ಎಸಿಬಿ ಅನುಷ್ಠಾನಕ್ಕೆ ತಂದೇ ಸಿದ್ಧ ಅಂತು ಸರ್ಕಾರ, ಕೊಂಡ ನಿಷೇಧ, ಸದನದಲ್ಲಿ ಇನ್ನೇನಾಯ್ತು?

ಡಿಜಿಟಲ್ ಕನ್ನಡ ಟೀಮ್

ಕೆಲ ದಿನಗಳಿಂದ ಪ್ರತಿಪಕ್ಷಗಳ ವ್ಯಾಪಕ ಟೀಕೆಯ ಹೊರತಾಗಿಯೂ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸುವ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದೆ. ಲೋಕಾಯುಕ್ತ ಸಂಸ್ಥೆಯ ನಾಶಕ್ಕಾಗಿ ಸರ್ಕಾರ ಸಂಚು ರೂಪಿಸಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿದ್ದವು. ವಿಧಾನಸಭೆಯ ಮಂಗಳವಾರದ ಕಲಾಪದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದಾಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ‘ಎಸಿಬಿ ಸ್ಥಾಪನೆಯಿಂದ ಲೋಕಾಯುಕ್ತ ದುರ್ಬಲವಾಗುತ್ತದೆ ಎಂಬುದು ಸರಿಯಲ್ಲ. ಹೀಗಾಗಿ ಇದನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ. ಎಸಿಬಿ ರಚನೆಗೆ ಕೇಂದ್ರ ಸರ್ಕಾರವೇ ಮಾದರಿ’ ಎಂದು ತಿಳಿಸಿದರು.

ಇನ್ನು ಮಂಗಳವಾರ ಚರ್ಚೆಯಾದ ಇತರೆ ಪ್ರಮುಖ ಅಂಶಗಳು ಹೀಗಿವೆ:

  • ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 2160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
  • ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವೂ ಚರ್ಚೆಯಾಯಿತು. ಈ ವೇಳೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಪದವಿಪೂರ್ವ ಶಿಕ್ಷಣ ಮಂಡಳಿ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳುತ್ತೇವೆ. ಇನ್ನು ಗಣಿತ ಪತ್ರಿಕೆಯ ಉತ್ತರ ಬರೆದಿರುವ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡುವ ತೀರ್ಮಾನ ತೆಗೆದುಕೊಂಡಿದೆ ಎಂದರು.
  • ಗ್ರಾಮೀಣ ಪ್ರದೇಶದಲ್ಲಿ ಊರ ಹಬ್ಬಗಳಲ್ಲಿ ನಡೆಯುವ ಕೊಂಡ ಹಾಯುವ ಪದ್ಧತಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಘೋಷಣೆ. ಇತ್ತೀಚೆಗೆ ತುಮಕೂರು ಜಿಲ್ಲೆಯ ಎತ್ತೇನಹಳ್ಳಿಯಲ್ಲಿ ಕೊಂಡಹಾಯುವಾಗ ಬಿದ್ದು ಗಾಯಗೊಂಡ ಮೂವರು ಮೃತಪಟ್ಟಿದ್ದರು. ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಕೊಬ್ಬರಿ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ನೆರವಾಗಲು, ಒಂದೆರಡು ದಿನಗಳಲ್ಲಿ ಸಚಿವ ಸಂಪುಟದ ಉಪಸಮಿತಿ ಸಭೆ ಸೇರಿ ಬೆಂಬಲ ಬೆಲೆ ನಿಗದಿಪಡಿಸುತ್ತೇವೆ. ಈ ಬೆಲೆಗೆ ವರ್ತಕರು ಖರೀದಿ ಮಾಡದಿದ್ದರೆ, ಸರ್ಕಾರವೇ ಕೊಬ್ಬರಿ ಖರೀದಿ ಮಾಡಲಿದೆ ಎಂದು ಜಯಚಂದ್ರ ತಿಳಿಸಿದರು.
  • ಬೆಂಗಳೂರು ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಕಾಮಗಾರಿ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ವಿಧಾನ ಪರಿಷತ್ ನಲ್ಲಿ ಪ್ರಕಟಿಸಿದರು.

Leave a Reply