ಆಸ್ಪತ್ರೆ ಅವಘಡದಲ್ಲಿಸಿಬ್ಬಂದಿ ಕ್ರಮಕ್ಕೆ ಶ್ಲಾಘನೆ, ಕರೆಂಟ್ ಕೊಟ್ಟು ನೆಟ್ ತಗೊಂಡ್ವಿ… ನೀವ್ ತಿಳಿಬೇಕಿರೋ ಸುದ್ದಿ

ವಾಹನ ನನ್ನದು ಅಂತ ಮನಸಿಗೆ ಬಂದ ಸ್ಟೈಲಲ್ಲಿ ನಂಬರ್ ಪ್ಲೇಟ್ ಬರೆಸೋಹಾಗಿಲ್ಲ. ಬೆಂಗಳೂರಿನಲ್ಲಿಸಂಚಾರ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಈ ನಿಯಮ ಉಲ್ಲಂಘಿಸಿದ ಹಲವು ವಾಹನಗಳ ನಂಬರ್ ಪ್ಲೇಟ್ ಕಳಚಲಾಯ್ತು.

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ, ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ

ಕಲಬುರ್ಗಿಯ ಜಿಲ್ಲಾಸ್ಪತ್ರೆಯ ಎಸ್ಎನ್ ಸಿಯುನಲ್ಲಿದ್ದ ಎಸಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಅಗ್ನಿ ಅಪಘಾತ ಸಂಭವಿಸಿದ್ದು ಈ ವೇಳೆ ಕೊಠಡಿಯಲ್ಲಿದ್ದ 26 ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತೀವ್ರ ಸ್ವರೂಪದ ಅವಘಡ ತಪ್ಪಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ತಕ್ಷಣವೇ ಜಾಗೃತರಾದ ಆಸ್ಪತ್ರೆ ಸಿಬ್ಬಂದಿಗಳು ಅಲ್ಲಿದ್ದ ಶಿಶುಗಳನ್ನು ಹೊರಗೆ ತಂದು ಭಾರಿ ಅಪಾಯವನ್ನು ತಪ್ಪಿಸಿದ್ದು ಶ್ಲಾಘನೀಯ. ಈ ವೇಳೆ ಅಲ್ಲಿನ ಸಿಬ್ಬಂದಿ ಫಕೀರಪ್ಪ ಎಂಬುವವರು ಕೊಠಡಿಯ ಕಿಟಕಿ ಗಾಜು ಹೊಡೆದು ಒಳಗೆ ನುಗ್ಗಿ ಮಕ್ಕಳ ಪ್ರಾಣ ಕಾಪಾಡಿದರು. ಈ ಪ್ರಯತ್ನದಲ್ಲಿ ಫಕೀರಪ್ಪ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಬ್ರುಸೆಲ್ಸ್ ಶಂಕಿತ ಉಗ್ರನ ಬಂಧನ

ಬ್ರುಸೆಲ್ಸ್ ವಿಮಾನ ನಿಲ್ದಾಣ ಹಾಗೂ ಮೆಟ್ರೋ ರೈಲಿನ ಅವಳಿ ಸ್ಫೋಟಕ್ಕೆ ಸಂಬಂಧಿಸಿ ಶಂಕಿತ ಉಗ್ರನ ಬಂಧನವಾಗಿದೆ.

ಬುಧವಾರ ಶೋಧ ನಡೆಸಿದ ಪೊಲೀಸರು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದ್ದರು. ಅಲ್ಲಿ ದೊರೆತ ಮೂವರು ಶಂಕಿತ ಉಗ್ರರ ಸುಳಿವು ಬೆಂಬತ್ತಿ 24 ವರ್ಷದ ನಜೀಮ್ ಲಾಚ್ರಯಿ ಎಂಬಾತನನ್ನು ಬಂಧಿಸಿದ್ದಾರೆ. ಈತ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಬಾಂಬ್ ತಯಾರಕ ಎಂದು ಯುರೋಪ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಉಳಿದ ಇಬ್ಬರು ಶಂಕಿತರು ಸಹೋದರರು ಎನ್ನಲಾಗಿದೆ. ಇವರನ್ನು ಖಲೀದ್ ಮತ್ತು ಬ್ರಾಹಿಮ್ ಬಕ್ರಾಯಿ ಎಂದು ಹೇಳಲಾಗಿದೆ. ಖಲೀದ್ ಎಂಬಾತ ಮಲ್ಬೇಕ್ ಮೆಟ್ರೋ ನಿಲ್ದಾಣದಲ್ಲಿನ ಸ್ಫೋಟದ ಆತ್ಮಹುತಿ ಬಾಂಬರ್ ಆಗಿದ್ದು, ಬ್ರಾಹಿಮ್ ವಿಮಾನ ನಿಲ್ದಾಣದಲ್ಲಿನ ಆತ್ಮಹುತಿ ಬಾಂಬರ್ ಎನ್ನಲಾಗಿದೆ.

ಬ್ರುಸೆಲ್ಸ್ ಸ್ಫೋಟ ವಿದ್ಯಮಾನದ ಒಳನೋಟಕ್ಕೆ ಈ ಲೇಖನ ಓದಬಹುದು.

ವಿಜಯಕಾಂತ್ ನೇತೃತ್ವದಲ್ಲಿ ತಮಿಳುನಾಡಲ್ಲಿ ಮೂರನೇ ರಂಗ

ಇದೇ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆಗೆ ನಟ- ರಾಜಕಾರಣಿ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷದ ಮುಂದಾಳತ್ವದಲ್ಲಿ ಎಂಡಿಎಂಕೆ, ವಿಸಿಕೆ, ಸಿಪಿಐ ಹಾಗೂ ಸಿಪಿಎಂಗಳನ್ನೊಳಗೊಂಡ ಮೈತ್ರಿಕೂಟ ಬುಧವಾರ ಅಸ್ತಿತ್ವಕ್ಕೆ ಬಂದಿದೆ.

ಪೀಪಲ್ಸ್ ವೆಲ್ಫೇರ್ ಅಲಾಯನ್ಸ್ (ಪಿಡಬ್ಲ್ಯುಎ) ಎಂದು ಕರೆದುಕೊಂಡಿರುವ ಕೂಟವು ಜಯಲಲಿತಾರ ಎಐಎಡಿಎಂಕೆ, ಕರುಣಾನಿಧಿಯವರ ಡಿಎಂಕೆ ಹೊರತುಪಡಿಸಿದರೆ ಚುನಾವಣೆ ಕಣದಲ್ಲಿರುವ ಮೂರನೇ ಮುಖ್ಯ ಆಟಗಾರ ಎನಿಸಿಕೊಳ್ಳುತ್ತದೆ.

ವಿಜಯಕಾಂತ್ ರಿಗೆ ಡಿಎಂಕೆ ಸೇರಿದಂತೆ ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳೆಲ್ಲ ಮೈತ್ರಿಗೆ ಕರೆದಿದ್ದವಾದರೂ ಭಿನ್ನಹಾದಿ ನಿರ್ಧಾರವಾಗಿದೆ. 2006ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧಿಸಿದಾಗ ಡಿಎಂಡಿಕೆ ಒಂದೇ ಸ್ಥಾನ ಗೆದ್ದಿತ್ತು. ಆದರೆ 2011ರಲ್ಲಿ ಜಯಾರ ಎಐಎಡಿಎಂಕೆ ಜತೆಗಿನ ಮೈತ್ರಿಯಲ್ಲಿ 29 ಸ್ಥಾನಗಳನ್ನು ಗೆದ್ದಿತ್ತು. ನಂತರ ಜಯಲತಿತಾ ಜತೆ ಸಂಬಂಧ ಹಳಸಿತು. ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಜಯಕಾಂತ್ ಎನ್ ಡಿ ಎ ಕೂಟದಲ್ಲಿದ್ದರು.

ಬಾಂಗ್ಲಾಕ್ಕೆ ಕರೆಂಟ್ ಕೊಟ್ಟು ಇಂಟರ್ನೆಟ್ ತಗೊಂಡ್ತು ಭಾರತ

ತ್ರಿಪುರದ ಗ್ರಿಡ್ ನಿಂದ ಬಾಂಗ್ಲಾದೇಶಕ್ಕೆ 100 ಮೆಗಾವ್ಯಾಟ್ ವಿದ್ಯುತ್ ಕೊಟ್ಟು, ಪ್ರತಿಯಾಗಿ ಪ್ರತಿ ಸೆಕೆಂಡಿಗೆ 10 ಗಿಗಾಬೈಟ್ ಸಾಮರ್ಥ್ಯದ ಇಂಟರ್ನೆಟ್ ಪಡೆಯುವ ಯೋಜನೆ ಬುಧವಾರದಿಂದ ಚಾಲನೆಗೆ ಬಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ- ‘ಪರಸ್ಪರ ಸಹಕಾರ ಮನೋಭಾವ ಹೇಗಿರಬೇಕೆಂದು ನಾವು ಜಗತ್ತಿಗೆ ತೋರಿಸಿಕೊಡುತ್ತಿದ್ದೇವೆ. ವಿದ್ಯುತ್ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಆಗುತ್ತಿರುವ ಈ ಮೇಳೈಕೆ ಮುಂದುವರಿಸಿ ಬಾಂಗ್ಲಾದೇಶ ನಮ್ಮೊಂದಿಗೆ ಬಾಹ್ಯಾಕಾಶ ಸಹಕಾರದಲ್ಲೂ ಕೈಗೂಡಿಸಲಿ ಎಂಬ ನಿರೀಕ್ಷೆ ಇದೆ’ ಎಂದರು.

Leave a Reply