲ್ಲ ರೌಲ್ ಕ್ಯಾಸ್ಟ್ರೋರನ್ನು ಮಾತಿಗೆಳೆಯುತ್ತ ಮಾನವ ಹಕ್ಕುಗಳು, ಸಮಾನ ಅವಕಾಶ, ಪ್ರಜಾಪ್ರಭುತ್ವದ ಆಶಯ ಎಂಬೆಲ್ಲ ಅಮೆರಿಕ ಕಾರ್ಯಸೂಚಿಯನ್ನು ಅಲ್ಲಲ್ಲಿ ಹರವಿಟ್ಟರು.

ರೌಲ್ ಕ್ಯಾಸ್ಟ್ರೋ ಅಲ್ಲೂ ಅಮೆರಿಕಕ್ಕೊಂದು ಟಾಂಗ್ ಕೊಡುತ್ತಲೇ ಹೇಳಿದ್ದು- ‘ಕ್ಯೂಬಾ ಕೆಲವು ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದೆ, ಇನ್ನು ಕೆಲವಕ್ಕೆ ಇಲ್ಲ. ಆದರೆ ಬಹಳ ಪವಿತ್ರ ಅಂತ ಹೇಳಲಾಗುವ ಆರೋಗ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಎಲ್ಲರಿಗೂ ಕೊಟ್ಟಿದ್ದೇವೆ. ಸಮಾನತೆ ಎಂದು ಮಾತಾಡುವ ರಾಷ್ಟ್ರಗಳು ಒಂದೇ ವಿಧದ ಕೆಲಸದಲ್ಲಿ ಮಹಿಳೆಗೊಂದು ಸಂಬಳ- ಪುರುಷನಿಗೆ ಹೆಚ್ಚಿನ ಸಂಬಳ ಕೊಡುತ್ತಿವೆ. ಕ್ಯೂಬಾ ಮಾತ್ರ ನಿರ್ದಿಷ್ಟ ಕೆಲಸಕ್ಕೆ ಪುರುಷನಿಗೆ ಕೊಡುವ ಸಂಬಳವನ್ನೇ ಸ್ತ್ರೀಯರಿಗೆ ಕೊಡುತ್ತದೆ.’

ನಿಜ. ಈಗ ಕ್ಯೂಬಾಕ್ಕೆ ತನ್ನನ್ನು ಜಾಗತಿಕ ಪ್ರವಾಸೋದ್ಯಮಕ್ಕೆ ತೆರೆಸಿಕೊಂಡು ಆರ್ಥಿಕತೆಯನ್ನು ಸರಿ ಮಾಡಿಕೊಳ್ಳುವ ಇರಾದೆ ಇದೆ. ಅದು ಸಾಕಾರವಾಗಬೇಕಾದರೆ ಅಮೆರಿಕದ ಆರ್ಥಿಕ ದಿಗ್ಬಂಧನಗಳೆಲ್ಲ ಸಡಿಲವಾಗಬೇಕು. ಆದರೆ ಹಾಗೆ ಮಾತುಕತೆಗೆ ಕೂತಿರುವ ಈ ಸಂದರ್ಭದಲ್ಲೂ ಅದು ದೃಷ್ಟಿ ತಗ್ಗಿಸಿಲ್ಲ. ಅಮೆರಿಕದ ಕಣ್ಣಿಗೆ ಕಣ್ಣು ನೆಟ್ಟೇ ಮಾತಾಡುತ್ತಿದೆ. ಈ ಪುಟ್ಟ ರಾಷ್ಟ್ರದ ಐಡಿಯಾಲಜಿ ಏನೇ ಇದ್ದುಕೊಂಡಿರಲಿ, ಈ ಕೆಚ್ಚಿಗೆ ಪುಳಕಗೊಳ್ಳದೇ ಇರೋದಕ್ಕೆ ಹೇಗೆ ಸಾಧ್ಯ?

ಅಮೆರಿಕ ಯಾವತ್ತೋ ನುಂಗಿ ನೀರು ಕುಡಿಯಬೇಕಿದ್ದ ಈ ದೇಶ ತನ್ನ ಅಸ್ತಿತ್ವ ಉಳಿಸಿಕೊಂಡುಬಂದಿರುವ ಕತೆಯೇನು ಕಡಿಮೆಯದ್ದೇ?

1953ರ ಜುಲೈ 25ರಂದು ಕ್ಯೂಬಾದ ಫಿಡೆಲ್ ಕಾಸ್ಟ್ರೊ, ಆತನ ಸಹೋದರ ರೌಲ್ ಮತ್ತು ಚೆ ಗುವರಾ ಸೇರಿಕೊಂಡು ಅಮೆರಿಕವು ಕ್ಯೂಬಾದಲ್ಲಿ ಪ್ರತಿಷ್ಠಾಪಿಸಿದ್ದ ಸರ್ವಾಧಿಕಾರಿ ಫ್ಲುಗೆನ್ಸಿಯೊ ಬಟಿಸ್ಟಾ ವಿರುದ್ಧ ಬಂಡಾಯ ಏಳುತ್ತಾರೆ. 1959ರಲ್ಲಿ ಬಟಿಸ್ಟಾ ಅಧಿಕಾರಕ್ಕೆ ಅಂತ್ಯ ಹಾಡಿ ಫೀಡಲ್ ಕ್ಯಾಸ್ಟ್ರೊ ಅಧಿಕಾರ ಸೂತ್ರ ಹಿಡಿಯುತ್ತಾರೆ. ಕ್ಯಾಸ್ಟ್ರೊ ಅಧಿಕಾರಕ್ಕೆ ಬರುತ್ತಲೇ ಮಾಡಿದ ಮೊದಲ ಕೆಲಸವೆಂದರೆ ಕ್ಯೂಬಾದಲ್ಲಿ ಅಮೆರಿಕದ ವ್ಯವಹಾರಗಳನ್ನೆಲ್ಲ ಬರ್ಖಾಸ್ತುಗೊಳಿಸಿ, ಎಲ್ಲವನ್ನೂ ರಾಷ್ಟ್ರೀಕರಣಗೊಳಿಸಿ ತನ್ನದು ಕಮ್ಯುನಿಸ್ಟ್ ರಾಷ್ಟ್ರ ಅಂತ ಸಾರಿದ್ದು. ಅವತ್ತಿನಿಂದಲೇ ಅಮೆರಿಕದ ಅತಿ ಬಲಾಢ್ಯ ಗುಪ್ತಚರ ಸಂಸ್ಥೆ ಸಿಐಎ ಫೀಡಲ್ ಕ್ಯಾಸ್ಟ್ರೊರನ್ನು ಮುಗಿಸಲು ಮೇಲಿಂದ ಮೇಲೆ ವ್ಯೂಹಗಳನ್ನು ಹೆಣೆಯಿತು. ಅತ್ತ ಸೋವಿಯತ್ ಒಕ್ಕೂಟದೊಂದಿಗೆ ಸ್ನೇಹ ಬೆಳೆಸಿಕೊಂಡು ಅಮೆರಿಕಕ್ಕೆ ಸೆಡ್ಡು ಹೊಡೀತು ಕ್ಯೂಬಾ.

cuba2

1962ರಲ್ಲಂತೂ ಅಣ್ವಸ್ತ್ರ ಯುದ್ಧವಾಗಿಬಿಡುವುದೇನೋ ಎಂಬ ಹಂತಕ್ಕೆ ಹೋಗಿತ್ತು. ಆದರೂ ಈ ಚಿಕ್ಕ ದ್ವೀಪರಾಷ್ಟ್ರವು ಅಮೆರಿಕಕ್ಕೆ ಮಣಿಯಲಿಲ್ಲ. ಕ್ಯೂಬಾದ ಪರ ಸೋವಿಯತ್ ಒಕ್ಕೂಟವು ಅಣ್ವಸ್ತ್ರಗಳನ್ನು ನಿಯೋಜಿಸಿತ್ತು. ಯುಎಸ್ ಮತ್ತು ಯುಎಸ್ಎಸ್ಆರ್ ನಡುವೆ ಅಣ್ವಸ್ತ್ರ ಯುದ್ಧದ ಭೀತಿ 13 ದಿನಗಳ ಕಾಲ ವಿಶ್ವವ್ಯಾಪಿಸಿಬಿಟ್ಟಿತ್ತು. ಕೊನೆಗೂ ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಮತ್ತು ಸೋವಿಯತ್ ಮುಖಂಡ ಕ್ರುಶ್ಚೆವ್ ನಡುವಣ ಮಾತುಕತೆಯಾಗಿ ತಿಳಿಗೊಂಡಿತು ಆತಂಕ.  ಈ ನಡುವೆ ಅಮೆರಿಕ ಸಾಮ್ರಾಜ್ಯಶಾಹಿತ್ವದ ವಿರುದ್ಧ ಹೋರಾಡುತ್ತೇನೆಂದು ಬೊಲಿವಿಯಾಕ್ಕೆ ಹೋಗಿದ್ದ ಕ್ಯಾಸ್ಟ್ರೊ ಬಳಗದ ಚೆ ಗೆವೆರಾ ಸಿಐಎಗೆ ಸಿಕ್ಕಿ ಹತನಾದ. ಕ್ಯೂಬಾದ ಬಹಳಷ್ಟು ಜನರು ದೇಶ ತೊರೆದು ಅಮೆರಿಕಕ್ಕೆ ಹೋದರು. ಹಾಗೆ ಹೋಗುವವರು ಸ್ವತಂತ್ರರು ಅಂತ ಕ್ಯಾಸ್ಟ್ರೊ 1980ರಲ್ಲಿ ಬಾಗಿಲು ತೆರೆದಿಟ್ಟುಬಿಟ್ಟಿದ್ದ. ಹೀಗೆ ಹೋದವರನ್ನು ಬಳಸಿಕೊಂಡು ಕ್ಯಾಸ್ಟ್ರೊನನ್ನು ಅಲ್ಲಾಡಿಸುವುದಕ್ಕೂ ಅಮೆರಿಕ ಕಡೆಯಿಂದ ನಿರಂತರ ಪ್ರಯತ್ನಗಳಾದವು. ಯಾವುದೂ ಫಲ ಕೊಡಲಿಲ್ಲ.

cuba map

ಕ್ಯಾಸ್ಟ್ರೊ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆತನ ಸಹೋದರ ರೌಲ್ ಕ್ಯಾಸ್ಟ್ರೊ 2008ರಲ್ಲಿ ಅಧಿಕಾರ ವಹಿಸಿಕೊಂಡ. ನಿಧಾನವಾಗಿ ಅಮೆರಿಕ- ಕ್ಯೂಬಾ ಬಾಂಧವ್ಯವು ವೈಷಮ್ಯ ಮರೆಯತೊಡಗಿತು. ಅದೀಗ ಒಬಾಮಾ ಭೇಟಿಯವರೆಗೆ ಬಂದು ನಿಂತಿದೆ. ಅಮೆರಿಕದ ಮಾಜಿ ಅಧ್ಯಕ್ಷರು ಕ್ಯೂಬಾಗೆ ಈ ನಡುವೆ ಭೇಟಿ ಕೊಟ್ಟಿದ್ದರಾದರೂ ಅಮೆರಿಕ ರಾಷ್ಟ್ರಾಧ್ಯಕ್ಷರೊಬ್ಬರ ಭೇಟಿ ಬರೋಬ್ಬರಿ 90 ವರ್ಷಗಳ ನಂತರ ಸುಸಂಪನ್ನವಾಗಿದೆ.

ನಿಜ. ಈವರೆಗಿನ ಹಾದಿಯಲ್ಲಿ ಕ್ಯಾಸ್ಟ್ರೊ ಸರ್ವಾಧಿಕಾರಿಯಾಗಿಯೇ ಇದ್ದದ್ದು. ಮಾನವ ಹಕ್ಕು ಉಲ್ಲಂಘನೆಗಳ ಪ್ರಶ್ನೆಯೂ ಇದ್ದೇ ಇದೆ. ಆದರೆ ಅಮೆರಿಕವು ಪ್ರಜಾಪ್ರಭುತ್ವದ ಹೆಸರಲ್ಲಿ ಮಾಡಿದ ಅನಾಚಾರಗಳನ್ನೇನೂ ಮೀರಿಸುವಂಥದ್ದಲ್ಲ ಬಿಡಿ. ಅಲ್ಲದೇ ಉಳಿದೆಲ್ಲ ಸರ್ವಾಧಿಕಾರಿ ರಾಷ್ಟ್ರಗಳಂತಲ್ಲದೇ ಶಿಕ್ಷಣ, ಆರೋಗ್ಯ, ಮಹಿಳಾ ಸಮಾನತೆಗಳಲ್ಲಿ ವಿಶ್ವಸಂಸ್ಥೆಯಿಂದಲೇ ಬೆನ್ನು ತಟ್ಟಿಸಿಕೊಳ್ಳುವಂಥ ಸಾಧನೆ ತೋರಿರುವುದು ಹೌದು. ಈಗ ಅಲ್ಲಿನ ಜನಕ್ಕೂ ಸರ್ಕಾರದ ನೆರಳಲ್ಲೇ ಬದುಕಿಕೊಂಡಿರುವ ಪದ್ಧತಿ ಬೇಜಾರಾಗಿದೆ. ಬದಲಾವಣೆ ಕಾಲಧರ್ಮಕ್ಕೆ ಕ್ಯೂಬಾ ಒಗ್ಗಿಕೊಳ್ಳಲೇಬೇಕು.

ಇಷ್ಟಾಗಿಯೂ…

ಲ್ಯಾಟಿನ್ ಅಮೆರಿಕದ ದೇಶಗಳನ್ನೆಲ್ಲ ತನ್ನ ಆಟದ ಮನೆಯನ್ನಾಗಿ ಮಾಡಿಕೊಂಡ ಅಮೆರಿಕಕ್ಕೆ ಈ ಚಿಕ್ಕ ದೇಶವೊಂದು ಸೆಡ್ಡು ಹೊಡೆದುಕೊಂಡುಬಂದ ಬಗೆಯೇ ರೋಮಾಂಚನದ್ದು. ಇದರ ಅಂತಃಸತ್ವದಲ್ಲಿ ಮೊಗೆದಷ್ಟೂ ಸಿಗುವ ಕತೆಗಳಿವೆ.

Leave a Reply