ಸಿದ್ದರಾಮಯ್ಯ ಅವರನ್ನ ಬದಲಾಯಿಸ್ತಾರಂತೆ ಹೌದಾ..?! ಈಗ ಎಲ್ಲಿ ನೋಡಿದರೂ ಬರೀ ಇದೇ ಮಾತು, ಕತೆ!

author-thyagaraj (1)ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸುತ್ತಾರಂತೆ ಹೌದಾ..? ಅವರ ಬಗ್ಗೆ ಹೈಕಮಾಂಡ್ ಸಿಕ್ಕಾಪಟ್ಟೆ ಗರಂ ಆಗಿದೆಯಂತೇ..? ಇನ್ನೆಷ್ಟು ದಿನ ಇರ್ತಾರೋ..? ಐದು ರಾಜ್ಯಗಳ ಚುನಾವಣೆ ಮುಗೀಲಿ ಅಂತ ಕಾಯ್ತಾ ಇದ್ದಾರಂತೆ..? ಯಾರಂತೇ ಮುಂದಿನ ಸಿಎಂ..?

ರಾಜಕೀಯ ಪಡಸಾಲೆಗಳಲ್ಲಿ, ವಿಧಾನ ಮಂಡಲದ ಮೊಗಸಾಲೆಯಲ್ಲಿ, ಹಾದಿಬೀದಿಯಲ್ಲಿ, ಬೀದಿಬದಿಯ ಹರಟೆ ಕೇಂದ್ರಗಳಲ್ಲಿ, ಬಸ್ಟಾಪ್, ಅಂಗಡಿ-ಮುಂಗಟ್ಟುಗಳಲ್ಲಿ – ಹೀಗೆ ಹಳ್ಳಿಯಿಂದ ದಿಲ್ಲಿಗುಂಟ ಬರೀ ಇದೇ ಮಾತು, ಚರ್ಚೆ.

ಹೆಬ್ಬಾಳ ವಿಧಾನಸಭೆ ಕ್ಷೇತ್ರ ಮರುಚುನಾವಣೆ ಅಭ್ಯರ್ಥಿ ಆಯ್ಕೆಯಿಂದ ಶುರುವಾಗಿ, ಅದರ ಫಲಿತಾಂಶ, ಸಿಎಂಗೆ ವಾಚ್ ಗಿಫ್ಟ್, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ, ಅದರಲ್ಲಿ ವಾಚ್ ವಿವಾದದ ಪ್ರಭಾವ, ಇದೀಗ ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆವರೆಗೂ ಎಲ್ಲ ವಿಚಾರಗಳ ಮಂಥನದ ಅಂತ್ಯದಲ್ಲಿ ಬರುವ ಮಾತು ಸಿದ್ದರಾಮಯ್ಯನವರ ಸ್ಥಾನಪಲ್ಲಟದ್ದೇ ಆಗಿರುತ್ತದೆ. ಅದರ ಸುತ್ತ ರಂಗುರಂಗಿನ ವಾದ-ಪ್ರತಿವಾದ ಸರಣಿ.

ನಿಜ, ಹೆಬ್ಬಾಳ ಚುನಾವಣೆಯಲ್ಲಿ ಸಿದ್ದರಾಮಯ್ಯ ಆಶಯದ ಭೈರತಿ ಸುರೇಶ್ ಬದಲು ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅಭ್ಯರ್ಥಿ ಆದ ದಿನದಿಂದಲೂ ಕಾಂಗ್ರೆಸ್ ನೊಳಗಿನ ರಾಜಕೀಯ ಪರಿಸ್ಥಿತಿ ಪೂರಾ ಬದಲಾಗಿದೆ. ಹೈಕಮಾಂಡ್ ಸಿದ್ದರಾಮಯ್ಯ ಮಾತು ತೆಗೆದು ಹಾಕಿದ್ದನ್ನೇ ವಿಪರೀತವಾಗಿ ಅರ್ಥ ಮಾಡಿಕೊಂಡ ವಿರೋಧಿಗಳು ಅಂದಿನಿಂದಲೂ ಒಳದಾಳ ಉರುಳಿಸುತ್ತಲೇ ಇದ್ದಾರೆ. ಇದರಲ್ಲಿ ಜೊಳ್ಳೆಷ್ಟೋ, ಕಾಳೆಷ್ಟೋ ಅದು ಬೇರೆ ಪ್ರಶ್ನೆ. ಆದರೆ ಎಸ್.ಎಂ. ಕೃಷ್ಣ, ಜನಾರ್ದನ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಅವರಂಥ ಹಿರಿಯ ನಾಯಕರು ಬಹಿರಂಗವಾಗಿ ಸಿದ್ದರಾಮಯ್ಯನವರ ನಿಲುವುಗಳನ್ನು ಟೀಕೆ ಮಾಡುತ್ತಾ ಬಂದಿರುವುದು ನಾನಾ ಚರ್ಚೆಗಳಿಗೆ ಆಸ್ಪದ ನೀಡಿದೆ. ಜತೆಗೆ ದಿನಕ್ಕೊಂದರಂತೆ ಹಾರಾಡುತ್ತಿರುವ ತರಹೇವಾರಿ ಗಾಸಿಪ್ಪುಗಳು ಸಿದ್ದರಾಮಯ್ಯ ಮತ್ತವರ ಬಳಗದ ನೆಮ್ಮದಿಯನ್ನೂ ಕೆಡಿಸಿವೆ.

ಹಾಗಾದರೆ ಈ ಗಾಸಿಪ್ಪುಗಳು ಸೃಷ್ಟಿಯಾಗುತ್ತಿರುವುದು ಎಲ್ಲಿ? ಯಾಕಾಗಿ ಸೃಷ್ಟಿಯಾಗುತ್ತಿವೆ? ಇದು ಬರೀ ಗಾಸಿಪ್ಪು ಮಾತ್ರವೋ? ನಿಜ ಸಂಗತಿ ಏನಾದರೂ ಇದೆಯೋ ಎಂಬ ಪ್ರಶ್ನೆಗಳು ಸಹಜ. ಸುದ್ದಿ ಹಬ್ಬಿಸಿದವರಿಗೆ ಅದರ ಸತ್ಯ ಏನೆಂಬುದು ಗೊತ್ತಿರುತ್ತದೆ, ಕಿವಿಯಾದವರಿಗೆ ಅದರ ಹಿಂದಿನ ಸತ್ಯ ಅರಿಯುವ ಕುತೂಹಲ ಇರುತ್ತದೆ. ಕಾಲ ಎಲ್ಲವನ್ನೂ ಹೇಳುತ್ತದಾದರೂ, ಅಲ್ಲಿಯವರೆಗೂ ಕಾಯುವ ತಾಳ್ಮೆ ಮನಸ್ಸಿಗೆ ಇರುವುದಿಲ್ಲ. ಹೀಗಾಗಿ ಒಂದು ಸಂಗತಿ ಘಟಿಸುತ್ತದೋ, ಬಿಡುತ್ತದೋ.. ಆದರೆ ಕಣ್ಣಿಗೆ ಕಾಣದ ಕಾಮನಬಿಲ್ಲು ಕಿವಿಯಲ್ಲಿ ಹಾದು ಹೋಗುವಾಗ ಮನಸ್ಸಿನಲ್ಲಿ ನಾನಾ ಬಣ್ಣದಗೂಡುಗಳನ್ನು ಸೃಜಿಸಿರುತ್ತದೆ. ಈಗ ಸಿದ್ದರಾಮಯ್ಯನವರ ವಿಚಾರದಲ್ಲಿ ಆಗಿರುವುದೂ ಅದೇ.

ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿಟ್ಟು, ಉಪಮುಖ್ಯಮಂತ್ರಿ ಪಟ್ಟವೂ ಇಲ್ಲದೇ ಕೊನೆಗೆ ಸಂಪುಟ ಸೇರಲು ಎರಡೂವರೇ ವರ್ಷ ತೆಗೆದುಕೊಂಡ ಸಚಿವ ಡಾ. ಜಿ. ಪರಮೇಶ್ವರ್ ಈ ಸರಕಾರದ ಊಹಾವಳಿಗಳ ಪ್ರಮುಖ ಸೃಷ್ಟಿಬಿಂದು. ಸಂಪುಟ ಸೇರಲು ‘ಜೆಮಿನಿ ಸರ್ಕಸ್’ ಮಾಡಿದ ಪರಮೇಶ್ವರ್ ಗೆ ಮುಖ್ಯಮಂತ್ರಿ ಆದಂತೆ ಮೂರುವರ್ಷದ ಹಿಂದೆ ಬಿದ್ದ ಕನಸು ಇವತ್ತಿಗೂ ಹೋಗಿಲ್ಲ. ಹೀಗಾಗಿ ಕರ್ನಾಟಕ ಮತ್ತು ದಿಲ್ಲಿ ನಡುವೆ ಸಿದ್ದರಾಮಯ್ಯ ವಿರೋಧಿ ಅಲೆಬಲೆಯ ನೇಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಅದು ಹೆಬ್ಬಾಳ ಚುನಾವಣೆ ಇರಬಹುದು, ವಾಚ್ ಪ್ರಕರಣ ಆಗಿರಬಹುದು, ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ ಇರಬಹುದು… ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಧಾವಂತವೇ ನಾಚಿಕೊಳ್ಳುವಷ್ಟು ವೇಗದಲ್ಲಿ ಹೈಕಮಾಂಡ್ ಗೆ ಸಿದ್ದರಾಮಯ್ಯ ವಿರೋಧಿ ಭಾವನೆಯನ್ನು ಕಟ್ಟಿಕೊಟ್ಟು, ನಂತರ ತಮ್ಮ ಮಾತುಗಳೆಲ್ಲವನ್ನೂ ಹೈಕಮಾಂಡಿನದೆಂದೂ ಗೌಪ್ಯವಾಗಿ ಬಿಂಬಿಸುತ್ತಿರುವುದರ ಪರಿಣಾಮ ಮುಖ್ಯಮಂತ್ರಿ ಪಟ್ಟ ಗಾಳಿಯಲ್ಲಿ ಹೊಯ್ದಾಡುತ್ತಿರುವಂತೆ ಭಾಸವಾಗುತ್ತಿದೆ.

ಹಾಗೆಂದು ಸಿದ್ದರಾಮಯ್ಯನವರ ಸಾಧನೆ, ಸಾಮರ್ಥ್ಯ, ನಡೆ-ನುಡಿಗಳ ಬಗ್ಗೆ ಹೈಕಮಾಂಡ್ ಗೆ ಬಹಳ ಗೌರವವಿದೆ, ಸಂತೃಪ್ತಿಯಿದೆ ಎಂದು ಅರ್ಥವಲ್ಲ. ಸಿದ್ದರಾಮಯ್ಯನವರ ವಿರುದ್ಧ ಕಿವಿಗೆ ಬಿದ್ದದ್ದನ್ನೆಲ್ಲ ನಂಬದಿದ್ದರೂ ಕಣ್ಣಿಗೆ ಕಂಡದ್ದನ್ನೆಲ್ಲ ನಂಬದಿರುವ ಹುಂಬತನವೇನೂ ಅದಕ್ಕಿಲ್ಲ. ವಿದೇಶಿ ಗೆಳೆಯ ಹ್ಯೂಬ್ಲೋಟ್ ವಾಚ್ ಗಿಫ್ಟ್ ಕೊಟ್ಟಿದ್ದನ್ನು ನೋಡದೇ ಇದ್ದರೂ ಸಿದ್ದರಾಮಯ್ಯ ಅದನ್ನು ಕಟ್ಟಿಕೊಂಡದ್ದು, ಲೋಕಸಭೆಯಲ್ಲಿ ಪ್ರತಿಪಕ್ಷಗಳು ಜಾಡಿಸಿದ್ದು ಕಣ್ಣಿಗೆ ಕಟ್ಟಿದಂತಿದೆಯಲ್ಲ. ಇಂಥ ನಾನಾ ಪ್ರಸಂಗಗಳು ಸಿದ್ದರಾಮಯ್ಯನವರ ಬಗ್ಗೆ ಹೈಕಮಾಂಡ್ ಗೆ ಅದರದೇ ಆದಂತಹ ಚಿತ್ರಣ ಮತ್ತು ಅಭಿಪ್ರಾಯ ರೂಪಿಸಿಟ್ಟಿದೆ.

ಪರಮೇಶ್ವರ್ ಇರಬಹುದು ಅಥವಾ ಕರ್ನಾಟಕದಿಂದ ಹೈಕಮಾಂಡ್ ಪ್ರತಿನಿಧಿಸುವ, ಹೈಕಮಾಂಡ್ ಜತೆ ಸಂಪರ್ಕ ಇರುವ ನಾನಾ ನಾಯಕರಿರಬಹುದು, ಅವರೆಲ್ಲರಿಂದಲೂ ಮಾಹಿತಿ ಸಂಗ್ರಹಿಸುತ್ತದೆ. ತನಗೆ ಸಿಕ್ಕ ಮಾಹಿತಿ ನಿಜವೇ ಎಂದು ಅನ್ಯಮೂಲಗಳ ಮೂಲಕ ಅಡ್ಡ ಪರೀಕ್ಷೆ, ಮರುಮನನ ಮಾಡಿಕೊಳ್ಳುತ್ತದೆ. ಯಾರಾದರೂ ಬಂದು ತಾವಾಗಿಯೇ ಹೇಳಲಿ ಎಂದು ಅದು ಕಾಯ್ದುಕೊಂಡಿರುವುದಿಲ್ಲ. ಅದಕ್ಕೆ ಅದರದೇ ಆದ ಮಾಹಿತಿ ಮೂಲಗಳಿರುತ್ತವೆ. ಕಾಲಕಾಲಕ್ಕೆ ರವಾನೆಯೂ ಆಗುತ್ತಿರುತ್ತದೆ. ಇದು ಮೊದಲಿಂದಲೂ ಆಗುತ್ತಿರುವ ಮಾಮೂಲಿ ಪ್ರಕ್ರಿಯೆ. ಇದರಲ್ಲಿ ಯಾರಿಗೂ ಯಾವುದೇ ವಿಶೇಷ ಕಂಡಿರಲಿಲ್ಲ. ಆದರೆ ಯಾವಾಗ ಹೆಬ್ಬಾಳ ಅಭ್ಯರ್ಥಿ ವಿಚಾರದಲ್ಲಿ ಹೈಕಮಾಂಡ್ ನಿಂದ ಸಿದ್ದರಾಮಯ್ಯ ವಿರೋಧಿ ನಿಲುವಿನ ಬಹಿರಂಗ ಪ್ರದರ್ಶನ ಆಯಿತೋ ಅಲ್ಲಿಂದಾಚೆಗೆ ಈ ಮಾಮೂಲಿ ಪ್ರಕ್ರಿಯೆಗೆ ವಿಶೇಷ ಸ್ಥಾನಮಾನದ ಆವಾಹನೆಯಾಯಿತು. ಪ್ರತಿಯೊಂದು ವಿಚಾರದಲ್ಲೂ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ನಿಲುವಿನ ಪ್ರತಿಫಲನವಾಗುತ್ತಿದೆ. ಹೈಕಮಾಂಡ್ ಮನಸ್ಸಿನಲ್ಲಿರುವುದಕ್ಕೂ ಹಾಗೂ ಪ್ರತಿಫಲನ ಆಗುತ್ತಿರುವುದಕ್ಕೂ ನಡುವೆ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಆದರೆ ಪ್ರತಿಫಲನ ಆಗುತ್ತಿರುವುದಂತೂ ನಿಜ. ಹೀಗಾಗಿ ಸಿದ್ದರಾಮಯ್ಯನವರ ಕುರ್ಚಿ ಸುತ್ತ ನಾನಾ ಸುದ್ದಿಗಳು ಸುತ್ತುತ್ತಿವೆ.

ಹಾಗಾದರೆ ಪದವಿ ಪಲ್ಲಟ ಏನು? ಎತ್ತ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಒಂದು ವಿಚಾರ ಸತ್ಯ. ಸಿದ್ದರಾಮಯ್ಯನವರ ಬಗ್ಗೆ ಹೈಕಮಾಂಡ್ ಮೂರು ವರ್ಷಗಳ ಹಿಂದೆ ಇಟ್ಟುಕೊಂಡಿದ್ದ ಬಹಳ ನಿರೀಕ್ಷೆಗಳು ಇದೀಗು ಹುಸಿಯಾಗಿವೆ. ಆ ನಿರೀಕ್ಷೆಗಳು ತುಟ್ಟಿ ಎಂದು ಅದಕ್ಕೆ ಅನಿಸಿರಲಿಕ್ಕೂ ಸಾಕು. ಒಂದು ಸರಕಾರದ ಸಾಧನೆಗೆ ಚುನಾವಣೆಗಳ ಫಲಿತಾಂಶವೇ ಮಾನದಂಡ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ವಿಧಾನ ಪರಿಷತ್, ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಇದಕ್ಕೇನೂ ಇಂಬುಗೊಟ್ಟಿಲ್ಲ. ಬದಲಿಗೆ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಆಲಸಿತನ ಪ್ರತಿಬಿಂಬಿತವಾಗಿದೆ. ಈ ಸರಕಾರದಲ್ಲಿ ಮೂಲೆಗುಂಪಾದ ಭಾವನೆಯಲ್ಲಿರುವ ಮೂಲ ನಿವಾಸಿಗಳು ಅದರಲ್ಲೂ ಮೇಲ್ವರ್ಗದ ನಾಯಕರು ಈ ಆಲಸಿತನಕ್ಕೆ ತಮ್ಮ ನೋವನ್ನೂ ಬೆರಕೆ ಮಾಡಿ ಹಂಚುತ್ತಿರುವುದರಿಂದ ಹೈಕಮಾಂಡ್ ಗೆ ಸಿದ್ದರಾಮಯ್ಯನವರ ಬಗ್ಗೆ ಮೊದಲಿದ್ದ ಸಕಾರಾತ್ಮಕ ಅಭಿಪ್ರಾಯ ಈಗ ಇಲ್ಲ.

ಜಾತಿ ವಿಚಾರಕ್ಕೆ ಬರುವುದಾದರೆ ‘ಅಹಿಂದ’ ಮಂತ್ರ ಪಠಿಸಿದ ಸಿದ್ದರಾಮಯ್ಯನವರ ಜತೆಯಾಗಲಿ, ಅವರು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಜತೆಯಾಗಲಿ ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯದವರು ಇಲ್ಲವೇ ಇಲ್ಲ. ಹಾಗೆಂದು ‘ಅಹಿಂದ’ ವಿಷಯ ನೋಡುವುದಾದರೆ ಅದು ಕೂಡ ಪೂರ್ಣ ಪ್ರಮಾಣದಲ್ಲಿ ಇಲ್ಲ. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜನ ಖರ್ಗೆ, ಸಚಿವರಾದ ಜಿ. ಪರಮೇಶ್ವರ್, ಶ್ರೀನಿವಾಸ ಪ್ರಸಾದ್ ಅವರಂತವರು ದೂರ ಸರಿದಿರುವುದರಿಂದ ‘ಅಹಿಂದ’ದಲ್ಲಿ ‘ದ’ ಹೋಗಿ ಈಗ  ಬರೀ ‘ಅಹಿಂ’ ಮಾತ್ರ ಉಳಿದುಕೊಂಡಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಬಾಬುರಾವ್ ಚಿಂಚನಸೂರ್ ಅವರಂತವರ ಅಸಮಾಧಾನದಿಂದ ‘ಹಿಂ’ ಕೂಡ ಕೊಂಚ ಅಲ್ಲಾಡಿ ನಿಂತಿದೆ. ಬರೀ ‘ಅಹಿಂ’ ಇಟ್ಟುಕೊಂಡೇ ಮುಂದಿನ ಚುನಾವಣೆಗೆ ಹೋದರೆ ಪಕ್ಷಕ್ಕೆ ಮುಳುವಾಗುವುದಿಲ್ಲವೇ? ದಲಿತ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಟ್ಟ ಕಟ್ಟಿದರೆ ‘ದ’ ಬಂದು ‘ಆಹಿಂ’ ದೂರವಾಗುವುದಿಲ್ಲವೇ? ಸಿದ್ದರಾಮಯ್ಯ ಬಳಗ ಸುಮ್ಮನೆ ಇರುತ್ತದೆಯೇ? ಈ ‘ಅಹಿಂದ’ ಗೋಜು ಬೇಡವೇ ಬೇಡ ಎಂದು ಮೇಲ್ವರ್ಗದ ಯಾರಿಗಾದರೂ ಪಟ್ಟ ಕಟ್ಟಿ, ಜಾತಿ ಮರು ಸಮೀಕರಣಕ್ಕೆ ಯತ್ನಿಸಬಹುದೇ? ಚುನಾವಣೆ ಹತ್ತಿರ ಇಟ್ಟುಕೊಂಡು ಪಟ್ಟ ಕಟ್ಟಿದರೆ ಮೇಲ್ವರ್ಗದವರು ಪಕ್ಷವನ್ನು ನಂಬುತ್ತಾರೆಯೇ ಎಂಬ ಪ್ರಶ್ನೆಗಳು ಒಂದು ಕಡೆಯಾದರೆ, ಇನ್ನೊಂದೆಡೆ ಈಗ ಇರುವ ‘ಅಹಿಂ’ ಅನ್ನೂ ಕಳೆದುಕೊಂಡು ತಲೆ ಮೇಲೆ ಮಣ್ಣು ಹುಯ್ದುಕೊಳ್ಳುವುದೇ ಎಂಬ ಚಿಂತೆ ಹೈಕಮಾಂಡನ್ನು ಗಾಢವಾಗಿ ಕಾಡುತ್ತಿದೆ.
ಎಲ್ಲಕ್ಕಿಂತ ಮಿಗಿಲಾಗಿ ಪಕ್ಷವನ್ನು ಕಾಡುತ್ತಿರುವುದು ಪರ್ಯಾಯ ನಾಯಕತ್ವತ ವಿಚಾರ. ಹುಡುಕಿದರೆ ಒಂದಷ್ಟು ನಾಯಕರು ಸಿಗಬಹುದು, ಆದರೆ ಸಿದ್ದರಾಮಯ್ಯ ಸ್ಥಾನ ತುಂಬಬೇಕಾದರೆ ಹುಡುಕದೆಯೇ ನಾಯಕ ಎಂದೆನಿಸಿಕೊಳ್ಳುವವರು ಬೇಕು. ಸದ್ಯಕ್ಕೆ ಆ ತಾಕತ್ತು ಇರುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ. ಆದರೆ ಲೋಕಸಭೆಯಲ್ಲಿ ಪಕ್ಷದ ನಾಯಕನ ಜವಾಬ್ದಾರಿಯಿಂದ ವಿಮುಕ್ತಗೊಳಿಸಿ, ಅವರನ್ನು ಇಲ್ಲಿಗೆ ನಿಯೋಜಿಸುವ ಮನಸ್ಥಿತಿ ಹೈಕಮಾಂಡ್ ಗೆ ಇದೆಯೇ? ಇದ್ದರೂ ಶೇಕಡಾ ನೂರರಷ್ಟು ಎನ್ನುವಂತಿಲ್ಲ. ಜಿ. ಪರಮೇಶ್ವರ್ ಅವರಿಗೆ ಸಿಎಂ ಆಗುವ ಅದಮ್ಯ ಆಸೆ ಇದೆ, ಆದರೆ ಅದನ್ನು ನಿಭಾಯಿಸುವ ತಾಕತ್ತು ಅವರಿಗಿಲ್ಲ. ಇನ್ನು ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ಅವರಂಥವರು ಸಿಗುತ್ತಾರೆ. ಆದರೆ ಸಿಎಂ ಪಟ್ಟ ಒಪ್ಪಿಕೊಳ್ಳುವ ಮನಸ್ಥಿತಿ ಅವರಿಗೆ ಇದೆಯೇ? ಇವರ ಸ್ಥಿತಿಯೂ ಅಷ್ಟೇ. ಶೇಕಡಾ ನೂರರಷ್ಟು ಎನ್ನುವಂತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಸಿಎಂ ಪಟ್ಟವನ್ನು, ಅವರ ಸಾಧನೆ ಕಾಪಾಡುತ್ತಿಲ್ಲ. ಬದಲಾಗಿ ಪರ್ಯಾಯ ನಾಯಕತ್ವದ ಕೊರತೆ ರಕ್ಷಿಸುತ್ತಿದೆ. ಹಾಗೆಂದು ಇದನ್ನು ಶಾಶ್ವತ ಎಂದು ಸಿದ್ದರಾಮಯ್ಯ ಬಳಗ ಬೀಗಲಾಗದು. ಏಕೆಂದರೆ ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು. ಅದು ಕಾಂಗ್ರೆಸ್ ನಲ್ಲಿ ಯಾವಾಗ ಬೇಕಾದರೂ ಆಗುತ್ತದೆ.

ಲಗೋರಿ : ಪರರ ದೌರ್ಬಲ್ಯದ ಮೇಲಿನ ಬದುಕು ಹೆಚ್ಚು ಕಾಲ ಬಾಳುವುದಿಲ್ಲ.

Leave a Reply