ಉತ್ತರ ಪ್ರದೇಶ ಐಎಎಸ್ ಅಧಿಕಾರಿಗಳ ನಿರ್ಲಜ್ಜ ಜೀ ಹುಜೂರ್ ಈ ವಿಡಿಯೋದಲ್ಲಿದೆ!

ಡಿಜಿಟಲ್ ಕನ್ನಡ ಟೀಮ್

ಉತ್ತರ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳ ಗುಲಾಮಗಿರಿ ಮನಸ್ಥಿತಿ, ಆಳುವವರಿಗೆ ಬೆಣ್ಣೆ ಹಚ್ಚುವ ಧೋರಣೆ ಎಷ್ಟರಮಟ್ಟಿಗಿದೆ ಎಂಬುದನ್ನು ಚಿಕ್ಕ ಕ್ರಿಕೆಟ್ ಪಂದ್ಯವೊಂದು ಬಟಾಬಯಲಾಗಿಸಿದೆ.

ಆ ರಾಜ್ಯದಲ್ಲಿ ವಾರ್ಷಿಕವಾಗಿ ಒಮ್ಮೆ ಮುಖ್ಯಮಂತ್ರಿಯ ತಂಡ ಮತ್ತು ಅಧಿಕಾರಿಗಳ ತಂಡದ ನಡುವೆ ಟಿ20 ಪಂದ್ಯವನ್ನಾಡುವ ಕ್ರಮ ಕೆಲ ವರ್ಷಗಳಿಂದ ಜಾರಿಯಲ್ಲಿದೆ. ಯಾವತ್ತೂ ಗೆಲುವು ಮುಖ್ಯಮಂತ್ರಿಗಳ ತಂಡದ್ದೇ. ಏಕೆಂದರೆ ಅಧಿಕಾರಿಗಳ ತಂಡದ್ದೇನಿದ್ದರೂ ಇಲ್ಲಿ ಸೋಲುವುದಕ್ಕೆ ಪೈಪೋಟಿ! ಆಟದಲ್ಲಿ ಮುಖ್ಯಮಂತ್ರಿಗೆ ಹಿನ್ನಡೆಯಾಗಿಬಿಟ್ಟರೂ ತಮ್ಮ ಮೇಲೆ ಏನು ಸಿಟ್ಟುಗೊಳ್ಳುತ್ತಾರೋ ಎಂಬಷ್ಟರ ಮಟ್ಟಿಗೆ ಹಲ್ಲುಗಿಂಜುವ ಐಎಎಸ್ ಅಧಿಕಾರಿಗಳಿದ್ದಾರೆ ಅಂತಂದ್ರೆ ಇವರ ಯೋಗ್ಯತೆ- ಆತ್ಮಗೌರವಗಳು ಅದ್ಯಾವ ಪಾತಾಳದಲ್ಲಿ ಹೊರಳಾಡುತ್ತಿರಬಹುದು ಅಂತ ನೀವೇ ಲೆಕ್ಕಹಾಕಿ.

ಎನ್ಡಿಟಿವಿ ಈ ಬಗ್ಗೆ ಒಂದು ಉತ್ತಮ ವರದಿ ಮಾಡಿದೆ. ಇದೊಂದು ವಿಡಿಯೋ ನೋಡಿದರೆ ಸಾಕು, ನಿಮಗೆಲ್ಲ ಅರ್ಥವಾಗುತ್ತದೆ. ಆಟದಲ್ಲಿ ಯಾರನ್ನಾದರೂ ಔಟ್ ಮಾಡಿದರೆ ಬೌಲರ್ ಆಗಿ ನೀವು ಖುಷಿ ಪಡ್ತೀರಿ ತಾನೇ? ಆದರೆ ಇಲ್ಲಿ ನೋಡಿ, ಅಕಸ್ಮಾತ್ ಎಂಬಂತೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಬೌಲ್ಡ್ ಔಟ್ ಮಾಡಿದ ಅಧಿಕಾರಿ, ‘ಛೇ, ನನ್ನಿಂದ ಮಹಾಪ್ರಮಾದವಾಗಿಹೋಯ್ತು’ ಎಂಬಂತೆ ಮುಖಮುಚ್ಚಿರುವ ಈ ಭಾವಭಂಗಿ ನೋಡಿ ನಗಬೇಕೋ, ಅಳಬೇಕೋ ನೀವೇ ನಿರ್ಧರಿಸಿಬಿಡಿ.

ಅಂದಹಾಗೆ, ನಾಲ್ಕೂ ವರ್ಷಗಳಿಂದ ಇಲ್ಲಿ ಅಖಿಲೇಶ್ ಯಾದವರೇ ಪಂದ್ಯಶ್ರೇಷ್ಠರು. ಒಳ್ಳೆ ಚಿಕ್ಕಮಗುವನ್ನು ಪುಸಲಾಯಿಸುವಂತೆ, ಐಎಎಸ್ ಅಧಿಕಾರಿಗಳೆಲ್ಲಮುಖ್ಯಮಂತ್ರಿ ಹೊಡೆದ ಶಾಟುಗಳು ಬೌಂಡರಿ ಗೆರೆ ದಾಟುವವರೆಗೆ ಕೈಕಟ್ಟಿ ನಿಲ್ಲೋದನ್ನು ನೋಡುವುದೇ ಒಂದು ಮಜ! ಇಷ್ಟೆಲ್ಲ ಆಗಿಯೂ ಮುಖ್ಯಮಂತ್ರಿಗಳು ಹೊಡೆದಿದ್ದು 65 ರನ್ ಹಾಗೂ ಅವರ ತಂಡ ದಾಖಲಿಸಿದ್ದು 127 ರನ್ ಗಳನ್ನು. ಈ ಮೊತ್ತ ಬೆಂಬತ್ತಿದ ಐಎಎಸ್ ಇಲೆವನ್ ತಂಡಕ್ಕೆ ಆರಂಭಿಕ ಉತ್ಸಾಹದಲ್ಲಿ ಮುಖ್ಯಮಂತ್ರಿಯನ್ನು ಪ್ರಸನ್ನಗೊಳಿಸುವ ತಮ್ಮ ಆದ್ಯ ಕೈಂಕರ್ಯ ಮರೆತುಬಿಟ್ಟಿತ್ತೋ ಏನೋ ಚುರುಕಾಗಿ ರನ್ ಗಳಿಸಿ ಗೆಲುವಿನ ದಡಕ್ಕೆ ಬಂದುಬಿಟ್ಟರು. ಎರಡು ಓವರ್ ಗಳಲ್ಲಿ 3 ರನ್ ಗಳಿಸಿಬಿಟ್ಟರೆ ಆಗಿತ್ತು. ಆಗಲೇ ಅಧಿಕಾರಿ ಗಡಣಕ್ಕೆ ತಮ್ಮ ಪ್ರಮಾದದ ಅರಿವಾಗಿಹೋಯ್ತು. ಇರಲಿ, ತಪ್ಪು ತಿದ್ದಿಕೊಳ್ಳುವುದಕ್ಕೆ ಇನ್ನೂ ಅವಕಾಶ ಇತ್ತಲ್ಲ.. ಲೆಕ್ಕಾಚಾರದಿಂದ ಆಟವಾಡಿ ವಿನೀತರಾಗಿ 1 ರನ್ ನಿಂದ ಮುಖ್ಯಮಂತ್ರಿ ತಂಡವನ್ನು ಗೆಲ್ಲಿಸಿ ಕೃತಾರ್ಥರಾದರು!

ಇಂಥದೊಂದು ಭಯಾನಕ ಜೀ ಹುಜೂರ್ ಪ್ರದರ್ಶನ ಮುಖ್ಯಮಂತ್ರಿಗೂ ನಗೆ ತರಿಸಿತು. ‘ಅಧಿಕಾರಿಗಳ ಸಹಯೋಗ ಯಾವತ್ತೂ ಹೀಗೆಯೇ ಇರಲಿ’ ಅಂತ ನಗಾಡುತ್ತಲೇ ಹೇಳಿದರು.

ಈ ಹುಚ್ಚಾಟ ನೋಡಿದರೆ ನಗೆ ಯಾರಿಗಾದರೂ ಬರುತ್ತೆ. ಆದರೆ ಈ ಜೀ ಹುಜೂರಿಕೆ ಪಂದ್ಯಕ್ಕೆ ಮಾತ್ರ ಸೀಮಿತವಲ್ಲ ಎಂಬ ಗಂಭೀರ ವಿಷಯವೂ ಇದನ್ನು ಗಮನಿಸಿದವರಿಗೆ ಮನದಟ್ಟಾಗಿರುತ್ತದೆ.

Leave a Reply