ಯಶಸ್ವಿ ವ್ಯಕ್ತಿಗಳ ಜೀವನಶೈಲಿಯಲ್ಲಿ ಸಿಗುವ 6 ಸೂತ್ರಗಳು

ಡಿಜಿಟಲ್ ಕನ್ನಡ ಟೀಮ್

ಜೀವನದಲ್ಲಿ ಯಶಸ್ಸು ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ ಹೇಳಿ! ಕೆಲವರಿಗೆ ಪ್ರಾರಂಭಿಕವಾಗಿ ದೊರೆತ ಯಶಸ್ಸನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ಹಂಬಲ ಇರುತ್ತದೆ. ಯಶಸ್ವಿ ವ್ಯಕ್ತಿಗಳ ಮಾರ್ಗಾವಲೋಕನದಿಂದ ಸಾಧನೆಗೊಂದು ಸ್ಫೂರ್ತಿ ಸಿಗುತ್ತದೆಯಲ್ಲವೇ ಹಾಗಾದರೆ ಯಶಸ್ವಿ ವ್ಯಕ್ತಿಗಳ ದಿನಚರಿಯಲ್ಲಿ ಕಂಡುಬರುವ ಸಾಮಾನ್ಯ ಅಂಶಗಳು ಯಾವವು? ಇಲ್ಲಿವೆ ನೋಡಿ ಕೆಲವೊಂದಿಷ್ಟು ಅಂಶಗಳು… ಅಳವಡಿಸಿಕೊಳ್ಳೋಕಾಗುತ್ತಾ ಕಾಣಿ.

  • ಬಹುತೇಕ ಎಲ್ಲಾ ಯಶಸ್ವಿ ಉದ್ಯಮಿಗಳು ಮುಂಜಾನೆ ಬೇಗ ಏಳುವ ಅಭ್ಯಾಸ ಹೊಂದಿದ್ದಾರೆ. ಬದುಕಿನ ಗದ್ದಲಗಳು ಪ್ರಾರಂಭವಾಗುವುದಕ್ಕೆ ಮುಂಚೆಯೇ ದಿನದ ಬೇಸಿಕ್ ಕೆಲಸಗಳನ್ನೆಲ್ಲ ಮುಗಿಸಿಕೊಂಡುಬಿಡ್ತಾರವರು. ಬೆಳಗ್ಗೆ ಮನಸ್ಥಿತಿ ತಿಳಿಯಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಬೇಗ ಏಳುವುದನ್ನು ರೂಢಿಸಿಕೊಂಡರೆ ಅಂದು ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ವೃದ್ಧಿಯಾಗಲಿದೆ. ಕೆಲಸಕ್ಕೆ ತೆರಳುವ ಮುನ್ನ ವ್ಯಾಯಾಮ ಮಾಡಿದರೆ ಮತ್ತೆ ರೀಚಾಜ್ರ್ ಆದ ಅನುಭವ.
  • ಬೆಳಗ್ಗೆ ಎದ್ದು ಲಗುಬಗೆಯಿಂದ ಕೆಲಸ ಮಾಡಿಬಿಡುವ ಗುಣ ಹಲವರಿಗಿದ್ದಿರಬಹುದು. ಹಾಗಂತ ಅವರೆಲ್ಲ ಯಶಸ್ವಿ ವ್ಯಕ್ತಿಗಳ ಸಾಲಿನಲ್ಲಿ ಬರುವುದಿಲ್ಲ. ಯಶಸ್ವಿ ಉದ್ಯಮಿಗಳ ದಿನಚರಿ ಭಾಗವನ್ನು ಗಮನಿಸಿದಾಗ ಅವರು ಆದಷ್ಟು ಒತ್ತಡಗಳಿಗೆ ಒಳಗಾಗದೇ ಇರುವ ಶೈಲಿ ತಮ್ಮದಾಗಿಸಿಕೊಂಡಿರುವುದನ್ನು ಕಾಣಬಹುದು. ತಪ್ಪುಗಳಾದಾಗಲೂ ಗಾಬರಿಗೆ ಬೀಳದ ಮನೋಭಾವ ಅವರನ್ನು ಉತ್ತಮ ವಿಶ್ಲೇಷಕರನ್ನಾಗಿ ಮಾಡಿರುತ್ತದೆ.
  • ಯಶಸ್ವಿ ವ್ಯಕ್ತಿಗಳಿಗೆ ಟೈಮ್ ಟೇಬಲ್ ಇರೋದು ಹೌದಾದರೂ ಕೆಲಸದ ವಿಷಯ ಬಂದಾಗ ಅವರು ಯಾವತ್ತೂ ಸನ್ನದ್ಧರೇ. ಅಂದರೆ ಆಫೀಸ್ ವೇಳೆಯಲ್ಲಿ ಮಾತ್ರವೇ ಕೆಲಸ, ವಾರಾಂತ್ಯದಲ್ಲಿ ಕೆಲಸ ಮಾಡೋದೇ ಇಲ್ಲ ಎಂಬಂಥ ಕಟ್ಟುಪಾಡುಗಳನ್ನು ಅವರು ಹಾಕಿಕೊಂಡಿರುವುದಿಲ್ಲ. ಸ್ಫೂರ್ತಿ ಉಕ್ಕಿದರೆ ಯಾವ ಸಮಯಕ್ಕೂ ಕೆಲಸದಲ್ಲಿ ನಿರತರಾಗುತ್ತಾರೆ. ಹಾಗೆಯೇ ಆ ನಿರ್ದಿಷ್ಟ ಗುರಿ ಮುಗಿದಾಗ ರಿಲ್ಯಾಕ್ಸ್ ಆಗೋದು, ಮನೋಲ್ಲಾಸದಲ್ಲಿ ತೊಡಗಿಸಿಕೊಳ್ಳೋದು ಅವರಿಗೆ ಗೊತ್ತು. ಮಸ್ತಿಗೆ ವಾರದ ಇಂಥದೇ ದಿನವಾಗಿರಬೇಕು ಎಂಬ ಸಿದ್ಧ ಮನಸ್ಥಿತಿಯೂ ಅವರದ್ದಲ್ಲ.
  • ಬೆಳಗ್ಗೆ ಕೆಲಸ ಆರಂಭಿಸಿದ ಹೊತ್ತಿಗೆ ಮನಸ್ಸು ಚುರುಕಾಗಿರುತ್ತದೆ. ಹಾಗೆಂದೇ ದಿನದ ಮುಖ್ಯ ಕೆಲಸವನ್ನು ಮೊದಲಿಗೇ ಕೈಗೆತ್ತಿಕೊಳ್ಳುವ ಜಾಯಮಾನ ಯಶಸ್ವಿ ವ್ಯಕ್ತಿಗಳದ್ದು. ನಾವು ಸಾಮಾನ್ಯರು ಏನ್ ಮಾಡ್ತೇವೆ ಅಂದ್ರೆ, ದೊಡ್ಡ ಕೆಲಸ ಆಮೇಲೆ ಮಾಡೋಣ ಅಂತ ಫೋನ್ ಕರೆಗಳು, ಇ ಮೇಲ್ ವ್ಯವಹಾರಗಳನ್ನೆಲ್ಲ ಮುಗಿಸಿ ಕೆಲಸ ಕೈಗೆತ್ತಿಕೊಳ್ಳುವ ವೇಳೆಗೆ ಕ್ರಿಯಾಶೀಲತೆ ಕಳೆಗುಂದಿರುತ್ತದೆ. ಮನೆಯಲ್ಲಿಯೇ ಇಮೇಲ್ ಪರಿಶೀಲನೆ, ಇನ್ನಿತರ ಕೆಲಸಗಳನ್ನು ಮುಗಿಸಿಕೊಂಡಿದ್ದರೆ ಒಳ್ಳೇದು. ಯಶಸ್ವಿ ವ್ಯಕ್ತಿಗಳನ್ನು ಕೇಳಿ ನೋಡಿ.. ಬೆಳಗಿನ ಜಾವ ಏಳುತ್ತಲೇ ಅವರು ಪತ್ರಿಕೆಗಳ ಶೀರ್ಷಿಕೆಗಳನ್ನು ತಿಳಿದುಕೊಂಡು ಅಪ್ಡೇಟ್ ಆಗಿ, ಚುಟುಕು ಸಂದೇಶ ವಿನಿಮಯಗಳನ್ನೆಲ್ಲ ಮುಗಿಸಿಕೊಂಡು, ಸೂರ್ಯಪ್ರಭೆ ಹರಡುವ ಹೊತ್ತಿಗೆಲ್ಲ ಮುಖ್ಯ ಕೆಲಸಕ್ಕೆ ಸಿದ್ಧವಾಗಿಬಿಟ್ಟಿರ್ತಾರೆ.
  • ಪೋನ್, ಲ್ಯಾಪ್ ಟಾಪ್, ವರ್ಕ್ ಕಂಪೂಟರ್ ಮತ್ತು ನೋಟ್ ಪ್ಯಾಡ್ ಗಳಲ್ಲಿ ದಾಖಲಿಸಿರುವ ವೇಳಾಪಟ್ಟಿಯ ಯೋಜನಾ ಭಾಗಗಳನ್ನು ಒಂದೆಡೆ ಸಂಗ್ರಹಿಸಿಕೊಳ್ಳಬೇಕು. ಬೇಕಾದಾಗ ಸುಲಭವಾಗಿ ಸಿಗುವಂತೆ ಮಾಡಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಸ್ಮಾರ್ಟ್ ಪೋನ್, ನೋಟ್ ಪ್ಯಾಡ್ ಸುಲಭವಾಗಿ ಲಭ್ಯವಿರುವುದರಿಂದ ಎಲ್ಲಾ ವೇಳಾಪಟ್ಟಿಯನ್ನು ಇವುಗಳಲ್ಲಿ ಸಂಗ್ರಹಿಸಿಟ್ಟು ಕೊಳ್ಳುವುದು ಉತ್ತಮ.
  • ವೈಯಕ್ತಿಕ ಸಾಮರ್ಥ್ಯವೇನೇ ಇದ್ದಿರಲಿ ತಂಡದ ಜತೆ ಹೇಗೆ ಕೆಲಸ ಮಾಡುತ್ತಾರೆಂಬುದು ಯಶಸ್ಸಿನ ಮುಖ್ಯಭಾಗ. ಲ್ಯಾರಿ ಪೇಜ್, ಸರ್ಜಿ ಬ್ರಿನ್ ಸೇರಿ ಗೂಗಲ್ ಪ್ರಾರಂಭಿಸಿದರು. ಆ್ಯಪಲ್ ಜತೆ ಸ್ಟೀವ್ ಜಾಬ್ಸ ಹೆಸರೇ ಕೇಳಿಬಂದರೂ ಅವರ ಜತೆ ಇದ್ದದ್ದು ಸ್ಟೀವ್ ವೂಜ್ನಿಯಾಕ್. ಪೇಪಾಲ್ ಸೃಷ್ಟಿಯಾಗಿದ್ದು ಐವರ ತಂಡದಿಂದ. ಹೀಗಾಗಿ, ಯಶಸ್ವಿ ವ್ಯಕ್ತಿಗಳಿಗೆ ತಂಡದ ಜತೆ ಕೆಲಸ ಮಾಡುವುದು ಗೊತ್ತಿರಬೇಕು.

Leave a Reply